ಹೆಸರಲ್ಲೇನಿದೆ ?

ಹೆಸರಲ್ಲೇನಿದೆ ?

ಒಂದು ಊರಿನಲ್ಲಿ ಶಾಂತೇಶ್ವರ ಎನ್ನುವ ಗುರುಗಳೊಬ್ಬರಿದ್ದು, ಅವರಿಗೆ ದುಷ್ಟ ಎಂಬ ಶಿಷ್ಯನೊಬ್ಬ ಇದ್ದ. ಆತನಿಗೆ ತನ್ನ ಹೆತ್ತವರು ತನಗಿಟ್ಟಿದ್ದ ಹೆಸರಿನ ಬಗ್ಗೆ ತೀವ್ರ ನೋವಿತ್ತು. ತಾನು ಜೀವನದಲ್ಲಿ ಯಾವುದೇ ಕೆಟ್ಟದಾದ ಕೆಲಸವನ್ನು ಮಾಡದೇ ಇದ್ದರೂ ಲೋಕದ ದೃಷ್ಟಿಯಲ್ಲಿ ನಾನು ದುಷ್ಟನಾದೆನಲ್ಲ ಎಂಬ ನೋವು ಆತನನ್ನು ಕಾಡುತಿತ್ತು.

ಸಂಕಟ ತಡೆಯಲಾರದೆ ಒಂದು ದಿನ ಆತ ಶಾಂತೇಶ್ವರ ಗುರುಗಳ ಬಳಿಗೆ ತೆರಳಿ ತನ್ನ ಮನದಾಳದ ನೋವನ್ನು ಹೇಳಿಕೊಂಡ. ಶಿಷ್ಯನ ಸಮಸ್ಯೆ ಅರಿತ ಶಾಂತೇಶ್ವರ ಗುರುಗಳು ಮುಗುಳ್ನಕ್ಕು, ಹೊರಗಿನ ಪ್ರಪಂಚವನ್ನು ಒಂದು ಬಾರಿ ಸುತ್ತಾಡಿಕೊಂಡು ಯಾರಿಗೆ ಯಾವ ಯಾವ ಹೆಸರುಗಳನ್ನು ಇಡಲಾಗಿದೆ ಎಂದು ತಿಳಿದುಕೊಂಡು ಬಾ ಎಂದರು. ಮಹಾತ್ಮರ ಸಲಹೆಯಂತೆ ದುಷ್ಟನು ಲೋಕಸಂಚಾರಕ್ಕೆ ಹೊರಟ.

ಮಾರ್ಗ ಮಧ್ಯದಲ್ಲಿ ಈತನಿಗೆ ಬಿಕ್ಷುಕನೊಬ್ಬ ಸಿಗುತ್ತಾನೆ. ಅವನನ್ನು ನೋಡಿದರೆ ಅತ್ಯಂತ ಕಷ್ಟದಿಂದ ಇದ್ದು ಹಿಂದು ಮುಂದು ಯಾರೂ ಇರಲಿಲ್ಲ, ಆತನು ದಟ್ಟದರಿದ್ರನಾಗಿದ್ದು, ಅವನ ಹೆಸರು ಮಾತ್ರ ‘ಶ್ರೀಮಂತ’ ಎಂದಾಗಿತ್ತು. ಆತನಿಗೆ ಭಿಕ್ಷೆಯನ್ನು ನೀಡಿ ಮುಂದಕ್ಕೆ ನಡೆಯುತ್ತಿದ್ದಾಗ ದುಷ್ಟನಿಗೆ ದಾರಿಯಲ್ಲಿ ಅಳುತ್ತಿದ್ದ ಯುವಕನೊಬ್ಬ ಎದುರಾಗುತ್ತಾನೆ. ಯಾಕಯ್ಯಾ ಅಳುತ್ತಿದ್ದೀಯಾ? ಎಂದು ದುಷ್ಟನು ಆತನನ್ನು ಪ್ರಶ್ನಿಸಿದ. ಆಗ ನನಗೆ ವ್ಯಾಪಾರದಲ್ಲಿ ಸಂಪೂರ್ಣ ನಷ್ಟವಾಗಿದೆ, ನನ್ನ ಮಗನು
ತನ್ನೆಲ್ಲಾ ಸಮಯವನ್ನು ಜೂಜಿನಲ್ಲೇ ವ್ಯಯ ಮಾಡುತ್ತಿದ್ದು, ನನ್ನ ಹೆಂಡತಿಯೂ ಸದಾ ಕಾಯಿಲೆಯಲ್ಲೇ ನರಳುತ್ತಿರುತ್ತಾಳೆ ಎಂದ ಆ ಯುವಕ. ಆಗ ದುಷ್ಟನು ಕುತೂಹಲದಿಂದ ನಿಮ್ಮ ಹೆಸರೇನು ಎಂದು ಕೇಳುತ್ತಾನೆ. ಆ ಯುವಕನು ತನ್ನ ಹೆಸರು ‘ಆನಂದ’ ಎಂದು ಹೇಳುತ್ತಾನೆ.

