ನಗರದ ರಸ್ತೆಗಳಲ್ಲಿ ತಲೆಯಮೇಲೆ ಮೂಟೆ ಹೊತ್ತು ಹೋರಾಟ ಹೆಂಗಸನ್ನು ಕರೆದು ಕೇಳಿದರೆ ಮೂಟೆಯ ತುಂಬ ಹೊನಗೊನ್ನೆ ಸೊಪ್ಪನ್ನು ಮಾರುತ್ತಾ ಹೊರಟಿದ್ದಳು. ಕೆಲವರಿಗಷ್ಟೇ ಪರಿಚಯ ಈ ಸೊಪ್ಪು. ಹಳ್ಳಿಯ ಸೊಗಡಿನಲ್ಲಿ ಬೆಳದವರಿಗೆ ಇದರ ಪರಿಚಯ ಹೆಚ್ಚು.
“ಆಲ್ಟರ್ ನ್ಯಾಂಥೀರ ಸೆಸ್ಸಿಲಿಸ್” ಎಂಬ ವೈಜ್ಞಾನಿಕ ಹೆಸರುಳ್ಳ ಈ ಸಸ್ಯವು ಕೆಸರು ನೀರಿನಲ್ಲಿ ಬೆಳೆಯುತ್ತದೆ. ತಿಳಿಹಸುರಿನ ಎಲೆಯ ಕಾಂಡ ಹೊಂದಿದ್ದು, ಪುಟ್ಟ ಎಲೆಗಳು ಹಾಗು ಬಿಳಿಯ ಹೂಗಳಿಂದ ಕೂಡಿರುತ್ತದೆ. ಕೆಸರಿನಲ್ಲಿ ಬಳ್ಳಿಗಳಂತೆ ತೇಲುತ್ತಾ ಬೆಳೆಯುತ್ತದೆ. ಕೆರೆ ಹೊಂಡಗಳ ದಂಡೆಗಳೇ ಈ ಸಸ್ಯಕ್ಕೆ ತಕ್ಕ ಸ್ಥಳ.
ಎಲ್ಲ ಹಸಿರು ಸಸ್ಯಗಳಲ್ಲಿ ನಮಗೆ ತಿಳಿದಂತೆ ಹೇರಳವಾಗಿ ವಿಟಮಿನ್ ‘ಎ’ ಐರನ್ ಹಾಗು ಆಂಟಿ ಆಕ್ಸಿಡಂಟ್ (ಉತ್ಕರ್ಷಣ ನಿರೋಧಕ) ಇರುತ್ತದೆ. ಪೌಷ್ಟಿಕಾಂಶ ಹೇರಳವಾಗಿ ತುಂಬಿದ್ದರು ತಮ್ಮದೇ ಪ್ರಾಮುಖ್ಯತೆ ವೈವಿದ್ಯತೆಯನ್ನು ಹೊಂದಿರುತ್ತದೆ. ಹೊನಗೊನ್ನೆ ಸೊಪ್ಪಿನ ಪಲ್ಯವನ್ನು ಜ್ವರ ಬಿಟ್ಟ ನಂತರ ಸೇವಿಸುವುದರಿಂದ ರುಚಿಕೆಟ್ಟ ಬಾಯಿಗೆ ರುಚಿಯುಂಟು ಮಾಡುತ್ತದೆ. ಈ ಸೊಪ್ಪಿನ ರಸವನ್ನು ಕಣ್ಣಿಗೆ ಹಾಕಿದರೆ ದೃಷ್ಟಿ ದೋಷ ನಿವಾರಣೆಯಾಗುವುದು ಎಂಬ ನಂಬಿಕೆಯುಂಟು ಅಲ್ಲದೆ ಇದರ ಸೇವನೆಯು ಕೂಡ ಕಣ್ಣಿನ ಆರೋಗ್ಯಕ್ಕೆ ಬಹಳ ಸಹಕಾರಿ.
ಉರಿ ಮೂತ್ರದ ಸಮಸ್ಯೆ ಸ್ತ್ರೀಯರಲ್ಲಿ ಮುಪ್ಪಿನ ಸಮಸ್ಯೆಯನ್ನು ಸರಿಪಡಿಸಲು ಬಹಳ ಸಹಾಯಕಾರಿಯಾಗಿದೆ. ದೇಹದ ಮೇಲಿನ ಬೆಂದ ಗಾಯಗಳಿಗೆ ಈ ಸಸ್ಯದ ರಸವನ್ನು ಲೇಪಿಸಿದರೆ ಉರಿ ಕಡಿಮೆಯಾಗಿ ಬೇಗ ಗುಣವಾಗುತ್ತದೆ. ಈ ಸಸ್ಯದ ರಸವನ್ನು ಎಣ್ಣೆಯಲ್ಲಿ ಕುದಿಸಿ ತಲೆಗೆ ಹಚ್ಚುವುದರಿಂದ ದೇಹವನ್ನು ತಂಪುಗೊಳಿಸಿ, ಮೆದುಳು ಹಾಗು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಕಣ್ಣಿನ ಸಮಸ್ಯೆಗಳಿಗೆ ಬಹಳ ಉಪಯುಕ್ತವಾಗಿರುವುದರಿಂದ ಈ ಸೊಪ್ಪಿನಿಂದ ಕಾಡಿಗೆಯನ್ನು ಸಹ ಮಾಡಲಾಗುತ್ತದೆ. ರಕ್ತ ಹೀನತೆ ಸಮಸ್ಯೆಯನ್ನು ಈ ಸೊಪ್ಪಿನ ಸೇವನೆಯಿಂದ ದೂರ ಮಾಡಬಹುದು.
ಹೊನಗೊನ್ನೆ ಸೊಪ್ಪಿನಲ್ಲಿ ಹತ್ತಾರು ಔಷಧೀಯ ಗುಣಗಳಿರುವುದರಿಂದ ಈ ಸೊಪ್ಪನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ನಮ್ಮ ಆರೋಗ್ಯಕ್ಕೆ ಶ್ರೀರಕ್ಷೆ ಇದ್ದಂತೆ.
ಶಿಲ್ಪ