ಹೆಣ್ಣುಮಕ್ಕಳೊಂದಿಗೆ ಹಸಿರುಕ್ರಾಂತಿ – ಪಿಪ್ಲಾಂತ್ರಿ ಗ್ರಾಮ

ಸ್ತ್ರೀ ದೇವೋಭವ ಗ್ರಾಮ – ಪಿಪ್ಲಾಂತ್ರಿ ಗ್ರಾಮ

“ಯತ್ರ ನಾರ್ಯಸ್ತು ಪುಜ್ಯಂತೆ ರಮಂತೆ ತತ್ರ ದೇವತ” ಎಂದು ಹಿಂದೂ ಸಂಸ್ಕೃತಿಯಲ್ಲಿ ಯಾವ ಜಾಗದಲ್ಲಿ ಮಹಿಳೆಗೆ ಪೂಜನೀಯ ಸ್ಥಾನಮಾನ ಸಿಗುತ್ತದೋ ಅಂಥಹ ಸ್ಥಳದಲ್ಲಿ ದೇವತೆಗಳು ವಾಸ ಮಾಡುತ್ತಾರೆ ಎನ್ನುವ ಮೂಲಕ ಮಹಿಳೆಗೆ ಪುಜನೀಯ ಸ್ಥಾನ ಕಲ್ಪಿಸಲಾಗಿದೆ. ಆದರೆ ಇಂದಿನ ವಾಸ್ತವವೆ ಬೇರೆ, ದಿನಬೆಳಗಾದರೆ ಸಾಕು ಸುದ್ದಿ ಮಾದ್ಯಮಗಳು ಹೆಣ್ಣು ಮಕ್ಕಳಮೇಲೆ, ಮಹಿಳೆಯರ ಮೇಲೆ ಆಗುವ ದೌರ್ಜನ್ಯ, ಅತ್ಯಚಾರ, ಕೊಲೆ ಮುಂತಾದ ಸುದ್ದಿಯ ಮೂಲಕ ಸುಪ್ರಭಾತ ಹಾಡುತ್ತದೆ. ಇವುಗಳ ಮಧ್ಯೆಯೂ ನಮ್ಮ ದೇಶದ ಹಳ್ಳಿಯೊಂದು ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡುವ ಮೂಲಕ ದೇಶದ ಗಮನ ಸೆಳೆದಿದೆ. ಹೌದು ರಾಜಸ್ಥಾನದ ರಾಜ್‌ಸಾಮಂದ ಜಿಲ್ಲೆಯ ಒಂದು ಪುಟ್ಟ ಹಳ್ಳಿ “ಪಿಪ್ಲಾಂತಿ” ಪರಿಸರ – ಸ್ತ್ರೀಪರ ಕಾಳಜಿಯಿಂದ ಈಗ ಸುದ್ದಿಯಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಪಿಪ್ಲಾಂತ್ರಿ ಗ್ರಾಮ ಪಂಚಯಾತಿ ಹೆಣ್ಣು ಮಕ್ಕಳ ರಕ್ಷಣೆಯ ಜೊತೆಗೆ ಪಿಪ್ಲಾಂತ್ರಿ ಗ್ರಾಮದ ಸುತ್ತ ಹಸಿರು ಕ್ರಾಂತಿಯನ್ನೆ ಮಾಡಿದೆಯೆಂದರೆ ಆಶ್ಛರ್ಯವಾಗಬಹುದು.

