ಅ-ಜಾಂತ ಎಂದರೆ ತಿಳಿಯದ್ದು ಎಂದು ಅರ್ಥ. ಹಾಗಾಗಿ ಅಜಂತ ನಾಮಧೇಯವಾಗಿದೆ. ಇದು ಹುಲಿಗಳೇ ವಾಸಿಸುವ ದಟ್ಟ ಅರಣ್ಯದಲ್ಲಿದ್ದು ವಾಘೋರ ಎಂಬ ನದಿಯ ದಡದಲ್ಲಿ ಇದೆ. ನದಿಯು ಕುದುರೆಯ ಲಾಳದ ಆಕಾರದಲ್ಲಿ ಬಾಗಿ ಮುಂದಕ್ಕೆ ಹರಿಯುತ್ತದೆ. ವ್ಯಾಘ್ರಗಳೇ ಹೆಚ್ಚಾಗಿರುವ ಈ ಕಾಡಿನಲ್ಲಿ ಎಲ್ಲ ಹುಲಿಗಳೂ ನೀರು ಕುಡಿಯಲು ಇಲ್ಲಿಗೇ ಬರುವುದರಿಂದ ಈ ನದಿಗೆ ವಾಘೋರ ಎಂಬ ಹಸರು ಬಂದಿದೆ, ಈ ಪರಿಸರದ ಕಲ್ಲುಗಳು ಬಹಳ ಕಠಿಣವಾಗಿರುವುದರಿಂದ ಶಿಲಾನ್ಯಾಸಕ್ಕೆ ಸೂಕ್ತವಾದುದು ಮತ್ತು ಬೇಸಿಗೆಯನ್ನು ಬಿಟ್ಟು ಉಳಿದ ಎಲ್ಲ ಕಾಲಮಾನಗಳೂ ಬಹಳ ಹಸಿರಿನಿಂದ ತುಂಬಿರುತ್ತದೆ, ಇಲ್ಲಿನ ವಾಘೋರ ನದಿ ತುಂಬಿದ್ದು ಜಲಪಾತಗಳಿಂದ ಕೂಡಿವೆ ಇವು ಧ್ಯಾನ ಮತ್ತು ಏಕಾಗ್ರ ಚಿತ್ತಕ್ಕೆ ಸೂಕ್ತವಾದುದು. ಇನ್ನು ಕ್ರಿಸ್ತಪೂರ್ವ ಕಾಲದಲ್ಲಿ ಇಲ್ಲಿನ ಪರಿಸರ ಇನ್ನೆಷ್ಟು ಸಂಪತ್ಭರಿತವಾಗಿತ್ತೆಂಬುದನ್ನು ನಾವು ಊಹಿಸಿಕೊಳ್ಳಬಹುದು.
ದೊಡ್ಡ ದೊಡ್ಡ ಶಿಲಾ ಪರ್ವತಗಳನ್ನು ಕೊರೆದು ನಿರ್ಮಿಸಿದ ಈ ಗುಹಾಂತರ ಕಲಾಕೃತಿಗಳು ಭಾರತೀಯ ಕಲಾಪರಂಪರೆಗೆ ಹಿಡಿದ ಕನ್ನಡಿಯಾಗಿದೆ. ಹುಲಿಗಳನ್ನು ಬೇಟೆಯಾಡಲು ಬಂದ ಬ್ರಿಟೀಷ್ ಅಧಿಕಾರಿಗಳು ಈ ಗುಹೆಗಳನ್ನು ಆವಿಷ್ಕರಿಸಿದರು. ಈ ಗುಹೆಗಳು ಕ್ರಿ.ಪೂ ಎರಡನೇ ಶತಮಾನದಿಂದ ಕ್ರಿ.