ಹೆಣ್ಣು ಮತ್ತು ಆರೋಗ್ಯ -5

ಹೆಣ್ಣು ಮತ್ತು ಆರೋಗ್ಯ -5

ಹೈ ರಿಸ್ಕ್ ಪ್ರೆಗ್ನೆನ್ಸಿ ಅಥವಾ ಹೆಚ್ಚಿನ ಅಪಾಯದ ಗರ್ಭಧಾರಣೆ

ಈ ವಿಷಯದ ಬಗ್ಗೆ ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.
ಈ ಹೆಚ್ಚಿನ ಅಪಾಯ ತಾಯಿಯಿಂದ ಹಾಗೂ ಮಗುವಿನಿಂದ ಎರಡರಿಂದಲೂ ಆಗುವ ಸಾಧ್ಯತೆ ಇದೆ.

1- ಮೊದಲನೇ ತಿಂಗಳಲ್ಲಿ ಭ್ರೂಣವು ಗರ್ಭಾಶಯದ ಒಳ ಗೋಡೆಗೆ ಅಂಟಿಕೊಳ್ಳುವಾಗ ಕೆಲವೊಮ್ಮೆ ಕೆಳಗಿನ ಭಾಗದಲ್ಲಿ ಅಂಟಿಕೊಳ್ಳುತ್ತದೆ. ಅದನ್ನು ಪ್ಲಸೆಂಟಾ ಪ್ರೀವಿಯ ಅನ್ನುತ್ತಾರೆ. ಇದು ಮುಂದುವರೆದು, ನಾಲ್ಕು ಐದು ತಿಂಗಳಲ್ಲೂ ಹೀಗೆಯೇ ಕೆಳ ಭಾಗದಲ್ಲಿ ಇದ್ದರೆ, ಆರು ಏಳು ತಿಂಗಳಗಳಲ್ಲಿ ರಕ್ತಸ್ರಾವ ಆಗುವ ಅಥವಾ ಪ್ರಸವವಾಗುವಾಗ ತುಂಬಾ ರಕ್ತಸ್ರಾವವಾಗುವ ಪರಿಣಾಮ ಎದುರಾಗಬಹುದು ಮೊದಲೆರಡು ಸ್ಕ್ಯಾನ್ನಲ್ಲಿ ಇದು ತಿಳಿದು ಬರುತ್ತದೆ ಆಗ ಗರ್ಭಿಣಿಯರು ವಿಶೇಷ ಮುತುವರ್ಜಿಯನ್ನು ಹೊಂದಬೇಕಾಗುತ್ತದೆ ಹಾಗೂ ವೈದ್ಯರ ತಿಳಿಸಿದಂತೆ ನಡೆದುಕೊಳ್ಳಬೇಕಾಗುತ್ತದೆ. ಇಂಥವರಿಗೆ ಸ್ವಲ್ಪ ಮುಂಚೆಯೇ ಪ್ರಸವವಾಗುವ ಪರಿಸ್ಥಿತಿ ಎದುರಾಗಬಹುದು.

2- ಕೆಲವು ಗರ್ಭಿಣಿಯರಿಗೆ ಎರಡು ಅಥವಾ ಮೂರು ಅಥವಾ ಇನ್ನೂ ಹೆಚ್ಚು ಭ್ರೂಣಗಳಿದ್ದು ಅವಳಿ ಅಥವಾ ತ್ರಿವಳಿ ಅಥವಾ ಇನ್ನು ಹೆಚ್ಚು ಮಕ್ಕಳು ಹುಟ್ಟುವ ಸಾಧ್ಯತೆ ಇರುತ್ತದೆ ಆಗಲು ಮೊದಲಿನಿಂದಲೂ ಹೆಚ್ಚಿನ ಮುತುವರ್ಜಿ ತೆಗೆದುಕೊಳ್ಳಬೇಕಾಗುತ್ತದೆ.

