ಹಾಡು ಹಳೆಯದಾದರೇನು – ಕು ರ ಸೀತಾರಾಮಶಾಸ್ತ್ರಿ
ಕು.ರ.ಸೀತಾರಾಮ ಶಾಸ್ತ್ರಿಗಳು 1920ರ ಸೆಪ್ಟಂಬರ್ 22 ರಂದು ಜನಿಸಿದರು.
ಬಹಳ ಜನ ಅವರ ಹೆಸರನ್ನು ಕು.ರಾ.ಸೀ ಎಂದು ತಪ್ಪು ತಿಳಿದಿದ್ದಾರೆ. ಕು. ರ. ಸೀತಾರಾಮಶಾಸ್ತ್ರಿಗಳ ತಂದೆ ಕುಮಾರಸ್ವಾಮಿಗಳು ನವಗ್ರಹ ಹೋಮ ಮಾಡುವಾಗ ರವಿಕುಂಡದಿಂದ ಎದ್ದ ಬೆಳಕಿನ ಜ್ವಾಲೆ ಅವರ ಧರ್ಮಪತ್ನಿ ಸುಬ್ಬಮ್ಮನವರ ಗರ್ಭವನ್ನು ಪ್ರವೇಶಿಸಿದಂತೆ ಭಾಸವಾಯಿತಂತೆ. ಹೀಗಾಗಿ ನಂತರ ಜನಿಸಿದ ಮಗನಿಗೆ ರವಿ ಎಂದೇ ಹೆಸರಿಡಬೇಕು ಎನ್ನುವ ಸಂಕಲ್ಪ ಅವರಲ್ಲಿ ಮೂಡಿತು. ಆದರೆ ತಂದೆಯ ಹೆಸರು ಇಡಬೇಕು ಎಂದೇ ಮೊದಲು ನಿರ್ಧಾರ ಕೂಡ ಆಗಿತ್ತು. ಬಹಳ ಯೋಚಿಸಿದ ನಂತರ ರವಿಸೀತಾರಾಮ ಶಾಸ್ತ್ರಿ ಎಂದು ಮಗುವಿಗೆ ಹೆಸರಿಟ್ಟರು. ಹೀಗಾಗಿ ಅವರ ಪೂರ್ಣ ಹೆಸರು ಕುಮಾರಸ್ವಾಮಿ ರವಿಸೀತಾರಾಮ ಶಾಸ್ತ್ರಿ. ಅದರ ಹೃಸ್ವರೂಪವಾಗಿ ಅವರು ‘ಕು.ರ.ಸೀ’ ಎಂದು ತಮ್ಮನ್ನು ಕರೆದುಕೊಂಡರು.
ಹಾಡುಗಳು ಎಂದರೆ ನವರಸಗಳ ಭಾವಪೂರ್ಣ ಪ್ರಸ್ತುತಿ ಎಂಬ ಮನೋಭಾವ ಮತ್ತು ನಂಬಿಕೆ ಅಂದಿನ ಕಾಲದ ಚಿತ್ರಸಾಹಿತಿಗಳಲ್ಲಿ ಹಾಸುಹೊಕ್ಕಿತ್ತು.
ಭಾಷೆ ಯಾವುದೇ ಇರಲಿ… ಪ್ರತಿ ಹಾಡಿಗೂ ಒಂದೊಂದು ಹಿನ್ನಲೆ … ಅವುಗಳನ್ನು ಪ್ರಸ್ತುತ ಪಡಿಸುವ, ನಿರೂಪಿಸುವ ರೀತಿ ಆ ಹಾಡಿನ ಯಶಸ್ಸನ್ನು ನಿರ್ಧರಿಸುತ್ತದೆ.
ಅರವತ್ತರ ದಶಕದಲ್ಲಿ ಜನಪ್ರಿಯವಾಗಿದ್ದ ಗೀತೆ…ಇಂದಿಗೂ ಅದೇ ಜನಪ್ರಿಯತೆಯನ್ನು ಉಳಿಸಿಕೊಂಡಿರುವ…
ಮೆಲ್ಲುಸಿರೀ ಸವಿಗಾನ
ಎದೆ ಝಲ್ಲೆನೆ ಹೂವಿನ ಬಾಣ…
ಕು ರ ಸೀತಾರಾಮ ಶಾಸ್ತ್ರಿಯವರ ಲೇಖನಿಯಿಂದ ಮೂಡಿಬಂದ ಅದ್ಭುತ ಗೀತೆಗಳಲ್ಲಿ ಒಂದು….
