ಅಕ್ಷತಾ ಪಾಂಡವಪುರ ಮನದಾಳದ ಮಾತು

ಅಕ್ಷತಾ ಪಾಂಡವಪುರ ಮನದಾಳದ ಮಾತು (ʼಲೀಕ್‌ ಔಟ್‌ʼ ನಾಟಕ ನೂರರ ಸಂಭ್ರಮದಲ್ಲಿ)

ನಾಡಿನ ಹೆಸರಾಂತ ರಂಗ ಕಲಾವಿದೆ ಹಾಗೂ ಚಿತ್ರನಟಿ ಅಕ್ಷತಾ ಪಾಂಡವಪುರ ಅಭಿನಯದ ʼಲೀಕ್‌ ಔಟ್‌ʼ ನಾಟಕ ನೂರರ ಪ್ರದರ್ಶನಕ್ಕೆ ಸಜ್ಜಾಗಿದೆ. ಶಿವಮೊಗ್ಗದಲ್ಲಿ ಡಿಸೆಂಬರ್ 7ರ ಶನಿವಾರ ಈ ನಾಟಕದ 100ನೇ ಪ್ರದರ್ಶನವು ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ.

ಆ ಮೂಲಕ ಶಿವಮೊಗ್ಗದ ಹವ್ಯಾಸಿ ರಂಗ ತಂಡಗಳ ಕಲಾವಿದರ ಒಕ್ಕೂಟವು ಜಿಲ್ಲೆಯ ರಂಗ ಇತಿಹಾಸಕ್ಕೆ ಹೊಸ ದಾಖಲೆಯೊಂದನ್ನು ಮುಡಿಗೇರಿಸಿಕೊಳ್ಳುವುದಕ್ಕೆ ಅಣಿಯಾಗಿದೆ. ಕಲಾವಿದರ ಒಕ್ಕೂಟದ ಮೂಲಕ ಲೀಕ್‌ ಔಟ್‌ ನಾಟಕ 100ನೇ ಪ್ರದರ್ಶನ ನಡೆಯುತ್ತಿದೆ. ಮೊದಲು ‘ಲೀಕ್‌ ಔಟ್‌’ ನಾಟಕದ ಆಯೋಜಕರಿಗೆ ಅಭಿನಂದನೆಗಳು‌ ಡಾಕ್ಯುಮೆಂಟರಿ ಬಿಡುಗಡೆ ಜತೆಗೆ ‘ಲೀಕ್‌ ಔಟ್‌’ ಅನುಭವ ಕಥನ ಕೃತಿಯು ಕೂಡ ಲೋಕಾರ್ಪಣೆ ಆಗುತ್ತಿದೆ. ಒಂದೇ ವೇದಿಕೆಯಲ್ಲಿ ಹಲವು ವಿಶೇಷತೆಗಳೊಂದಿಗೆ ರಂಗಾಸಕ್ತರನ್ನು ತನ್ನತ ಸೆಳೆದಿರುವವರು ‘ಲೀಕ್‌ ಔಟ್‌’ ನ ರೂವಾರಿ ಅಕ್ಷತಾ ಪಾಂಡಪುರ ಅವರು. ಈ ನಾಟಕದ ವೈಶಿಷ್ಟ್ಯತೆ ನೂರರ ಸಂಭ್ರಮ!

ಅಕ್ಷತಾ ಅವರು ತಾವು ನಡೆದು ಬಂದ ಹಾದಿ ಕುರಿತು ಇಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅವರ ಮಾತುಗಳ ಸಣ್ಣ ಸಂದರ್ಶನ ಇಲ್ಲಿದೆ.

ಸಂದರ್ಶನ : ದೇಶಾದ್ರಿ

  • ಲೀಕ್‌ಔಟ್ ಈಗ ನೂರರ ಪ್ರದರ್ಶನ, ಈ ಜರ‍್ನಿಯ ಬಗ್ಗೆ ಏನನಿಸುತ್ತೆ?

