ಹಿನ್ನೋಟ – 2023

ಹಿನ್ನೋಟ – 2023

ಈ ವರ್ಷ ಮುಗಿಯಲು ಇನ್ನೇನು ಕೆಲವೇ ಘಂಟೆಗಳು ಬಾಕಿ ಇದೆ. ನೋಡ ನೋಡುತ್ತಿದ್ದಂತೆಯೆ ನಾವೆಲ್ಲರೂ ಮತ್ತೊಂದು ಹೊಸ ವರ್ಷದ ನಿರೀಕ್ಷೆಯಲ್ಲಿದ್ದೇವೆ. ಸಮಯ ಬಹು ಬೇಗ ಕಳೆಯುತ್ತಿದೆ. ಹಳೆಯ ವರ್ಷ ನೆನಪಿನ ಬುತ್ತಿಯಾದರೆ ಮುಂಬರುವ ವರ್ಷವು ಭರವಸೆಗಳನ್ನು ಹೊತ್ತು ತರುತ್ತದೆ. ಅಂಥ ಭರವಸೆಗಳೇ ಬದುಕಿಗೆ ಶಕ್ತಿ. ಅದೇನೇ ಇರಲಿ, ಕಳೆದ ವರ್ಷದ ಸಿಹಿ ಕಹಿ ಘಟನೆಗಳನ್ನು ಒಮ್ಮೆ ಮೆಲುಕು ಹಾಕೋಣ.

ಸೂರ್ಯನ ಅಧ್ಯಯನಕ್ಕಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ‘ಆದಿತ್ಯ ಎಲ್ 1’ ಸೆಪ್ಟಂಬರ್ 2 ರಂದು ಉಡಾವಣೆಯಾಗಿದ್ದು ಐತಿಹಾಸಿಕ ಕ್ಷಣವಾಗಿತ್ತು ಹಾಗೂ ಜುಲೈ 14 ರಂದು ಮರು ಉಡಾವಣೆಗೊಂಡ ಚಂದ್ರಯಾನ – 3 ಆಗಸ್ಟ್ 5 ರಂದು ಚಂದ್ರನ ಕಕ್ಷೆ ಸ್ಪರ್ಶಿಸಿ 23 ರಂದು ಚಂದ್ರನ ದಕ್ಷಿಣ ಮೇಲ್ಮೈಅನ್ನು ಸ್ಪರ್ಶಿಸಿತು. 2019 ರಲ್ಲಿ ಚಂದ್ರಯಾನ್ – 2 ರ ಉಡಾವಣೆ ವಿಫಲವಾಗಿತ್ತು. ಈಗ ಅಂದರೆ 2023 ರಲ್ಲಿ ಚಂದ್ರಯಾನ-3 ಯಶಸ್ಸು ಕಂಡಿದೆ. ಇದರ ಮೂಲಕ ಚಂದ್ರ ಭಾರತಿಯರಿಗೆ ಮತ್ತಷ್ಟು ಹತ್ತಿರವಾಗಿದ್ದಾನೆ ಮತ್ತು ಭಾರತದ ಪತಾಕೆ ಪ್ರಪಂಚದಾಧ್ಯಂತ ಹಾರಾಡಿದೆ.

ವರ್ಷದ ಕೊನೆಯಲ್ಲಿ ಮತ್ತೊಂದು ಸಿನಿತಾರೆ ಮರೆಯಾಗಿದೆ. ಅದು ಮಾನವೀಯತೆಯ ದಿವ್ಯ ಚೇತನ ಬಹು ಭಾಷಾ ನಟಿ ಲೀಲಾವತಿ ಅಮ್ಮ. ಅವರು 1937 ರಲ್ಲಿ ಹುಟ್ಟಿದ್ದು, 1949 ರಲ್ಲಿ “ನಾಗಕನ್ನಿಕಾ” ಎಂಬ ಚಲನ ಚಿತ್ರದಲ್ಲಿ ಅಂದರೆ ತನ್ನ 13 ನೇ ವಯಸ್ಸಿನಲ್ಲಿ ನಟನಾ ವೃತ್ತಿ ಪ್ರಾರಂಭಿಸಿದರು. ಬೇರೆ ಬೇರೆ ಭಾಷೆಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಬಹುಕಾಲ ಲೋಕೋಪಯೋಗಿ ಕಾರ್ಯದಲ್ಲಿ ತಮ್ಮ ಜೀವನವನ್ನು ತೊಡಗಿಸಿದ್ದು, ಪ್ರಾಣಿ ಪಕ್ಷಿಗಳನ್ನು ಸ್ವಂತ ಮಕ್ಕಳಂತೆ ಪ್ರೀತಿಸಿ, ಸಾರ್ಥಕ ಜೀವನ ನಡೆಸಿ, ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ.

