ಹೀಗಿರಲಿ ನಮ್ಮ ಸಾಮಾಜಿಕ ನಿಯಮಗಳು

ಹೀಗಿರಲಿ ನಮ್ಮ ಸಾಮಾಜಿಕ ನಿಯಮಗಳು

ಪ್ರಸ್ತುತ ಸಾಮಾಜದಲ್ಲಿ ಮಾನವೀಯ ಸಂಬಂಧಗಳು ನಶಿಸುತ್ತಿವೆ. ಯುವಪೀಳಿಗೆಯು ಯಾಂತ್ರಿಕ ಬದುಕಿಗೆ ಜೋತುಬಿದ್ದಿದ್ದು, ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಸಾಮಾಜಿಕ ಸಾಮರಸ್ಯ ಮತ್ತು ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಬೇಕಾದರೆ ಯುವಪೀಳಿಗೆಯು ಪಠ್ಯದ ಹುಳುವಾಗುವ ಬದಲು ಪಠ್ಯೇತರ ಚಟುವಟಿಕೆಗಳತ್ತ ಗಮನಹರಿಸಿ ಸಮಾಜದೊಂದಿಗೆ ಬೆರೆಯುವ ಪ್ರಯತ್ನವನ್ನು ಮಾಡಬೇಕು. ಸಮಾಜದ ಎಲ್ಲಾ ಸ್ತರಗಳ ಜನರೊಂದಿಗೆ ಸಮಾನವಾಗಿ ಬೆರೆಯಬೇಕೆಂದರೆ ಕೆಲವೊಂದು ನಿಯಮಗಳತ್ತ ಗಮನಹರಿಸುವುದು ಉತ್ತಮ.

ಅವುಗಳೆಂದರೆ,
ಯಾರಿಗಾದರೂ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಫೋನ್ ಕರೆ ಮಾಡಬಾರದು. ಕರೆ ಮಾಡಿರುವ ವ್ಯಕ್ತಿಯು ಕರೆಯನ್ನು ಸ್ವೀಕರಿಸುತ್ತಿಲ್ಲವೆಂದರೆ, ಅಥವಾ ಕರೆಯನ್ನು ಕಟ್ ಮಾಡುತ್ತಿದ್ದರೆ ಅವರು ಯಾವುದೋ ಅಗತ್ಯ ಕೆಲಸದಲ್ಲಿ ವ್ಯಸ್ತರಾಗಿದ್ದಾರೆ ಎಂದೇ ತಿಳಿಯಬೇಕು. ಯಾರಿಂದಲಾದರೂ ಹಣವನ್ನು ಸಾಲವಾಗಿ ಪಡೆದಿದ್ದರೆ ಸಾಲ ನೀಡಿದರವರು ವಾಪಾಸ್ ಕೇಳುವ ಮೊದಲೇ ಹಿಂತಿರುಗಿಸಬೇಕು. ಇದು ಸಾಲ ಪಡೆದುಕೊಂಡವರ ನಡೆತೆಯ ಸಮಗ್ರತೆಯನ್ನು ತೋರಿಸುತ್ತದೆ. ಕೆಲವರು ಛತ್ರಿ, ಪೆನ್ನು ಮತ್ತಿತರ ವಸ್ತುಗಳನ್ನು ಪಡೆದುಕೊಂಡು ಹಿಂತಿರುಗಿಸದೇ ತಮ್ಮೊಂದಿಗೆ ಒಯ್ಯುತ್ತಾರೆ. ಯಾರಾದರೂ ನಮ್ಮನ್ನು ಹೋಟೆಲ್‍ಗೆ ಮದ್ಯಾಹ್ನ ಅಥವಾ ರಾತ್ರಿ ಊಟಕ್ಕೆ ಆಮಂತ್ರಿಸಿದ್ದರೆ ಸಿಕ್ಕಿದ್ದೇ ಸೀರುಂಡೆ ಎನ್ನುವಂತೆ ದುಬಾರಿ ಆಹಾರಕ್ಕೆ ಆರ್ಡರ್ ಕೊಡಬಾರದು. ಯಾರನ್ನಾದರೂ ಮಾತನಾಡಿಸುವ ಸಂದರ್ಭದಲ್ಲಿ ಓಹ್, ‘ನಿಮಗಿನ್ನೂ ಮದುವೆಯಾಗಿಲ್ಲವೆ?’, ‘ನೀವೇಕೆ ನಿಮ್ಮ ಕೆಲಸವನ್ನು ಬದಲಾಯಿಸಬಾರದು?’, ‘ನಿಮಗಿನ್ನೂ ಮಕ್ಕಳಾಗಿಲ್ಲವೆ?’, ‘ನೀವೇಕೆ ಒಂದು ಮನೆ ಖರೀದಿಸಬಾರದು?’, ‘ನೀವೇಕೆ ಒಂದು ಕಾರ್ ಖರೀದಿಸಬಾರದು?’ ಇಂತಹ ಪೇಚಿಗೆ ಸಿಲುಕಿಸುವ ಪ್ರಶ್ನೆಗಳನ್ನು ಕೇಳಿ ಅವರನ್ನು ಇರುಸುಮುರುಸಿಗೆ ಒಳಗಾಗುವಂತೆ ಮಾಡಬಾರದು.