ಸಾಮಾನ್ಯವಾಗಿ ನನಗೆ ಒಂದೇ ಪಾತ್ರ, ಒಂದೇ ಪ್ರಯೋಗದಲ್ಲಿ ಹಲವಾರು ಬಾರಿ ಕಾಣಿಸಿಕೊಳ್ಳುವುದಕ್ಕೆ ಇಷ್ಟ ಅಗೋದಿಲ್ಲ. ಯಾಕೆಂದ್ರೆ ನನಗೆ ಹುಡುಕಾಟ ಇರಬೇಕು, ಒಂದೇ ಪಾತ್ರದಲ್ಲಿ ಮುಳುಗಿ ಹೋಗುವುದು, ಬೇರೆ ಪ್ರಯೋಗ ಅಥವಾ ಪಾತ್ರಕ್ಕೆ ತೆರೆದುಕೊಳ್ಳದಿರುವುದು ನನಗೆ ತುಂಬಾ ಬೋರ್ ಆದರೆ ‘ಲೀಕ್‌ ಔಟ್‌’ ಕಥೆ ಅದು ಪ್ರತಿ ದಿನ, ಪ್ರತಿ ಕ್ಷಣವೂ ಪ್ರಸ್ತುತವಾಗುವಂತಹದ್ದು, ಹಾಗಾಗಿ ಅದು ಪ್ರಯೋಗದಿಂದ ಪ್ರಯೋಗಕ್ಕೆ ಹೊಸತನಕ್ಕೆ ಒಡ್ಡಿಕೊಳ್ಳುತ್ತಾ, ಹೊಸ ವಾತಾವರಣಕ್ಕೆ ತೆರೆದುಕೊಳ್ಳುತ್ತಾ ಬಂದಿದ್ದು ಅದರ ನೂರು ಪ್ರದರ್ಶನಕ್ಕೆ ಸಾಧ್ಯವಾಗಿದೆ ಎನ್ನುವುದು ನನ್ನ ಭಾವನೆ.

  • ಲೀಕ್‌ ಔಟ್ ಜರ‍್ನಿ ಶುರುವಾಗಿದ್ದು ಹೇಗೆ ? ಇಷ್ಟು ಪ್ರದರ್ಶನಗಳ ನಿರೀಕ್ಷೆ ಇತ್ತಾ?

ಲೀಕ್‌ ಔಟ್‌ ಕೋವಿಡ್‌ ನಂತರ ನಾನು ಬರೆದ ಕಥೆಗಳ ಕಥಾ ಹಂದರ. ಅವುಗಳನ್ನು ಅನಕ್ಷರಸ್ಥರಿಗೂ ಮುಟ್ಟಿಸಬೇಕೆಂದು ನಾನೇ ಕಟ್ಟಿಕೊಂಡ ಒಂದು ಪಾತ್ರದ ಫಾರ್ಮ್ ಅದು. ಅದೇ ರೀತಿ, ನಾನು ಯೋಚನೆ ಮಾಡುವ ಹಾಗೆಯೇ ಇತರೆ ಪಾತ್ರಗಳು ಇದ್ದಾವಾ, ಅವು ಕೂಡ ನನ್ನ ಹಾಗೆಯೇ ಯೋಚನೆ ಮಾಡುತ್ತಾವ ಅಂತ ಹೊರಟಾಗ ಶುರುವಾಗಿದ್ದು ಲೀಕ್‌ ಔಟ್‌ ಏಕವ್ಯಕ್ತಿ ಪ್ರಯೋಗ. ಖಂಡಿತ ನನಗೆ ಆಗ ಇದು ನೂರು ಪ್ರಯೋಗ ಆಗುತ್ತೆ ಅಂತ ನಿರೀಕ್ಷೆ ಇರಲಿಲ್ಲ. ಆದರೆ ಉತ್ತರ ಕರ್ನಾಟಕದಲ್ಲಿ ಅದು 30 ದಿನಗಳಲ್ಲಿ ಯಾವಾಗ 50 ಶೋ ಆಯಿತೋ ಆಗ ಅದು ನೂರಕ್ಕೂ ಹೆಚ್ಚು ಆಗಬಹುದೆಂಬ ನಂಬಿಕೆ ಬಂತು. ಹಾಗಂತ ಅದನ್ನು ನೂರಕ್ಕೆ ಮುಟ್ಟಿಸಬೇಕೆಂದು ಅಲ್ಲ, ಅದನ್ನು ಇನ್ನಷ್ಟು ಜನರಿಗೆ ಮುಟ್ಟಿಸಬೇಕೆಂದು ಹೊರಟಾಗ ಅದರ ಪಯಣ ಇಲ್ಲಿಗೆ ಬಂದು ನಿಂತಿದೆ. ಖುಷಿ ಆಗುತ್ತಿದೆ.