    ಭಾರತೀಯ ಚಿತ್ರ ರಸಿಕರ ಪಾಲಿಗೆ 2023 ಸಂಭ್ರಮ ಎಂದೇ ಹೇಳಬಹುದು. ಗಗನಕುಸುಮದಂತಿದ್ದ ಆಸ್ಕರ್, ಒಮ್ಮೆಗೇ ಒಂದಲ್ಲ,, ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. “ಆರ್ ಆರ್ ಆರ್” ಚಿತ್ರದ ಎಂ.ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿರುವ ‘ನಾಟು ನಾಟು’ ಗೀತೆಗೆ ಹಾಗೂ ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ ‘ದಿ ಎಲಿಫೆಂಟ್ ವಿಸ್ಪರ್ಸ್ ‘ ಎಂಬ ತಮಿಳು ಸಾಕ್ಷ್ಯ ಚಿತ್ರಕ್ಕೆ ಆಸ್ಕರ್ ಗರಿಮೆ ದೊರೆತು ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ್ದು, ಸಹಜವಾಗೇ ಉತ್ಸಾಹ, ಹುಮ್ಮಸ್ಸು ಹೆಚ್ಚಿಸಿದೆ. ಅದರಲ್ಲೂ ಭಾರತೀಯ ಸಿನೆಮಾ ಎಂದರೆ ಬಾಲಿವುಡ್ ಎಂಬ ಭ್ರಮೆಯಲ್ಲಿ ಇದ್ದವರೂ ಎರಡೂ ಪ್ರಶಸ್ತಿಗಳೂ ದಕ್ಷಿಣ ಭಾರತದ ಚಿತ್ರಗಳಿಗೆ ಆಸ್ಕರ್ ಗೌರವ ಸಂದಿರುವುದು, ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

    ಈ ವರ್ಷದ ‘ವಿಶ್ವ ಕಪ್ ‘ ಸ್ವಲ್ಪದರಲ್ಲೇ ಕೈ ತಪ್ಪಿ, ಗೆಲ್ಲುವ ಲೆಕ್ಕಾಚಾರ ಹುಸಿಯಾದರೂ, ಕ್ರಿಕೆಟ್ ಪ್ರಿಯರಿಗೆ ನಮ್ಮ ಭಾರತ ತಂಡ ಫೈನಲ್ ಪ್ರವೇಶಿಸಿ, ಉತ್ತಮ ಪ್ರದರ್ಶನ ನೀಡಿದ್ದು, ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ. ಇಲ್ಲಿ ಕಪ್ ಗೆಲುವುದಕ್ಕಿಂತಲೂ ಆಟಗಾರರ ಸಾಧನೆ ಅಭಿಮಾನಿಗಳ ಮನಸು ಗೆದ್ದಿದೆ. ಹಾಗೆಯೇ ಬೆಳಗಾವಿಯ ವಂಟಮೂರಿ ಎಂಬ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲುಗೊಳಿಸಿ ಥಳಿಸಿರುವುದು ದೌರ್ಜನ್ಯದ ಅತಿರೇಕ ಎನ್ನಬಹುದು. ಮಹಿಳೆಯ ಪುತ್ರ ತನ್ನ ಪ್ರೇಮಿಯೊಂದಿಗೆ ಪರಾರಿಯಾದ ಎಂಬ ಕಾರಣದಿಂದ ಆತನ ತಾಯಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಿಂಸಿಸಿದ್ದು ಅಮಾನವೀಯ. ಏನೇ ಇದ್ದರೂ ಇಂಥ ಘಟನೆಗಳು ಮತೊಮ್ಮೆ ನಡೆಯದಂತೆ ಸಂಬಂಧ ಪಟ್ಟ ಇಲಾಖೆಗಳು ಕಾಳಜಿ ವಹಿಸಬೇಕು. ಮತ್ತೊಂದು ಕಡೆ, ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯರಾ ಬಡಕೊಟ್ ಸುರಂಗದಲ್ಲಿ ಭೂಕುಸಿತವಾಗಿ 17 ದಿನ ಬಂಧಿಯಾಗಿದ್ದ 41 ಕಾರ್ಮಿಕರನ್ನು, ‘ರಾಟ್ ಹೋಲ್ ಮೈನಿಂಗ್’ ನಿಂದ ಸಂರಕ್ಷಿಸುವಲ್ಲಿ ನಮ್ಮ ರಕ್ಷಣಾ ಪಡೆ ಯಶಸ್ವಿಯಾಗಿದೆ. ಅಷ್ಟೂ ಕಾರ್ಮಿಕರು ಪವಾಡ ರೀತಿಯಲ್ಲಿ ಬದುಕುಳಿದಿದ್ದು, ಕೂಡ ಮತ್ತೊಂದು ಸಾರ್ಥಕತೆಗೆ ಕಾರಣವಾದ ವಿದ್ಯಮಾನ ಎಂದರೆ ತಪ್ಪಾಗದು.