3- ಕೆಲ ಗರ್ಭಿಣಿಯರಿಗೆ ಮೂರನೇ ತಿಂಗಳಿನಲ್ಲಿ ವಾಂತಿ ನಿಲ್ಲುವ ಬದಲು 9 ತಿಂಗಳು ವಾಂತಿ ಆಗುವ ಸಾಧ್ಯತೆ ಇದೆ ಹಾರ್ಮೋನ್ ಗಳ ಏರುಪೇರಿನಿಂದ ಈ ರೀತಿ ಆಗುತ್ತದೆ. ಆಗ ತಾಯಿಗೆ ನೀರಿನ ಅಂಶ ಕಮ್ಮಿಯಾಗಿ ಅಥವಾ ಸರಿಯಾದ ಪ್ರಮಾಣದಲ್ಲಿ ಉತ್ತಮ ಆಹಾರ ದೊರಕದೆ ತಾಯಿಗೆ ನಿತ್ರಾಣ ಹಾಗೂ ಸುಸ್ತು ಆಗುವ ಸಂಭವ ಇದೆ
ಆಗ ತಾವೇ ಮಾತ್ರೆಯನ್ನು ತೆಗೆದುಕೊಳ್ಳದೆ ವೈದ್ಯರ ಬಳಿ ತೋರಿಸಿ ಅವರು ಹೇಳಿದ ಮಾತ್ರೆಯನ್ನು ತೆಗೆದುಕೊಳ್ಳುವುದರಿಂದ ಈ ವಾಂತಿ ಸ್ವಲ್ಪ ಉಪಶಮನವಾಗುತ್ತದೆ. ಆರೋಗ್ಯ ಸುಧಾರಿಸುತ್ತದೆ.

4-ಇನ್ನು ಮೊದಲೇ ಹೇಳಿದಂತೆ ಥೈರಾಯ್ಡ್, ಸಕ್ಕರೆ ಕಾಯಿಲೆ, ಎಕ್ಲಮ್ಸಿಯ, ಈ ಕಾಯಿಲೆಗಳು ತಾಯಿಗೆ ಇದ್ದಾಗಲೂ ಅದನ್ನು ಹೆಚ್ಚಿನ ಅಪಾಯದ ಗರ್ಭಧಾರಣೆ ಎಂದು ಕರೆಯಬಹುದು.

5-ಕೆಲವೊಮ್ಮೆ ಮಗುವಿಗೆ ಸರಿಯಾದ ಆಹಾರ ದೊರಕದೆ ಅಥವಾ ಬೇರೆ ಕಾರಣದಿಂದ ಮಗುವಿನ ಬೆಳವಣಿಗೆ ಸರಿಯಾಗಿರದೆ ಮಗು ತುಂಬಾ ಚಿಕ್ಕದಾಗಿರುತ್ತದೆ. ಗರ್ಭಿಣಿ ಪರೀಕ್ಷೆ ಮಾಡುವುದಕ್ಕೆ ಹೋದಾಗ ವೈದ್ಯರಿಗೆ ಇದರ ಅರಿವಾಗುತ್ತದೆ ಆಗ ಅವರು ಅದಕ್ಕೆ ಕಾರಣವನ್ನು ಕಂಡುಹಿಡಿದು ಸೂಕ್ತ ಚಿಕಿತ್ಸೆಯನ್ನು ನಡೆಸಲು ಸಹಕಾರಿಯಾಗುತ್ತದೆ. ಕೆಲವು ಸಲ ಗರ್ಭದಲ್ಲಿ ಮಗುವಿನ ರಕ್ಷಣೆಗಾಗಿ ಇರುವಂತಹ ಆಮ್ನಿಯೋಟಿಕ್ ದ್ರವ ಕಮ್ಮಿಯಾಗುತ್ತದೆ ಅದಕ್ಕೂ ಸೂಕ್ತ ಕಾರಣಗಳನ್ನು ಕಂಡುಹಿಡಿದಾಗ ಅದಕ್ಕೂ ಪರಿಹಾರವನ್ನು ನೀಡಬಹುದು
ಆ ಕಾರಣದಿಂದಲೇ ನಿಯಮಿತವಾಗಿ ವೈದ್ಯರಿಂದ ತಪಾಸಣೆ ಮಾಡುವುದು ಒಳ್ಳೆಯದು.

