ಹೇಳಿ, ಇವಳೇಕೆ ಕಳ್ಳಿ?
ಬೆಳಗಿನ ಸಮಯ. ಸುಮಾರು ಹನ್ನೊಂದು ಗಂಟೆಯಾಗಿರಬಹುದು. ಯಾರೋ ಬಾಗಿಲು ಬಡಿದಂತಾಗಿ ಅಡುಗೆ ಮನೆಯಲ್ಲಿದ್ದ ಭವಾನಿ, ‘ಯಾರು ಬಂದಿರಬಹುದು ಈಗ? ಗ್ಯಾಸ್ ಸಿಲಿಂಡರ್ ಕೊಡುವವನು ನಿನ್ನೆಯೇ ಕೊಟ್ಟು ಹೋಗಿದ್ದಾನೆ. ಪೋಸ್ಟ್ ಮನ್ ಬರುವ ಸಮಯವಿನ್ನೂ ಆಗಿಲ್ಲ. ಅವನು ಬಂದರೂ ಬಾಗಿಲು ಬಡಿಯದೆ ‘ಪೋಸ್ಟ್’ ಎಂದು ಕೂಗುತ್ತಾ ಪತ್ರಗಳನ್ನು ಬಾಗಿಲಲ್ಲೇ ಹಾಕಿ ಹೋಗುತ್ತಾನೆ. ಮೇಲಿನ ಮನೆಗೆ ಬಾಡಿಗೆಗೆ ಈಗಾಗಲೇ ಹೊಸಬರು ಬಂದಿರೋದ್ರಿಂದ ಮನೆ ಕೇಳಿಕೊಂಡು ಯಾರೂ ಬಂದಿರೋದಿಲ್ಲ. ಅಂದ್ಮೇಲೆ, ಮತ್ಯಾರಿರಬಹುದು?’ ಎಂದು ಅಡುಗೆ ಮನೆಯಿಂದ ಹೊರ ಬಾಗಿಲಿಗೆ ಬರುವಷ್ಟರಲ್ಲಿ ಹಲವಾರು ಆಲೋಚನೆಗಳು, ಊಹೆಗಳನ್ನು ಮನದಲ್ಲಿ ಮಾಡಿದಳು.
ಭವಾನಿ ಬಾಗಿಲು ತೆರೆಯುವ ಮುಂಚೆ ಹಾಗೇ ಕಿಟಕಿಯಲ್ಲಿ ಬಗ್ಗಿ ನೋಡಿ, ತನ್ನ ಹಳೆಯ ಗೆಳತಿ ಸೀತಾಳನ್ನು ಕಂಡು, ‘ಏ ಸೀತಾ, ನೀನೇನೇ? ಬಾ ಬಾ’ ಎನ್ನುತ್ತಾ ನಗೆ ಮೊಗದಿಂದ ಅವಳನ್ನು ಒಳ ಕರೆದಳು.
ಸೀತಾ, ಭವಾನಿಯರ ಗೆಳೆತನ ಅವರ ಹೈಸ್ಕೂಲ್ ಕಾಲದಿಂದಲೂ ಇತ್ತು. ಆಗ ಅವರಿದ್ದುದು ಚನ್ನಗಿರಿಯಂತಹ ಸಣ್ಣ ಊರಿನಲ್ಲಿ. ಇಬ್ಬರ ಮನೆಗಳೂ ಹತ್ತಿರ ಹತ್ತಿರ ಇದ್ದುದರಿಂದ ಸ್ಕೂಲಿಗೆ ಒಟ್ಟಿಗೇ ಹೋಗೋದು ಬರೋದು ಮಾಡ್ತಿದ್ದರು. ಸೀತಾ ಮೊದಲಿನಿಂದಲೂ ಒಂದು ರೀತಿಯ ಸಂಕೋಚ ಪ್ರವೃತ್ತಿಯವಳು. ಬೇರೆಯವರೊಂದಿಗೆ ಬೆರೆಯಲು ಹಿಂಜರಿಯುತ್ತಿದ್ದವಳು. ಮನೆ ಹತ್ತಿರವೇ ಇದ್ದು ತನ್ನ ತರಗತಿಯಲ್ಲೇ ಓದುತ್ತಿದ್ದುದರಿಂದ ಭವಾನಿಯೊಂದಿಗಿನ ಒಡನಾಟ ಅವಳಿಗೆ ಹಿತವಿತ್ತು.
