“ಹೆಬ್ಬಕ್ಕ”ನಿಗೆ ಸುತ್ತೆಲ್ಲವೂ ಶತ್ರುಗಳೇ!

“ಹೆಬ್ಬಕ್ಕ”ನಿಗೆ ಸುತ್ತೆಲ್ಲವೂ ಶತ್ರುಗಳೇ!

ಹೆಬ್ಬಕ್ಕಗಳು (ದಿ ಗ್ರೇಟ್ ಇಂಡಿಯನ್ ಬಸ್ಟರ್ಡ್) ಇದೀಗ ಮತ್ತೆ ಸುದ್ದಿಯಲ್ಲಿವೆ!

ಹೆಬ್ಬಕ್ಕ – ದಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಈಗ ತೀವ್ರ ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಭೇದ. ಇದು ರಾಜಸ್ಥಾನದ ರಾಜ್ಯ ಪಕ್ಷಿಯು ಹೌದು. ಕಳೆದ ಶತಮಾನದ ಮಧ್ಯದವರೆಗೂ ನಮ್ಮ ಭಾರತದಲ್ಲಿ ಹೇರಳವಾಗಿ ಕಾಣಸಿಗುತ್ತಿದ್ದ ಹೆಬ್ಬಕಗಳು ಕಳೆದ ಗಣತಿಯಲ್ಲಿ ಎಣಿಕೆಗೆ ಸಿಕ್ಕಿದ್ದು ಇಡೀ ದೇಶದಲ್ಲೇ 150 ಹಕ್ಕಿಗಳು ಮಾತ್ರ . ರಾಜಸ್ಥಾನದ ಜೈಸಲ್ಮೇರ್ ಒಂದರಲ್ಲೇ 100 ಹಕ್ಕಿಗಳಿದ್ದರೆ, ಗುಜರಾತ್ ನ ಕಛ್ ನಲ್ಲಿ 25, ನಮ್ಮ ಕರ್ನಾಟಕ ಮತ್ತು ನೆರೆಯ ಆಂದ್ರಪ್ರದೇಶದಲ್ಲಿ 12 ಹಾಗು ಇಡೀ ಮಹಾರಾಷ್ಟ್ರದಲ್ಲಿ ಕೇವಲ 1 ಹಕ್ಕಿ. ಹಿಂದೆ ಬಹಳಷ್ಟು ಸಂಖ್ಯೆಯಲ್ಲಿ ಪಕ್ಷಿಗಳಿದ್ದ ಮಧ್ಯಪ್ರದೇಶದಲ್ಲಿ ಈಗ ಒಂದೂ ಇಲ್ಲ.

ಗಂಡು ಹೆಬ್ಬಕ್ಕಗಳು ಹೆಣ್ಣು ಹಕ್ಕಿಗಳಿಗಿಂತ ಎತ್ತರದಲ್ಲಿ ಸ್ವಲ್ಪ ಕಡಿಮೆ. 3 ರಿಂದ 4 ಅಡಿ ಎತ್ತರವಿರುವ ಹೆಬ್ಬಕ್ಕಗಳು ಸುಮಾರು 15 ಕಿಲೋಗ್ರಾಮಿನಷ್ಟು ತೂಕವಿರುವ ಭಾರದ ಹಕ್ಕಿ. ಕಪ್ಪು ಬಣ್ಣದ ತಲೆಯ ಭಾಗ, ಬಿಳಿಯ ಬಣ್ಣದಿಂದ ಕೂಡಿರುವ ಕುತ್ತಿಗೆ ಹಾಗು ಎದೆ, ಬೂದು ಬಣ್ಣದ ಜೊತೆಗೆ ಕಪ್ಪು ಮಿಶ್ರಿತ ರೆಕ್ಕೆಗಳಿರುವ ಉದ್ದ ಕಾಲಿನ ಹೆಬ್ಬಕ್ಕಗಳು ನೆಲದ ಹಕ್ಕಿ ಎಂದೇ ಕರೆಸಿಕೊಂಡರು ಸಾದಾರಣ ಎತ್ತರದಲ್ಲಿ ಇವು ಹಾರಾಟ ನೆಡೆಸುತ್ತವೆ. ಗಂಡು ಹಕ್ಕಿಗಳು ತನ್ನ ಸಂಗಾತಿಯನ್ನು ಕಂಡಾಗ ಮಿಲನಕ್ಕೆ ಕರೆಯುವ ರೀತಿಯೇ ವಿಚಿತ್ರ! ತನ್ನ ನಾಲಿಗೆಯ ಕೆಳಗೆ ಚೀಲದಂತ ಭಾಗವನ್ನು ತೆರೆದು ಉಬ್ಬಿಸಿ ನೇತಾಡುವಂತೆ ಮಾಡಿ ತನ್ನ ಬಾಲದಂತ ಪುಕ್ಕವನ್ನು ಮೇಲಕ್ಕೆತ್ತಿ ತನ್ನ ಬೆನ್ನಿನ್ನ ಮೇಲೆ ಮಡಚಿಕೊಳ್ಳುತ್ತದೆ. ಎಲ್ಲೂ ಹೆಣ್ಣು ಹಕ್ಕಿ ಕಾಣಸಿಗದಿದ್ದರೆ ಜೋರಾದ ದನಿಯಿಂದ ಕೂಗಿ ತನ್ನ ಇರುವ ಜಾಗವನ್ನು ಹೆಣ್ಣು ಹಕ್ಕಿಗೆ ಸೂಚಿಸುತ್ತದೆ ಆ ಕೂಗು ಸುಮಾರು 500 ಮೀಟರ್ ನವರೆಗೂ ಕೇಳಿಸುತ್ತದೆ.

ಮಾರ್ಚ್ ತಿಂಗಳಿನಿಂದ ಸೆಪ್ಟೆಂಬರ್ ರವರೆಗೂ ಹೆಬ್ಬಕ್ಕಿಗಳ ಸಂತಾನಾಭಿವೃದ್ಧಿ ಸಮಯ. ಹೆಬ್ಬಕ್ಕಿಗಳು ಯಾವುದೇ ಗೂಡು ಕಟ್ಟುವುದಿಲ್ಲ. ತೆರೆದ ನೆಲದಲ್ಲಿ ಒಂದಷ್ಟಗಲ ಕೆರೆದು ಹಳ್ಳದಂತೆ ತೋಡಿ ಒಮ್ಮೆಗೆ ಒಂದೇ ಮೊಟ್ಟೆಯನ್ನು ಇಡುತ್ತದೆ. ಗಂಡು ಹಕ್ಕಿ ಮೊಟ್ಟೆಯ ಸುದ್ದಿಗೆ ಬರುವುದಿಲ್ಲ ಮೊಟ್ಟೆಗೆ ಕಾವು ಕೊಟ್ಟಿ ಮರಿ ಮಾಡುವ ಜವಾಬ್ಧಾರಿ ಏನಿದ್ದರೂ ಹೆಣ್ಣು ಹಕ್ಕಿಯದು. ಹೆಬ್ಬಕ್ಕಿಗಳಿಗೆ ಇಂತಹುದೇ ಎಂಬ ನಿರ್ಧಿಷ್ಟ ಆಹಾರ ಪದ್ಧತಿ ಇಲ್ಲ. ತನ್ನ ಸುತ್ತಮುತ್ತಲು ಬೆಳೆಯುವ ಹುಲ್ಲು, ಮಿಡತೆ, ಜೀರುಂಡೆ ಅಪರೂಪಕ್ಕೊಮ್ಮೆ ಹಲ್ಲಿಗಳು ಒಮ್ಮೊಮ್ಮೆ ಸಣ್ಣ ಸೈಜಿನ ಹಾವುಗಳನ್ನು ಸಹ ತಿನ್ನುತ್ತವೆ.