ಹೆಣ್ಣು ಮಗು ಹುಟ್ಟಿತೆಂದರೆ ಮೂಗುಮುರಿಯುವ ಅದೆಷ್ಟೊ ಮಂದಿಯಿರುವಾಗ ಈ ಪಿಪ್ಲಾಂತ್ರಿ ಗ್ರಾಮದಲ್ಲಿ ಹೆಣ್ಣು ಮಗು ಹುಟ್ಟಿತೆಂದರೆ ಅದೊಂದು ಹಬ್ಬವೇ ಸರಿ!! ಈ ಪಿಪ್ಲಾಂತ್ರಿ ಗ್ರಾಮದಲ್ಲಿ ಹೆಣ್ಣು ಮಗುವಿನ ಆಗಮನವನ್ನು ವಿಶೇಷವಾಗಿ ಸ್ವಾಗತಿಸಲಾಗುತ್ತದೆ. ಈ ಹಳ್ಳಿಯಲ್ಲಿ ಹೆಣ್ಣು ಮಗು ಹುಟ್ಟಿತೆಂದರೆ ಸಾಕು, ಗ್ರಾಮದವರೆಲ್ಲ ಸೇರಿ 111 ಮರದ ಸಸಿಗಳನ್ನು ನೆಡುತ್ತಾರೆ, ಅಷ್ಟೇ ಅಲ್ಲದೆ ಮಗುವನ್ನು ಆರೈಕೆ ಮಾಡುವ ಹಾಗೆ ಮರಗಳನ್ನು ಜೋಪಾನ ಮಾಡಿ ಮರಗಳು ಬೆಳೆದು ಹಣ್ಣು ಬಿಡುವವರೆಗೂ ಪೋಷಿಸುತ್ತಾರೆ. ಕಳೆದ ಕೆಲವು ವರುಷಗಳಲ್ಲಿ ಈ ಗ್ರಾಮಸ್ತರು ಸುಮಾರು 2500 ಮರಗಳನ್ನು ಬೆಳೆಸಿದ್ದಾರೆ ಇವುಗಳಲ್ಲಿ ಹೆಚ್ಚಾಗಿ ಬೇವು, ಮಾವು, ಮತ್ತು ನೆಲ್ಲಿ ಮರಗಳನ್ನು ಹೆಚ್ಚಾಗಿ ಬೆಳೆಸಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ವಿಶೇಷ ಕಾಳಜಿಯನ್ನು ಬೆಳೆಸಲು ಹಾಗು ಗ್ರಾಮದಲ್ಲಿ ಹಸಿರು ಕ್ರಾಂತಿಗೆ ಕಾರಣರಾದವರು ಈ ಗ್ರಾಮದ ಸರಪಂಚರಾದ ಶ್ಯಾಮ್ ಸುಂದರ ಪಲಿವಾಲ್ ರವರ .ಮಗಳು ಅಕಾಲಿಕ ಮರಣಕ್ಕೆ ತುತ್ತಾದ ಸಮಯದಲ್ಲಿ ಅವಳ ನೆನೆಪು ಚಿರಸ್ಥಾಯಿಯಾಗಿರಬೇಕೆಂದು ಪ್ರಾರಂಬಿಸಿದ ಆಂದೋಲನ. ಇದು ಇಷ್ಟೊಂದು ಫಲಪ್ರದವಾಗುತ್ತದೆ ಎಂದು ಅವರಿಗೂ ಗೊತ್ತಿರಲ್ಲಿಲ್ಲವಂತೆ.

ಶ್ಯಾಮ್ ಸುಂದರ ಪಲಿವಾಲ್

ಈ ಅಭಿಯನವನ್ನು ಪ್ರಾರಂಬಿಸಿದಾಗ ಮೊದಮೊದಲು ಹೆಣ್ಣುಮಕ್ಕಳನ್ನು ಒಪ್ಪಿಕೊಳ್ಳಲು ಕೆಲ ಪೋಷಕರು ಹಿಂಜರಿಯುತ್ತಿದರಂತೆ. ಗ್ರಾಮದ ಪಂಚಾಯಿತಿಯವರು, ಶಾಲೆಯ ಮುಖ್ಯೋಪಾದ್ಯಯರು ಮತ್ತು ಅಂಗನವಾಡಿ ಸದಸ್ಯರು ಇಂಥಹ ಪೋಷಕರ ಮನವೋಲಿಸುವಲ್ಲಿ ಸಫಲರಾಗಿದ್ದರು. ಗ್ರಾಮದಲ್ಲಿ ಹೆಣ್ಣು ಮಗು ಹುಟ್ಟಿದರೆ ಗ್ರಾಮಸ್ತರೆಲ್ಲರೂ ಸೇರಿ ಇಪ್ಪತ್ತೊಂದು ಸಾವಿರ ರೂಪಾಯಿಗಳನ್ನು ಹಾಗೂ ಮನೆಯವರಿಂದ ಹತ್ತು ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಆ ಮಗುವಿನ ಹೆಸರಿನಲ್ಲಿ ಬ್ಯಾಂಕಿನಲ್ಲಿ ಇಪ್ಪತ್ತು ವರ್ಷಗಳ ಸಮಯಕ್ಕೆ ಅವಧಿಗೆ ಠೇವಣಿ ಇಡುತ್ತಾರೆ. ಹೆಣ್ಣು ಮಗು ಬೆಳೆದು ಮದುವೆ ವಯಸ್ಸಿಗೆ ಬಂದಾಗ ಅವಳ ಮದುವೆಗೆ ಈ ಹಣ ಉಪಯೋಗವಾಗಲಿ ಎಂಬುದು ಇದರ ಹಿಂದಿನ ಉದ್ದೇಶ.

