ಹೋಪ್ – ಭರವಸೆಯ ಬೆಳಕು
ಸಿನೆಮಾ ನಿರ್ದೇಶಕನಾಗಬೇಕೆಂಬ ಕನಸು ಹೈಸ್ಕೂಲಿನಿಂದಲೇ ಚಿಗುರಿತ್ತಾದರೂ ಅದಕ್ಕೆ ಗೊಬ್ಬರ ಸಿಕ್ಕಿದ್ದು ಡಿಗ್ರಿಯಲ್ಲಿ. ಗೆಳೆಯರೆಲ್ಲ ಸೇರಿ ಕಿರುಚಿತ್ರ ಮಾಡಲು ಮುಂದಾದೆವು. ಹಾರರ್ ಥ್ರಿಲ್ಲರ್ ಕಥೆ ಮಾಡಿಕೊಂಡು ತಮಿಳುನಾಡಿನಲ್ಲಿರುವ ಗೆಳೆಯನ ಮನೆಯಲ್ಲಿ ಬೀಡುಬಿಟ್ಟೆವು. ಒಂದು ರಾತ್ರಿ ಮತ್ತು ಒಂದು ಬೆಳಿಗ್ಗೆಯಲ್ಲಿ ಚಿತ್ರೀಕರಣ ಮುಗಿಸಿ, ಒಂದು ವಾರದೊಳಗೆ ಎಡಿಟ್ ಮಾಡಿ ಯೂಟ್ಯೂಬಿನಲ್ಲಿ ಹರಿಯಬಿಟ್ಟು, ಅದನ್ನು ಕಾಲೇಜಿನಲ್ಲೆಲ್ಲಾ ಸುದ್ದಿ ಮಾಡಿಬಿಟ್ಟೆವು. ಈಗ ಆ ಕಿರುಚಿತ್ರ ನೋಡಿದರೆ ನನಗೇ ನಗು ಬರುತ್ತದೆ. ಏನೇನೆಲ್ಲ ಸರ್ಕಸ್ಸು ಮಾಡಿ, ಬಹಳ ಕಷ್ಟ ಪಟ್ಟು ಅದಕ್ಕಿಂತ ಹೆಚ್ಚು ಇಷ್ಟಪಟ್ಟು ಮಾಡಿದ ಕಿರುಚಿತ್ರ ಅದು. ಅಲ್ಲಿಂದ ನನ್ನ ಗುರಿ ಸ್ಥಿರವಾಗುತ್ತಾಹೋಯಿತು.
ಡಿಗ್ರಿ ಮುಗಿದ ಬಳಿಕ ರಂಗಭೂಮಿಗೆ ಹೋಗು ಎಂದು ಸಲಹೆ ನೀಡಿದ ಪ್ರಿಯ ಪ್ರಾಚಾರ್ಯರೊಬ್ಬರ ಮಾತಿನಂತೆ ರಂಗಶಿಕ್ಷಣಕ್ಕೆ ಅರ್ಜಿ ಹಾಕಿದೆ. ಮೈಸೂರು ರಂಗಾಯಣದಲ್ಲಿ ಆಯ್ಕೆಯಾಗಲಿಲ್ಲ. ನಂತರ ಡಿಪ್ಲೋಮಾ ಇನ್ ಫಿಲ್ಮ್ ಮೇಕಿಂಗ್ ಕಲಿಯಲು ನಿರ್ಧರಿಸಿದೆ. ಎಷ್ಟು ಹೇಳಿದರೂ ನನ್ನ ನಿರ್ಧಾರವನ್ನು ನಾನು ಬದಲಾಯಿಸುವುದಿಲ್ಲ ಎಂದು ಗೊತ್ತಾದಮೇಲೆ, ಮನೆಯವರು ಒಂದು ಲಕ್ಷ ಸಾಲ ಮಾಡಿ ಫೀಸು ಕಟ್ಟುವುದಾಗಿ ಒಪ್ಪಿಕೊಂಡರು. ಬಿಡದಿಯ ಬಳಿ ಇರುವ ಫಿಲ್ಮ್ ಸಿಟಿಯಲ್ಲಿ ಅರ್ಜಿ ಹಾಕಲು ಹೋಗಿದ್ದೆ. ನನ್ನ ದುರಾದೃಷ್ಟಕ್ಕೆ ಆ ವರ್ಷದಿಂದಲೇ ಆ ಶಾಲೆಯನ್ನು ಮುಚ್ಚಲು ನಿರ್ಧರಿಸಿದ್ದರು. ಯಾವುದೋ ಹಳೇ ಪೆಂಡಿಂಗ್ ಕೇಸಿನ ಮೇಲೆ ಸಂಸ್ಥೆ ನಿಂತುಹೋಯಿತು. ದಾರಿ ಕಾಣದೆ ಸಾಣೇಹಳ್ಳಿಯಲ್ಲಿ ರಂಗಶಿಕ್ಷಣಕ್ಕೆ ಅರ್ಜಿ ಹಾಕಿ ಸಂದರ್ಶನವನ್ನೂ ಕೊಟ್ಟೆ. ಅದೇನು ಅದೃಷ್ಟವೋ.. ನಾನು ಅಲ್ಲಿಗೇ ಸೇರಬೇಕು ಅಂತ ಇತ್ತೇನೋ.. ಆಯ್ಕೆಯಾಗಿಬಿಟ್ಟೆ. ಒಂದು ವರ್ಷ ರಂಗಶಿಕ್ಷಣದ ಜೊತೆಗೆ ಕರ್ನಾಟಕದೆಲ್ಲೆಡೆ ರಂಗಸಂಚಾರ ಮಾಡಿ ನಾಟಕ ಪ್ರದರ್ಶನ ಕೊಟ್ಟೆ. ಕೊನೆಗೂ ಅವರು ಕಲಿಸಿದ್ದನ್ನು ಕಲಿಯದೆ ಒಳ್ಳೆ ನಟ ಅಂತೂ ಆಗಲೇ ಇಲ್ಲ. ನಾನು ಅಂದುಕೊಂಡದ್ದನ್ನು ಕಲಿತು ಒಳ್ಳೆಯ ಹೆಸರಿನೊಂದಿಗೆ ಅಲ್ಲಿಂದ ಹೊರಬಿದ್ದೆ.
ಪುಸ್ತಕಗಳನ್ನು ಓದುತ್ತಾ ಆರಾಮಾಗಿ ದಿನ ಕಳೆಯುತ್ತಿದ್ದೆ. ಒಂದೆರಡು ವಾರ ಮನೆಯಲ್ಲಿ ಎಲ್ಲ ಉಪಚಾರಗಳು ಚೆನ್ನಾಗಿಯೇ ನಡೆದವು. ಬರುಬರುತ್ತಾ ಬೆಂಗಳೂರಲ್ಲಿ ಕೆಲ್ಸ ಹುಡ್ಕೋಕೆ ಯಾವಾಗ್ ಹೋಗ್ತಾನೆ ಅಂತ ಕೇಳೋ ಎಲ್ಲಾ ಸೂಚನೆಗಳು ನನಗೆ ನಮ್ಮ ಮನೆಯವರಿಂದ ಸಿಕ್ಕವು. ಅಕ್ಕಪಕ್ಕದ ಮನೆಯವರ ಮುಖದಲ್ಲೂ ನನಗೆ ಈ ಪ್ರಶ್ನೆಗಳು ಕಾಣುತ್ತಿದ್ದದ್ದು ಅಷ್ಟೇ ಸಹಜವಾಗಿತ್ತು. ಅವರು ಬಾಯಿಬಿಟ್ಟು ಕೇಳುವ ಮುಂಚೆ ನಾನೇ ಎಚ್ಚೆತ್ತುಕೊಂಡು ಫೇಸ್ಬುಕ್ ಮುಖಾಂತರ ನಿರ್ದೇಶಕರನ್ನ ಹುಡುಕಲು ಪ್ರಾರಂಭಿಸಿದೆ. ನನ್ನದೊಂದು ಪ್ರೊಫೈಲ್ ಮಾಡಿ ಏಳೆಂಟು ಜನರಿಗೆ ಕಳಿಸಿದೆ. ಅದರಲ್ಲಿ ಮೊದಲಿಗೆ ಪ್ರತಿಕ್ರಿಯಿಸಿದವರು ಅಂಬರೀಷ. ಎಂ ಎಂಬ ಭರವಸೆಯ ಯುವ ನಿರ್ದೇಶಕ. ತಕ್ಷಣವೇ ಭೇಟಿಯಾಗಲು ಕರೆದರು. ಒಂದೇ ಭೇಟಿಗೆ ನನ್ನ ಹಿನ್ನೆಲೆ ತಿಳಿದು ಮುಂದಿನ ವಾರದಿಂದಲೇ ಕೆಲಸ ಶುರುಮಾಡೋಣ ಎಂದು ನನ್ನ ಉತ್ಸಾಹಕ್ಕೆ ಬಲ ಕೊಟ್ಟರು. ನನಗೋ ಎಲ್ಲಿಲ್ಲದ ಖುಷಿ. ಕೆಲಸಕ್ಕೆ ಸುಮಾರು ವರ್ಷಗಳಿಂದ ಅಲೆಯುತ್ತಿರುವವರ ಮಧ್ಯ ನನಗೆ ಇಷ್ಟು ಬೇಗ ಕೆಲಸ ಸಿಕ್ಕಿತ್ತಲ್ಲಾ ಎಂದು ಉಬ್ಬಿದೆ. ಆದರೂ ಈ ಕೆಲಸ ಅಷ್ಟು ಸುಲಭವಾಗಿ ನನಗೆ ಸಿಕ್ಕಿರಲಿಲ್ಲ ಎಂದು ತಡವಾಗಿ ರಿಯಲೈಸ್ ಆದೆ.
