ಹೆಣ್ಣು ಮತ್ತು ಆರೋಗ್ಯ – 8
ಒಂದು ವರ್ಷದವರೆಗಿನ ಮಗುವಿನ ಬೆಳವಣಿಗೆ ಹಾಗೂ ಚಟುವಟಿಕೆ
ಮಗುವಿನ ಮುಂದಿನ ಬೆಳವಣಿಗೆ, ಮಗು ಸುರಕ್ಷಿತವಾದ ವಾತಾವರಣದಲ್ಲಿ,ಪೌಷ್ಟಿಕ ಆಹಾರ ತೆಗೆದುಕೊಳ್ಳುವುದರ ಮೇಲೆ ನಿರ್ಧರಿತವಾಗುತ್ತದೆ.
ಮಗು ಹುಟ್ಟಿದಾಗಲೇ ಅದಕ್ಕೆ ಬಿಸಿಜಿ ವ್ಯಾಕ್ಸಿನ್ ಅನ್ನು ಹಾಕಿರುತ್ತಾರೆ. ಮತ್ತೆ ಒಂದು ತಿಂಗಳು, ಎರಡು ತಿಂಗಳು, ಮೂರು ತಿಂಗಳು ಅವಧಿಯಲ್ಲಿ ಡಿಪಿಟಿ, ಹೆಪಟೈಟಿಸ್, ಪೋಲಿಯೋ ಈ ವ್ಯಾಕ್ಸಿನ್ ಗಳನ್ನು ಹಾಕುತ್ತಾರೆ. ವ್ಯಾಕ್ಸಿನ್ಗಳನ್ನು ಹಾಕಿದಾಗ ಮಗುವಿಗೆ ಸ್ವಲ್ಪ ಜ್ವರ ಬರುವುದು ಸಾಮಾನ್ಯ. ಆಗ ಮಗುವಿಗೆ ಜ್ವರದ ಔಷಧಿಯನ್ನು ಡ್ರಾಪ್ಸ್ ಮೂಲಕ ಕೊಡಬಹುದು ಒಂದು ವರ್ಷದ ಒಳಗೆ ಮಿಸೆಲ್ಸ್, ಇನ್ಫ್ಲುಎನ್ಜಾ ಈ ಎಲ್ಲ ವ್ಯಾಕ್ಸಿನನ್ನು ಕೊಡುತ್ತಾರೆ.
ಐದರಿಂದ – ಆರನೇ ತಿಂಗಳ ಒಳಗೆ ಮಗುವಿಗೆ ಅರೆ ಘನ( ಸೆಮಿ ಸಾಲಿಡ್ )ಆಹಾರವನ್ನು ಕೊಡಬಹುದು. ರಾಗಿ ಸೆರಿ ಇದಕ್ಕೆ ಸರಿಯಾದ ಆಹಾರ. 7-8 ನೇ ತಿಂಗಳಲ್ಲಿ ಬೇಳೆಗಳನ್ನು ತೊಳೆದು ಮೊಳಕೆ ಕಟ್ಟಿ ಒಣಗಿಸಿ ಪುಡಿ ಮಾಡಿ ಅದರಲ್ಲಿ ಗಂಜಿ ಮಾಡಬಹುದು ಇದು ಪ್ರೊಟೀನ್ ಇರುವ ಸತ್ವಭರಿತ ಆಹಾರ ಅಂಗಡಿಗಳಲ್ಲಿ ಹಲವು ವಿಧವಾದ ಈ ರೀತಿ ಆಹಾರಗಳು ಸಿಗುತ್ತದೆ. ಮನೆಯಲ್ಲಿ ಮಾಡಲು ಆಗದವರು ಇದನ್ನು ಉಪಯೋಗಿಸಬಹುದು.
