ಹಾಡು ಹಳೆಯದಾದರೇನು- ಕಣಗಾಲ್ ಪ್ರಭಾಕರ ಶಾಸ್ತ್ರಿ

ಹಾಡು ಹಳೆಯದಾದರೇನು- ಕಣಗಾಲ್ ಪ್ರಭಾಕರ ಶಾಸ್ತ್ರಿ

ಭಾರತೀಯ ಚಿತ್ರರಂಗದಲ್ಲಿ ಕನ್ನಡಕ್ಕೆ ತನ್ನದೇ ಆದ ವಿಶೇಷವಾದ ಸ್ಥಾನವಿದೆ.ಅದರಲ್ಲೂ ಕನ್ನಡದ ಚಿತ್ರಗೀತೆಗಳು ಬಹುತೇಕರ ಜೀವನದಲ್ಲಿ ಪ್ರಭಾವವನ್ನು ಬೀರಿ ಅವರ ಬದುಕಿನ ತಿರುವುಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದನ್ನೂ ಕೇಳಿರುತ್ತೇವೆ.

ಮೂರು ದಶಕದ ಹಿಂದಿನ ಮಾತು,
ನಮ್ಮ ಹಳ್ಳಿಯ ಚಿತ್ರಮಂದಿರದಲ್ಲಿ ಚಲನಚಿತ್ರ ಪ್ರದರ್ಶನ ಪ್ರಾರಂಭ ಆಗುವುದಕ್ಕೆ ಮುಂಚೆ ಬಿತ್ತರಿಸಲಾಗುತ್ತಿದ್ದ ಹಾಡು…

“ಕೊಡಗಿನ ಕಾವೇರಿ ನೀ ಬೆಡಗಿನ ವೈಯಾರಿ
ಕನ್ನಡ ಕುಲನಾರಿ ಕಾವೇರಿ ನೀ ಒಲವಿನ ಸಿಂಗಾರಿ ||ಪ||

ಋಷಿಜನ ಜೀವನ ತಪೋನಿಧಿ
ಕಾವೇರಿ, ನೀನೇ ಜೇನಿನ ಜೀವನದಿ
ರೈತರ ಬಾಳಿನ ಭಾಗ್ಯನಿಧಿ
ಕಾವೇರಿ, ನೀ ನಡೆಯುವ ನೆಲವೆಲ್ಲ ಪುಣ್ಯದ ಸನ್ನಿಧಿ….

ಹೀಗೆ ಸಾಗುತ್ತಿದ್ದ ಹಾಡು ನಮ್ಮಲ್ಲಿ ಏನೋ ಒಂದು ರೀತಿಯ ಉತ್ಸಾಹ ಮೂಡಿಸುತ್ತಿತ್ತು.

ಹಾಗೆಯೇ ರೇಡಿಯೋದಲ್ಲಿ ಪ್ರಸಾರ ಆಗುತ್ತಿದ್ದ…

“ಒಲವೇ ಜೀವನ ಸಾಕ್ಷಾತ್ಕಾರ…”,” ಅತಿ ಮಧುರ ಅನುರಾಗ…”,”ನಟನ ವಿಶಾರದ ನಟಶೇಖರ”, ಮುಂತಾದ ಹಾಡುಗಳೂ ಜನಜನಿತವಾಗಿದ್ದವು.

ಈ ಹಾಡುಗಳನ್ನು ರಚಿಸಿದವರು ಚಿತ್ರ ಸಾಹಿತಿ ಶ್ರೀ ಕಣಗಾಲ್ ಪ್ರಭಾಕರ ಶಾಸ್ತ್ರಿ.
ಕನ್ನಡದ ಶ್ರೇಷ್ಠ ಚಿತ್ರಸಾಹಿತಿಗಳ ಸಾಲಿನಲ್ಲಿ ನಿಲ್ಲುವವರು ಶ್ರೀ ಕಣಗಾಲ್ ಪ್ರಭಾಕರ ಶಾಸ್ತ್ರಿ.
ಶ್ರೇಷ್ಠ ಚಿತ್ರಗೀತೆಗಳ ರಚನೆಕಾರ, ನಿರ್ದೇಶಕ, ನಿರ್ಮಾಪಕ ಹೀಗೆ ಕನ್ನಡ ಸಿನೆಮಾದ ವಿವಿಧ ಪ್ರಕಾರಗಳಲ್ಲಿ ಗುರುತಿಸಿಕೊಂಡು ಪ್ರಸಿದ್ಧರಾದವರು ಶ್ರೀ ಕಣಗಾಲ್ ಪ್ರಭಾಕರ ಶಾಸ್ತ್ರಿಯವರು.