ಹೆಬ್ಬಕ್ಕಿಗಳ ಸಂತತಿಯಲ್ಲಿ ಕುಸಿತವಾಗಿರುವುದಕ್ಕೆ ಮುಖ್ಯ ಕಾರಣ ರಾಜಸ್ಥಾನ್ ಹಾಗು ಗುಜರಾತ್ ನಲ್ಲಿ ಹೆಚ್ಚಾದ ಹೈ ವೋಲ್ಟೇಜ್ ವಿದ್ಯುತ್ ಪರಿವರ್ತಕಗಳು. ಸೂಕ್ಷ್ಮ ದೇಹದ ಈ ಹಕ್ಕಿಗಳಿಗೆ ವಿದ್ಯುತ್ ಕಂಪನಗಳು ತೀವ್ರ ಘಾಸಿ ಮಾಡಿದರೆ ಈ ಹಕ್ಕಿಗಳು ಸಾದಾರಣ ಎತ್ತರದಲ್ಲಿ ಹಾರುವಾಗ ವಿದ್ಯುತ್ ತಂತಿಗಳಿಗೆ ಸಿಕ್ಕಿ ಸಾಯುವ ಪ್ರಮೇಯವೇ ಹೆಚ್ಚು ಏಕೆಂದರೆ ಇವುಗಳ ಕಣ್ಣಿನ ದೃಷ್ಟಿ ಮಿಕ್ಕ ಪಕ್ಷಿಗಳಂತೆ ಅಷ್ಟೇನು ಚುರುಕಾಗಿರುವುದಿಲ್ಲ ಹಾಗು ವಿದ್ಯುತ್ ತಂತಿಗಳನ್ನು ದೂರದಿಂದ ಗುರುತಿಸಿ ತಪ್ಪಿಸ್ಕೊಳ್ಳದಷ್ಟು ಇವುಗಳ ಅಸಹಾಯಕತೆ ಇವುಗಳ ಸಂತತಿಯಲ್ಲಿ ಕುಸಿತಕ್ಕೆ ಮುಖ್ಯ ಕಾರಣ. ಇನ್ನುಳಿದಂತೆ ಅರಣ್ಯ ನಾಶ, ಹೆಚ್ಚಾಗಿ ವಿಸ್ತರಣೆಗೊಂಡ ವ್ಯವಸಾಯ ಕ್ಷೇತ್ರಗಳಿಂದ ಇವುಗಳು ಆವಾಸಸ್ಥಾನ ನಷ್ಟ ಅನುಭವಿಸಿದವು. ಹೆಬ್ಬಕ್ಕಗಳು ಇಡುವ ವರ್ಷಕ್ಕೊಂದು ಮೊಟ್ಟೆ ಮರಿಯಾಗುವುದು ಶೇಕಡ 40 ರಿಂದ 50 ರಷ್ಟು ಮಾತ್ರ ಏಕೆಂದರೆ ತೆರೆದ ನೆಲದಲ್ಲೇ ಯಾವುದೇ ಮುಚ್ಚು ಮರೆಯಿಲ್ಲದೆ ಇರುವ ಇದರ ಗೂಡು ಎನ್ನಬಹುದಾದ ಸಣ್ಣ ಹಳ್ಳದಲ್ಲಿ ಮೊಟ್ಟೆಗಳು ಮನುಷ್ಯರ ಅಥವಾ ನಾಯಿ ನರಿ ತೋಳಗಳ ಕಣ್ಣಿಗೆ ಸುಲಭವಾಗಿ ಕಾಣಸಿಗುವಂತದ್ದು. ಆದ್ದರಿಂದ ಈಗ ಇರುವ ಇವುಗಳ ಸಂತತಿ 150 ಇರುವುದು ಆಶ್ಚರ್ಯಕರವೇ ಸರಿ!  ಒಂದು ಕಡೆ ಮನುಷ್ಯರ ಭಯ, ಆವಾಸ ನಷ್ಟ, ವಿದ್ಯುತ್ ಕಂಪನ ಹಾಗು ಪ್ರಾಣ ತೆಗೆಯುತ್ತಿರುವ ಹೈಟೆನ್ಶನ್ ವಿದ್ಯುತ್ ತಂತಿಗಳು, ನಾಯಿ ನರಿಗಳಿಂದ ಇವುಗಳ ಮೊಟ್ಟೆಗಳ ಕಬಳುವಿಕೆ ಒಟ್ಟಿನಲ್ಲಿ ನಮ್ಮ ಹೆಮ್ಮೆಯ ಹೆಬ್ಬಕ್ಕಗಳಿಗೆ ಸುತ್ತೆಲ್ಲವೂ ಶತ್ರುಗಳೇ!