ನಾವು ಮುಂದೆ ನಡೆಯುತ್ತಾ ಬಾಗಿಲನ್ನು ದಾಟಿ ನಡೆಯುವಾಗ ನಮ್ಮ ಹಿಂದೆ ಬರುತ್ತಿರುವ ವ್ಯಕ್ತಿಗಾಗಿ ಬಾಗಿಲು ತೆರೆದು ಹಿಡಿಯಬೇಕು. ಬರುತ್ತಿರುವವರು ಹುಡುಗ ಅಥವಾ ಹುಡುಗಿ, ಹಿರಿಯರು ಅಥವಾ ಕಿರಿಯರು ಯಾರಾಗಿದ್ದರೂ ಪರವಾಗಿಲ್ಲ, ಸಾರ್ವಜನಿಕವಾಗಿ ಎಲ್ಲರನ್ನೂ ಚೆನ್ನಾಗಿ ನಡೆಸಿಕೊಳ್ಳುವುದು ಮನುಷ್ಯ ಧರ್ಮವಾಗಬೇಕು.

ಸ್ನೇಹಿತರೊಂದಿಗೆ ಆಟೋ ಅಥವಾ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಿದ ಸಂದರ್ಭ ಸ್ನೇಹಿತರು ಪ್ರಯಾಣದರ ಪಾವತಿಸಿದರೆ, ಮುಂದಿನ ಬಾರಿ ಮರೆಯದೇ ನಾವೇ ಪ್ರಯಾಣದರವನ್ನು ಪಾವತಿಸಬೇಕು.

ಒಂದು ನಿರ್ಧಿಷ್ಟ ವಿಚಾರದ ಕುರಿತ ನಮ್ಮ ಹಾಗೂ ಮತ್ತೊಬ್ಬರ ಅಭಿಪ್ರಾಯ ಭೇದಗಳನ್ನು ಗೌರವಿಸಬೇಕು. ನಮಗೆ 6 ರಂತೆ ಕಾಣುವುದು ನಮ್ಮೆದುರಿನವರಿಗೆ 9 ಆಗಿ ಕಾಣಬಹುದು. ಆದ್ದರಿಂದ ಎರಡನೇ ಅಭಿಪ್ರಾಯವು ಯಾವಾಗಲೂ ಪರ್ಯಾಯವಾಗಿ ಒಳ್ಳೆಯದೇ.

ಇನ್ನೊಬ್ಬರು ಮಾತನಾಡುತ್ತಿರುವಾಗ ಅಡ್ಡಿ ಪಡಿಸದೇ ಅವರಿಗೆ ಪೂರ್ತಿ ಮಾತನಾಡಲು ಅವಕಾಶ ಕೊಟ್ಟು, ಎಲ್ಲವನ್ನೂ ಕೇಳಿಸಿಕೊಂಡು ವಿಮರ್ಷಿಸಬೇಕು. ನಾವು ಯಾರನ್ನಾದರೂ ಕೀಟಲೆ ಮಾಡಿದಾಗ ಮತ್ತು ಅವರು ಅದನ್ನು ಆಸ್ವಾಧಿಸುತ್ತಿರುವಂತೆ ಕಾಣಿಸದಿದ್ದರೆ, ಅದನ್ನು ನಿಲ್ಲಿಸಿ ಮತ್ತು ಅದನ್ನು ಮುಂದುವರೆಸಬಾರದು. ಈ ನಮ್ಮ ನಡೆ ಅವರ ಮೆಚ್ಚುಗೆಗೆ ಒಳಗಾಗುತ್ತದೆ.