ಶ್ರೀಕೃಷ್ಣದೇವರಾಯ, ಸ್ಕೂಲ್ ಮಾಸ್ಟರ್, ಸಾಕ್ಷಾತ್ಕಾರ, ಮಲ್ಲಮ್ಮನ ಪವಾಡ, ಕನ್ಯಾರತ್ನ, ಮಲ್ಲಿ ಮದುವೆ, ಸಾಕುಮಗಳು, ಸತಿಶಕ್ತಿ ಮುಂತಾದ ಚಿತ್ರಗಳು ಪ್ರಭಾಕರ ಶಾಸ್ತ್ರಿಗಳ ಚಿತ್ರಸಾಹಿತ್ಯ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿ.
‘ಅನುರಾಗದ ಅಮರಾವತಿ’, ‘ಅತಿ ಮಧುರ ಅನುರಾಗ’, ‘ಅಮರ ಮಧುರ ಪ್ರೇಮ’, ‘ಭಾಮೆಯ ನೋಡಲು ತಾ ಬಂದ’, ‘ಆಡೋಣ ಬಾ ಬಾ ಗೋಪಾಲ’, ‘ತಿರುಪತಿ ಗಿರಿವಾಸ ಶ್ರೀ ವೆಂಕಟೇಶ’, ‘ಒಲವೆ ಜೀವನ ಸಾಕ್ಷಾತ್ಕಾರ’, ‘ಜನುಮ ಜನುಮದ ಅನುಬಂಧ’, ‘ನಟನ ವಿಶಾರದ ನಟಶೇಖರ’, ‘ಬಿಳಿಗಿರಿ ರಂಗಯ್ಯ’, ‘ಕನ್ನಡ ನಾಡಿನ ರಸಿಕರ ಮನವ’, ‘ಪವಡಿಸು ಪಾಲಾಕ್ಷ’, ‘ಶರಣೆಂಬೆ ಶ್ರೀಲಲಿತೆ’, ‘ಕಾದಿರುವಳೋ ಕೃಷ್ಣ’ , ‘ಫಲಿಸಿತು ಒಲವಿನ ಪೂಜಾಫಲ’, ‘ಬಹು ಜನ್ಮದ ಪೂಜಾ ಫಲ’, ‘ನಾನೂ ನೀನೂ ಜೋಡಿ’, ‘ಚನ್ನರಸಿ ಚೆಲುವರಸಿ ಲಾವಣ್ಯ ರಾಶಿ’, ‘ಶ್ರೀ ಚಾಮುಂಡೇಶ್ವರಿ’, ‘ಇದೇ ಹೊಸ ಹಾಡು’, ‘ಸುವ್ವಿ ಸುವ್ವಿ ಸುವ್ವಾಲೆ’ , ‘ಒಲವಿನ ಪ್ರಿಯಲತೆ’,
ಮುಂತಾದ ಗೀತೆಗಳು ಭಕ್ತಿ-ಭಾವ,ಪ್ರೀತಿ ಪ್ರೇಮಗಳ ಅನುಸಂಧಾನ ಮಾಡಿರುವುದಂತೂ ಸತ್ಯ.
ಹತ್ತಾರು ಪೌರಾಣಿಕ ನಾಟಕಗಳನ್ನೂ ಬರೆದಿದ್ದಾರೆ ಶಾಸ್ತ್ರಿಗಳು.ಅವರು ಬರೆದ ನಾಟಕಗಳಲ್ಲಿ ‘ಪ್ರಚಂಡ ರಾವಣ’ ಕೃತಿ ಇಂದೂ ಅಭಿನಯಿಸಲ್ಪಡುತ್ತಿದೆ.

ಪ್ರಭಾಕರ ಶಾಸ್ತ್ರಿಗಳು ಜನಿಸಿದ್ದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಬಳಿಯ ರಾಜನ ಬಿಲಗುಲಿಯಲ್ಲಿ ,1929ರ ನವೆಂಬರ್ 11ರಂದು.

ಭಲೇ ಭಟ್ಟ, ಸುಭದ್ರಾ ಕಲ್ಯಾಣ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿ,1963ರಲ್ಲಿ ತಾವೇ ಸತಿಶಕ್ತಿ ಚಿತ್ರ ನಿರ್ಮಿಸಿ ನಿರ್ದೇಶಿಸಿದರು. ಪ್ರಭಾಕರ ಶಾಸ್ತ್ರಿಗಳು ತಮ್ಮ ಗೀತೆಗಳಲ್ಲಿ ಅನೇಕ ರೀತಿಯ ನೂತನ ಪ್ರತಿಮೆಗಳನ್ನು ಅಳವಡಿಸಿದ್ದಾರೆ. ‘ಒಲವೇ ಯಮುನಾ ನದಿಯಾಗಿ ಹರಿದಿದೆ, ಅಲ್ಲಿ ರಾಧಾಮಾಧವರು ಅಮರ ಪ್ರೇಮಿಗಳು’, ‘ಮನವೆಲ್ಲ ಮೈಮರೆವ ಬೃಂದಾವನ’, ‘ಚಿತ್ರದಿ ಚಿತ್ರವ ಬರೆದವಳು’, ‘ಸತಿಪತಿಗೊಲಿದ ರತಿಪತಿಗಾನ’, ‘ಗಾಂಧಾರ ಭಾಷೆಯ ಹಕ್ಕಿಗಳಿಂಚರ’ , ‘ಒಲವಿನ ಪೂಜೆಗೆ ಒಲವೇ ಮಂದಾರ’, ‘ಒಲವಿನ ಸವಿಯ ಸವಿಯುವ ಶುಭದಿನ’, ಹೀಗೆ ಹಲವಾರು ನಿದರ್ಶನಗಳನ್ನು ತೋರಬಹುದು.

ಪ್ರಭಾಕರ ಶಾಸ್ತ್ರಿಗಳು 1989ರಲ್ಲಿ ನಿಧನರಾದರು. ಕನ್ನಡ ಚಿತ್ರರಂಗದ ಅಮೂಲ್ಯ ಚಿತ್ರಸಾಹಿತ್ಯ ರಚನೆಕಾರರಾಗಿ ಪ್ರಭಾಕರ ಶಾಸ್ತ್ರಿಗಳ ಹೆಸರು ಅಜರಾಮರವಾದದ್ದು.

ಸುನೀಲ್ ಹಳೆಯೂರು
ಮಾಹಿತಿ:ವಿವಿಧ ಮೂಲಗಳಿಂದ
ಚಿತ್ರಕೃಪೆ: ಸಲ್ಲಾಪ.ಕಾಂ

Related post