ಅದೇ ರೀತಿ ದುಷ್ಟನು ಮುಂದಕ್ಕೆ ನಡೆಯುತ್ತಾ ಹೋಗುತ್ತಿರುವಾಗ ರಾಜನ ಅರಮನೆ ಮುಂಭಾಗದಲ್ಲಿ ದುಷ್ಟನ ಕಣ್ಮುಂದೆಯೇ ರಾಜಾಜ್ಞೆಯಂತೆ ವ್ಯಕ್ತಿಯೊಬ್ಬನನ್ನು ನೇಣಿಗೆ ಏರಿಸುತ್ತಾರೆ. ಹೀಗೆ ಶಿಕ್ಷೆಗೆ ಗುರಿಯಾದ ವ್ಯಕ್ತಿಯ ಹೆಸರನ್ನು ಶಿಷ್ಯನು ಕೇಳಿದಾಗ ಆತನ ಹೆಸರು ‘ಚಿರಂಜೀವಿ’ ಎಂದಾಗಿತ್ತು. ಇದೆಲ್ಲವನ್ನೂ ನೋಡಿ ಧೃತಿಗೆಟ್ಟ ದುಷ್ಟನು ಶಾಂತೇಶ್ವರ ಗುರುಗಳ ಬಳಿಗೆ ಬಂದನು. ಆಗ ಶಾಂತೇಶ್ವರ ಗುರುಗಳು, ಏನಯ್ಯಾ ದುಷ್ಟಾ ದಾರಿಯಲ್ಲಿ ಯಾವ ಯಾವ ಹೆಸರಿನ ವ್ಯಕ್ತಿಗಳನ್ನು ನೀನು ಭೇಟಿ ಮಾಡಿದೆ? ಈಗ ನೀನು ಯಾರ ಹೆಸರನ್ನು ಇಟ್ಟುಕೊಳ್ಳಲು ಬಯಸುತ್ತೀಯಾ? ಎಂದು ಶಾಂತೇಶ್ವರ ಗುರುಗಳು ಪ್ರಶ್ನೆಯನ್ನು ಮಾಡಿದರು. ಆಗ ದುಷ್ಟನು ಇಲ್ಲ ಗುರುಗಳೇ ನಾನು ನನ್ನ ಮನಸ್ಸನ್ನು ಬದಲಿಸಿಕೊಂಡಿದ್ದೇನೆ. ಕೇವಲ ಮಹಾನ್ ವ್ಯಕ್ತಿಗಳ ಅಥವಾ ದೇವರ ಹೆಸರನ್ನು ಇಟ್ಟುಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ ಮತ್ತು ಅಂತಹ ವ್ಯಕ್ತಿಗಳು ನಾವು ಆಗಲು ಸಾಧ್ಯವಿಲ್ಲ ಎನ್ನುವ ಸತ್ಯದ ಅರಿವು ನನಗೆ ಆಗಿದೆ ಎಂದು ದುಷ್ಟನು ಹೇಳುತ್ತಾನೆ.

ಬದುಕಿನಲ್ಲಿ ಕೇವಲ ಅತ್ಯುತ್ತಮವಾದ ಅಥವಾ ವಿಭಿನ್ನವಾದ ಹೆಸರನ್ನು ಇಟ್ಟುಕೊಳ್ಳುವುದರಿಂದ, ಸುಂದರವಾದ ಮತ್ತು ಆಕರ್ಷಕ ರೂಪವನ್ನು ಹೊಂದುವುದರಿಂದ ಅಥವಾ ದೇಹದಾರ್ಢ್ಯತೆಯನ್ನು ಹೊಂದಿರುವುದರಿಂದ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ. ಬದಲಿಗೆ ಅತ್ಯುತ್ತಮವಾದ ಕಾರ್ಯವೈಖರಿ, ಬದ್ಧತೆ, ಕಠಿಣ ಪರಿಶ್ರಮ ಮತ್ತು ಹೃದಯ ಶ್ರೀಮಂತಿಕೆಯನ್ನು ಹೊಂದುವುದರಿಂದ ಯಶಸ್ಸನ್ನು ಗಳಿಸಬಹುದು ಎನ್ನುವ ಸತ್ಯವನ್ನು ನಾವು ಅರಿತಿರಬೇಕು.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ- 574198
ದೂ: 9742884160

Related post

Leave a Reply

Your email address will not be published. Required fields are marked *