3 ನೇ ತಿಂಗಳಿಗೆ ಮಗುವು ಬೇರೆಯವರನ್ನು ಗುರುತಿಸಿ ನಗುವುದನ್ನು ಕಲಿಯುತ್ತದೆ. ಇದನ್ನು ಸೋಶಿಯಲ್ ಸ್ಮೈಲ್ ಎನ್ನುತ್ತೇವೆ. ಮೂರನೇ ತಿಂಗಳಿಗೆ ಮಗು ಬೋರಲು ಬೀಳುತ್ತದೆ, ಅದರ ಆಟ ಪಾಠಗಳು ಹೆಚ್ಚಾಗುತ್ತದೆ, ಅತ್ತಿತ ನೋಡುವುದು, ಕೈಕಾಲು ಬಡಿದು ಆಡುವುದು, ಬೇರೆಯವರು ಕರೆದಾಗ ತಲೆ ತಿರುಗಿಸಿ ನೋಡುವುದು, ಕಣ್ಗಳನ್ನು ಆ ಕಡೆ ಈ ಕಡೆಗೆ ತಿರುಗಿಸುವುದು, ಇವೆಲ್ಲ ಚಟುವಟಿಕೆ ಮೂರನೇ ತಿಂಗಳಲ್ಲಿ ಬರುತ್ತದೆ. ಈ ಚಟುವಟಿಕೆಗಳಲ್ಲಿ ಸ್ವಲ್ಪ ನಿಧಾನವಾದರೆ ಒಮ್ಮೆ ವೈದ್ಯರಲ್ಲಿ ತೋರಿಸುವುದು ಒಳಿತು. ತಾಯಿಗೆ ಥೈರಾಯ್ಡ್ ಕಾಯಿಲೆ ಇದ್ದರೆ, ಮಗುವಿಗೂ ರಕ್ತದಲ್ಲಿ ಥೈರಾಯ್ಡ್ ಅಂಶವನ್ನು ಎಷ್ಟಿದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು.
6ನೇ ತಿಂಗಳಿಗೆ ಮೆತ್ತಗಿರುವ ಅನ್ನವನ್ನು ಕೊಡಬಹುದು ತರಕಾರಿಯನ್ನು ಹಣ್ಣುಗಳನ್ನು ಚೆನ್ನಾಗಿ ಬೇಯಿಸಿ ಮೆತ್ತೆಗೆ ಮಾಡಿ ಅದನ್ನು ಕೊಡಬಹುದು. 9ನೇ ತಿಂಗಳ ಹೊತ್ತಿಗೆ ಮಗುವು ಅನ್ನ ಬೇಳೆಯನ್ನು ತಿನ್ನುವಂತಿರಬೇಕು. ಇದನ್ನು ತಿನ್ನಿಸುವುದು ನಿಧಾನ ಮಾಡಿದರೆ, ವರ್ಷದ ಮೇಲೆ ಅನ್ನ ತಿನ್ನಿಸಿದರೆ, ಮಗು ಸರಿಯಾಗಿ ಊಟ ಮಾಡಲು ನಿರಾಕರಿಸಿ,ವೈದ್ಯರ ಬಳಿಗೆ ಹೋಗುವ ಪರಿಸ್ಥಿತಿ ಬರಬಹುದು ಆದ್ದರಿಂದ 9 ರಿಂದ 12 ತಿಂಗಳೊಳಗೆ ಮಗುವಿಗೆ ಊಟ ಮಾಡಿಸುವುದು,ಮೆತ್ತಗಿರುವ ತಿಂಡಿಯನ್ನು ತಿನ್ನಿಸುವುದು ಒಳಿತು.
