ಹೃನ್ಮನದ ಭಾವಲಾಸ್ಯ
ತಾಳ ತಪ್ಪದ ಮೌನರಾಗಕೆ
ಮನವು ಮೂಕಭಾವ ತಳೆದಿದೆ!
ಕುಳಿರ್ಗಾಳಿಯ ಕಡು ದಾಳಿಯಲೂ…
ಚಿಗುರಿದೆಲೆಗಳು ನಿತ್ಯ ನಗುತಿವೆ!!
ಬತ್ತಿದೆದೆಯಲಿ ಹೊಸ ಕನಸು
ಗರಿಗೆದರಿ ಚೈತನ್ಯವು ಮೂಡಿದೆ!
ಕದಡಿದ ಭಾವಗಳು ನನಸಾಗಲು..
ಹೃನ್ಮನವು ಕೂಗಿ ಕರೆದಿದೆ!!
ದಿಕ್ಕು ತಪ್ಪಿಸುವ ಕತ್ತಲೆಯಲೂ
ನಂದದ ಬೆಳಕು ಜಗದಿ ಉಳಿದಿದೆ!
ಅವನೆಣಿಸಿದಂತೆ ಸಾಗಿಹ ಪಯಣದಲಿ..
ಕಾಲವು ಮುಷ್ಟಿಯಲಿಹ ಮರಳಂತೆ ಸರಿದಿದೆ!!
ವಿಸ್ತರಿಸಿದ ಅಂಬರದ ಕ್ಷಿತಿಜದೊಳು
ಮುಚ್ಚಿದ ಕಂಗಳಲೂ ಅಡಗಿದೆ ಬೆಳಕು!
ಅಳಿಯದ ಒಲವಿಗೆ ನಿಜದೊಳು..
ಮನತೆರೆದು ನೋಡಲು ನಲ್ಮೆಯ ಬದುಕು!!
ಸುಮನಾ ರಮಾನಂದ