ಹೆಣ್ಣಿನ ಮನದಾಳದ ನಿವೇದನೆ

ಹೆಣ್ಣಿನ ಮನದಾಳದ ನಿವೇದನೆ

ಒಂದು ತಾಯಿ ಆಗೋದು ಅಂದ್ರೆ ಪ್ರತಿ ಹೆಣ್ಣಿಗೆ ತುಂಬಾ ಖುಷಿ ಹಾಗೂ ಅವಳಿಗದು ಪರಿಪೂರ್ಣತೆ. ಆ ಖುಷಿ ಯಾವ ಹೆಣ್ಣು ತಾನೇ ಬೇಡ ಎನ್ನಲು ಸಾಧ್ಯ. ಪ್ರತಿ ಹೆಣ್ಣು ಆ ಒಂದು ಸೌಭಾಗ್ಯಕ್ಕಾಗಿ ತುಂಬಾ ಪ್ರಯತ್ನ ಪಟ್ಟಿರುತ್ತಾಳೆ. ಅದರಿಂದ ಅವಳು ಪಟ್ಟಿರುವ ನೋವು ಹೇಳಲು ಅಸಾಧ್ಯ. ಅದನ್ನು ಅವಳು ಬೇರೆಯವರಿಗೆ ವಿವರಿಸಲು ಸಾಧ್ಯ ಇಲ್ಲ. ಅಷ್ಟೂ ಪ್ರಯತ್ನ ಪಟ್ಟು ಆ ಸೌಭಾಗ್ಯ ಅವಳಿಗೆ ಸಿಗಲಿಲ್ಲ ಅಂದ್ರೆ ಅದು ಅವಳ ಯಾವುದೊ ಪೂರ್ವ ಜನ್ಮದ ಕರ್ಮ ಫಲನೋ ಅಥವಾ ಅವಳ ದುರ್ವಿಧಿನೋ ಆಗಿರಬಹುದು. ಇಲ್ಲ ದೇವರ ಇಚ್ಛೆ ಬೇರೇನೇ ಇರಬಹುದು.

ಆದರೆ ಅದಕ್ಕಿಂತ ಅವಳ ದೌರ್ಭಾಗ್ಯ ಅಂದರೆ ಜನಗಳ ಬಾಯಿ ಮಾತು. ಯಾಕೆ ಮಕ್ಕಳು ಇಲ್ಲ ಎಂದ ತಕ್ಷಣ ಅವಳು ಖುಷಿಯಾಗಿ ಇರಬಾರದ!. ಅವಳಿಗೆ ಜೀವನಾನೇ ಇಲ್ವಾ. ಮಕ್ಕಳಿಲ್ಲ ಎನ್ನುವ ನೋವು ಅವಳ ಕೊನೆ ಉಸಿರಿನವರೆಗೂ ಇರುತ್ತದೆ. ಆದರೆ ಅದನ್ನು ಅವಳು ಮುಚ್ಚಿಟ್ಟು ಮುಂದಿನ ಬದುಕಿನತ್ತ ಬದುಕುವ ಪ್ರಯತ್ನ ಮಾಡುತ್ತಾಳೆ ಅಷ್ಟೆ.

ನನಗೆ ಒಂದು ಕಾಡುವ ಪ್ರಶ್ನೆ ನಿಜವಾಗಲೂ ಮಕ್ಕಳಿರುವ ಎಲ್ಲಾ ತಂದೆ ತಾಯಿಗಳು ಖುಷಿಯಾಗಿದ್ದಾರಾ?. ಇವಾಗಿನ ಪ್ರತಿ ನಿತ್ಯ ನಾವು ನೋಡುವ ಸಮಾಜದಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಲೇ ಇದೆ ಯಾಕೆ?. ಹಾಗಂತ ಎಲ್ಲಾ ಮಕ್ಕಳು ಕೆಟ್ಟವರು ಅಂತೇನಿಲ್ಲ. ಆ ಅದೃಷ್ಟ ತಂದೆತಾಯಿಗಳಿಗೂ, ಮಕ್ಕಳಿಗೂ ಇರಬೇಕು.

