ಅಗಲಿದ ಕವಿ ಚೇತನ – ಡಾ|| ಸಿದ್ದಲಿಂಗಯ್ಯ

ಕಾರ್ಮೋಡ ಕವಿದಿತ್ತು ಕಗ್ಗಪ್ಪು ಕೆದರಿತ್ತು

ಕಡುರೌದ್ರ ತುಂಬಿತ್ತು ಬಾನಿನಲ್ಲಿ”

ನಿಜ ಮೇಲಿನ ಭವಿಷದ್ಗೀತೆಯನ್ನು ಬರೆದ ಡಾ|| ಸಿದ್ದಲಿಂಗಯ್ಯನವರು ತಮ್ಮ ಪ್ರೀತಿಯ ಜನಗಳನ್ನು ಹಾಗು ಅಸಂಖ್ಯಾತ ಅಭಿಮಾನಿಗಳನ್ನು ತೊರೆದು ಕಾಲನವಶವಾಗಿದ್ದಾರೆ. ಸದಾ ದಲಿತರ ಪ್ರೀತಿಸುತ್ತ ಸಮಾನತೆಯ ಕನಸನ್ನು ಹೊತ್ತು ತಮ್ಮ ಜೀವನವನ್ನು ಸವೆಸಿದ ಕವಿಹೃದಯ ಇನ್ನು ನೆನಪು ಮಾತ್ರ.

ಬಡ ಕುಟುಂಬದ ತಂದೆ ದೇವಯ್ಯ ತಾಯಿ ವೆಂಕಮ್ಮನವರ ಮಗನಾಗಿ  ಬೆಂಗಳೂರು ಗ್ರಾಮಾಂತರ ಮಂಚನಬೆಲೆಯಲ್ಲಿ೧೯೫೪ ರ ಫೆಬ್ರವರಿ ೩ ರಂದು ಜನಿಸಿದ ಸಿದ್ದಲಿಂಗಯ್ಯ ನವರು ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮುಗಿಸಿ ಎಂ ಎ ಪಧವೀಧರರಾಗಿ ಬೆಂಗಳೂರು ಯೂನಿವೆರ್ಸಿಟಿಯಲ್ಲಿ “ಪ್ರಾಧ್ಯಾಪಕರಾಗಿ, ಸಂಶೋಧನಾ ಸಹಾಯಕರಾಗಿ ಸೇವೆ ಸಲ್ಲಿಸಿದ್ದರು ಹಾಗು ಎರಡು ಬಾರಿ ಕರ್ನಾಟಕ ರಾಜ್ಯ ವಿಧಾನಪರಿಷತ್ತಿನ ಸದಸ್ಯರಾಗಿದ್ದರು.

ಕ್ರಾಂತಿಯ ಕಿಡಿಯನ್ನು ವಿದ್ಯಾರ್ಥಿಯಾಗಿದ್ದಾಗಲೇ ಸಿದ್ದಲಿಂಗಯ್ಯನವರು ತಮ್ಮ ಪದ್ಯಗಳಲ್ಲಿ ಬೆಳಗಿಸುತ್ತಿದ್ದರು. ಗಾಂಧೀ, ಅಂಬೇಡ್ಕರ್ ಹಾಗು ರಾಮ್ ಮನೋಹರ್ ಲೋಹಿಯಾ ಚಿಂತನೆಗಳಿಂದ ಪ್ರಭಾವಿತರಾದರು, ಕುವೆಂಪುರವರ ಪ್ರಭಾವ ಅವರ ಕವಿತೆಗಳಲ್ಲಿ ಗಾಢವಾಗಿ ಪ್ರತಿನಿಧಿಸಿ ತಮ್ಮ ಕವಿತೆಗಳಲ್ಲಿ ಅಸಮಾನತೆಯ ವಿರುದ್ಧ ಹಾಗು ದಲಿತರ ಪರವಾಗಿ ದನಿ ಎತ್ತಿದರು.