  • ಏಕವ್ಯಕ್ತಿ ಪ್ರಯೋಗದ ಈ ಸಾಹಸಕ್ಕೆ ನೀವು ಒಡ್ಡಿಕೊಳ್ಳಬೇಕೆನಿಸಿದ್ದು ಯಾಕೆ?

ಸಮಾಜದ ಇವತ್ತಿನ ಪರಿಸ್ಥಿತಿಯಲ್ಲಿ ನಾನೊಬ್ಬಳು ನಟಿಯಾಗಿ ಸಮಾಜದಲ್ಲಿ ಏನೇನು ನಡೀತಿದೆ, ಯಾವ್ಯಾವ ತರಹದ ಪಾತ್ರಗಳನ್ನು ಕಾಣುತ್ತಿದ್ದೇವೆ. ಸಾಮಾಜಿಕವಾಗಿ, ರಾಜಕೀಯವಾಗಿ ಏನೆಲ್ಲ ವಿದ್ಯಮಾನಗಳು ಆಗುತ್ತಿವೆ, ಜನರು ಅವುಗಳನ್ನು ಹೇಗೆ ನೋಡುತ್ತಿದ್ದಾರೆ, ನಾನು ಅದಕ್ಕೆ ಹೇಗೆ ರಿಯಾಕ್ಟ್‌ ಮಾಡಬೇಕು ಅಂತ ಅಂದಾಗ ನನಗೆ ರಂಗಭೂಮಿಯೇ ಅದಕ್ಕೆ ಸೂಕ್ತ ವೇದಿಕೆ ಎನಿಸಿತು. ಹಾಗಂತ ನಾಟಕ ಮಾಡಿದೆ ಅಂತ ನಾಟಕ ಮಾಡುವುದಕ್ಕಿಂತ ನನ್ನ ಮನಸು ಮತ್ತು ದೇಹ ಗಟ್ಟಿಯಿದೆ. ಅದನ್ನೇ ಬಳಸಿಕೊಂಡೆ ಏನಾದರೂ ಮಾಡ್ಬೇಕು ಅಂದಾಗ ಅದಕ್ಕೆ ಏಕವ್ಯಕ್ತಿ ಪ್ರಯೋಗಕ್ಕೆ ತೆರೆದುಕೊಂಡೆ. ಅದಕ್ಕೆ ಒಂದಷ್ಟು ಸಿದ್ದತೆಗಳು ಬೇಕಾಗುತ್ತದೆ. ಹಾಗಂತ ನಾಲ್ಕು ಗೋಡೆಗಳ ಮಧ್ಯೆ ಪ್ರಾಕ್ಟಿಸ್‌ ಮಾಡೋ ಅಭ್ಯಾಸ ನನಗಿಲ್ಲ. ಧ್ಯಾನ ಮತ್ತು ಯೋಗಕ್ಕೆ ಅದು ಸೀಮಿತವಾದರೂ, ನಾನು 24 ಗಂಟೆಗಳ ಕಾಲವೂ ಪ್ರಾಕ್ಟಿಸ್‌ ನಲ್ಲಿರುತ್ತೇನೆ. ಯಾವುದೋ ಮ್ಯೂಜಿಕ್‌ ಕೇಳಿದಾಗ ಇನ್ನೇನೋ ಆಲೋಚನೆ ಬರುತ್ತೆ. ಇನ್ನೇನೋ ಒಂದು ವಸ್ತು ನೋಡಿದಾಗ ಇನ್ನೇನೋ ತಲೆಗೆ ಹೊಳೆಯುತ್ತೆ. ಆದರೆ ಅದಕ್ಕೆಲ್ಲ ಒಂದು ರೂಪ ಪಡೆದುಕೊಳ್ಳುವುದಕ್ಕೆ ಇನ್ನೇನೋ ಸಹಾಯ ಬೇಕಾಗುತ್ತದೆ. ಅಂತ ಸಹಾಯ ನನಗೆ ಸೌಂಡ್‌ ಅಂಡ್‌ ಥೀಮ್ಸ್‌ ಎನ್ನುವ ಶಿಬಿರದಿಂದ ಸಿಕ್ಕಿತು. ಗೋವಾದಲ್ಲಿ ಕ್ಯಾತರಿಕ್‌ ಅಲೆಕ್ಸಾಂಡರ್‌ ಎನ್ನುವವರು ಕಂಡಕ್ಟ್‌ ಮಾಡಿದ್ದ ಶಿಬಿರ ಇದು, ಅಲ್ಲಿ ನನಗೆ ಈ ಏಕವ್ಯಕ್ತಿ ಪ್ರಯೋಗದ ಒಂದಷ್ಟು ತರಬೇತಿ ಸಿಗ್ತು.