ಶ ಏಳನೇ ಶತಮಾನದವರೆಗೆ ಉತ್ಖನನವಾದವುಗಳು. ಇಲ್ಲಿನ ಶಿಲ್ಪ ಮತ್ತು ಚಿತ್ರಗಳು ಧಾರ್ಮಿಕ ಛಾಯೆಯಿಂದ ಕೂಡಿದ್ದು ಆ ಕಾಲದ ಜನಜೀವನ, ಬುದ್ಧನ ಸಭಾ ದೃಶ್ಯಗಳು, ಬೀದಿ ದೃಶ್ಯಗಳು, ಕೌಟುಂಬಿಕ ಜೀವನಶೈಲಿ, ಪ್ರಾಣಿ-ಪಕ್ಷಿಗಳ ಸಂರಕ್ಷಣಧಾಮಗಳನ್ನು ಆಯಾ ವಿಷಯಾಧಾರಿತವಾಗಿ ಚಿತ್ರಿತವಾಗಿವೆ೧. ಈ ಭಿತ್ತಿಚಿತ್ರಗಳು ಶ್ರೇಷ್ಠ ಮಟ್ಟದಲ್ಲಿ ನಿರ್ಮಿಸಲ್ಪಟ್ಟಿದ್ದು ಜಗತ್ಪ್ರಸಿಧ್ಧವಾಗಿವೆ. ಇವು ಆಯಾ ಕಾಲದ ಚರಿತ್ರೆಯ ದಾಖಲೆಯಾಗಿದೆ
ಗುಹಾಂತರ ಕಲೆಗಳು ಆವಿಷ್ಕಾರಗೊಂಡ ಬಳಿಕ ಈ ಕಲಾ ಪ್ರಕಾರವು ಭಾರತ ದೇಶದ ಹತ್ತೊಂಭತ್ತನೇ ಶತಮಾನದ ದೃಶ್ಯಕಲಾ ಪ್ರಪಂಚದ ಹೊಸ ದೃಷ್ಟಿಕೋನವನ್ನೇ ಬದಲಿಸಿತ್ತು. ಅಲ್ಲದೆ ಇಪ್ಪತ್ತನೇ ಶತಮಾನದ ಮಧ್ಯ ಏಷ್ಯಾದ ಕಲಾಪ್ರಪಂಚದ ಮೇಲೂ ತಮ್ಮ ಪ್ರಭಾವ ಬೀರಿದೆ. ಈ ಗುಹೆಗಳ ಮೇಲ್ಛಾವಣಿಯಲ್ಲಿ ಮರದ ಸರಳುಗಳನ್ನು ಒಂದಕ್ಕೊಂದು ಹೆಣೆದು ಆಧಾರವಾಗಿ ನಿಲ್ಲಿಸಿದಂತೆ ಕೆತ್ತಲಾಗಿದೆ. ಗುಪ್ತರ ಕಾಲದ ವಾಕಾಟಕ ದೊರೆ ಹರಿಶೇಖರನ ಮಂತ್ರಿ ವರಾಹ ದೇವ (ಕ್ರಿ.ಶ. ೪೭೫-೫೦೦) ಹದಿನಾರನೇ ಗುಹೆಯನ್ನು ಬುದ್ದನ ಸಂಘಕ್ಕೆ ಅರ್ಪಿಸಿದನು. ಏಳನೇ ಶತಮಾನದಲ್ಲಿ ಭಾರತಕ್ಕೆ ಆಗಮಿಸಿದ್ದ ಹ್ಯೂ-ಎನ್-ತ್ಸ್ಯಾಂಗ್ ಇಲ್ಲಿನ ಕಲೆಯ ಬಗ್ಗೆ ದಾಖಲಿಸಿದ್ದಾನೆ. ಈ ಗುಹೆಗಳು ಎರಡು ಕಾಲಮಾನಗಳಲ್ಲಿ ಇತ್ಖನನಿಸಲ್ಪಟ್ಟಿವೆ ಒಂಭತ್ತು ಮತ್ತು ಹತ್ತನೇ ಗುಹಾಂತರಗಳು ಕ್ರಿ.ಪೂ. ಎರಡನೇ ಮತ್ತು ಒಂದನೇ ಶತಮಾನದಲ್ಲಿ ನಿರ್ಮಾಣವಾಗಿವೆ. ಇಲ್ಲಿ ವಿನ್ಯಾಸ ಮಾಡಿದ ಕಿರೀಟ, ಆಭರಣ, ವಸ್ತ್ರ ವಿನ್ಯಾಸದ ಮಾದರಿಗಳು ಸಾಂಚಿ ಮತ್ತು ಬಾರಹುತದ ಉಬ್ಬು ಶಿಲ್ಪಗಳಲ್ಲಿ ಗೋಚರಿಸುತ್ತವೆ. ಇವರ ಪರಿಶ್ರಮ, ನೈಪುನ್ಯತೆ ಮತ್ತು ಆಲೋಚನಾ ಪ್ರಬುಧ್ಧತೆಯನ್ನು ಎಂಥವರೂ ಮೆಚ್ಚಬೇಕಾದ್ದೇ
