ಹೊಯ್ಸಳರ ಕಾಲದ ಸೌಮ್ಯ ಕೇಶವ
ಪುರಾತನ ಕಾಲದ ಎಷ್ಟೋ ಹಿಂದೂ ದೇವಾಲಯಗಳು ಇಂದಿಗೂ ಪ್ರಸಿದ್ಧ. ಅಳಿವಿನಂಚಿನಲ್ಲಿ ಇರುವ ಇನ್ನೂ ಅನೇಕ ದೇವಾಲಯಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ನಾನೀಗ ಹೇಳಲು ಹೊರಟಿರುವುದು ಅಂತಹ ಒಂದು ಪ್ರಸಿದ್ಧ ದೇವಾಲಯ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಸೌಮ್ಯಕೇಶವ ದೇವಾಲಯವು 12ನೇ ಶತಮಾನದ ಪುರಾತನ ದೇವಾಲಯ. ಹೊಯ್ಸಳರ ಕೊಡುಗೆಯಿದು. ಅತಿ ಎತ್ತರದ ಗೋಪುರಗಳನ್ನು ಹೊಂದಿರುವ ನಮ್ಮ ರಾಜ್ಯದ ದೇವಾಲಯಗಳಲ್ಲಿ ಇದೂ ಒಂದು . ರಾಜಗೋಪುರ ದ್ರಾವಿಡ ಶೈಲಿಯಲ್ಲಿ ಕಟ್ಟಲ್ಪಟ್ಟಿದ್ದು, ದೇವಾಲಯದ ವಿಶಾಲತೆ ಹಾಗೂ ಸ್ವಚತೆ ಜನರ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ನಮ್ಮ ನಾಗಮಂಗಲ ದೇವಾಲಯಗಳ ನಗರ ಎಂದೇ ಪ್ರಸಿದ್ದಿ . ಇಲ್ಲಿ ಯೋಗ ನರಸಿಂಹ, ವೀರಭದ್ರಸ್ವಾಮಿ, ನಗರೇಶ್ವರ, ಭುವನೇಶ್ವರ, ಬಸವಣ್ಣ, ಕೋಟೆ ವಿಧ್ಯಾ ಗಣಪತಿ, ಕೊಳದ ವೆಂಕಟರಮಣ ಸ್ವಾಮಿ, ಶ್ರೀ ಕೋದಂಡ ರಾಮರು, ಗ್ರಾಮದೇವತೆ ಪಡಗೊಡಮ್ಮ, ಮಾಯಮ್ಮ ಒಂದೇ ಎರಡೇ.. ಇದೇ ಈ ಊರಿನ ವಿಶೇಷತೆ. ನಾಗಮಂಗಲದಲ್ಲಿನ ಹೊಯ್ಸಳರ ಕಾಲದಲ್ಲಿ ಕಟ್ಟಲ್ಪಟ್ಟ ಎಲ್ಲಾ ಪುರಾತನ ದೇವಾಲಯಗಳು ಇಂದಿಗೂ ಉಳಿದಿರುವುದು ವಿಜಯನಗರದ ಅರಸರ ಹಿತಾಸಕ್ತಿಯಿಂದಲೇ. ಈ ಕ್ಷೇತ್ರದ ಮೂಲ ಯೋಗಾನರಸಿಂಹ, ಇದರ ಮುಂಭಾಗದ ದೇವಾಲಯವೇ ಸೌಮ್ಯಕೇಶವ ದೇವಾಲಯ.
ನಕ್ಷತ್ರಾಕಾರದ ಜಗುಲಿಯ ಮೇಲೆ ನಿರ್ಮಾಣಗೊಂಡಿರುವ ಈ ದೇಗುಲ ಹೊಯ್ಸಳ ಅರಸ ಮೊದಲನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ 1171 ರಲ್ಲಿ ನಿರ್ಮಾಣವಾಗಿದೆ. ಮುಖ್ಯ ಗರ್ಭಗುಡಿಯಲ್ಲಿ ಗರುಡಪೀಠದ ಮೇಲೆ ಆರು ಅಡಿ ಎತ್ತರದ ಕೇಶವನ ಭವ್ಯವಾದ ಶಿಲ್ಪವಿದೆ. ದೇವಾಲಯದ ಒಳಹೊಕ್ಕರೆ ಅಧ್ಭುತ ಎನಿಸುವ ವಿಜಯನಗರ ವಾಸ್ತುಶಿಲ್ಪದ ಸುಂದರ ಕೆತ್ತನೆ ಕಣ್ಮನ ಸೆಳೆಯುವಂತಿದೆ. ಮಂಟಪದ ಕೆಲವು ಕಂಬದಲ್ಲಿನ ಕೆತ್ತನೆಗೆ ಸರಿಸಾಟಿಯಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಬೇಲೂರು ಹಳೇಬೀಡು ದೇವಾಲಯಗಳನ್ನು ನೆನಪಿಸುವಂತಿದೆ.
ದೇಗುಲವು ತ್ರಿಕೂಟಾಚಲ ಎಂದರೆ ಮೂರು ಗರ್ಭಗುಡಿಗಳುಳ್ಳ ದೇಗುಲ, ಗರ್ಭಗುಡಿಯಲ್ಲಿ ಮೂರು ದೇವರುಗಳನ್ನು ಒಟ್ಟಾಗಿ ನೋಡುವ ಭಾಗ್ಯ ನಮ್ಮದು. ಮಧ್ಯಭಾಗದಲ್ಲಿ ಸೌಮ್ಯಕೇಶವ, ಎಡದ ಬದಿಯಲ್ಲಿ ವೇಣುಗೋಪಾಲಸ್ವಾಮಿ ರುಕ್ಮಿಣಿ ಸತ್ಯಭಾಮೆಯರ ಜೊತೆ ಕೊಳಲನೂದುತ್ತ ನಿಂತ ಮೂರ್ತಿ ಹಾಗು ಲಕ್ಷ್ಮಿಯನ್ನು ತೊಡೆಯ ಮೇಲೆ ಕುಳಿರಿಸಿಕೊಂಡ ನರಸಿಂಹ ಶಂಖಚಕ್ರಧಾರಿಯಾಗಿ ಕುಳಿತಿರುವ ರೀತಿ ನಿಜಕ್ಕೂ ಆಕರ್ಷಕ.