  • ಏಕವ್ಯಕ್ತಿ ರಂಗ ಪ್ರಯೋಗದ ಸವಾಲುಗಳು ಮತ್ತು ಮಿತಿಗಳೇನು?

ಇಲ್ಲಿ ಏಕವ್ಯಕ್ತಿ ರಂಗ ಪ್ರಯೋಗ ಅಂದ್ರೆ ನಾನಿಲ್ಲಿ ಬರೀ ಅಭಿನಯ ಮಾಡುವ ಕಲಾವಿದೆ ಮಾತ್ರವಲ್ಲ, ಎಲ್ಲ ಕತೆ ಕಟ್ಟುವುದರ ಜತೆಗೆ ವೇದಿಕೆಯಿಂದ ಆಡಿಕ್ಷನ್ ಜತೆಗೆ ಇಂಟ್ಯರಾಕ್ಟ್‌ ಮಾಡುವ ಪ್ರಯೋಗ ಇದಾಗಿರುವ ಕಾರಣಕ್ಕೆ ಜನರು ಅಲ್ಲಿ ಹೇಗೆ ರಿಯಾಕ್ಟ್‌ ಮಾಡ್ತಾರೆ ಅಂತ ಗೊತ್ತಾಗುವುದಿಲ್ಲ. ಯಾಕೆಂದರೆ ಅಲ್ಲಿದ್ದವರ ರಿಯಾಕ್ಷನ್‌ ಒಂದೇ ರೀತಿ ಇರುತ್ತೆ ಅಂತ ಅಂದಾಜು ಮಾಡೋದಿಕ್ಕೆ ಆಗೋದಿಲ್ಲ, ಅವರಿಂದ ನೆಗೆಟಿವ್‌ ರೆಸ್ಪಾನ್ಸ್‌ ಬಂದಾಗಲೂ ಪ್ರಯೋಗವನ್ನು ಮುಂದುವರೆಸಿಕೊಂಡು ಹೋಗಬೇಕು. ಅದೆಲ್ಲ ಹೇಳೋದಿಕ್ಕೆ ಕಷ್ಟ. ಎಲ್ಲರ ಭಾವನೆಗಳಿಗೂ ನಾನಲ್ಲಿ ಬೆಲೆ ಕೊಡಬೇಕು. ಇನ್ನು ದೂರ ಪ್ರಯಾಣ ಮಾಡುವಾಗ ಊಟ, ವಸತಿ ಹೊಂದಿಸಿಕೊಳ್ಳಬೇಕು, ದೇಹದಲ್ಲಿ ಏರಿಳಿತಗಳು ಆಗಬಹುದು, ಅವುಗಳನ್ನು ಕಾಪಾಡಿಕೊಳ್ಳಬೇಕು. ಇವೆಲ್ಲವೂ ಒಂದು ರೀತಿ ಸವಾಲುಗಳೇ ಹೌದು.

  • ಈ ಪ್ರಯೋಗದದ ಜರ‍್ನಿ, ನಿಮ್ಮ ರಂಗಾಸಕ್ತಿಗೆ ಕೊಟ್ಟ ಅನುಭವ ಏನು?

