ಹೆಣ್ಣು ಮತ್ತು ಆರೋಗ್ಯ – 1

ಹೆಣ್ಣು ಮತ್ತು ಆರೋಗ್ಯ – 1

ಎಲ್ಲರಿಗೂ ನಮಸ್ಕಾರ.

ಈ ಅಂಕಣದ ಮೂಲಕ ನಾನು ಹೆಣ್ಣು ಮಕ್ಕಳ ಆರೋಗ್ಯ, ಅವರಿಗೆ ಬೇರೆ ಬೇರೆ ಸಮಯಗಳಲ್ಲಿ ಬೇಕಾಗುವ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಬರೆಯುತ್ತೇನೆ.

ಮೊದಲಿಗೆ ಅತ್ಯಂತ ಜವಾಬ್ದಾರಿಯುತ ಗರ್ಭಿಣಿಯ ವಿಷಯ ತಿಳಿಸಿಕೊಡುತ್ತೀನಿ

ಮದುವೆಯಾದ ಮೇಲೆ, ತಾಯಿಯಾಗುವುದು ಎಲ್ಲ ಹೆಣ್ಣುಮಕ್ಕಳ ಕನಸು.
ಗರ್ಭಿಣಿಯಾದ ಹೆಣ್ಣು, ಮೊದಲ ಮೂರುತಿಂಗಳು ,ಆರು ತಿಂಗಳು ,ಹಾಗೂ ಒಂಬತ್ತು ತಿಂಗಳುಗಳಲ್ಲಿ ತೆಗೆದುಕೊಳ್ಳಬೇಕಾದ ನಿಗಾ, ತೋರಿಸಬೇಕಾದ ಕಾಳಜಿ, ಜವಾಬ್ದಾರಿಗಳನ್ನು ಮೊದಲು ಹೇಳುತ್ತೇನೆ.

ಸರಿಯಾದ ಆಹಾರ ಪದ್ಧತಿ, ವೈದ್ಯರಿಗೆ ತೋರಿಸಬೇಕಾದ ಸಮಯ, ಮಾಡಿಸಬೇಕಾದ ಪರೀಕ್ಷೆ ಇವುಗಳ ಬಗ್ಗೆ ಸಣ್ಣದಾಗಿ ತಿಳಿಸಿಕೊಡುತ್ತೇನೆ.

ಗರ್ಭಿಣಿ ಎಂದು ತಿಳಿಯುವುದು ಹೇಗೆ?

ತಿಂಗಳ ತಿಂಗಳು ಸರಿಯಾಗಿ ಋತುಸ್ರಾವವಾಗುತ್ತಿದ್ದ ಹೆಣ್ಣಿಗೆ, ತಿಂಗಳ ಮೇಲೆ 5- 10 ದಿನಗಳಾದಾಗ, ಮೊದಲು ಮೂತ್ರ ಪರೀಕ್ಷೆ ಹಾಗೂ ರಕ್ತ ಪರೀಕ್ಷೆಯ ಮೂಲಕ ಆಕೆ ಗರ್ಭ ಧರಿಸಿರುವುದನ್ನು ತಿಳಿಯಬಹುದು.
ಗರ್ಭ ಧರಿಸಿರುವುದು ದೃಢವಾಗುತ್ತಿದ್ದ ಹಾಗೆ, ಆಕೆ ತನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಮೊದಲ ಮೂರು ತಿಂಗಳಲ್ಲಿ ತಾಯಿಯಾಗುವಳಲ್ಲಿ ತುಂಬಾ ಪರಿವರ್ತನೆಗಳಾಗುತ್ತವೆ.
ಬೇರೆ ಬೇರೆ ರೀತಿಯ ಲಕ್ಷಣಗಳು ಕಾಣುತ್ತವೆ ಕೆಲವರಿಗೆ ಒಂದು ವಾರದೊಳಗೆ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು ಕೆಲವರಿಗೆ ಒಂದು ತಿಂಗಳ ಮೇಲೆ ಕಾಣಿಸಿಕೊಳ್ಳುತ್ತದೆ
ಎಲ್ಲರಿಗೂ ಎಲ್ಲ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಬೇಕು ಎಂದೇನೂ ಇಲ್ಲ