೧೯೭೫ ರಲ್ಲಿ ಜನಪ್ರಿಯವಾದ ಸಿದ್ದಲಿಂಗಯ್ಯನವರ “ನನ್ನ ಜನಗಳು” ಕವನದಲ್ಲಿ ಅವರು ರಚಿಸಿದ ಸಾಲು

ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತೋರು,

ವದೆಸಿಕೊಂಡು ವರಗಿದೋರು ನನ್ನ ಜನಗಳು”

ಹೊಲವನುತ್ತು ಬಿತ್ತೋರು ಬೆಳೆಯ ಕುಯ್ದು ಬೆವರೊರು

ಬಿಸಿಲಿನಲ್ಲಿ ಬೇಯೋರು ನನ್ನ ಜನಗಳು”

ಭ್ರಷ್ಟ ವ್ಯವಸ್ಥೆಯ ಅತಿರೇಕದ ಕಾಲದಲ್ಲಿ ಬೇಸತ್ತ ಜನರು ಈ ಸಾಲುಗಳಿಗೆ ಮಾರುಹೋದರು ಅವರ ಕವಿತೆಗಳಲ್ಲಿ ಎಷ್ಟೋ ಜನರು ತಮ್ಮನು ಕಾಣುತ್ತಿದ್ದರು. ಕವನ ರಚನೆಯ ಮಡಿವಂತಿಕೆಯನ್ನು ತೊರೆದ ಅವರ ಸಾಲುಗಳಿಗೆ ಮೊಳೆಯು ಕೂಡ ಪದ್ಯವಾಯಿತು

“ಕ್ವರಗ್ತೀನಿ ಕ್ವನೇಗೊಂದ್ಸಲ ಕೂಗ್ತೀನಿ

ಬಡ್ಡಿ ದುಡ್ಡೋನ್ ಬಂಗ್ಲೆ ಕೆಳ್ಗೆ

ತಳಾದಿಗ್ ಸಿಕ್ಕಿರೋ ಮೊಳೆ-ನೆಲಸಾಸ್ಕೊಂಡು ಬಾಣನೋದ್ಕೊಂಡು

ಈ  ಮಿಂಡ್ರುಗುಟ್ಡೋರ್ ಚಂದಾಗ್ ಬದ್ಕಕ್

ದೊಡ್ಡ ಮೊಳೆ ಹಾಗಿ ಕೋಳೀತೀವ್ನಿ”

ಅವರ ಪದ್ಯಗಳು ಕ್ರಾಂತಿಯ ರೂಪದಲ್ಲಿ ಭಡವರ ಶೋಷಿಸುತ್ತಿದ್ದ ಶ್ರೀಮಂತರ ವಿರುದ್ಧ ತಮ್ಮ ಮೊನಚು ಲೇಖನಿಯನ್ನು ಝುಳಪಿಸಿದವು. ಅವರ “ಒಂದು ಪದ” ಕವಿತೆಯಲ್ಲಿನ ಸಾಲು

“ಇಕ್ರಲಾ ವದೀರ್ಲಾ” ಸಾಲು ಜಾತಿ ವ್ಯವಸ್ಥೆಯ ವಿರುದ್ಧ ಗುಡುಗಿದರೆ, ಅವರ “ಅಸೇಂಬ್ಲೀಲಿ ಮ್ಯತ್ಗಿರೋ ಸೀಟ್ನಮೇಲೆ ಕುಂತು ಪಾನು ಬೀಡಾ ಆಗ್ಯೋ ನಾಯಕ್ರಾ” ಸಾಲು ಜನರ ಕಷ್ಟಗಳಿಗೆ ಸ್ಪಂದಿಸದ ಭ್ರಷ್ಟ ರಾಜಕಾರಣಿಗಳ ತಲೆ ಮೇಲೆ ಹೊಡೆದಂತಿತ್ತು