ಇದು ನನ್ನ ಜೀವಮಾನದಲ್ಲೆ ಒಂದು ದೊಡ್ಡ ಅನುಭವ, ದೊಡ್ಡ ಕಾಣಿಕೆ. ಅದು ‘ಲೀಕ್‌ ಔಟ್‌’ ನ ಉಡುಗೊರೆಯಾಗಿ ಸಿಕ್ಕಿದೆ. ತುಂಬಾ ಜನರು ಪರಿಚಯವಾಗಿದ್ದಾರೆ, ಸಂಬಂಧಿಕರಾದರು, ಕಷ್ಟ ಸುಖ ಮಾತನಾಡುತ್ತಾರೆ. ಅದು ನಾಟಕಕ್ಕೆ ಮಾತ್ರವಲ್ಲದೆ, ವೈಯಕ್ತಿಕವಾಗಿಯೂ ಒಳ್ಳೆಯ ಸಂಬಂಧ ಸಿಕ್ಕಿದೆ. ಒಳ್ಳೆಯ ಬಾಂಧವ್ಯ ಇದೆ, ಮತ್ತೆ ತುಂಬಾ ಪಾಠ ಕಲಿತಿದ್ದೇನೆ. ಅದನ್ನು ತುಂಬಾ ಆಳಕ್ಕಿಳಿದು ಹೇಳೋದು ಕಷ್ಟ.

  • ಊರೂರು ಸುತ್ತಿದ್ದ ‘ಲೀಕ್‌ಔಟ್’ ಪ್ರದರ್ಶನಕ್ಕೆ ಜನರ ಅತ್ಯುತ್ತಮ ರೆಸ್ಪಾನ್ಸ್ ಸಿಕ್ಕಿದ್ದು ಎಲ್ಲಿ?

ಜನರು ನೋಡಿದವರೆಲ್ಲರೂ ತುಂಬಾ ಚೆನ್ನಾಗಿತ್ತು ಅಂತಲ್ಲ, ಯಾಕೆಂದ್ರೆ ಇದು ಸಾಮಾನ್ಯವಾಗಿ ಈ ಕಲೆ ಸಾಹಿತ್ಯ ಇದರಿಂದ ಜನರಿಗೆ ಹತ್ತಿರವಾಗುತ್ತದೆ. ಅವರು ಪ್ರತಿ ಶೋನಲ್ಲಿ ಮನಸು ಬಿಚ್ಚಿ ನಗುತ್ತಿದ್ರು, ಮನಸು ಬಿಚ್ಚಿ ಮಾತನಾಡುತ್ತಿದ್ರು, ಯಾವುದೇ ಬುದ್ದಿವಂತಿಕೆಯ ಪ್ರದರ್ಶನ ನೀಡುತ್ತಿರಲಿಲ್ಲ. ನಾನು ಕೂಡ ತುಂಬಾ ಸಿಂಪಲ್‌ ಆಗಿ ಹೇಳುವ ಪ್ರಯತ್ನ ಮಾಡುತ್ತಾ ಬಂದೆ. ಅಭಿಯನದಲ್ಲಿ ತುಂಬಾ ಕರಗತ ಮಾಡ್ಕೊಂಡ್‌, ಏನೋ ಅಭಿನಯದಲ್ಲಿ ತೋರಿಸಬೇಕು ಅಂತಲೂ ಇರಲಿಲ್ಲ. ತುಂಬಾ ಸಿಂಪಲ್‌ ಆಗಿ, ರಿಯಾಲಿಸ್ಟಿಕ್‌ ಆಗಿ ಸೆಟಲ್‌ ಆಗಿ ನಡೆಯಬೇಕಿತ್ತು. ಹಾಗಾಗಿ ಇದು ಸಾಹಿತ್ಯ ವಲಯ, ಕಲೆಯ ವಲಯ ಇರುವ ಜನರನ್ನು ಮುಟ್ಟಬೇಕಿತ್ತು. ಹಾಗಾಗಿ ಅವರೆಲ್ಲರ ಮನಸು ಹೇಗಿತ್ತು ಅಂತ ಅಂದಾಜಿಸುವುದಕ್ಕೆ ಹೋಗಿಲ್ಲ ಆದರೆ ಅವರೆಲ್ಲರೂ ಮನಸು ಬಿಚ್ಚಿ ನಕ್ಕಿದ್ದು, ಮಾತನಾಡಿದ್ದನ್ನು ನಾನು ಕಂಡಿದ್ದೇನೆ.