ರಂಗ ಕಲಾವಿದ, ಕಿರುಚಿತ್ರಗಳನ್ನು ಮಾಡಿದ್ದೆ, ವಿಜ್ಞಾನ ಪದವಿ ಪಡೆದ ವಿದ್ಯಾರ್ಥಿ, ಕನ್ನಡ ಹಾಗೂ ಎನ್ ಎಸ್ ಎಸ್ ತಂಡಗಳಲ್ಲಿ ತೊಡಗಿಕೊಂಡಿದ್ದೆ, ಸಾಹಿತ್ಯದಲ್ಲಿ ಹಿಡಿತ ಇತ್ತು, ಸಂಬಳದ ನಿರೀಕ್ಷೆ ಇರಲಿಲ್ಲ, ಮನೆಯಿಂದ ಆಫೀಸು ಐದು ಕಿ.ಮೀ ದೂರವಷ್ಟೇ.. ಇದೆಲದಕ್ಕಿಂತ ಹೆಚ್ಚಾಗಿ ಸಮಯದ ಶಿಸ್ತು, ರಜೆ ಕೇಳುತ್ತಿರಲಿಲ್ಲ, ಹಿಂದೂಮುಂದು ನೋಡದೆ ಹೇಳಿದ ಕೆಲಸಗಳನ್ನೆಲ್ಲ ಪಟ ಪಟ ಅಂತ ಮಾಡಿ ಮುಗಿಸುತ್ತಿದ್ದೆ. ಈ ಎಲ್ಲಾ ಗುಣಗಳಿಂದ ಕೆಲಸ ಅಷ್ಟು ಈಸಿಯಾಗಿ ಸಿಕ್ಕಿತು.
ಚಿತ್ರದ ಕೆಲಸ ಶುರುವಾಯ್ತು, ಒಂದೊಳ್ಳೆ ತಂಡ ರೂಪುಗೊಂಡಿತು. ಒಳ್ಳೆಯ ಕಥೆಯೂ ಇತ್ತು. ಆಗ ದಿನಕ್ಕೆ ನನಗೆ ಸಿಗುತ್ತಿದ್ದದ್ದು ನೂರು ರೂಪಾಯಿ ಕನ್ವೇಯನ್ಸ್ (ಸಾರಿಗೆ ಭತ್ಯೆ) ಮತ್ತು ಮಧ್ಯಾಹ್ನದ ಊಟ. ಕೆಲಸ ಕಲಿಯುವ ಉತ್ಸಾಹದಲ್ಲಿದ್ದ ನನಗೆ ಬೇರೆ ಯಾವ ವಿಷಯಗಳ ಮೇಲೂ ಹೆಚ್ಚು ಗಮನ ಹರಿಸಲು ಸಾಧ್ಯವಾಗಲಿಲ್ಲ. ಯಾವುದೇ ತೊಂದರೆಗಳಿಲ್ಲದೆ ಚಿತ್ರೀಕರಣವಾಯ್ತು. ಅಷ್ಟರಲ್ಲಿ ನನ್ನ ಮೊದಲನೆ ಪುಸ್ತಕ ಪ್ರಕಟಣೆಯಾಗಿ ಎಲ್ಲರಿಗೂ ನನ್ನ ಮೇಲೆ ಒಂಚೂರು ಗೌರವ ಬೆಳೆದಿತ್ತು. ಚಿತ್ರೀಕರಣ ಮುಗಿದ ಮೇಲೆ ಒಂದಷ್ಟು ದುಡ್ಡನ್ನು ನನ್ನ ಕೆಲಸದ ವೈಖರಿ ನೋಡಿ ಕೊಟ್ಟರು. ಮೊದಲ ಬಾರಿಗೆ ಅಷ್ಟು ದುಡ್ಡು ನೋಡಿ ಖುಷಿಯಾಯ್ತು. ಡಬ್ಬಿಂಗ್ ಶುರುವಾಯ್ತು ಕೆಲಸ ನಡೆಯುತ್ತಿದ್ದ ಹಾಗೆಯೇ ನಿರ್ಮಾಪಕರೊಂದಿಗೆ ಸಣ್ಣಸಣ್ಣ ವಿಚಾರಗಳಲ್ಲಿ ತಂಡದೊಂದಿಗೆ ಮನಸ್ತಾಪ ಉಂಟಾಗುತ್ತಿತ್ತು. ನಾನು ಡಬ್ಬಿಂಗ್ ಮುಗಿಯುವ ಮೊದಲೇ ತಂಡದಿಂದ ಹೊರಬಂದೆ. ಈ ಮುಂಚೆ ತಂಡದಲ್ಲಿ ಐದು ಜನ ಇದ್ದೆವು. ಕೊನೆಗೆ ಇಬ್ಬರು ಉಳಿದಿದ್ದೆವು. ನಮ್ಮಿಬ್ಬರಿಗೂ ಅದು ಮೊದಲ ಸಿನೆಮಾವಾಗಿತ್ತು. ನಾನು ಹೊರಬಂದ ತಕ್ಷಣ ಕೊರೋನಾ ಕಾರಣದಿಂದ ಬೆಂಗಳೂರಲ್ಲಿ ಲಾಕ್ ಡೌನ್ ಅನೌನ್ಸ್ ಆಯಿತು. ಈ ಮಧ್ಯೆಯೇ ಇನ್ನೊಂದು ಸಿನೆಮಾದಲ್ಲಿ ಅವಕಾಶ ದೊರೆಯಿತು. ಒಳ್ಳೆಯ ಸಂಬಳವೂ ನಿಗದಿಯಾಯ್ತು. ನನ್ನ ದಾರಿ ನನಗೆ ಅಸ್ಪಷ್ಟವಾಗಿ ಕಾಣತೊಡಗಿತು. ಆ ಸಿನೆಮಾಗೆ ನೂರೆಂಟು ತೊಂದರೆಗಳು ಶುರುವಾದವು. ಅದೇ ಸಮಯಕ್ಕೆ ನನ್ನ ಕುಟುಂಬದಲ್ಲಿ ಕೆಲವು ತೊಂದರೆಗಳಾದವು. ಹಾಗಾಗಿ ತಂಡದಿಂದ ಒಂದು ತಿಂಗಳ ರಿಲೀಫ್ ಪಡೆದುಕೊಂಡಿದ್ದೆ.
ಎಲ್ಲವೂ ಸರಿಯಾಗುವ ಹೊತ್ತಿಗೆ ಆ ಸಿನೆಮಾ ನಿಂತೋಯ್ತು ಅಂತ ಸುದ್ದಿ ಹರಿದಾಡಿತು. ಅನಂತರ ನಾನು ಸಾಹಿತ್ಯಾಸಕ್ತನಾಗಿ ಎರಡು ಪುಸ್ತಕ ಬರೆದು ಪ್ರಕಟಿಸಿದ ಕಾರಣ ನನ್ನನ್ನ ಕೆಲವರು ಯಂಗ್ ರೈಟರ್ ಎಂದು ಭರವಸೆಯಿಂದ ನೋಡತೊಡಗಿದರು. ಬಹಳ ತಂಡಗಳಿಂದ ನನ್ನನ್ನ ಕೆಲಸಕ್ಕೆ ಕರೆದರು. ಮೂರು ಚಿತ್ರಗಳಿಗೆ ಕಥೆ – ಚಿತ್ರಕಥೆಯ ವಿಷಯವಾಗಿ ಚರ್ಚಿಸಲು ಹೋಗಿದ್ದೆ. ಅದರಿಂದ ಖರ್ಚಿಗಾಗುವಷ್ಟು ಹಣವೂ ಸಿಗುತ್ತಿತ್ತು. ಮತ್ತೆ ಮೊದಲು ಕೆಲಸ ಮಾಡಿದ ನಿರ್ದೇಶಕರಿಂದ ಕರೆ ಬಂತು. ಅವರ ನಾಲ್ಕನೆಯ ಸಿನೆಮಾದಲ್ಲಿ ಶೂಟಿಂಗ್ ಗಾಗಿ ಕೆಲಸ ಮಾಡುವ ಅವಕಾಶವೂ ಸಿಕ್ಕಿತು. ಶೂಟಿಂಗ್ ಮುಗಿಸಿದ ತಕ್ಷಣ ಇನ್ನೊಂದು ಚಿಕ್ಕ ಬಜೆಟ್ ಸಿನೆಮಾಗೆ ಸಂಪೂರ್ಣ ಬರಹಗಾರನಾಗಿ ಕೆಲಸ ಮಾಡಲು ಆಯ್ದುಕೊಂಡರು. ಮತ್ತೊಂದು ಸಿನೆಮಾಗೆ ಅಸೋಸಿಯಟ್ ಡೈರೆಕ್ಟರ್ ಆಗಿ ಕೆಲಸ ಒಪ್ಪಿಕೊಂಡೆ. ಎಲ್ಲವೂ ಅಂದುಕೊಂಡಹಾಗೆ ಆಗದಿದ್ದರೂ ಕೆಲವು ನಿರೀಕ್ಷೆಯನ್ನೂ ಮೀರಿ ಸಂತೋಷ ಕೊಡುವಷ್ಟು ನೆಮ್ಮದಿ ನನಗೊದಗಿ ಬಂತು.
ಆಗಲೇ ಎರಡು ವರ್ಷವಾಗಿತ್ತು ಸಿನೆಮಾ ರಂಗಕ್ಕೆ ಬಂದು. ಮೊದಲ ಸಿನೆಮಾಗೆ ‘ಹೋಪ್’ ಎಂಬ ಶೀರ್ಷಿಕೆ ನಿಶ್ಚಯವಾಗಿತ್ತು. ನಾನು ಕೆಲಸ ಮಾಡಿದ ಸಿನೆಮಾವಾದರೂ ಕೂಡ ನನಗೂ ಅದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ನಾನಿದ್ದೆ. ಯಾಕೆಂದರೆ ಆ ಹೋಪ್ ನಿಂದಲೇ ಶುರುವಾದ ನನ್ನ ಜರ್ನಿಯಲ್ಲಿ ನನ್ನ ದಾರಿ ಬಹಳ ದೂರ ಸಾಗಿತ್ತು. ಅದಾಗಿಯೂ ಯಾವುದಕ್ಕೂ ಚಿತ್ರತಂಡ ನನ್ನನ್ನು ಕರಿಯಲೇ ಇಲ್ಲ. ಪ್ರೀಮಿಯರ್ ಶೋ.. ಪ್ರೋಮೋಷನ್ ಹೂ..ಹ್ಞೂ.. ಯಾವುದರಲ್ಲಿಯೂ ನಾನಿರಲಿಲ್ಲ. ಚಿತ್ರ ಬಿಡುಗಡೆಯಾಯಿತು. ನಿರ್ದೇಶಕರ ಮೇಲಿದ್ದ ಗೌರವದಿಂದ, ನಾನು ಕೆಲಸ ಮಾಡಿದ್ದ ಕಾರಣದಿಂದ ಮತ್ತು ಒಳ್ಳೆಯ ಕಟೆಂಟ್ ಒಳಗೊಂಡ ಸಿನೆಮಾವಾದ್ದರಿಂದ ಚಿತ್ರಮಂದಿರಕ್ಕೆ ಹೋಗಿ ಸಿನೆಮಾ ನೋಡಿ ಹೊರಬಂದು ಕರೆ ಮಾಡಿ ನಿರ್ದೇಶಕರೊಂದಿಗೆ ಚರ್ಚಿಸಿದೆ. ಒಂದು ಬಗೆಯ ಸಮಾಧಾನ ಸಿಕ್ಕಿತು.