1-ಮೊದಲು ಕಾಣಿಸುವುದು ಸುಸ್ತು, ವಿಪರೀತ ಆಯಾಸ ತಲೆ ಸುತ್ತು ಹಾಗೂ ವಾಂತಿ.
ಹಾರ್ಮೋನುಗಳ ಏರುವಿಕೆಯಿಂದ ಗರ್ಭಿಣಿಯ ದೇಹದ ವಿವಿಧ ಕಾರ್ಯಗಳಲ್ಲಿ ವ್ಯತ್ಯಾಸವಾಗುತ್ತದೆ.
ಹೆಚ್ಚಿನ ಪೋಷಕಾಂಶವನ್ನು ತಾಯಿಯ ದೇಹವು ಹಿಗ್ಗುವುದಕ್ಕೂ ಹಾಗೂ ಮಗುವಿನ ಬೆಳವಣಿಗೆಗೂ ಬಳಸುವುದರಿಂದ ಈ ಆಯಾಸ ಉಂಟಾಗುತ್ತದೆ

ಪರಿಹಾರ :
ತಾಯಿಯು ಮೂಸಂಬಿ, ಆಪಲ್, ಕಲ್ಲಂಗಡಿ ಹಣ್ಣಿನ ರಸ, ನಿಂಬೆ ಹಣ್ಣಿನ ರಸ, ಎಳನೀರು, ಹಾಲು ಇವುಗಳನ್ನು ಹೆಚ್ಚಾಗಿ ಬಳಸಬೇಕು.ಮೊದಲಿಗಿಂತಲೂ ಹೆಚ್ಚಾಗಿ ವಿಶ್ರಾಂತಿ ಪಡೆಯಬೇಕು

2-ಊಟ ಸೇರದೆ ಅಜೀರ್ಣ ಹಾಗೂ ವಾಕರಿಕೆಯಾಗುತ್ತದೆ
ಕೆಲವರಿಗೆ ಮಲಬದ್ಧತೆ ಆಗುತ್ತದೆ
ಹಾರ್ಮೋನಿನ ಏರಿಕೆಯಿಂದ ಜೀರ್ಣಾಂಗದ ಮೇಲೆ ಪ್ರಭಾವವಾಗಿ ಈ ಲಕ್ಷಣಗಳು ಉಂಟಾಗುತ್ತದೆ

ಪರಿಹಾರ :
ಊಟ ತಿಂಡಿ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕಾಗುತ್ತದೆ
ರುಚಿ ಶುಚಿಯಾದ ಊಟವನ್ನು ನಿಯಮಿತವಾಗಿ ಮಾಡಬೇಕಾಗುತ್ತದೆ
ಪೋಷಕಾಂಶಗಳನ್ನು ಕೊಡುವ ಹಸಿರು ತರಕಾರಿ ಸೊಪ್ಪು, ಮೊಳಕೆ ಕಟ್ಟಿದ ಕಾಳು, ಹಾಲು, ಮೊಸರು, ತುಪ್ಪ ಇವುಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಬೇಕು

3-ಸ್ಥನದಲ್ಲಿ ಊತ ಹಾಗೂ ನೋವು ಇನ್ನೊಂದು ಪ್ರಮುಖ ಅಂಶ
ಈಗಿನಿಂದಲೇ ತಾಯಿಯ ದೇಹ ಮಗುವಿಗಾಗಿ ತಯಾರಿ ನಡೆಸುತ್ತದೆ
ಪರಿಹಾರ : ಕೊಬ್ಬರಿ ಎಣ್ಣೆಯನ್ನು ನಿಧಾನವಾಗಿ ನೀವಿಕೊಳ್ಳಬೇಕು ಹಾಗೂ ಸ್ಥನವು ಜಗ್ಗದಂತೆ ಸರಿಯಾದ ಒಳ ಉಡುಪನ್ನು ಧರಿಸಬೇಕು

4-ಯೋನಿಸ್ರಾವ ಕೂಡ ಆಗಬಹುದು, ಪ್ರತಿ ತಿಂಗಳು ಆಗುವ ತಾರೀಕಿಗೆ ಕಾಣಿಸಿಕೊಳ್ಳಬಹುದು. ತುಂಬಾ ಹೆಚ್ಚಾದರೆ ವೈದ್ಯರ ಹತ್ತಿರ ಪರೀಕ್ಷೆ ಮಾಡಿಸುವುದು ಒಳ್ಳೆಯದು

5-ಪೈಕಾ ಅಂದರೆ ಏನನ್ನಾದರೂ ಒಂದು ಪದಾರ್ಥವನ್ನು ತಿನ್ನುವ ಬಯಕೆ ಉಂಟಾಗುತ್ತಿದೆ
ಹುಳಿಯಾದ ವಸ್ತು, ಸುಣ್ಣ ಅಥವಾ ಮಣ್ಣು ಹೀಗೆ ತರತರವಾದ ವಸ್ತುಗಳನ್ನು ತಿನ್ನುವ ಆಸೆಗಳು ಆಗುತ್ತದೆ
ಹುಳಿ ಅಥವಾ ಸಿಹಿ ಪದಾರ್ಥಗಳ ಆಸೆ ಇದ್ದಲ್ಲಿ ಅದನ್ನು ತೆಗೆದುಕೊಳ್ಳಬಹುದು
ಸುಣ್ಣ ಹಾಗೂ ಮಣ್ಣು ತಿನ್ನುವ ಆಸೆ ಇದ್ದರೆ ಆ ತಾಯಿಯ ದೇಹದಲ್ಲಿ ಕ್ಯಾಲ್ಸಿಯಂ ಹಾಗೂ ಕಬ್ಬಿಣದ ಪದಾರ್ಥಗಳ ಕಮ್ಮಿ ಇದೆ ಎಂದು ತಿಳಿಯಬೇಕು
ಪರಿಹಾರ
ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸುವುದರಿಂದ ಪೈಕಾ ಕಮ್ಮಿಯಾಗುತ್ತದೆ

6-ಹೊಟ್ಟೆಯಲ್ಲಿ ಆಮ್ಲದ ಪ್ರಮಾಣ ಹೆಚ್ಚಾಗುವಿಕೆ ಇದರಿಂದ ಬಳಲುತ್ತಾಳೆ
ಪರಿಹಾರ :ನಿಯಮಿತವಾದ, ಮಿತವಾದ ಹೆಚ್ಚು ಖಾರವಿಲ್ಲದ ಆಹಾರವೇ ಇದಕ್ಕೆ ಮದ್ದು

7-ಪದೇ ಪದೇ ಮೂತ್ರ ಮಾಡುವ ತೊಂದರೆ ಆಗಬಹುದು.
ಗರ್ಭಕೋಶದ ಬೆಳೆಯುವಿಕೆಯಿಂದ ಮೂತ್ರ ನಾಳಗಳ ಮೇಲೆ ಒತ್ತಡ ಹೆಚ್ಚಿ ಈ ರೀತಿ ಆಗುತ್ತದೆ
ಮೂತ್ರಮಾಡುವಾಗ ನೋವು ಜಾಸ್ತಿ ಇದ್ದರೆ ಅದು ಸೊಂಕಿನ ಸೂಚನೆ ಆಗ ವೈದ್ಯರನ್ನು ಸಂಪರ್ಕಿಸಬೇಕಾಗುವುದು. ಮೂತ್ರ ಪರೀಕ್ಷೆ ಮಾಡಿಸುವುದರಿಂದ ಸೋಂಕು ಇದ್ದರೆ ದೃಢವಾಗುತ್ತದೆ