  • ರಂಗ ಕಲಾವಿದೆಯಾಗಿ, ಸಿನಿಮಾ ನಟಿಯಾಗಿ ನಿಮ್ಮ ತೃಪ್ತಿಯ ವೇದಿಕೆ ಇಲ್ಲಿ ಯಾವುದು?

ನನ್ನ ತೃಪ್ತಿ ಅಂದ್ರೆ ಅಭಿನಯ. ನಂಗೆ ಸಿನಿಮಾದಲ್ಲೂ ತೃಪ್ತಿ ಸಿಕ್ಕಿದೆ, ನಾಟಕದಲ್ಲೂ ತೃಪ್ತಿ ಸಿಕ್ಕಿದೆ. ಅಭಿನಯ ಎನ್ನುವ ವಿಷಯ ಮಾತ್ರವೆ ನನಗೆ ತೃಪ್ತಿ ಸಿಕ್ಕಿದೆ. ಆದರೆ ಸಿನಿಮಾ ಅನ್ನೋದು ಒಂದು ಪ್ರಾಜೆಕ್ಟ್‌, ರಂಗಭೂಮಿ ಚಲಿಸುತ್ತಲೇ ಇರುತ್ತದೆ. ಅದು ಚಲನಶೀಲದಲ್ಲಿಯೇ ಇರುತ್ತದೆ. ಹಾಗಾಗಿ ನಾಟಕ, ಸಿನಿಮಾ ಎನ್ನುವುದಕ್ಕಿಂತ ಅಭಿನಯ ಅಂದ್ರೇನೆ ಇಷ್ಟ.

  • ನೋಡುಗರನ್ನೇ ಕಲಾವಿದರನ್ನಾಗಿ ಮಾಡುವ ಈ ಪ್ರಯೋಗದ ಯಶಸ್ಸಿನ ಗುಟ್ಟೇನು?

ಯಶಸ್ಸಿನ ಗುಟ್ಟೇನು ಅನ್ನೋದು ಗೊತ್ತಿಲ್ಲ. ಆದರೆ ನಾನು ಜನರ ಜತೆಗೆ ಬೇಗ ಬೆರೆಯುತ್ತೇನೆ. ಅವರು ನನಗೆ ಸ್ಪಂದಿಸುತ್ತಾರೆ. ಅವರು ನನ್ನ ಮನೆ ಮಗಳು ಅನ್ನೋ ಹಾಗೆ ನೋಡುತ್ತಾರೆ. ಆ ಕಾರಣದಿಂದಲೇ ನನಗೆ ಹೆಚ್ಚು ನಾಟಕಗಳು, ಪ್ರಯೋಗಗಳು ಆಗಿದ್ದು, ಇಲ್ಲ ನಾನು ಆ ಮನೆಗೆ ಬರಲ್ಲ, ಎಲ್ಲಿ ಬರಲ್ಲ ಅಂತ ಅವರಿಂದ ನಾನು ದೂರ ಉಳಿದಿದ್ದರೆ ಈ ಪ್ರಯೋಗ ಇಷ್ಟು ಆಗುತ್ತಿರಲಿಲ್ಲ. ಅವರೊಂದಿಗೆ ನಾನು ಮನೆ ಮಗಳಾಗಿ ಬೆರೆತಿದ್ದರ ಕಾರಣವೇ ಈ ನಾಟಕದ ನೂರರ ಪ್ರಯೋಗಕ್ಕೆ ಕಾರಣ. ಅದೇ ಕಾರಣದಿಂದಲೇ ನಾನು ಇವತ್ತು ಆಯೋಜಕರನ್ನು ಕರೆಸಿ, ಅಭಿನಂದಿಸಬೇಕು ಅಂತೆನಿಸಿದ್ದು.

ಸಂದರ್ಶನ : ದೇಶಾದ್ರಿ

Related post