ಹೀಗೊಂದು ಭಾವನೆ
ಯಾರಿಗಾದರೂ ಹಂಚಿ,
ಎದೆ ಭಾರವಿಳಿಸಲು
ಆಸ್ಪದವನ್ನೀಯದ,
ತಿದಿಯೊತ್ತಿದಂತೆ
ಉರಿಯುತ್ತಿರುವ
ಅಸಹನೀಯ ನೋವು!
ಮನದ ಸಾಗರದಲಿ
ಬಚ್ಚಿಟ್ಟು, ಒಂದೊಂದೇ
ಹನಿ ತೊಟ್ಟಿಕ್ಕಿಸಿದರೂ
ಮುಗಿಯದೆ, ಕರಗದೆ,
ಜನ್ಮವೆತ್ತುತ್ತಿರುವ ಈ
ಅಂತರಾಳದ ನೋವು!
ಮಾತುಗಳೇ ಮುಳ್ಳಾಗಿ
ಚುಚ್ಚಿದರೂ, ನಗುವ
ಕಂಗಳ ಹಿಂದಡಗಿ
ಮೌನದಿ ಬಿಕ್ಕಿದರೂ
ಪರರಿಗರಿವಾಗದಂತಿಹ
ಅಸಹಾಯಕ ನೋವು!
ತನ್ನವರೇ ಹೊಡೆದ
ಮಾತಿನಾಘಾತಕ್ಕೆ
ತತ್ತರಿಸಿ, ಉಸಿರೆತ್ತದೆ
ಒಳಗುದಿಯ ಅದಿಮಿಟ್ಟು
ನಗೆಯ ಮೊಗವಾಡವಿಟ್ಟ
ಅಂತರ್ದಾಹಕವೀ ನೋವು!
ಅನಿವಾರ್ಯತೆಯ
ವಾಸ್ತವವನ್ನರಿತು,
ಎಲ್ಲವನ್ನೆದುರಿಸಲು
ಸಜ್ಜಾದ ಪ್ರಬುದ್ಧ ಮನದ
ಗಂಭೀರ ನೋವು!
ಶ್ರೀವಲ್ಲಿ ಮಂಜುನಾಥ