ಹೈಸ್ಕೂಲ್ ಮುಗಿದ ನಂತರ ಸೀತಾ, ಭವಾನಿ ಇಬ್ಬರೂ ಪಿಯುಸಿ ಓದಲು ಒಂದೇ ಕಾಲೇಜಿಗೆ ಸೇರಿದ್ದರು. ಸೀತಾಳ ಮನೆಯವರು, ಭವಾನಿ ಜೊತೆಗಿರ್ತಾಳೆ ಎನ್ನುವ ಕಾರಣಕ್ಕೆ ಸೀತಾಳನ್ನೂ ಅದೇ ಕಾಲೇಜಿಗೆ ಸೇರಿಸಿದ್ದರು. ಆದರೆ, ಒಂದೆರಡು ತಿಂಗಳಾಗುವಷ್ಟರಲ್ಲೇ ಭವಾನಿಯ ತಂದೆಗೆ ಬೆಂಗಳೂರಿಗೆ ವರ್ಗಾವಣೆ ಆಗಿದ್ದರಿಂದ ಭವಾನಿ ಮನೆಯವರೊಂದಿಗೆ ಬೆಂಗಳೂರಿಗೆ ಹೋಗಬೇಕಾಯಿತು.
ಪಾಪ! ಸೀತಾ ಆಗ ಒಬ್ಬಂಟಿಯಾದಳು. ಭವಾನಿಯ ಜೊತೆಯಿಲ್ಲದೆ ಆಕೆ ಸ್ವಲ್ಪ ಮಂಕಾದಳು. ಕಾಲೇಜಿಗೆ ಹೋಗುತ್ತಿದ್ದ ಸೀತಾ ಆಕಡೆ ಈಕಡೆ ನೋಡದೆ ತಾನಾಯ್ತು ತನ್ನ ಕಾಲೇಜು ದಾರಿಯಾಯ್ತು ಅಂತ ಹೋಗುವ, ಹಿಂದಿರುಗುವ ರೂಢಿ ಮಾಡಿಕೊಂಡಳು. . ಅಷ್ಟಕ್ಕೂ ಅವಳು ಅಂತಹ ಚುರುಕಿನ ಹುಡುಗಿಯೂ ಆಗಿರಲಿಲ್ಲ, ಬುದ್ಧಿ ಸ್ವಲ್ಪ ಮಂಡಿ ಕೆಳಗೆ ಅಂದರೆ ತಪ್ಪೇನಿಲ್ಲ ಬಿಡಿ. ಆದರೂ ಒಳ್ಳೆಯ ಹುಡುಗಿ. ಬಾಯಲ್ಲಿ ಬೆರಳಿಟ್ಟರೆ ಕಚ್ಚೋಕೆ ಬರೋಲ್ಲ ಅಂತಾರಲ್ಲ, ಅಂಥ ಹುಡುಗಿ ಅವಳು. ಹಾಗಂತ ಯಾರೂ ಇನ್ನೂವರೆಗೂ ಅವಳ ಬಾಯಲ್ಲಿ ಬೆಟ್ಟಿಟ್ಟು ನೋಡಿಲ್ಲ ಸಧ್ಯ!
ಅಂತೂ ಇಂತೂ ಡಿಗ್ರಿ ಮುಗಿಸಿದ ಸೀತಾಳ ಮದುವೆ ಹಳ್ಳಿಯ ಹುಡುಗನೊಂದಿಗೆ ಆಯಿತು. ಮದುವೆಯಾದ ನಂತರ ಸೀತಾ ಗಂಡನೊಂದಿಗೆ ಹಳ್ಳಿಗೆ ಹೋಗಿ ನೆಲೆಸಿದಳು, ಪಕ್ಕಾ ಹಳ್ಳಿ ಹುಡುಗಿಯೇ ಆಗಿ ಹೋದಳು. ಇಷ್ಟಾದರೂ, ಆಗೊಮ್ಮೆ ಈಗೊಮ್ಮೆ ಭವಾನಿಯೊಂದಿಗೆ ಫೋನಿನಲ್ಲಿ ಮಾತನಾಡುತ್ತಾ ಅವಳೊಂದಿಗೆ ಸಂಪರ್ಕವನ್ನೂ, ಗೆಳೆತನವನ್ನೂ ಇಟ್ಟುಕೊಂಡಿದ್ದಳು.