8-ಕೆಲವರಿಗೆ ನಿದ್ರಾಹೀನತೆಯೂ, ಕೆಲವರಿಗೆ ಹಗಲು ನಿದ್ರೆಯೂ ತೊಂದರೆ ಕೊಡಬಹುದು
ಹೆಚ್ಚಿನ ನಿದ್ರೆ ಅವಶ್ಯಕತೆ ಇರುವುದರಿಂದ ವಿಶ್ರಾಂತಿ ತೆಗೆದುಕೊಳ್ಳುವುದು ಒಳ್ಳೆಯದು

9- ಕೆಲವರಿಗೆ ಕೆಲಸದಲ್ಲಿ ನಿರಾಸಕ್ತಿ ಹಾಗೂ ಸ್ವಲ್ಪ ಕೆಲಸಕ್ಕೆ ದಣಿವು ಉಂಟಾಗುತ್ತದೆ
ಪರಿಹಾರ :ಮನಸ್ಸು ಹಿತವಾಗುವಂತೆ ಮಧುರವಾದ ಸಂಗೀತ ಹಾಗೂ ಒಳ್ಳೆಯ ಪುಸ್ತಕವನ್ನು ಓದುವುದರಿಂದ ಈ ನಿರಾಸಕ್ತಿ ಕಮ್ಮಿಯಾಗುತ್ತದೆ
ನಿಯಮಿತವಾದ ವ್ಯಾಯಾಮ ಮಾಡುವುದು ಅತಿ ಅಗತ್ಯ
ಆದರೆ ಸ್ಕ್ಯಾನ್ ಅಲ್ಲಿ ಎಲ್ಲ ಸರಿ ಇದ್ದರೆ ಮಾತ್ರ ವ್ಯಾಯಾಮ ಮಾಡಬಹುದು

10- ಹಾರ್ಮೋನ್ ಏರುಪೇರಿಂದ ಕೆಲವರಿಗೆ ವಿಪರೀತ ತಲೆನೋವು ಬರುತ್ತದೆ
ಪ್ರಾಣಾಯಾಮ ಹಾಗೂ ಧ್ಯಾನ ಹಾಗೂ ಶಾಂತವಾಗಿರುವುದರಿಂದ ಈ ತಲೆನೋವನ್ನು ಕಮ್ಮಿ ಮಾಡಿಕೊಳ್ಳಬಹುದು.

11-ಹೊಟ್ಟೆಯ ಕೆಳಭಾಗದಲ್ಲಿ ರಕ್ತನಾಳ ಸಂಕುಚಿತಗೊಂಡು ಕಾಲು ಊತ, ಮೀನಖಂಡ ನೋವು ಬರಬಹುದು
ಪರಿಹಾರ : ಕುಳಿತುಕೊಳ್ಳುವಾಗ ಒಂದು ಚಿಕ್ಕ ಸ್ಟೂಲ್ ಮೇಲೆ ಕಾಲನಿಟ್ಟುಕೊಂಡು ಕುಳಿತುಕೊಳ್ಳುವುದು
ಹೆಚ್ಚು ಹೊತ್ತು ಒಂದೇ ಕಡೆ ಕೂತುಕೊಳ್ಳದೆ ಅಥವಾ ನಿಂತುಕೊಳ್ಳದೆ ಆಗಾಗ ಆಸನವನ್ನು ಬದಲಾಯಿಸುತ್ತಿರುವುದು
ರಾತ್ರಿ ಮಲಗುವಾಗ ಕಾಲಿನ ಕೆಳಗೆ ಅಥವಾ ಕಾಲಿನ ಮಧ್ಯದಲ್ಲಿ ದಿಂಬನ್ನು ಇಟ್ಟುಕೊಂಡು ಮಲಗುವುದು
ಇವುಗಳಿಂದ ಇಡೀ 9 ತಿಂಗಳು ಕಾಡುವ ಕಾಲು ನೋವಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು

12- ಕೆಲವರಿಗೆ ಮಾನಸಿಕ ಕಿರಿಕಿರಿ, ಖಿನ್ನತೆ, ಬೇಗ ಕೋಪ ಬರುವುದು ಮುಂತಾದ ಲಕ್ಷಣಗಳು ಹಾರ್ಮೋನಿನ ಏರುಪೇರಿನಿಂದ ಉಂಟಾಗಬಹುದು
ಮನೆಯವರ ಸಹಕಾರ ಪ್ರೀತಿ ವಿಶ್ವಾಸಗಳಿಂದ ಇದು ಬಹಳ ಮಟ್ಟಿಗೆ ಸುಧಾರಿಸುತ್ತದೆ

13-ಸೊಂಟ ಹಾಗೂ ನಡು, ಹೊಟ್ಟೆಯ ಭಾಗದಲ್ಲಿ ಸೆಳೆತ ಕಂಡು ಬರಬಹುದು
ಹಾಗೆ ಆದಾಗ ವಿಶ್ರಾಂತಿ ತೆಗೆದುಕೊಳ್ಳುವುದು ಒಳ್ಳೆಯದು

ಮೊದಲ 3 ತಿಂಗಳು ಮಗುವಿನ ಅಂಗಾಂಗಗಳು ಬೆಳೆಯುವ ಸಮಯ.
ಈ ಸಮಯದಲ್ಲಿ ಮಗು ಅತಿ ಸೂಕ್ಷ್ಮವಾದ ಪರಿವರ್ತನೆಯನ್ನು ಹೊಂದುತ್ತಿರುತ್ತದೆ.
ಆ ಸಮಯದಲ್ಲಿ ಎಲ್ಲ ರೀತಿಯಲ್ಲೂ ಎಚ್ಚರಿಕೆ ವಹಿಸಬೇಕಾಗುತ್ತದೆ

ಈ ಮೂರು ತಿಂಗಳಲ್ಲಿ ತೆಗೆದುಕೊಳ್ಳಬೇಕಾದ ಮಾತ್ರೆ ಎಂದರೆ ಫೋಲಿಕ್ ಆಸಿಡ್ ಮಾತ್ರೆ.
ಅದು ಮಗುವಿನ ಮೆದುಳಿನ ಬೆಳವಣಿಗೆಗೆ ಸಹಾಯಕಾರಿ
ಎಂಟನೇ ವಾರಕ್ಕೆ ಒಂದು abdominal ಸ್ಕ್ಯಾನ್ ಮಾಡುತ್ತಾರೆ
ಮಗು ಗರ್ಭಕೋಶದಲ್ಲಿ ಎಲ್ಲಿದೆ? ಪ್ಲಾಸೆಂಟಾ ಅಥವಾ ಗರ್ಭಮಾಸು ಎಲ್ಲಿದೆ? ಎಂದು ತಿಳಿದುಕೊಳ್ಳಲು ಈ ಸ್ಕ್ಯಾನ್ ಸಹಾಯ ಮಾಡುತ್ತದೆ

ಗರ್ಭಿಣಿಯು ಸಮಾಧಾನ ಚಿತ್ತಳಾಗಿ, ಶಾಂತಳಾಗಿ ಇದ್ದಷ್ಟು ಹೆಚ್ಚು ಕಷ್ಟವಿಲ್ಲದೆ ಈ ಮೂರು ತಿಂಗಳು ಮುಗಿಯುತ್ತದೆ