ಯಾರಾದರೂ ನಮಗೆ ಸಹಾಯ ಮಾಡಿದರೆ, ಕೂಡಲೇ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಬೇಕು. ಯಾರನ್ನೇ ಹೊಗಳುವುದಿದ್ದರೆ ಅದು ಸಾರ್ವಜನಿಕವಾಗಿರಬೇಕು, ಮತ್ತು ಯಾವುದೇ ವಿಮರ್ಶೆಗಳಿದ್ದರೂ ಅದು ಖಾಸಗಿಯಾಗಿರಬೇಕು. ಮತ್ತೊಬ್ಬರ ದೇಹ ಗಾತ್ರ ಮತ್ತು ತೂಕದ ಬಗ್ಗೆ ಯಾವ ಕಾರಣಕ್ಕೂ ಟೀಕಿಸಬಾರದು. ಸುಮ್ಮನೆ ‘ನೀವು ಸುಂದರವಾಗಿದ್ದೀರ’ ಎಂದಷ್ಟೇ ಹೇಳಬೇಕು. ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದಿದ್ದರೆ ಅವರಾಗಿಯೇ ಕೇಳುತ್ತಾರೆ, ಆಗ ತಿಳಿಸಿರಿ.

ಮೊಬೈಲ್ ಫೋನಿನಲ್ಲಿ ಯಾರಾದರೂ ಫೋಟೋ ತೋರಿಸಿದರೆ, ನಾವು ಹಕ್ಕಿನಿಂದ ಎಡಕ್ಕೆ ಮತ್ತು ಬಲಕ್ಕೆ ಸ್ವೈಪ್ ಮಾಡಬಾರದು, ಏಕೆಂದರೆ ಮುಂದಿನ ಫೋಟೋ ಏನಿದೆ ಎಂದು ನಮಗೆ ತಿಳಿದಿರುವುದಿಲ್ಲ.

ನಮ್ಮ ಸಹೋದ್ಯೋಗಿಗಳು ಡಾಕ್ಟರರ ಬಳಿ ಹೋಗಬೇಕಾಗಿದೆ ಎಂದರೆ, ಏಕೆ ಎಂದು ಪ್ರಶ್ನಿಸಬಾರದು. ಸುಮ್ಮನೆ ‘ಆರೋಗ್ಯವಾಗಿದ್ದೀರಲ್ವಾ?’ ಎಂದು ಹೇಳಿ. ಅವರ ವೈಯಕ್ತಿಕ ಅನಾರೋಗ್ಯವನ್ನು ತಿಳಿಸುವಂತಹ ಇರುಸುಮುರುಸಿನ ಪರಿಸ್ಥಿತಿಗೆ ಅವರನ್ನು ತರಬಾರದು. ಅದು ನಮಗೆ ಹೇಳುವಂತಹ ವಿಷಯವಾಗಿದ್ದರೆ, ನಮ್ಮ ಕುತೂಹಲದ ಹೊರತಾಗಿಯೂ ಅವರಾಗಿಯೇ ನಮಗೆ ಹೇಳುತ್ತಾರೆ.

ಕಛೇರಿಯಲ್ಲಿ ಒಬ್ಬ ಅತ್ಯುನ್ನತ ಹುದ್ದೆಯಲ್ಲಿರುವ ಅಧಿಕಾರಿಗೆ ಕೊಡುವಷ್ಟೇ ಗೌರವವನ್ನು ಕಡಿಮೆ ದರ್ಜೆಯ ಸಿಬ್ಬಂದಿಗೂ ನೀಡಬೇಕು. ನಮ್ಮ ಸಿಬ್ಬಂದಿಗಳೊಂದಿಗೆ ನಾವೆಷ್ಠು ಕಠೋರವಾಗಿದ್ದೇವೆ ಎನ್ನುವುದನ್ನು ಯಾರೂ ಗುರುತಿಸುವುದಿಲ್ಲ, ಬದಲಿಗೆ ಅವರನ್ನು ಗೌರವದಿಂದ ನಡೆಸಿಕೊಳ್ಳುವುದನ್ನು ಮಾತ್ರ ಗಮನಿಸುತ್ತಾರೆ.