ಮಕ್ಕಳಿಲ್ಲದವರ ಮನಸ್ಸು ಆ ಒಂದು ವಿಷಯದಲ್ಲಿ ತುಂಬಾ ದುರ್ಬಲವಾಗಿರುತ್ತದೆ. ನಾವು ನಮ್ಮ ಬಾಯಿ ತಪ್ಪಿನಿಂದ ಏನೇ ಅಂದರು ಆ ಮನಸ್ಸು ತುಂಬಾ ಕೊರಗುತ್ತೆ. ಮಾತಾಡುವ ಭರದಲ್ಲಿ ಆ ಮನಸ್ಸಿಗೆ ನೋವು ಕೊಡಬಾರದು. ಮಕ್ಕಳು ಇಲ್ಲದ ತಾಯಂದಿರಿಗೆ ಕಣ್ಣಿಗೆ ಕಾಣುವ ಎಲ್ಲಾ ಮಕ್ಕಳನ್ನು ಸ್ವಾರ್ಥ ರಹಿತವಾಗಿ ಪ್ರೀತಿಸುವ ಗುಣ ದೇವರು ಅವಳಿಗೆ ಕೊಟ್ಟಿರುತ್ತಾನೆ. ಇದಕ್ಕಿಂತ ಸೌಭಾಗ್ಯ ಅವಳ ಬಾಳಲ್ಲಿ ಏನಿದೆ?.

ಹೆಣ್ಣಿನ ಮನಸ್ಸು ಹೆಣ್ಣಿಗೆ ಅರ್ಥ ಆಗೋದು ಅಂತಾರೆ . ಆದರೆ ದುರ್ವಿಧಿ ಅಂದರೆ ಅದೇ ಹೆಣ್ಣು ಆ ನೋವಿಗೆ ಕಾರಣೀಭೂತಳಾಗಿರುತ್ತಾಳೆ. ದಯವಿಟ್ಟು ನೋವು ಕೊಡ್ಬೇಡಿ. ನೀವು ಗೊತ್ತಿದ್ದೋ ಗೊತ್ತಿಲ್ಲದೇನೋ ಏನಾದರು ಅಂತೀರಾ. ಆದರೆ ಆ ಹೆಣ್ಣಿನ ಮನಸ್ಸು ತುಂಬಾ ಕೊರಗುತ್ತೆ. ಮಾತಾಡುವಾಗ ತುಂಬಾ ಎಚ್ಚರಿಕೆಯಿಂದ ಮಾತನಾಡಿ. ನಿಮಗೆ “ಇಲ್ಲ” ಅನ್ನೋದು ಸಾಮಾನ್ಯ ಪದವಾಗಿರಬಹುದು. ಆದರೆ ಅವಳ ಪಾಲಿಗೆ ಅದೊಂದು ಜೀರ್ಣಿಸಲಾಗದ ಪದ. ಆ ನೋವು ಯಾವ ಹೆಣ್ಣಿಗೂ ಬರುವುದು ಬೇಡ ಅನ್ನೋದು ಅವಳ ಆಶಯ.ಆದರೆ ಅದೇ ಮಕ್ಕಳಿಲ್ಲದ ತಾಯಿ ತನ್ನ ಮಗುವಿನ ಪ್ರೀತಿಯನ್ನು ಬೇರೆ ಮಕ್ಕಳಲ್ಲಿ ಕಾಣುವ ಮನಸ್ಸಿರುತ್ತದೆ. ನಿಷ್ಕಲ್ಮಷವಾಗಿ ಪ್ರೀತಿಸುವ ಗುಣ, ಅವಳಿಗೆ ಮಾತ್ರ ಇರಲು ಸಾಧ್ಯ. ಬೇರೆಯವರನ್ನು ನೋಯಿಸುವುದಿಲ್ಲ. ಒಂದು ವೇಳೆ ನೋಯಿಸಿದಾಗ ಅವಳ ಮನಸ್ಸು ಅದರ ದುಪ್ಪಟ್ಟು ನೊಂದುಕೊಳ್ಳುತ್ತೆ. ಯಾಕೆ ಅಂದರೆ ಆ ನೋವಿನ ಆಳ ಅವಳಿಗೆ ಚೆನ್ನಾಗಿ ತಿಳಿದಿರುತ್ತದೆ.