ಹೀಗೆ ಹಲವಾರು ವರ್ಷಗಳೇ ಉರುಳಿಹೋದವು. ಭವಾನಿ, ಸೀತಾ ಇಬ್ಬರೂ ಈಗ ಹತ್ತಿರ ಹತ್ತಿರ ಐವತ್ತರ ವಯಸ್ಸನ್ನು ಸಮೀಪಿಸಿದ್ದರು. ಸೀತಾಳ ಮಗಳು ಮದುವೆಯಾಗಿ ಗಂಡನ ಮನೆ ಸೇರಿದ್ದಳು. ಮಗ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದ. ಅವನು ಮನೆಯೊಂದನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದ. ಅವನಿಗೆ ಅಡುಗೆ ಮಾಡಿಕೊಂಡು ಕೆಲಸಕ್ಕೆ ಹೋಗೋದು ಬಹಳ ಕಷ್ಟ ಅನ್ನಿಸಿದ್ದರಿಂದ ಸೀತಾ ಆರು ತಿಂಗಳ ಕೆಳಗೆ ಬೆಂಗಳೂರಿಗೆ ಶಿಫ್ಟ್ ಆದಳು. ಬೆಂಗಳೂರಿಗೆ ಬಂದ ನಂತರ ಸೀತಾ ಆಗಾಗ್ಗೆ ಭವಾನಿಯೊಂದಿಗೆ ಭೇಟಿಯಾಗುತ್ತಿದ್ದಳು. ಹಾಗಾಗಿ ಇಂದು ಸೀತಾ ಭವಾನಿಯ ಮನೆಗೆ ಬಂದಾಗ ಭವಾನಿ ಅವಳನ್ನು ಸಂತೋಷದಿಂದ ಒಳ ಬರಮಾಡಿಕೊಂಡಳು.
ಒಳಬಂದ ಸೀತಾ ಸೋಫಾ ಮೇಲೆ ಕುಳಿತಳು. ಮುಖ ಪೆಚ್ಚಾಗಿತ್ತು. ‘ಏನಾಯ್ತೆ ಸೀತಾ? ಯಾಕೆ ಪೆಚ್ಚಾಗಿದ್ದಿ?’ ಎಂದು ಕೇಳುತ್ತಿದ್ದ ಹಾಗೆ, ಸೀತಾ ಕಣ್ಣಲ್ಲಿ ನೀರು ತುಂಬಿಕೊಂಡು ‘ಭವಾನಿ, ನೀನೇ ಹೇಳೆ. ನಾನು ಕಳ್ಳಿ ತರಹ ಕಾಣಿಸ್ತೀನೇನೆ?’ ಎಂದು ಕೇಳುತ್ತಾ ಬಿಕ್ಕಿದಳು.
ಆತಂಕಗೊಂಡ ಭವಾನಿ, ‘ಏ ಸೀತಾ, ನೀನು… ಕಳ್ಳಿಯಾಗೋದೇ? ಏನು ಮಾತಾಡ್ತಿದ್ದೀಯ ನೀನು? ಏನಾಯ್ತು ಅನ್ನೋದನ್ನ ಬಿಡಿಸಿ ಹೇಳೇ’ ಎನ್ನುತ್ತಾ ಅವಳ ಕೈಹಿಡಿದು ಮಮತೆಯಿಂದ ಅವಳ ತೋಳು ಸವರಿ ಕೇಳಿದಳು. ಸೀತಾ ವಿವರವಾಗಿ ತಿಳಿಸತೊಡಗಿದಳು.
‘ ನೋಡೇ ಭವಾನಿ. ನಾನೊಂಥರಾ ಹಳ್ಳಿ ಗುಗ್ಗು ಅಂತ ನಿಂಗೆ ಗೊತ್ತೇ ಗೊತ್ತು. ಮೊನ್ನೆ ದಿನ ನನ್ನ ಮಗ ಒಂದು ದೊಡ್ಡ ಹೋಟೆಲ್ಲಿಗೆ ಕರೆದುಕೊಂಡು ಹೋದ. ಅವನಿಗೆ ಅದೇನೋ ಅಕರಾಸ್ತೆ, ತನ್ನಮ್ಮನೊಂದಿಗೆ ದೊಡ್ಡ ಹೋಟೆಲ್ಲಿನಲ್ಲಿ ಊಟ ಮಾಡಬೇಕು ಅಂತ. ಅಲ್ಲಿ ಹೋದ್ವಾ, ಕುಳಿತ ನಂತರ ಟೇಬಲ್ ಮೇಲಿಟ್ಟಿದ್ದ ಪ್ಲೇಟುಗಳ ಪಕ್ಕ ಕಂದು ಬಣ್ಣದ ಒಂದು ಚಂದದ ಬಟ್ಟೆಯ ವಸ್ತ್ರ ಇಟ್ಟಿದ್ದರು. ಅದೇಕೆಂದು