ಯಾರಾದರೂ ನಮ್ಮೊಂದಿಗೆ ನೇರವಾಗಿ ಮಾತನಾಡುತ್ತಿರುವಾಗ ನಾವು ನಮ್ಮ ಫೋನ್ ನೋಡುತ್ತಿರುವುದು ಅಸಭ್ಯತೆ ಎನಿಸುತ್ತದೆ. ಯಾರಾದರೂ ಯಾವುದಾದರೂ ವಿಚಾರದ ಕುರಿತಾಗಿ ನಮ್ಮ ಸಲಹೆಯನ್ನು ಕೇಳುವವರೆಗೆ ನಾವಾಗಿಯೇ ಯಾವುದೇ ಸಲಹೆಯನ್ನು ನೀಡಬಾರದು. ಸ್ನೇಹಿತರನ್ನು ಅಥವಾ ಇನ್ಯಾರನ್ನಾದರೂ ಬಹಳ ದಿನಗಳ ನಂತರ ಭೇಟಿಯಾಗುತ್ತಿದ್ದರೆ, ಅವರಾಗಿಯೇ ಹೇಳುವವರೆಗೂ, ಅವರ ವಯಸ್ಸು ಮತ್ತು ಸಂಬಳದ ಬಗ್ಗೆ ಮಾತನಾಡಬಾರದು. ಯಾವುದೇ ವಿಷಯದ ಕುರಿತು ನೇರವಾಗಿ ನಮ್ಮ ಪಾತ್ರವಿಲ್ಲದ ಹೊರತು ಯಾವುದರಲ್ಲೂ ತಲೆತೂರಿಸದೇ ಅಂತಹವುಗಳಿಂದ ದೂರವಿರಬೇಕು. ನಮ್ಮ ಕೆಲಸವನ್ನಷ್ಟೇ ನಾವು ನೋಡಿಕೊಳ್ಳಬೇಕು.

ರಸ್ತೆಯಲ್ಲಿ ಯಾರೊಂದಿಗಾದರೂ ಮಾತನಾಡುವಾಗ ಹಾಕಿರುವ ಸನ್ ಗ್ಲಾಸ್‍ಗಳನ್ನು ತೆಗೆಯಬೇಕು. ಅದು ಎದುರು ಇರುವವರಿಗೆ ಗೌರವ ಸೂಚಿಸಿದಂತೆ. ಅಷ್ಟೇ ಅಲ್ಲದೇ ನಮ್ಮ ಮಾತಿನಂತೆ ನಮ್ಮ ಕಣ್ಣುಗಳ ಸಂಪರ್ಕವೂ ಮುಖ್ಯವಾಗುತ್ತದೆ. ಬಡವರ ಜತೆ ಮಾತನಾಡುತ್ತಿರುವಾಗ ನಮ್ಮ ಶ್ರೀಮಂತಿಕೆ ಬಗ್ಗೆ ಮಾತನಾಡಬಾರದು. ಅದೇ ರೀತಿ ಮಕ್ಕಳಿಲ್ಲದವರ ಜೊತೆ ನಮ್ಮ ಮಕ್ಕಳ ವಿಚಾರವನ್ನು ಮಾತನಾಡಬಾರದು.

ಯಾವುದಾದರೂ ಒಂದು ಉತ್ತಮ ಸಂದೇಶವನ್ನು ಓದಿದ ನಂತರ ‘ಸಂದೇಶಕ್ಕಾಗಿ ಧನ್ಯವಾದಗಳು’ ಎಂದು ಹೇಳುವುದನ್ನು ಮರೆಯಬಾರದು. ಇತರರ ಬಗ್ಗೆ ನಮ್ಮ ಮೆಚ್ಚುಗೆಯು ನಮ್ಮಲ್ಲಿ ಇಲ್ಲದ್ದನ್ನು ಪಡೆಯಲು ಇರುವ ಸುಲಭ ಮಾರ್ಗ ಎನ್ನುವುದನ್ನು ಮರೆಯಬಾರದು.

ಈ ಮೇಲಿನ ಎಲ್ಲಾ ಆದರ್ಶಗಳನ್ನು ವ್ಯಕ್ತಿಯೊಬ್ಬ ಪಾಲಿಸಿದ್ದೇ ಆದರೆ ಸಮಾಜದ ಹಿರಿಯರು, ಕಿರಿಯರು ಮತ್ತು ಗೌರವಾನ್ವಿತ ವ್ಯಕ್ತಗಳೂ ನಮ್ಮೊಂದಿಗೆ ಉತ್ತಮ ಒಡನಾಟವನ್ನು ಹೊಂದಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೇ ಇಂತಹ ನಡವಳಿಕೆಯನ್ನು ಅಳವಡಿಸಿಕೊಂಡಿರುವ ವ್ಯಕ್ತಿಯು ಎಲ್ಲರಿಂದಲೂ ಗೌರವ ಮತ್ತು ಆದರವನ್ನು ಪಡೆಯುತ್ತಾನೆ. ಸಮಾಜವನ್ನು ಬದಲಾಯಿಸುವ ಬದಲು ಸಮಾಜಕ್ಕೋಸ್ಕರ ನಾವೇ ಈ ರೀತಿಯಾಗಿ ಬದಲಾಗೋಣ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160

Related post

Leave a Reply

Your email address will not be published. Required fields are marked *