ನಿಜಕ್ಕೂ ಆ ತಾಯಿ ಅದೃಷ್ಟವಂತಳು ಯಾಕೆ ಅಂತೀರಾ, ಅವಳಿಗೆ ಯಾವುದೇ ಬಂಧನಗಳು ಇಲ್ಲ. ಯಾವುದೇ ನೀರಿಕ್ಷೆಗಳಿರುವುದಿಲ್ಲ. ಅವಳ ಜೀವನ ಅವಳ ಇಷ್ಟ. ಮಕ್ಕಳನ್ನು ಬೆಳೆಸುವಾಗ ಮಕ್ಕಳು ಒಳ್ಳೆಯ ದಾರಿಯಲ್ಲಿ ನಡೆದಾಗ ಆಗುವಂತಹ ಖುಷಿ ಅದೇ ಮಕ್ಕಳು ದಾರಿ ತಪ್ಪಿದಾಗ ಆಗುವಂತಹ ನೋವು, ತಮ್ಮ ಕರ್ತವ್ಯ ಪೂರೈಸುವಲ್ಲಿ ಅರ್ಧ ಆಯುಷ್ಯವನ್ನೇ ತೇಯ್ದ ತಂದೆ ತಾಯಿಗಳನ್ನು ಕೊನೆ ಘಳಿಗೆಯಲ್ಲಿ ನೀವು ನನಗೇನು ಮಾಡಿದಿರಿ ಎನ್ನುವ ಪ್ರಶ್ನೆ ಬಂದಾಗ ಆ ತಂದೆತಾಯಿಗಳು ಅನುಭವಿಸುವಂತಹ ಯಾತನೆ, ವೃದ್ಧಾಶ್ರಮದಲ್ಲಿ ಬಿಟ್ಟು ಹೋದಾಗ ಆಗುವಂತಹ ನೋವು. ಅವಳಿಗೆ ಮಕ್ಕಳಿಲ್ಲ ಎನ್ನುವ ನೋವಿಗಿಂತಲೂ ಹೆಚ್ಚು. ಇಂತಹ ತಂದೆ ತಾಯಿಗಳಲ್ಲಿ ನೋವು ಅಂದರೆ ಏನು ಎಂದು ಕೇಳಿದಾಗ ಸಮರ್ಪಕ ಉತ್ತರ ಸಿಗಬಹುದು.

ಹಾಗಾಗಿ ದಯವಿಟ್ಟು ಯಾವುದೇ ಕಾರಣಕ್ಕೂ ಆಕೆಯನ್ನು ಮಾತನಾಡುವ ಭರದಲ್ಲಿ ಮನಸ್ಸಿಗೆ ನೋವು ಕೊಡುವ ಹಾಗೆ ಮಾತನಾಡಿಸಬೇಡಿ. ಮೊದಲು ಅವಳನ್ನು ನಿಮ್ಮ ಹಾಗೆ ಒಬ್ಬ ಮಾನವೀಯ ಹೃದಯವುಳ್ಳ ಹೆಣ್ಣು ಅನ್ನೋದನ್ನ ಪರಿಗಣಿಸಿ. ನಿಮಗಿಂತ ಹೆಚ್ಚು ಪ್ರೀತಿಸುವ ಗುಣ ದೇವರು ಅವಳಿಗೆ ಕೊಟ್ಟಿರುತ್ತಾನೆ. ಅವಳ ನ್ಯೂನತೆಯನ್ನು ಹೇಳಿ ಅವಳ ಪ್ರೀತಿಸುವ ಗುಣಕ್ಕೆ ಅವಮಾನ ಮಾಡಬೇಡಿ. ಸರಿ ನಿಮಗೆ ಮಕ್ಕಳನ್ನು ದೇವರು ಕೊಟ್ಟಿದ್ದಾನೆ ಚೆನ್ನಾಗಿ, ನೆಮ್ಮದಿಯಾಗಿ ಇರಿ. ಹಾಗಂತ ಮಕ್ಕಳಿಲ್ಲದವರೊಂದಿಗೆ ನಿಮ್ಮ ಹೋಲಿಕೆ ಬೇಡ.

ಸೌಮ್ಯ ನಾರಾಯಣ್

Related post

Leave a Reply

Your email address will not be published. Required fields are marked *