ಚಿತ್ರ ಚೆನ್ನಾಗಿಯೇ ಮೂಡಿ ಬಂದಿತ್ತು. ಕಂಟೆಂಟ್ ಸಿನೆಮಾವಾದ್ದರಿಂದ ಹೆಚ್ಚು ತೆರೆಗಳು ಸಿಗಲಿಲ್ಲ. ಎಲ್ಲರೂ ನೋಡಬಹುದಾದ ಚಿತ್ರವಲ್ಲದಿದ್ದರೂ ಸರ್ಕಾರಿ ನೌಕರರು, ವಕೀಲ ವೃತ್ತಿಯವರು, ಜರ್ನಲಿಸಂ ವಿದ್ಯಾರ್ಥಿಗಳು, ಐಎಸ್, ಕೆಎಎಸ್ ಕನಸು ಹೊತ್ತವರು ತಪ್ಪದೆ ನೋಡಬೇಕಾದ ಸಿನೆಮಾವದು. ಕೆಲವು ರಾಜಕೀಯದ ತೆವಲುಗಳಿಗಳಿಂದ ಜನಸಾಮಾನ್ಯರಷ್ಟೇ ಅಲ್ಲದೇ ಒಬ್ಬ ಪ್ರಾಮಾಣಿಕ ಅಧಿಕಾರಿ ಕೂಡ ತನ್ನ ಕೆಲಸದ ಪಾರದರ್ಶಕತೆಯನ್ನು ನಿರೂಪಿಸಿಕೊಳ್ಳಲು ಎಷ್ಟೆಲ್ಲಾ ಒದ್ದಾಟ ಮಾಡಬೇಕು? ಅದರಿಂದ ಯಾರ್ಯಾರಿಗೆ ಏನೇನು ತೊಂದರೆಗಳಾಗುತ್ತವೆ? ಇದರಿಂದ ನಿಷ್ಠಾವಂತರಾಗಿ ಕೆಲಸ ಮಾಡುವ ಅಧಿಕಾರಿಗಳ ಮನಸ್ಥಿತಿ ಹೇಗೆಲ್ಲ ಪರದಾಡುತ್ತದೆ ಎಂದು ಅಚ್ಚುಕಟ್ಟಾಗಿ ತೋರಿಸುವ ಚಿತ್ರವಾಗಿತ್ತು. ಸಿನೆಮಾ ಕ್ವಾಲಿಟಿಯೂ ಅದ್ಭುತ!…
ತಾಂತ್ರಿಕ ದೃಷ್ಟಿಯಿಂದ ನೋಡುವುದಾದರೆ ಇದೊಂದು ಸೋಷಿಯಲ್ ಓರಿಯಂಟೆಡ್ ಫ್ಯಾಮಿಲಿ ಡ್ರಾಮಾ. ಇದು ನಿಲ್ಲುವುದೇ ಸಂಗೀತದಿಂದ. ಆದರೆ ಈ ಚಿತ್ರಕ್ಕಾಗಿರುವ ಸಂಗೀತವಾಗಲಿ, ಸಂಕಲನವಾಗಲಿ ನನಗಿಷ್ಟವಾಗಲಿಲ್ಲ. ಅದೊಂದು ಅಂಶ ತೆಗೆದರೆ ನಾನು ಈ ಸಿನೆಮಾದಲ್ಲಿ ಕೆಲಸ ಮಾಡಿದ್ದೆ ಎಂದು ಗಟ್ಟಿಯಾಗಿ ಹೇಳಿಕೊಳ್ಳಬದುದಾದಷ್ಟು ಒಳ್ಳೆಯ ಸಿನೆಮಾ. ಕೆಜಿಎಫ್, ಚಾರ್ಲಿ, ವಿಕ್ರಂ ಸಿನೆಮಾಗಳ ಆರ್ಭಟದ ನಡುವೆ ಈ ಸಿನೆಮಾ ಕಡೆ ಸಾಮಾನ್ಯವಾಗಿ ಜನ ತಲೆಹಾಕುವುದಿಲ್ಲ. ಹಾಗಾಗಿ ಸಿನಿಮಾಪ್ರಿಯರಲ್ಲಿ ಒಂದು ಮನವಿ ಏನೆಂದರೆ.. ಮುಂದೆಂದಾದರೂ ಸಾಧ್ಯವಾದರೆ ದಯವಿಟ್ಟು ಸಿನೆಮಾ ನೋಡಿ. ಬಹಳಷ್ಟು ತಿಳಿದುಕೊಳ್ಳಬೇಕಾದ ಅಂಶಗಳನ್ನೊಳಗೊಂಡ ಈ ಚಿತ್ರ ಮನರಂಜನೆಯ ದೃಷ್ಟಿಯಿಂದ ಅಲ್ಲವಾದರೂ ಮಾಹಿತಿಯುತ ಚಿತ್ರವಾಗಿ ನಿಮಗೆ ಇಷ್ಟವಾಗುತ್ತದೆ.
ಅನಂತ್ ಕುಣಿಗಲ್