ತಮ್ಮ ಪ್ರೀತಿಯ ಸ್ನೇಹಿತ “ನಾಗತಿಹಳ್ಳಿ ಚಂದ್ರಶೇಖರ್” ಚಿತ್ರ “ಬಾ ನಲ್ಲೆ ಮಧುಚಂದ್ರಕ್ಕೆ” ಚಿತ್ರಕ್ಕೆ ಅವರು ಬರೆದ “ಆ ಬೆಟ್ಟದಲ್ಲಿ, ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ” ಕವಿತೆಗೆ ರಾಜ್ಯಪ್ರಶಸ್ತಿಯೂ ಬಂದು  ಸಿದ್ದಲಿಂಗಯ್ಯನವರು ಪ್ರೇಮಕವಿಯಾಗಿಯೂ ಸಹ ಕಾಣಿಸಿಕೊಂಡು ಜನರಿಗೆ ವಿಸ್ಮಯಕವಿ ಯಾದರು. ಅವರ “ದೋಣಿಯ ಹಾಡು” ಕವಿತೆಯಲ್ಲಿ ಪ್ರಕೃತಿಯ ಮಾರ್ದವವಿತ್ತು. ಅವರ ಕಪ್ಪು ಕಾಡಿನ ಹಾಡು ಕವನ ಸಂಕಲದಲ್ಲಿನ ಸಾಲು

“ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ” ಸಾಲುಗಳಲ್ಲಿ ದೇಶಕ್ಕೆ ಸಿಕ್ಕಿದ ಸ್ವಾತಂತ್ರ ಸರಿಯಾಗಿ ಉಪಯೋಗವಾಗದೆ ಭ್ರಷ್ಟ ವ್ಯವಸ್ಥೆಯ ಪಾಲಾಯಿತು ಎಂಬ ಬೇಸರವಿತ್ತು.

ತಮ್ಮ ಕವನ ಸಂಕಲನಗಳಾದ “ಹೊಲೆ ಮಾದಿಗರ ಹಾಡು”, “ಮೆರವಣಿಗೆ”, “ಸಾವಿರಾರು ನದಿಗಳು”, ಕಪ್ಪು ಕಾಡಿನ ಹಾಡು”, ಮುಂತಾದ ಕವನ ಸಂಕಲನಗಳಲ್ಲಿ ಭಾವ ತುಂಬಿದ ಸಿದ್ದಲಿಂಗಯ್ಯನವರು ನಾಟಕಗಳಾದ “ಏಕಲವ್ಯ, ನೆಲಸಮ, ಪಂಚಮ” ರಚಿಸಿದರು ಹಾಗು “ಹಕ್ಕಿ ನೋಟ”, “ಎಡಬಲ” ಮುಂತಾದ ವಿಮರ್ಶನ ಕೃತಿಗಳನ್ನು ಹಾಗು ಸಂಶೋಧನಾ ಪ್ರಬಂಧ “ಗ್ರಾಮ ದೇವತೆಗಳು” ಜೊತೆಗೆ ತಮ್ಮ ಆತ್ಮಕತೆಯಾದ ಊರು-ಕೇರಿ (ಎರಡು ಭಾಗ) ಗಳಲ್ಲಿ ಕೂಡ ಜನಪ್ರಿಯರಾದರು.

ಹಲವಾರು ಪ್ರಶಸ್ತಿಗಳು “ರಾಜ್ಯೋತ್ಸವ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಡಾ ಅಂಬೇಡ್ಕರ್ ಪ್ರಶಸ್ತಿ, ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ, ಬಾಬು ಜಗಜೀವನರಾಮ್ ಪ್ರಶಸ್ತಿ, ನಾಡೋಜ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಪಂಪ ಪ್ರಶಸ್ತಿ ಇನ್ನು ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಸಿದ್ದಲಿಂಗಯ್ಯನವರು ಕರೋನ ಪೀಡಿತರಾಗಿ ಚೇತರಿಸಿಕೊಂಡರು ಸಹ ಜೂನ್ ೧೧ ರಂದು ಕಾಲನ ವಶವಾಗಿ ತಮ್ಮ ಪ್ರೀತಿಯ ಜನಗಳನ್ನು ಅಗಲಿದ್ದಾರೆ.

