ಹೊಸ ಭಾವಲಾಸ್ಯ
ತಾಳ ತಪ್ಪದ ಮೌನರಾಗಕೆ
ಮನವು ಮೂಕಭಾವ ತಳೆದಿದೆ!
ಕುಳಿರ್ಗಾಳಿಯ ದಾಳಿಯಲೂ…
ಚಿಗುರಿದೆಲೆಗಳು ನಗುತಿವೆ!!
ಬತ್ತಿದೆದೆಯಲಿ ಹೊಸ ಕನಸು
ಗರಿಗೆದರಿ ಚೈತನ್ಯವು ಮೂಡಿದೆ!
ರೆಂಬೆಕೊಂಬೆಗಳಲಿ ನಂಬಿಕೆಯುಕ್ಕಿಸಿ..
ಹಚ್ಚಹಸಿರು ತಾ ನಲಿದಿದೆ!!
ದಿಕ್ಕು ತಪ್ಪಿಸುವ ಕತ್ತಲೆಯಲಿ
ನಂದದ ಬೆಳಕು ಉಳಿಯಲಿ!
ಅವನೆಣಿಸಿದಾಗ ಪಯಣ ನಿಲುವುದು..
ಜಡ ಬದುಕಿನ ನಿಲ್ದಾಣದಲಿ!!
ವಿಸ್ತರಿಸಿದ ಅಂಬರದ ಕ್ಷಿತಿಜದೊಳು
ಮುಚ್ಚಿದ ಕಂಗಳಲಿ ಅಡಗಿದೆ ಬೆಳಕು!
ಸತ್ಯದ ನಿಲುವಿಗೆ ನಿಜದೊಳು..
ಮನತೆರೆದು ನೋಡಲು ನಲ್ಮೆಯ ಬದುಕು!!
ಸುಮನಾ ರಮಾನಂದ