ಮಗನನ್ನು ಕೇಳ್ದೆ. ಅದಕ್ಕವನು ಕೈ ಒರೆಸಿಕೊಳ್ಳೋಕೆ ಅಥವಾ ತೊಡೆ ಮೇಲೆ ಹಾಕಿಕೊಳ್ಳೋಕೆ ಅಂದ. ನಾನು ಬೇರೆ ಕಡೆಗಳಲ್ಲಿ ಕಾಗದದ ಟಿಷ್ಯೂ ಇಡುವುದನ್ನು ಗಮನಿಸಿದ್ದೆ. ಕಾಗದದ ಟಿಷ್ಯೂಗಳಲ್ಲಿ ಕೈ ಒರೆಸಿ ನಂತರ ಕಸದ ಡಬ್ಬಿಯಲ್ಲಿ ಬಿಸಾಕುವುದನ್ನೂ ಗಮನಿಸಿದ್ದೆ. ಈ ಹೋಟೆಲ್ಲು ಬಲು ದೊಡ್ಡ ಹೋಟೆಲ್ಲಾದ್ದರಿಂದ ಪೇಪರ್ ಟಿಷ್ಯೂ ಬದಲಾಗಿ ಈ ಚಂದದ ವಸ್ತ್ರ ಇಟ್ಟಿದ್ದಾರೆಂದುಕೊಂಡೆ. ಇಲ್ಲೂ ಎಲ್ಲರೂ ಆ ವಸ್ತ್ರಗಳಲ್ಲಿ ಕೈ ಬಾಯಿ ಒರೆಸಿಕೊಂಡು ಕಸದ ಡಬ್ಬಿಯಲ್ಲಿ ಬಿಸಾಡುತ್ತಾರೆ ಅಂದ್ಕೊಂಡೆ. ಛೇ, ಪ್ರತಿದಿನ ಇಷ್ಟೊಂದು ವಸ್ತ್ರಗಳನ್ನು ಬಿಸಾಡುತ್ತಾರಲ್ಲಾ! ಇವರಿಗೆ ಮನಸ್ಸಾದರೂ ಹೇಗೆ ಬರುತ್ತದೆ? ಅದಕ್ಕೇ ಊಟಕ್ಕೆ ಇಷ್ಟೊಂದು ಚಾರ್ಜ್ ಮಾಡುತ್ತಾರೇನೋ!…. ಅಂತೆಲ್ಲಾ ಮನದಲ್ಲೇ ಯೋಚಿಸಿ, ನಾನಂತೂ ಈ ರೀತಿ ಡಂಭಾಚಾರ ಮಾಡ್ದೆ, ನ್ಯಾಷನಲ್ ವೇಸ್ಟ್ ತಡೆಗಟ್ಟಬೇಕು ಅಂದ್ಕೊಂಡು ಆ ಚಂದದ ವಸ್ತ್ರವನ್ನು ಕೈ ಚೀಲದಲ್ಲಿ ಹಾಕ್ಕೊಂಡು ಮನೆಗೆ ಬಂದೆ. ಅಲ್ನೋಡಿದರೆ ನನ್ನ ನಾದಿನಿ ಮನೆ ಹತ್ತಿರ ಬಂದು ಕಾಯ್ತಿದ್ದಳು. ಒಳಗೆ ಹೋದಮೇಲೆ ಕರವಸ್ತ್ರ ತೋರಿಸಿ ಅದನ್ನು ತಂದದ್ದೇಕೆಂದು ವಿವರಿಸಿ ಹೇಳಿದೆ. ಅದಕ್ಕವಳು, ‘ಏನತ್ತಿಗೇ, ಕರವಸ್ತ್ರ ಕಳ್ಳತನ ಮಾಡಿಬಿಟ್ರಾ? ಛೇ ಛೇ, ನೀವೊಂಥರಾ ನೈತಿಕ ಕಳ್ಳಿ’ ಅನ್ನುತ್ತಾ ನಕ್ಕುಬಿಟ್ಟಳು ಕಣೇ ಭವಾನಿ. ನೀನೇ ಹೇಳೇ. ನಾನು ಕಳ್ಳಿ ಏನೇ? ನಂಗೆ ಖಂಡಿತ ಗೊತ್ತಿರಲಿಲ್ಲ ಕಣೇ, ಅವನ್ನು ಅಲ್ಲಿ ಒಗೆದು ಮರು ಬಳಕೆ ಮಾಡುತ್ತಾರೆ ಅಂತ. ವೇಸ್ಟ್ ಆಗಬಾರದೆಂದು ಯೋಚಿಸಿ ನಾನದನ್ನು ಮನೆಗೆ ತಂದಿದ್ದು ಕಣೇ.’
ವಿವರಿಸಿದ ಸೀತಾ ತುಂಬಾ ಅಮಾಯಕಳಾಗಿ ಕಂಡಳು. ಭವಾನಿ ಉಕ್ಕಿಬಂದ ನಗೆಯನ್ನು ತಡೆಯಲಾಗದೆ ಗೊಳ್ ಎಂದು ನಗುತ್ತಾ ಅವಳನ್ನು ಪ್ರೀತಿಯಿಂದ ತಬ್ಬಿದಳು.
ನೀವೇ ಹೇಳಿ, ಸೀತಾ ನಿಜಕ್ಕೂ ಕಳ್ಳಿಯೇ?
ಶೀಲಾ ಅರಕಲಗೂಡು