ಅವರು ಕೆಳಗಿನ ತಮ್ಮ ಕವನದ ಮೂಲಕ ಬಹಳ ಮುಂಚೆಯೇ ಜನರಲ್ಲಿ ಕೇಳಿಕೊಂಡಿದ್ದು

ನಾನು ಸತ್ತರೆ ನೀವು ಅಳುವಿರಿ

ನಿಮ್ಮ ಕೂಗು ನನಗೆ ಕೇಳಿಸದು

ನನ್ನ ನೋವಿಗೆ ಈಗಲೇ ಮರುಗಲಾಗದೇ

ನೀವು ಹೂಮಾಲೆ ಹೊದಿಸುವಿರಿ

ನೋಡಲಾದೀತೇನು ನನಗೆ

ಚೆಂದನೆಯ ಹೂವೊಂದ ಈಗಲೇ

ನೀಡಲಾಗದೇ

ನನ್ನ ಗುಣಗಾನ ಮಾಡುವಿರಿ

ನನಗೆ ಕೇಳೀತೇ ಹೇಳಿ

ಒಂದೆರಡು ಹೊಗಳಿಕೆಯ ಮಾತು

ಈಗಲೇ ಆಡಲಾರಿರೇ ..

ನನ್ನ ತಪ್ಪುಗಳನ್ನು ಮನ್ನಿಸುವಿರಿ

ನನಗರಿವಾಗುವುದೇ ಇಲ್ಲ

ಜೀವ ಇರುತ್ತಾ ಕ್ಷಮಿಸಲಾಗದೇ

ನನ್ನ ಅನುಪಸ್ಥಿತಿಗೆ ಕೊರಗುವಿರಿ

ನನಗೆ ತಿಳಿಯುವುದೇ ಇಲ್ಲ

ಈಗಲೇ ಭೇಟಿ ಮಾಡಲೇನು ..

ನನ್ನ ನಿರ್ಗಮನದ ಸುದ್ದಿ ತಿಳಿಯುತ್ತಲೇ

ಮನೆಯತ್ತ ಧಾವಿಸುವಿರಿ ಶ್ರದ್ಧಾಂಜಲಿ ಹೇಳೋ ಬದಲು  ಈವಾಗಲೇ

ಸುಖ ದುಃಖ ಹಂಚಿಕೊಳ್ಳಲಾಗದೇನು .

ಮಿಂಚಿ ಹೋಗುವ ಮುನ್ನ ಹಂಚಿಬಾಳುವ ಬದುಕು ಸಹ್ಯವಲ್ಲವೇನು …..

ತಮ್ಮ ಭತ್ತಳಿಕೆಯಲ್ಲಿನ ಪದಗಳ ಭಾಣಗಳು ಇನ್ನು ಸಾಕಷ್ಟಿದ್ದರೂ ಅವಸರದಿಂದ ಕಾಲನವಶವಾದ ಶ್ರೀ ಸಿದ್ಧಲಿಂಗಯ್ಯನವರಿಗೆ ಸಾಹಿತ್ಯಮೈತ್ರಿ ಬಳಗದಿಂದ ಭಾವಪೂರ್ವಕ ನಮನಗಳು.

ಶ್ರೀ ಸಿದ್ದಲಿಂಗಯ್ಯನವರ ಕವಿತೆಗಳನ್ನು ಕೆಳಗಿನ ಕಣಜ ಕರ್ನಾಟಕ ಲಿಂಕಿನಿಂದ ಉಚಿತವಾಗಿ ಓದಬಹುದು.

https://kanaja.karnataka.gov.in/ebook/wp-content/uploads/2020/PDF/128.ಪಿಡಿಎಫ್

ಕು ಶಿ ಚಂದ್ರಶೇಖರ್

Related post

Leave a Reply

Your email address will not be published. Required fields are marked *