ಹೊಸ ಸಿನಿಮಾ V/S ಹಳೆ ಸಿನಿಮಾ

ಸಿನಿಮಾ ಎಂದರೆ ಎಲ್ಲರಿಗೂ ಇಷ್ಟವಾದಂತಹ ಹಾಗೂ ಅತಿ ಶೀಘ್ರವಾಗಿ ಜನಗಳಿಗೆ ಮನ ಮುಟ್ಟುವ ಒಂದು ಮಾಧ್ಯಮ. ಜನರ ಎಷ್ಟೋ ಕನಸುಗಳಿಗೆ ಹಾಗೂ ಕಲಾಭಿರುಚಿಯ ಕೃಷಿಗೆ ನೀರು ಹಾಕಿ ಪೋಷಿಸಿರುವಂಥ ಒಂದು ಅದ್ಭುತ ವೇದಿಕೆ. ಸಿನಿಮಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಸಿನೆಮಾವನ್ನು ಹಾಗೂ ಅದರಲ್ಲಿ ಪಾತ್ರ ವಹಿಸುವ ಕಲಾವಿದರನ್ನು ಆರಾಧಿಸದವರಿಲ್ಲ. ಎಷ್ಟೋ ಪಾತ್ರಗಳನ್ನು ತಾನೇ ಎನ್ನುವ ಹಾಗೆ ಅನುಭವ ಪಡೆಯುತ್ತಾ ಖುಷಿ ಪಡುತ್ತಾರೆ. ಪಾತ್ರ ಅತ್ತಾಗ ಅಳುವಂತೆ ಮಾಡುವುದು. ಪಾತ್ರ ನಕ್ಕಾಗ ನಗುವಂತೆ ಮಾಡುವುದೆ ಸಿನಿಮಾ.

ಹಳೇ ಸಿನಿಮಾಗಳ ಕಾಲವನ್ನು ‘’ಸುವರ್ಣ ಯುಗ’’ ಅನ್ನುವಂಥ ಕಾಲ. ಒಂದೊಂದು ಸಿನಿಮಾವು ಜೀವನ ಪಾಠವನ್ನು ಕಲಿಸಿ ಕೊಡುವುದಾಗಿತ್ತು. ಸಿನಿಮಾ ಹಾಗೂ ಕಲಾವಿದರನ್ನು ಮಾದರಿಯಾಗಿಸಿಕೊಂಡು ಬದುಕು ಸಾಗಿಸಿದ ಹಾಗೂ ಬದುಕು ಬದಲಾಯಿಸಿಕೊಂಡ ಉದಾಹರಣೆಗಳನ್ನು ಕಾಣಬಹುದು. ಕುಟುಂಬ ಸಹಿತ ಒಟ್ಟಿಗೆ ಕೂತು ನೋಡುವಂತಹ ಚಿತ್ರ ಮೂಡಿ ಬರುತ್ತಿತ್ತು. ಹಳೇ ಸಿನಿಮಾಗಳ ಹಾಡುಗಳನ್ನು ಕೇಳಲು ಎಷ್ಟೊಂದು ಇಂಪು. ಮನಸ್ಸಿಗೆ ತಂಪು. ಅದರ ಸಾಲುಗಳಲ್ಲಿನ ಅದ್ಭುತವಾದ, ನೊಂದ ಮನಸ್ಸಿಗೆ ಮುದ ನೀಡುವಂತಹ ಹಾಡುಗಳಾಗಿತ್ತು. ಅರ್ಥಬದ್ದವಾದ ಜೀವನಕ್ಕೆ ಒಂದು ಪಾಠವಾಗಿತ್ತದು.

ಎಷ್ಟೋ ಯುವಕರು ಸಿನಿಮಾ ಹುಚ್ಚಿನಿಂದ ಮನೆ ಬಿಟ್ಟು ಬಂದು ಎಷ್ಟೋ ಕಷ್ಟಗಳನ್ನು ಅನುಭವಿಸಿ ಇಂದು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಅಷ್ಟೊಂದು ಸೆಳೆತ ಸಿನೆಮಾಗಿತ್ತು. ಕಲಾವಿದರ ಉಸಿರಿನೊಂದಿಗೆ ಸಿನಿಮಾ ಬೆರೆತು ಹೋಗಿದೆ. ಕಲಾವಿದರನ್ನು ತಮ್ಮ ಆರಾಧ್ಯ ದೈವ ಎಂದು ನಂಬಿರುವ ಅಸಂಖ್ಯಾತ ಅಭಿಮಾನಿಗಳು ನಮ್ಮ ನಡುವೆಯೇ ಇದ್ದಾರೆ. ತಮ್ಮದೇ ಆದ ಅಭಿಮಾನಿ ಸಂಘಗಳನ್ನು ಕಟ್ಟಿಕೊಂಡು ತಮ್ಮ ಕಲಾವಿದನ ಹೆಸರಿನಲ್ಲಿ ಉತ್ತಮ ಸಾಮಾಜಿಕ ಕಾರ್ಯಗಳನ್ನು ಮಾಡುವವರನ್ನು ಕಾಣಬಹುದಾಗಿದೆ.

ಹಳೇ ಕಾಲದ ಸಿನಿಮಾ ನೋಡಲು ಹೆತ್ತವರೇ ಮಕ್ಕಳನ್ನು ಕರೆದುಕೊಂಡು ಹೋಗಿ ಸಿನಿಮಾ ತೋರಿಸುತ್ತಿದ್ದರು. ಆದರೆ ಸಿನಿಮಾ ನೋಡಿ ನಮ್ಮ ಮಕ್ಕಳು ಹಾಳಾದರು ಎನ್ನುವ ಮಟ್ಟಕ್ಕೆ ಸಿನಿಮಾ ಬಂದು ನಿಂತಿದೆಯೆಂದರೆ ಸಿನಿಮಾ ಯಾವ ಮಟ್ಟಕ್ಕೆ ಬಂದಿದೆ ಎಂದು ನಾವು ಊಯಿಸಬಹುದು. ಇಂದು ಮಕ್ಕಳನ್ನು ಕರೆದುಕೊಂಡು ಹೋಗಬೇಕಾದರೆ ನೂರು ಸಲ ಯೋಚನೆ ಮಾಡುವಂತಹ ಪರಿಸ್ಥಿತಿ. ಇವಾಗಿನ ಬಾಲಾಪರಾಧ ಕೃತ್ಯಗಳಿಗೆ ಸಿನೆಮಾವು ಒಂದು ಕಾರಣ ಆಗಿರಬಹುದೇನೋ.

ರಾಜಕುಮಾರ್ ಅಭಿನಯಿಸಿದಂತಹ ಬಂಗಾರದ ಮನುಷ್ಯ ಸಿನಿಮಾದಿಂದ ಪ್ರೇರಿತರಾದ ಎಷ್ಟೊಂದು ಸರಕಾರಿ ನೌಕರರು ಹಾಗೂ ನಗರಕ್ಕೆ ವಲಸೆ ಬಂದಂತಹ ಜನರು ಮರಳಿ ತಮ್ಮೂರಿಗೆ ಹೋಗಿ ಕೃಷಿಯಲ್ಲಿ ಸಾಧನೆ ಮಾಡಿರುವಂತಹ, ಹಾಗೇನೇ ವಿಷ್ಣುವರ್ಧನ್ ಅಭಿನಯಿಸಿದಂತಹ ಮುತ್ತಿನ ಹಾರ ಸಿನಿಮಾಕ್ಕೆ ಪ್ರೇರಿತರಾಗಿ ಸೈನ್ಯಕ್ಕೆ ಸೇರಿರುವ ಉದಾಹರಣೆಗಳು ನಮ್ಮ ಮುಂದಿವೆ.

ಕಾಲ ಕಳೆದಂತೆ ಸಿನಿಮಾ ಜಗತ್ತಿನಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಾ ಬಂತು. ಜನರ ಅಭಿರುಚಿಗೆ ತಕ್ಕಂತೆ ಬದಲಾಯಿತೋ ಅಥವಾ ಇನ್ನೇನಾದರೂ ಬೇರೆ ಕಾರಣಗಳು ಇರಬಹುದೇನೋ. ನಂತರ ಬಂದಂತಹ ಕೆಲವೊಂದು ಸಿನಿಮಾಗಳು ಸಮಾಜ ಘಾತುಕ ಚಟುವಟಿಕೆಗಳನ್ನು ಎತ್ತಿ ಹಿಡಿಯುವ ಚಿತ್ರಗಳಾಗಿ ಮೂಡಿ ಬಂದವು. ಜನರ ಇಷ್ಟ ಕಷ್ಟಗಳ ನಡುವೆ ಸಿನಿಮಾ ಒಂದು ವ್ಯಾವಹಾರಿಕವಾಗಿ ಪರಿಣಮಿಸಿತು. ಕುಟುಂಬ ಸಹಿತ ನೋಡಬೇಕಾಗಿರುವಂತಹ ಚಿತ್ರಗಳು ಗಣನೀಯವಾಗಿ ಇಳಿಮುಖವಾಯಿತು. ಮಕ್ಕಳ ಮೇಲೆ ಹೆಚ್ಚಿನ ಅಡ್ಡ ಪರಿಣಾಮ ಬೀರುವಂತಹ ಚಿತ್ರಗಳು ಬಿತ್ತರಿಸಲ್ಪಡುತ್ತಿದೆ.