ಶ್ಯಾಮ್ ಸುಂದರ ಪಲಿವಾಲ್ ತಮ್ಮ ಗ್ರಾಮದ ಹೆಣ್ಣು ಮಕ್ಕಳೊಂದಿಗೆ

ಆದರೆ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಇವರು ಇನ್ನೊಂದು ಉತ್ತಮ ಕಾರ್ಯವನ್ನು ಮಾಡಿದ್ದಾರೆ.
ಅದೇನೆಂದರೆ ಈ ಹೆಣ್ಣು ಮಗುವಿನ ತಂದೆ ತಾಯಿಯ ಹತ್ತಿರ ಹುಟ್ಟಿದ ಹೆಣ್ಣು ಮಗುವಿಗೆ ಬಾಲ್ಯ ವಿವಾಹವನ್ನು ಮಡುವುದಿಲ್ಲವೆಂಬುದಾಗಿಯೂ, ಮಗುವನ್ನು ಶಾಲೆಗೆ ಕಳಿಸುವುದಾಗಿಯು ಹಾಗೂ ಆ ಮಗು ಹುಟ್ಟಿದಾಗ ನೆಟ್ಟ ಮರಗಳನ್ನು ಅರೈಕೆ ಮಾಡುವುದಾಗಿ ಕರಾರು ಪತ್ರದಮೇಲೆ ಸಹಿ ಹಾಕಿಸಿಕೊಳ್ಳುತ್ತಾರೆ. ಅಷ್ಟೆ ಅಲ್ಲದೆ, ಈ ಗ್ರಾಮದಲ್ಲಿ ಯಾರಾದರೂ ಸತ್ತರೆ ಅವರ ನೆನಪಿನಲ್ಲಿ ಹನ್ನೊಂದು ಮರದ ಸಸಿಗಳನ್ನು ನೆಡುತ್ತಾರೆ. ಎಂಟು ಸಾವಿರ ಜನಸಂಖ್ಯೆ ಇರುವ ಈ ಗ್ರಾಮದವರು ಬರಿ ಮರಗಳನ್ನು ನೆಟ್ಟು ಬೆಳೆಸುವುದಷ್ಟೆ ಅಲ್ಲಾ ಅದರ ರಕ್ಷಣೆಗಾಗಿ ಹಾಗು ಗೆದ್ದಲುಗಳಿಂದ ರಕ್ಷಿಸಲು ಅದರ ಸುತ್ತಲೂ ಸುಮಾರು ಎರಡುವರೆ ಲಕ್ಷ ಅಲೋವೆರ ಗಿಡಗಳನ್ನು ಬೆಳೆಸಿದ್ದಾರೆ, ಹೀಗೆ ಬೆಳೆಸಿದ ಅಲೋವೆರ ಗಿಡಗಳು ಈಗ ಈ ಗ್ರಾಮದ ಕೆಲ ಮಹಿಳೆಯರ ಜೀವನೋಪಾಯಕ್ಕೂ ಸಹಾಯವಾಗಿದೆ. ಅಲೋವೇರಕ್ಕೆ ಬೇಡಿಕೆ ಇರುವುದರಿಂದ ಇದನ್ನು ಸಂಸ್ಕರಿಸಿ ಮಾರುವ ತಿರ್ಮಾನಕ್ಕೆ ಬಂದ ಗ್ರಾಮಸ್ತರು ಇದರಲ್ಲಿ ತಾಂತ್ರಿಕ ತರಬೇತಿಯನ್ನು ಪಡೆದು ಅಲೋವೇರದ ಉಪ್ಪಿನಕಾಯಿ, ಜ್ಯೂಸ್, ರಸವನ್ನು ಮಾರುವ ಮೂಲಕ ಜೀವನೋಪಾಯಕ್ಕೆ ದಾರಿಯಾಗಿದೆ.