ಆರನೇ ತಿಂಗಳಿಗೆ ಮಗುವು ಕುಳಿತುಕೊಳ್ಳುತ್ತದೆ ಮುಂದೆ ಹಾಕಿದ ಆಟಿಕೆಗಳನ್ನು ಕೈ ಚಾಚಿ ತೆಗೆದುಕೊಳ್ಳುವುದು ಮಾಡುತ್ತದೆ 9ನೇ ತಿಂಗಳಿಗೆ ಯಾವುದಾದರೂ ಆಧಾರ ಹಿಡಿದು ನಿಂತುಕೊಳ್ಳುವುದನ್ನು ಕಲಿಯುತ್ತದೆ ತಾನೆ ಊಟ ಮಾಡುವೆನೆಂದು, ಹಠ ಮಾಡುತ್ತದೆ, ಒಂದು ವರ್ಷದ ಒಳಗೆ ಮಗು ನಿಧಾನವಾಗಿ ಆಧಾರ ಹಿಡಿದು ನಡೆಯುವುದನ್ನು ನಾಲ್ಕು ಹೆಜ್ಜೆ ಹಾಕುವುದನ್ನು ಕಲಿಯುತ್ತದೆ, ಇವುಗಳು ಸಾಮಾನ್ಯವಾಗಿ ಇರುವಂತಹುದು ಕೆಲವು ಮಕ್ಕಳು ಯಾವ ತೊಂದರೆ ಇಲ್ಲದಿದ್ದರೂ ಒಂದೆರಡು ತಿಂಗಳು ನಿಧಾನವಾಗಿ ಈ ಎಲ್ಲಾ ಕೆಲಸವನ್ನು ಮಾಡಬಹುದು, ಗಾಬರಿಗೊಳ್ಳಬೇಕಾಗುವಂಥದ್ದು ಏನು ಇಲ್ಲ ಎರಡು ಮೂರು ತಿಂಗಳು ತಡವಾದರೆ ಆಗ ವೈದ್ಯರ ಬಳಿಗೆ ಹೋಗಬೇಕಾಗುತ್ತದೆ.
ಮಕ್ಕಳಿಗೆ ವ್ಯಾಕ್ಸಿನ್ ಹಾಕುವಾಗ ವೈದ್ಯರು ಖಂಡಿತ ಪರೀಕ್ಷಿಸಿ ಇದೆಲ್ಲವನ್ನು ಕೇಳುತ್ತಾರೆ. ಇದರಲ್ಲಿ ಯಾವುದಾದರೂ ಒಂದನ್ನು ಮಾಡದಿದ್ದಾಗ ನೀವು ಆಗ ವೈದ್ಯರ ಬಳಿ ಹೇಳಬಹುದು ಆಗ ವೈದ್ಯರು ಬೇಕಾದ ತಪಾಸಣೆಯನ್ನು ಮಾಡಿ, ಯಾವ ಕಾರಣಕ್ಕಾಗಿ ನಿಧಾನವಾಗಿದೆ ಎಂದು ಹೇಳುತ್ತಾರೆ. ಕೆಲವೊಮ್ಮೆ ವೈಟಮಿನ್ ಗಳ ಕೊರತೆಯಿಂದಲೂ ಇದು ಆಗುವ ಸಾಧ್ಯತೆ ಇದೆ ಆಗ ಸಿರಪ್ ಹಾಕುವುದರ ಮೂಲಕ ಇದನ್ನು ಸರಿಪಡಿಸಬಹುದು. ಮಗುವಿನ ತೂಕ ಆರು ತಿಂಗಳಿಗೆ ಎರಡು ಪಟ್ಟು, ಒಂದು ವರ್ಷಕ್ಕೆ ಮೂರು ಪಟ್ಟು ಹೆಚ್ಚಾಗುತ್ತದೆ ಒಂದು ವರ್ಷ ಕಳೆದರೆ ಮಗುವಿನ ಪ್ರಮುಖ ಘಟ್ಟ ಕಳೆದಂತೆ ಈ ಸಮಯದಲ್ಲಿ ತಂದೆ ತಾಯಿಯ ಪಾತ್ರ ಬಹಳ ಹಿರಿದು.
ಒಂದರಿಂದ ನಾಲ್ಕರವರೆಗೆ ಮಕ್ಕಳಿಗೆ ಸಾಮಾನ್ಯವಾಗಿ ಬರುವಂತಹ ಕಾಯಿಲೆಗಳು, ಅದಕ್ಕೆ ನಾವು ಮನೆಯಲ್ಲೇ ಮಾಡಬಹುದಾದಂತಹ ಚಿಕಿತ್ಸೆಗಳು ಇದರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿಯೋಣ.
ಡಾ. ರುಕ್ಮಿಣಿ ವ್ಯಾಸರಾಜ