1963 ರಲ್ಲಿ ತೆರೆಕಂಡ ವೀರಕೇಸರಿ ಸಿನಿಮಾದಲ್ಲಿ ಬಳಸಿಕೊಂಡ ಈ ಗೀತೆಯು ಒಂದು ದೃಶ್ಯಕಾವ್ಯದಂತೆ ಕಣ್ಮುಂದೆ ಸುಳಿಯುವುದಂತೂ ಸತ್ಯ.
ಕನಸು, ಕಲ್ಪನೆ, ವಿರಹ, ಮಿಲನ ಹಾಗೂ ದಾಂಪತ್ಯ ಇವೆಲ್ಲವನ್ನೂ ಅತ್ಯಂತ ಸುಂದರವಾಗಿ ಒಂದು ಗೀತೆಯಲ್ಲಿ ಹಿಡಿದಿಟ್ಟಿರುವ ಪರಿ ಅದ್ಭುತವೆಂದೇ ಹೇಳಬೇಕು.
ಅದೇ ವರ್ಷ ತೆರೆಕಂಡ ಮತ್ತೊಂದು ಚಿತ್ರ ‘ಕನ್ಯಾರತ್ನ’ದಲ್ಲಿನ “ಬಿಂಕದ ಸಿಂಗಾರಿ…ಮೈ ಡೊಂಕಿನ ವಯ್ಯಾರಿ…” ಮನಮೋಹಕ ಸಾಹಿತ್ಯ, ಮಧುರವಾದ ಗಾಯನ ಮತ್ತು ಸಂಗೀತದೊಂದಿಗೆ ಕನ್ನಡಿಗರ ಮನಗೆದ್ದಿತು.
1968 ರಲ್ಲಿ ಬಿಡುಗಡೆಯಾದ ‘ಕಲ್ಪವೃಕ್ಷ’ ಚಿತ್ರದ “ಜಯತೆ ಜಯತೆ ಜಯತೆ ಸತ್ಯಮೇವ ಜಯತೇ” ಮನುಷ್ಯ ಜೀವನದಲ್ಲಿ ನಡೆದುಕೊಳ್ಳಬೇಕಾದ ರೀತಿಯನ್ನು ತಿಳಿಸಿಕೊಡುವ ಪರಿ .. ಅತ್ಯಂತ ಆಪ್ತವೆನಿಸುತ್ತದೆ.
1965 ರಲ್ಲಿ ಬಿಡುಗಡೆಯಾದ “ಬೆರೆತ ಜೀವ” ಚಿತ್ರದ
“ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ” … ಗೀತೆಯಂತೂ ಭಗವಂತನೆಡೆಗಿನ ನಂಬಿಕೆಯ ಜೊತೆಗೆ ಆತ್ಮವಿಶ್ವಾಸ ಮತ್ತು ಛಲದ ಪಾಠ ಹೇಳುತ್ತದೆ.
“ಕಾಣದ ದೇವರು ಊರಿಗೆ ನೂರು”, “ನೀ ಒಲಿದ ಸೆಳೆದ ಚಿರ ನವಯೌವನ“, “ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಣ್ಣದ ಅಂಗಿ ತೊಟ್ಟ ತಂಗಿ”….. “ಅಂಕದ ಪರದೆ ಜಾರಿದ ಮೇಲೆ ನಾಟಕವಿನ್ನೂ ಉಳಿದಿಹುದೇ? ” “ತುಟಿಯ ಮೇಲೆ ತುಂಟ ಕಿರುನಗೆ, ಕೆನ್ನೆ ತುಂಬಾ ಕೆಂಡಸಂಪಿಗೆ“
ಹೀಗೆ ನೂರಾರು ಗೀತೆಗಳನ್ನು ರಚಿಸಿ ಕನ್ನಡ ಚಿತ್ರರಸಿಕರ ಮನಃ ಪಟಲದಲ್ಲಿ ಚಿರಸ್ಥಾಯಿಯಾಗಿ ನಿಂತಿರುವ ಕು ರ ಸೀ ಅವರು ಕನ್ನಡ ಚಿತ್ರಲೋಕ ಕಂಡ ಅಪರೂಪದ ಚಿತ್ರಸಾಹಿತಿಯಾಗಿದ್ದಾರೆ.
ಸುನೀಲ್ ಹಳೆಯೂರು
1 Comment
ಬರೆಹ ಹೃನ್ಮನಪೂರ್ವಕ
ಅವರ ಹಾಡುಗಳ ರಸಧಾರೆಯ ಪರಿಚಯ
ನೆನಪಾಗಿ ಹಿಗ್ಗಿರುವೆ. ಇದುವೇ ಇದರ ಯಶಸು. ಧನ್ಯವಾದಗಳು ಸುನಿಲ್