ಇಲ್ಲಿನ ಕೇಶವ ದೇವರು ಮಂದಸ್ಮಿತ, ಬಲಮೇಲುಗೈಯಲ್ಲಿ ಶಂಖ, ಎಡ ಮೇಲುಗೈಯಲ್ಲಿ ಚಕ್ರ, ಎಡಗೈಯಲ್ಲಿ ಗದೆ ಹಾಗೂ ಬಲಗೈಯಲ್ಲಿ ಪದ್ಮವನ್ನು ಹಿಡಿದ ಕೇಶವನ ಮುಖದಲ್ಲಿನ ಸೌಮ್ಯ ಮಂದಹಾಸದಿಂದ ಕೂಡಿದೆ ಆದ್ದರಿಂದಲೇ ಸೌಮ್ಯಕೇಶವ ಎಂದು ಪ್ರಸಿದ್ದಿ. ದೇಗುಲದಲ್ಲಿ ವಿಷ್ವಕ್ಸೇನ, ವೈಕುಂಠನಾರಾಯಣ ಮೊದಲಾದ ಮೂರ್ತಿಗಳಲ್ಲದೆ ಆಳ್ವಾರರ ಪ್ರತಿಮೆಗಳೂ ಇವೆ. ಲಕ್ಷ್ಮಿ ದೇವಿಯು ಸೌಮ್ಯ ನಾಯಕಿ ಎಂಬ ಹೆಸರಿನಲ್ಲಿ ಪಕ್ಕದ ದೇಗುಲದಲ್ಲಿ ಆಸೀನಳಾಗಿದ್ದಾಳೆ. ನವರಂಗದ ಕಂಬಗಳಿಂದ ಆಕರ್ಷಕವಾಗಿರುವ ದೇವಾಲಯದ ಒಳಬಾಗದಲ್ಲಿ ಅನೇಕ ಶಂಕುಗಳನ್ನು ಕೆತ್ತಲಾಗಿದ್ದು ಮುಖ್ಯ ಶಂಖವೊಂದನ್ನು ಮಂಡಲಾಕಾರದಲ್ಲಿ ಬಳಸಿದ ಸರ್ಪದ ಕೆತ್ತನೆಯಿಂದಾಗಿ ಊರಿಗೆ ನಾಗಮಂಡಲ ಅಥವಾ ನಾಗಮಂಗಲ ಎಂದು ಹೆಸರು ಬಂದಿದೆ ಎನ್ನುತ್ತಾರೆ. ಇದೇ ಇಲ್ಲಿನ ದೇವಾಲಯದ ವಿಶೇಷತೆ ಹಾಗೂ ದೇವಾಲಯದ ಕೇಂದ್ರಬಿಂದು ಎನ್ನಬಹುದು.
ವೈಕುಂಠ ಏಕಾದಶಿ, ನವರಾತ್ರಿ, ಶ್ರಾವಣ ಮಾಸದಂದು ವಿಶೇಷ ಪೂಜೆ, ಅಲಂಕಾರ ನೋಡುವುದೇ ನಮ್ಮ ಪುಣ್ಯ. ಇಲ್ಲಿ ದರ್ಶನ ಪಡೆದವರಿಗೆ ಬರಿ ಕೈಲಿ ಹಿಂತಿರುಗುವ ಮಾತೇ ಇಲ್ಲ. ಮುಖ್ಯವಾಗಿ ಭಕ್ತಿಯಿಂದ ಪೂಜಿಸಿದರೆ ನಾಗದೋಷ, ಸರ್ಪದೋಷ, ಶಾರೀರಿಕ ವ್ಯಾಧಿ, ಸಂತಾನ ಭಾಗ್ಯ, ಕುಜದೋಷ, ಮನೋವ್ಯಾಧಿ, ದುರ್ಬಲತೆ ಎಲ್ಲವನ್ನೂ ನಿವಾರಿಸುವ ಶಕ್ತಿ ಈ ಸ್ಥಳದಲ್ಲಿ ನೆಲೆಸಿರುವ ಸೌಮ್ಯಕೇಶವನಿಗಿದೆ ಎಂದು ಭಕ್ತರ ಅಚಲ ನಂಬಿಕೆ. ಅಂಥ ಹಲವಾರು ಉದಾಹರಣೆಗಳು ಕೊಡುತ್ತಾರೆ ಇಲ್ಲಿನ ದೇವಾಲಯಕ್ಕೆ ಹೋಗಿ ಬಂದವರು. ಒಟ್ಟಿನಲ್ಲಿ ನಿತ್ಯದ ಜೀವನ ಜಂಜಾಟದ ಮಧ್ಯೆ ಎಲ್ಲಾ ಕಷ್ಟಗಳನ್ನೂ ಪರಿಹರಿಸುವ ನಮ್ಮ ಸೌಮ್ಯ ಕೇಶವನ ಒಮ್ಮೆ ಕಣ್ತುಂಬಿಕೊಳ್ಳಿ.
ಶೈಲಾ
ಬೆಂಗಳೂರು
1 Comment
ಅತ್ಯದ್ಬುತ ದೇಗುಲ ಹಾಗು ವರ್ಣನೆ !!