ಗಮನಿಸಬೇಕಾದ ಅಂಶವೆಂದರೆ
1- ವೈದ್ಯರ ಸಲಹೆ ಇಲ್ಲದಿದ್ದಲ್ಲಿ ಈ ಸಮಯದಲ್ಲಿ ಕ್ಯಾಲ್ಸಿಯಂ ಹಾಗೂ ಐರನ್ ಮಾತ್ರೆಗಳನ್ನು ತೆಗೆದುಕೊಳ್ಳುವಂತಿಲ್ಲ
12 ವಾರ ಆದಮೇಲೆ ಶುರು ಮಾಡಬೇಕು

2- ಅತಿಯಾದ ರಕ್ತಸ್ರಾವ ಆದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು
3- ದೇಹದಲ್ಲಿ ಶಾಖವನ್ನು ಉತ್ಪತ್ತಿ ಮಾಡುವಂತ ತರಕಾರಿ ಹಣ್ಣುಗಳನ್ನು, ಉದಾಹರಣೆಗೆ ಪೈನಾಪಲ್ ಮಾವಿನ ಹಣ್ಣು ಸುವರ್ಣ ಗೆಡ್ಡೆ, ಎಳ್ಳು, ಪಪ್ಪಾಯ ಮುಂತಾದವುಗಳನ್ನು ಉಪಯೋಗಿಸಬಾರದು
4- ಮೊದಲ ಮೂರು ತಿಂಗಳಲ್ಲಿ ಭಾರವಾದ ವಸ್ತುಗಳನ್ನು ಎತ್ತಬಾರದು
ತುಂಬಾ ಬಗ್ಗಿ ಯಾವ ಕೆಲಸವನ್ನು ಮಾಡಬಾರದು
5- ಏನಾದರೂ ಅನಾರೋಗ್ಯ ಉಂಟಾದರೆ ತಮಗೆ ತಾವೇ ಔಷಧಿಯನ್ನು ಮಾಡಿಕೊಳ್ಳ ಕೂಡದು ಪರಿಣಿತ ವೈದ್ಯರನ್ನು ತಕ್ಷಣವೇ ಸಂಪರ್ಕಿಸಬೇಕು
ಸಂಪರ್ಕಿಸಿದ ಎಲ್ಲಾ ವೈದ್ಯರಿಗೂ ತಾವು ಗರ್ಭಿಣಿ ಆಗಿರುವುದನ್ನು ಮೊದಲೇ ತಿಳಿಸಬೇಕು

ಪ್ರತಿಯೊಬ್ಬ ತಾಯಿಯು, ಪ್ರತಿಯೊಂದು ತಾಯ್ತನವೂ ಬೇರೆ ಪ್ರತಿಯೊಬ್ಬರ ಲಕ್ಷಣಗಳು ಬೇರೆ ಬೇರೆಯಾಗಿರುತ್ತದೆ ಮೇಲೆ ಹೇಳಿರುವ ಲಕ್ಷಣಗಳು ಸಾಮಾನ್ಯ ಲಕ್ಷಣಗಳು ಮಾತ್ರ. ಇನ್ಯಾವುದಾದರೂ ಲಕ್ಷಣಗಳು, ತೊಂದರೆ ಉಂಟಾದರೆ,ನಿಮ್ಮ ನಿಮ್ಮ ವೈದ್ಯರ ಹತ್ತಿರ ತೋರಿಸುವುದು ಒಳ್ಳೆಯದು

ಮುಂದಿನ ಮೂರು ತಿಂಗಳ ಗರ್ಭಿಣಿಯ ದೇಹ ಪ್ರಕೃತಿ ಹಾಗೂ ಉಪಚಾರದ ವಿಷಯವನ್ನು ಮುಂದಿನ ಸಂಚಿಕೆಗಳಲ್ಲಿ ತಿಳಿಸಿ ಕೊಡುತ್ತೇನೆ

ಡಾ. ರುಕ್ಮಿಣಿ ವ್ಯಾಸರಾಜ
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು

Related post

Leave a Reply

Your email address will not be published. Required fields are marked *