    ಚಿತ್ರ ಕೃಪೆ : ರಘುಪತಿ ಶೃಂಗೇರಿ

    ದಸರಾ ಆನೆಯೆಂದೇ ಪ್ರಖ್ಯಾತವಾಗಿದ್ದ ಅರ್ಜುನ, ತನ್ನ ಮವುತರನ್ನು ಸಂರಕ್ಷಿಸುವ ಸಲುವಾಗಿ ಅರಣ್ಯದ ಮದ್ದಾನೆಯೊಂದಿಗೆ ಗುದ್ದಾಡಿ, ತನ್ನ ಪ್ರಾಣವನ್ನೇ ಕಳೆದು ಕೊಂಡಿದ್ದು, ಬೇಸರದ ಸಂಗತಿ. 1959ರಲ್ಲಿ ಹುಟ್ಟಿ 2012 ರಿಂದ 2019 ರ ವರೆಗೆ ಚಿನ್ನದ ಅಂಬಾರಿ ಹೊತ್ತ ಅರ್ಜುನನ ಸಾವು, ಈ ವರ್ಷದ ದುರಂತದಲ್ಲಿ ಒಂದು. ಮೈಸೂರು ದಸರಾದ ಕೇಂದ್ರ ಬಿಂದುವಾಗಿದ್ದ ಅರ್ಜುನನ ಸಾವು ತನಿಖೆಗೆ ಒತ್ತಾಯಗಳು ಕೂಡ ಕೇಳಿಬರುತ್ತಿದೆ. ಕೇಂದ್ರ ಸರ್ಕಾರ ಕೊಡುವ ದೇಶದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ನಮ್ಮ ಶಿರಸಿಯ ನಾರಾಯಣ್ ಪರಮೇಶ್ವರ್ ಭಾಗವಾತ್ ಹಾಗು ಬಾಗಲಕೋಟೆಯ ಸಪ್ನಾ ಶ್ರೀಶೈಲ್ ಅನಿಗೋಲ್ ಆಯ್ಕೆಯಾಗಿದ್ದು ಸಂತಸದ ಸಂಗತಿ.

    ಹೀಗೆ ಹಲವಾರು ಕಷ್ಟ ಸುಖಗಳಲ್ಲಿ 2023 ಕೊನೆಯಾಗಲಿದೆ. ಜೀವನವೇ ಹಾಗೆ, ಬೇವು-ಬೆಲ್ಲಗಳ ಸಮ್ಮಿಶ್ರಣ. ದುಃಖದ ಜೊತೆಗೇ ಸುಖ, ಸುಖದ ಜೊತೆಗೆ ದುಃಖ, ಅಂಟಿಯೇ ಇರುವುದು. ಎರಡನ್ನೂ ಸಮಾನವಾಗಿ ಸ್ವೀಕರಿಸಿ ಬದುಕಬೇಕು. ಪ್ರತಿದಿನ ಹೊಸ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕು. ಹೊಸ ವರ್ಷ ಎಲ್ಲರಿಗೂ ಹರ್ಷ ತರಲಿ, ಆರೋಗ್ಯಕರ ಅಭಿರುಚಿ ನಮ್ಮದಾಗಿಸೋಣ. ಒಳ್ಳೆಯ ಪುಸ್ತಕಗಳನ್ನು ಓದಿ ಉತ್ತಮವಾದದನ್ನು ಜೀವನದಲ್ಲಿ ಅಳವಡಿಕೊಳ್ಳೋಣ. ಇತರರಿಗೂ ಸ್ಪೂರ್ತಿಯಾಗೋಣ. ಸಂಬಂಧಗಳನ್ನು ಮತ್ತಷ್ಟು ಗಟ್ಟಿ ಮಾಡೋಣ. ಮೋಜು ಮಸ್ತಿ ಇತಿ ಮಿತಿಯಲ್ಲಿರಲಿ. ಅದೇ ಜೀವನವಲ್ಲ. ಜೀವನದ ಒಂದು ಭಾಗವಷ್ಟೇ. ಶಾಂತಿ ನೆಮ್ಮದಿ ಸದಾ ಎಲ್ಲರ ಜೀವನದಲ್ಲಿ ಸಮೃದ್ಧಿಯಾಗಿರಲಿ. ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

    ಶೈಲಾ

    Related post

    Leave a Reply

    Your email address will not be published. Required fields are marked *