ಹೆಳವರು
ಮನೆಯ ಮಗನೆಂದು ಬಂದವರು
ತಾತ ಮುತ್ತಾತ ಮರಿತಾತನ ಕಥೆ ಹೇಳುವರು
ಗತಕಾಲದ ಇತಿಹಾಸ ಬಿಚ್ಚಿಡುವವರು
ಪ್ರತಿ ಊರು ಪ್ರತಿ ಕೇರಿಗಳ ಕಥೆ ತಿಳಿದವರು
ಬ್ರಹ್ಮಗಂಟು ಮೋಡಿ ಭಾಷೆಯ ಪಂಡಿತರು
ವರ್ಷಕೊಮ್ಮೆ ಮನೆಯ ಕಡೆ ಬರುವವರು
ಹಳದಿ ರುಮಾಲು ಕರಿ ಕೋಟು ಧರಿಸಿದವರು
ಕೈಯ್ಯಲ್ಲಿ ಗುಲಾಬಿ ಬಣ್ಣದ ಚೀಲ ಹಿಡಿದವರು
ಕಂಕುಳಲ್ಲಿ ಜೋಳಿಗೆಯ ನೇತಾಡಿಸಿಕೊಂಡವರು
ಮನೆ ಮನೆಯ ಪ್ರತಿಯೊಬ್ಬರ ಹೊಗಳುವವರು
ಹಿಡಿ ಜೋಳ, ಹಳೆಬಟ್ಟೆ ಪಡೆಯುವವರು
ಕುರಿ ಕೊಟ್ಟರೂ ಸರಿ ಕೋಳಿಯಾದರೂ ಸರಿ
ಹೆಗಲಿನ ಚೀಲದಲಿ ಕುಳಿತ ಪುಸ್ತಕವಾ ಬಿಡಿಸಿ
ತಲೆಮಾರುಗಳ ಕಥೆ ಹೇಳಿ ಖುಷಿಪಡಿಸಿ
ನಾ ನಿಮ್ಮ ಮನೆ ಮಗನೆಂದು ಹೇಳುವವರು
ಮನೆಯಲಿ ಹಸುಗೂಸು ಬಂದಾಕ್ಷಣ
ಮನೆಮಂದಿಯಲ್ಲ ನಿಮ್ಮ ಹುಡುಕುವರು
ನವಜಾತ ಶಿಶುವಿನ ಹೆಸರು ನಿಮ್ಮ ಪುಸ್ತಕದ
ಪುಟಗಳಲಿ ಬರಬೇಕೆಂದು ಆಶಿಸುವವರು
ಊರೂರು ತಿರುಗುತಲಿ ಇಡೀ ಸಂಸಾರ ಹೇರಿಕೊಂಡು
ದಾನ ಸಿಕ್ಕ ಕುದುರೆಯೇರಿ ಎತ್ತು ಕುರಿ ಹಿಡಿದು
ಹೆಂಡತಿ ಮಕ್ಕಳೊಂದಿಗೆ ನೆರೆಯೂರಿಗೆ ಹೊರಟವರು
ಇವರು ಹೆಳವರು…. ಹೊಗಳುವವರು.
ಸಿ.ಎನ್. ಮಹೇಶ್