ಈ ಗ್ರಾಮ ತನ್ನ ಸ್ವಂತದ್ದೆ ಆದ ಅಂತರ್ಜಾಲವನ್ನಲ್ಲದೆ ತನ್ನದೆ ಆದ ಗ್ರಾಮಗೀತೆಯನ್ನು ಹೊಂದಿದೆಯೆಂದರೆ ಆಶ್ಛರ್ಯವಾಗುತ್ತದೆ ಅಲ್ಲವೇ? ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಗ್ರಾಮ ತನ್ನ ಪರಧಿಯಲ್ಲಿ ಮಧ್ಯ ಮಾರಾಟ ನಿಷೇದಿಸಲಾಗಿದೆ, ಕಂಡಕಂಡಲ್ಲಿ ಹಸುವನ್ನು ಮೇಯಿಸುವ ಹಾಗಿಲ್ಲಾ, ಮರಗಳನ್ನು ಕಡಿಯುವ ಹಾಗಿಲ್ಲಾ, ಅಲ್ಲದೆ ಕಳೆದ ಎಂಟು ವರ್ಷಗಳಿಂದ ಒಂದೇ ಒಂದು ಪೋಲಿಸ್ ಕೇಸ್ ದಾಖಲಾಗಿಲ್ಲಾ!! ಈ ಗ್ರಾಮದಲ್ಲಿ ಪ್ರತಿ ಮನೆಯಲ್ಲೂ ಶೌಚಲಾಯ, ಒಳ್ಳೆಯ ಸಿಮೆಂಟ್ ರಸ್ತೆ, ಉತ್ತಮ ಡ್ರೈನೇಜ್ ವ್ಯವಸ್ತೆ, ಹೊಗೆ ರಹಿತ ಒಲೆಯಿಂದ ಕೂಡಿದ ಸುಸಜ್ಜಿತ ಮನೆಗಳಿವೆ, “ನಿರ್ಮಲ ಗ್ರಾಮ್” ಪ್ರಶಸ್ತಿಯನ್ನು ಸಹ ಈ ಗ್ರಾಮ ಪಡೆದುಕೊಂಡಿದೆ. ಈ ಗ್ರಾಮದಲ್ಲಿ ಮಹಿಳೆಯರಿಗಿರುವ ಗೌರವವನ್ನು ಹಾಗೂ ಗ್ರಾಮದ ಹಸಿರು ಕ್ರಾಂತಿಯನ್ನು ಕಂಡು ಸ್ವತಃ ಈ ಗ್ರಾಮಕ್ಕೆ ಬೇಟಿ ನೀಡಿದ್ದ ಆಣ್ಣಾ ಹಜಾರೆಯವರು ಸಂತಸ ವ್ಯಕ್ತಪಡಿಸಿದ್ದಾರೆ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಗ್ರಾಮಾಭಿವೃದ್ದಿ ಯಲ್ಲಿ ಹಿಂದುಳಿದಿರುವ ರಾಜಾಸ್ತಾನದ ಗ್ರಾಮವೊಂದು ಈ ಪರಿಯಾಗಿ ಬೆಳೆದಿರುವುದು ಸಾಧನೆ ಮಾಡಿರುವುದು ಹಾಗೂ ಹೆಣ್ಣುಮಕ್ಕಳ ಹಕ್ಕುಗಳನ್ನುರಕ್ಷಿಸುತ್ತಿರುವುದು ನಿಜಕ್ಕೂ ಚಮತ್ಕಾರವೆ ಸರಿ! ರಾಷ್ಟ್ರಾದ್ಯಂತ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನೆಡೆಯುತ್ತಿರುವಾಗ ಹೆಣ್ಣುಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಹೆಣ್ಣು ಮಕ್ಕಳ ರಕ್ಷಣೆಯೊಂದಿಗೆ ಹಸಿರು ಕ್ರಾಂತಿಯನ್ನು ಮಾಡುತ್ತಿರುವ ಈ ಗ್ರಾಮ ನಿಜಕ್ಕೂ ದೇಶಕ್ಕೆ ಮಾದರಿ ಎಂದರೆ ತಪ್ಪಾಗಲಾರದು. ದೇಶದ ಎಲ್ಲಾ ಗ್ರಾಮದಲ್ಲೂ ಈ ರೀತಿಯ ಕ್ರಾಂತಿ ನೆಡೆದರೆ ದೇಶದಲ್ಲಿ ಹೆಣ್ಣು ಮಕ್ಕಳು ಸುರಕ್ಷಿತರಾಗಿರುವರಲ್ಲದೆ ಮಹಾತ್ಮ ಗಾಂಧಿಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗುತ್ತದೆ!.

ಡಾ|| ಪ್ರಕಾಶ್ ಕೆ ನಾಡಿಗ್
ತುಮಕೂರು

Related post

Leave a Reply

Your email address will not be published. Required fields are marked *