ಹೆಬ್ಬಕ್ಕಗಳ ಮುಖ್ಯ ಆವಾಸಸ್ಥಾನ ಭಾರತ ಮತ್ತು ಪಾಕಿಸ್ತಾನ. ಇವುಗಳ ಸಂತತಿ ಭಾರತದಲ್ಲೇ ಎಷ್ಟೋ ವಾಸಿ,  ಈಗಾಗಲೇ  ನೆರೆಯ ಪಾಕಿಸ್ತಾನ ದೇಶದಲ್ಲಿ ಇದರ ನಿರಂತರ ಬೇಟೆಯಿಂದಾಗಿ ಇವುಗಳ ಸಂತತಿ ಇಲ್ಲವೇ ಇಲ್ಲ ಎನ್ನಬಹುದು. ಇದ್ದರೂ ಕೂಡ ಅವುಗಳನ್ನು ಗಮನಿಸಿ ಸಂರಕ್ಷಿಸುವಂತಹ ಸಂಘಟನೆಗಳು ಆ ದೇಶದಲ್ಲಿ ಜೀವಂತವಾಗಿರುವುದು ಸಂಶಯ ಏಕೆಂದರೆ ಆ ದೇಶದಲ್ಲಿ ಘಟಿಸಿರುವ ಅರಾಜಕತೆಯಲ್ಲಿ ಮನುಷ್ಯರು ನೆಮ್ಮದಿಯಾಗಿ ಬದುಕುವುದೇ ಕಷ್ಟವಾಗಿರುವಾಗ ಇವುಗಳನ್ನು ಸಂರಕ್ಷಿಸುವ, ಪೋಷಿಸುವ ಸಂಘಟನೆಗಳು ಆ ದೇಶದಲ್ಲಿ ದುಬಾರಿ ಎನ್ನಬಹುದು.

ಸಂತೋಷದ ಸಂಗತಿಯೆಂದರೆ ನಮ್ಮ ಭಾರತದಲ್ಲಿ ಇದರ ಸಂರಕ್ಷಣೆಗೆ ವನ್ಯ ವಿಜ್ಞಾನಿಗಳು ನಿರಂತರ ಪ್ರಯತ್ನ ಪಡುತ್ತಲೇ ಇರುವುದು. ರಾಜಸ್ಥಾನದ ಜೈಸಲ್ಮೇರ್ ನಲ್ಲಿನ ತಳಿ ಅಭಿವೃದ್ಧಿ ಕೇಂದ್ರದಲ್ಲಿ ಹೆಬ್ಬಕ್ಕಿಗಳ ಮೊಟ್ಟೆಗಳನ್ನು ಸಂರಕ್ಷಿಸುವ ಕಾರ್ಯ ನೆಡೆಯುತ್ತಿರುವ ಪರಿಣಾಮ ಕಳೆದ ತಿಂಗಳಲ್ಲಿ ಇವುಗಳ ಮೊಟ್ಟೆಗಳಿಂದ ನಾಲ್ಕು ಮರಿಗಳು ಜನಿಸಿವೆ. ಕೃತಕ ಸಂತಾನೋತ್ಪತ್ತಿ ಕೇಂದ್ರದಲ್ಲಿ ಈ ಪಕ್ಷಿಗಳ ಸಂತಾನೋತ್ಪತ್ತಿ ಕಾರ್ಯ ಮಾಡಿಸಿ, ನಂತರ ಆ ಮರಿಗಳನ್ನು ಅವುಗಳ ಸಹಜ ಆವಾಸಸ್ಥಾನಗಳಿಗೆ ಬಿಟ್ಟು ಇವುಗಳ ಸಂತತಿ ಅಭಿವೃದ್ಧಿ ಕಾರ್ಯ ಮಾಡುವ ಯೋಜನೆ ಪ್ರಗತಿಯಲ್ಲಿದ್ದು, ಅರಣ್ಯಾಧಿಕಾರಿಗಳು ಹಾಗೂ ಭಾರತದ ವನ್ಯಜೀವಿ ಸಂಸ್ಥೆಯ ಅಧಿಕಾರಿಗಳು ಈ ಯೋಜನೆಯನ್ನು ಅತ್ಯಂತ ಮುತುವರ್ಜಿಯಿಂದ ಮುನ್ನಡೆಸುತ್ತಿದ್ದಾರೆ.

ಅವರಿಗೆ ಶುಭವಾಗಲಿ ಎಂದು ಹಾರೈಸೋಣ.

ಕು ಶಿ ಚಂದ್ರಶೇಖರ್

Related post

Leave a Reply

Your email address will not be published. Required fields are marked *