6-ಐದನೇ ತಿಂಗಳಿನಲ್ಲಿ ಅನುವಂಶಿಕ ಅಥವಾ ಜನ್ಮ ಜಾತ ದೋಷಗಳನ್ನು ಕಂಡುಹಿಡಿಯಲು ಸ್ಕ್ಯಾನಿಂಗ್ ಮಾಡಿದಾಗ, ಮಕ್ಕಳ ಹೃದಯದಲ್ಲಿ ಹಾಗೂ ಅಂಗಾಂಗ ರಚನೆಯಲ್ಲಿ, ತಲೆಯಲ್ಲಿ ಇರುವ ದೋಷಗಳನ್ನು ಕಂಡು ಹಿಡಿಯಲು ಸಾಧ್ಯವಾಗುತ್ತದೆ, ಈಗ ಮುಂದುವರಿದ ವಿಜ್ಞಾನದ ಆವಿಷ್ಕಾರಗಳಿಂದ ಮಗು ಗರ್ಭದಲ್ಲಿ ಇರುವಾಗಲೇ ಕೆಲ ಕಾಯಿಲೆಗಳಿಗೆ ಚಿಕಿತ್ಸೆಯನ್ನು ನೀಡಲು ಹಾಗೂ ಶಸ್ತ್ರಚಿಕಿತೆಯನ್ನು ಮಾಡಲು ಸಾಧ್ಯವಿದೆ.

7 -ಕೆಲವೊಮ್ಮೆ ತಾಯಿಯ ವಯಸ್ಸು 17 ಕ್ಕಿಂತ ಕಮ್ಮಿ ಇದ್ದರೆ 35 ಕಿಂತ ಜಾಸ್ತಿ ಇದ್ದಾಗ ತಾಯಿಗೆ ಮತ್ತು ಮಗುವಿಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಆಗಲು ಹೆಚ್ಚಿನ ಮುತುವರ್ಜಿಯನ್ನು ತೆಗೆದುಕೊಳ್ಳಬೇಕು

8-ತಂಬಾಕು ಸೇವನೆ, ಮದ್ಯ ಸೇವನೆ, ಮಾದಕ ಪದಾರ್ಥ ಸೇವನೆ ಮಗುವಿನ ಆರೋಗ್ಯಕ್ಕೆ ಹಾನಿ ಉಂಟುಮಾಡುವುದಲ್ಲದೆ ಪ್ರಸವಕ್ಕೂ ತೊಂದರೆಯನ್ನುಂಟು ಮಾಡಬಹುದು.

9-ಮಾನಸಿಕ ಸಮತೋಲನವಿಲ್ಲದಿರುವಿಕೆ, ಮಾನಸಿಕ ಅನಾರೋಗ್ಯ ಇದ್ದಾಗಲೂ ಹೆಚ್ಚಿನ ಕಾಳಜಿ ಅಗತ್ಯ.

10-ಮೊದಲಿಂದಲೂ ತಾಯಿ ಅತಿ ಕಮ್ಮಿ ತೂಕ ಇರುವುದು ಅಥವಾ ಅತಿ ಹೆಚ್ಚು ತೂಕ ಇರುವುದು ಪ್ರಸವಕ್ಕೆ ತೊಂದರೆ ಕೊಡಬಹುದು.

11-ತಾಯಿಗೆ ಹೃದಯ ಸಂಬಂಧಿ ಖಾಯಿಲೆ ಮೊದಲೇ ಇದ್ದಾರೆ, ರಕ್ತದೊತ್ತಡ, ರಕ್ತನಾಳ ಖಾಯಿಲೆ ಇದ್ದರೂ ಆದು ಅಪಾಯದ ಗರ್ಭಧಾರಣೆ ಎನಿಸುತ್ತದೆ.

ಆದರೆ ಇವೆಲ್ಲ ಇದ್ದಾಗ್ಯೂ ಅತಿ ಸುಲಭವಾಗಿ ಪ್ರಸವವಾಗಿರುವ ಸಾವಿರಾರು ಉದಾಹರಣೆಗಳಿವೆ
ಆದ್ದರಿಂದ ಈ ರೀತಿ ಇದ್ದರೂ ಭಯಪಡದೆ ಸ್ವಲ್ಪ ಹೆಚ್ಚಿನ ಮುತುವರ್ಜಿ ವಹಿಸಿ ತಾಯ್ತಾನದ ಸುಖ ಪಡೆಯಬಹುದು.

ಡಾ. ರುಕ್ಮಿಣಿ ವ್ಯಾಸರಾಜ 🩺
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು

Related post

Leave a Reply

Your email address will not be published. Required fields are marked *