ಕಾಲ ಬದಲಾಗಿರಬಹುದು, ಆದರೆ ಮನುಷ್ಯನ ಭಾವನೆಗಳು ಬದಲಾಗಿಲ್ಲ. ಮನುಷ್ಯನ ಜೀವನ ತಾಂತ್ರಿಕವಾಗಿರಹುದು ಆದರೆ ಭಾವನೆಗಳು ತಾಂತ್ರಿಕವಾಗಿಲ್ಲ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಂಥ ಚಿತ್ರಗಳ ಅಗತ್ಯವಿದೆ. ”ಬೆಳೆಯುವ ಸಿರಿ ಮೊಳಕೆಯಲ್ಲಿಯೇ’ ಎನ್ನುವಂತೆ, ಹೆಚ್ಚಿನ ಮಕ್ಕಳು ಸಿನೆಮಾ ಹಾಗೂ ಸಿನಿಮಾ ಕಲಾವಿದರನ್ನು ಅನುಸರಿಸುತ್ತಾರೆ. ಹಾಗಿದ್ದಾಗ ಸಿನಿಮಾ ಹಾಡುಗಳಾಗಲಿ ಸಿನಿಮಾದ ಕತೆಗಳಾಗಲಿ ಮಕ್ಕಳಿಗೆ ದಾರಿದೀಪವಾಗಿರಬೇಕೇ ಹೊರತು ಅವರ ಮೇಲೆ ದುಷ್ಪರಿಣಾಮ ಬೀರುವ ಹಾಗಿರಬಾರದು. ಮಹಿಳೆಯರು ಕುಟುಂಬ ಸಮೇತ ನೋಡುವಂಥ ಸಿನೆಮಾಗಳ ಅವಶ್ಯಕತೆಯಿದೆ.

ಇಂತಹ ಸಿನೆಮಾಗಳ ನಡುವೆ ಕೆಲವೊಂದು ಚಿತ್ರಗಳು ಸಮಾಜಮುಖಿಯಾಗಿ ಮೂಡಿ ಬರುವುದು ಹಳೇ ಸಿನೆಮಾ ಅಭಿಮಾನಿಗಳಿಗೆ ಕೊಂಚ ನೆಮ್ಮದಿ. ಜನರ ಅಭಿರುಚಿಯ ಸಿನಿಮಾಗಳು ಹೆಚ್ಚಾಗಲಿ. ಹಳೇ ಕಾಲದಂತಹ ಸಿನಿಮಾಗಳು ಮುಂದಕ್ಕೆ ಕಾಣುವಂತಾಗಲಿ. ಇಂತಹ ಒಂದು ಸಿನಿಮಾ ನೋಡಿ ನಾನು ಒಬ್ಬ ಆದರ್ಶ ವ್ಯಕ್ತಿಯಾದೆ ಎನ್ನುವ ಮಟ್ಟಿಗೆ ನಮ್ಮ ಚಿತ್ರ ರಂಗ ಬೆಳೆಯಲಿ. ಕಲಾವಿದನಿಗೂ ವೀಕ್ಷಕನಿಗೂ ಒಂದು ಭಾವನಾತ್ಮಕ ಸಂಬಂಧವೇರ್ಪಡುವಂಥಹ ಚಿತ್ರಗಳು ಮೂಡಿ ಬರಲಿ.

ಒಬ್ಬ ಕಲಾವಿದ ಅವನ ಪಾತ್ರಗಳಿಂದನೇ ಜನರಿಗೆ ಹತ್ತಿರವಾಗುತ್ತಾ ಹೋಗುತ್ತಾರೆ. ಅದಕ್ಕೆ ಉತ್ತಮ ಉದಾಹರಣೆ ಇತ್ತೀಚೆಗೆ ನಮ್ಮನ್ನಗಲಿದ ಪುನೀತ್ ರಾಜಕುಮಾರ್ ಸಾಕ್ಷಿ. ಅವರ ಎಲ್ಲಾ ಸಿನಿಮಾಗಳು ಕುಟುಂಬ ಸಹಿತ ನೋಡುವಂತಹ, ಸಾಮಾಜಿಕ ನ್ಯೂನತೆಗಳನ್ನು ಎತ್ತಿ ತೋರಿಸುತ್ತಾ, ಯುವ ಸಮೂಹಕ್ಕೆ ಮಾದರಿಯಾಗುವಂತ ಚಿತ್ರಗಳಲ್ಲಿ ನಟಿಸುತ್ತಿದ್ದರು. ಬರಿ ಸಿನಿಮಾದಲ್ಲಿ ಅಲ್ಲದೆ ನಿಜ ಜೀವನದಲ್ಲೂ ಎಲ್ಲರಿಗೂ ಅವರೊಬ್ಬ ಆದರ್ಶ ವ್ಯಕ್ತಿಯಾಗಿದ್ದರು. ನಿಜ, ಅಂಥವರನ್ನು ಕಳೆದುಕೊಂಡಂತಹ ಚಿತ್ರರಂಗಕ್ಕೂ, ಅಭಿಮಾನಿ ಬಳಗಕ್ಕೂ, ತುಂಬಲಾರದ ನಷ್ಟವೇ ಸರಿ.

ಬದಲಾವಣೆ ಬಯಸುತ್ತಾ…

ಸೌಮ್ಯ ನಾರಾಯಣ್

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Related post

1 Comment

  • Very nice article

Leave a Reply

Your email address will not be published. Required fields are marked *