ಉಳಿದ ಗುಹಾಂತರ ಚಿತ್ರಗಳೆಲ್ಲಾ ಕ್ರಿ.ಶ. ನಾಲ್ಕು ಮತ್ತು ಐದನೇ ಶತಮಾನಗಳಲ್ಲಿ ಆದಂಥವು ವಾಕಾಟಕರ ಸಾಮ್ರಾಜ್ಯದ ಆರಂಭದಲ್ಲಿ ಈ ಕಾರ್ಯವು ತಾಳಿಯಾಗುತ್ತದೆ.
ಗುಹಾಂತರ ಎರಡರಲ್ಲಿ ಎಡಭಾಗದ ಸಾಯುವ ರಾಜಕುಮಾರಿ ಎಂದು ಕ್ಯಾತವಾಗಿರುವ ಈ ಚಿತ್ರದಲ್ಲಿ ಆಕೆಯ ಕಣ್ಣುಗಳ ಪೇಲವತೆ, ನಿರಾಯಾಸವಾಗಿ ಜೋತುಬಿದ್ದ ಕೈಗಳು ಆಕೆಯಲ್ಲಿನ ನೋವು ಮತ್ತು ಸಂಕಟದ ಸನ್ನಿವೇಷಗಳನ್ನು ಕಂಡ ಆಕ್ಸಲ್ ಚಾರ್ಲ್ಸ ಬೊಟ್ಟಿಸೆಲ್ಲಿಯ ಪ್ರಿಮವೆರ ಎಂಬ ಕಲಾಕೃತಿಗೆ ಹೋಲಿಸಲಾಗಿದೆ. ಜೇ.ಗ್ರೀಫ್ ಫ್ಲೇರೆಂಟೈನರು ಉತ್ತಮ ಚಿತ್ರಕಾರರಾಗಿದ್ದರೂ ಸಹ ಬಹುಶಃ ವೇದನೆಯನ್ನು ವಿವರಿಸುವುದರಲ್ಲಿ ಈ ಚಿತ್ರಕ್ಕೆ ಸಮರಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ
ಕಠಿಣವಾದ ಕಗ್ಗಲ್ಲುಗಳನ್ನು ಪ್ರಾಚೀನ ಉಪಕರಣಗಳಿಂದಕೆತ್ತಿದಂಥವು. ಮೊದಲಿಗೆ ನಿಖರವಾದ ಯೋಜನೆಯನ್ನು ರೂಪಿಸಿಕೊಂಡು ಮೇಲ್ಭಾಗದಿಂದ ಕೆತ್ತಿಕೊಂಡು ಕೆಳಭಾಗಕ್ಕೆ ಬರುತ್ತಿರುವಾಗ್ಗೆ ಕಲ್ಲು ಕಡೆಯುವವರು ಸ್ಥಂಬಗಳಿಗಾಗಿ ದಪ್ಪದಾದ ಶಿಲೆಗಳನ್ನು ಹಾಗೇ ಬಿಟ್ಟಿರುತ್ತಾರೆ. ನಂತರ ಅವರು ಅವುಗಳನ್ನು ಕಂಬಗಳಾಗಿ ಕೆತ್ತುತ್ತಾರೆ. ಇಲ್ಲಿ ಸುತ್ತಿಗೆ, ಉಳಿ ಮತ್ತು ಗುದ್ದಲಿಯಿಂದ ಕೊರೆಯುವ ಕೆಲಸ ಸುದೀರ್ಘವಾಗಿ ನಡೆಯಿತ್ತದೆ೧. ದೇಶದಲ್ಲಿನ ಸಹಸ್ರಾರು ಕಲ್ಲು, ಮರ ಮತ್ತು ಸುಣ್ಣದ ಕಲ್ಲಿನ ಮನೆಗಳು ನಶಿಸಿ ಹೋಗಿವೆ ಆದರೆ ಅದರ ಕುರುಹುಗಳು, ಇರಬಹುದಾದ ನಮೂನೆಯ ಮಾದರಿಗಳು ಇಲ್ಲಿ ಸಿಗುತ್ತವೆ. ಅಗಲವಾದ ಹಣೆ, ಕೊರಳ ಸರ ಕೈಯಲ್ಲಿ ಹೂ ಹಿಡಿದ ಸ್ತ್ರೀಯರು ಇಲ್ಲಿನ ಚಿತ್ರಗಳಲ್ಲಿ ಕಾಣುತ್ತಾರೆ. ಇಲ್ಲಿ ಚಿತ್ರಿತವಾದ ಅಸಂಖ್ಯಾತ ಚಿತ್ರಗಳಲ್ಲಿ ಜಾತ್ಯಾತೀತ ಮನೋಭಾವ ಎದ್ದು ಕಾಣುತ್ತದೆ
ಉತ್ಕೃಷ್ಟವಾದ ಸೌಂದರ್ಯ, ಅಪ್ರತಿಮವಾದ ಭಾವ ಭಂಗಿಗಳು, ವರ್ಣವಿನ್ಯಾಸ, ತುಲನಾತ್ಮಕವಾದ ಚಿತ್ರಸಂಯೋಜನೆ, ಉತ್ತಮವಾದ ನೆರಳು ಬೆಳಕುಗಳ ಮೂಡಿಸುವಿಕೆ, ಚಿತ್ರಗಳಿಗೆ ಎಳೆದ ದಪ್ಪನಾದ ಹೊರಮೈ ರೇಖೆಗಳು ಆ ಕಲಾವಿದರ ಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿದೆ. ಎಲ್ಲಿಯೂ ಅಭಾಸವೆನಿಸದ ಕಲಾವಂತಿಕೆ ಮತ್ತು ಅಸಂಗತವಾದ ಚಿತ್ರಗಾರಿಕೆಗೆ ಎಡೆಮಾಡಿಕೊಡದೆ ಎಲ್ಲ ಕಾಲಕ್ಕೂ ತನ್ನ ಕಲಾನೈಪುಣ್ಯವನ್ನು ಸಾರಿ ಹೇಳುವ ಹಾಗೆ ತನ್ನ ರೇಖಾಲಾಲಿತ್ಯಗಳಿಂದ ಕೂಡಿದ ಸ್ತ್ರೀ-ಪುರುಷ ಮತ್ತಿತರ ವಿನ್ಯಾಸಗಳು ಬಹಳ ಸುಂದರವಾಗಿವೆ. ಇಲ್ಲಿ ಗಮನಾರ್ಹವಾದ ಸಂಗತಿಯೆಂದರೆ ಗೋಡೆಗಳ ಹೊರಮೈಯನ್ನು ಸಿಧ್ಧಪಡಿಸುವಿಕೆ೩. ಅಂದಿನ ಅರಮನೆ, ಜನಜೀವನ ಶೈಲಿ, ಮಹಾರಾಜರ ಸಭೆ, ನಗರ, ಹಳ್ಳಿ, ಹಜಾರ, ಮಹಾದ್ವಾರ, ರಸ್ತೆ, ಗುಡಿಸಲು, ಸ್ತೂಪ, ದೇಗುಲ, ವಸ್ತ್ರವಿನ್ಯಾಸ, ಆಭರಣ, ಸಂಗೀತವಾದ್ಯ, ಪಾತ್ರೆ, ಆಯುಧ, ಯುಧ್ಧ ಸನ್ನಿವೇಶ, ದೇಶ-ವಿದೇಶೀಯರ ಮಾನವಾಕೃತಿ, ವಿವಿಧ ವರ್ಣದ ಜನಾಂಗ, ಮಾನವ ಪಕ್ಷಿಗಳ ಮಿಳಿತದ ಯಕ್ಷ-ಕಿನ್ನರ, ದೇವ-ದೇವತೆ, ಸ್ವರ್ಗ, ಪಾರಮಾರ್ಥಿಕ ಸಂಗೀತದವರಾದ ಗಂಧರ್ವ, ದೇವನರ್ತಕಿ ಅಪ್ಸರೆ, ಅಂದಿನ ನಂಬಿಕೆ, ಬಳಕೆ ಮತ್ತಿತರ ಚಿತ್ರಗಳು ಅಂದಿನ ನಮ್ಮ ಪರಂಪರೆಗೆ ಹಿಡಿದ ಕನ್ನಡಿಯಾಗಿದೆ. ವಾಸ್ತುಶಿಲ್ಪ, ಚಹಿತ್ರಕಲೆ ಮತ್ತಿತರ ವಿದ್ಯಾರ್ಥಿಗಳಿಗೆ ಸಂಶೋಧನಾ ದೃಷ್ಟಿಯಿಂದ ಮಹತ್ತರವಾಗಿದೆ೨. ಗುಹಾಂತರ ಎರಡರ ಮೇಲ್ಛಾವಣಿಯಲ್ಲಿ ಇಬ್ಬರು ವಿದೂಷಕರ ಚಿತ್ರಗಳಿವೆ ಇದರಿಂದ ನಮಗೆ ಅಂದಿನ ಕಾಲದ ಹಾಸ್ಯಪ್ರಜ್ಞೆಯನ್ನು ಕಾಣಬಹುದು.
ಎರಡನೇ ಗುಹಾಂತರವು ಕ್ರಿ.ಶ. ಆರನೇ ಶತಮಾನದಲ್ಲಿ ನಿರ್ಮಾಣ ಮಾಡಲಾಯಿತೆಂದು ಊಹಿಸಲಾಗಿದೆ. ಈ ಗುಹೆಯ ಸ್ಥಂಭಗಳಿಂದ ಹಿಡಿದು ಮೂರ್ತಿಗಳವರರೆಗೆ ಒಂದು ಇಂಚೂ ಅಂತರವಿಲ್ಲದೆ ವಿವಿಧ ಚಿತ್ರಗಳನ್ನು ಚಿತ್ರಿಸಿ ಬಣ್ಣಗಳಿಂದ ಪೂರ್ಣಗೊಳಿಸಲಾಗಿದೆ. ಇಲ್ಲಿನ ಮುಖಭಾವನೆಗಳಲ್ಲಿ ಕಣ್ಣುಗಳಲ್ಲಿ ಇಂದಿಗೂ ಕರುಣಾರಸವು ಕಾಣುತ್ತದೆ. ಆ ಚಿತ್ರಗಳು ದೊಟ್ಟದಾಗಿ ಕಂಡರೂ ಭಾರವೇ ಇಲ್ಲದಂತೆ ಹಗುರವಾಗಿ ಗಾಳಿಯಲ್ಲಿ ತೇಲುವಂತೆ ಭಾಸವಾಗುತ್ತವೆ. ಈ ಗುಹೆಯ ಚಿತ್ರಗಳು ಜಗತ್ತಿನ ಇತ್ಕೃಷ್ಟ ಚಿತ್ರಗಳ ಸಾಲಿಗೆ ಸೇರುತ್ತವೆ೩. ಇಲ್ಲಿನ ಮೇಲ್ಛಾವಣಿಯನ್ನು ಗಮನಿಸಿದರೆ ಅಂದಿನ ಕಾಲದಲ್ಲಿ ನಾವು ಈಗ ಬಳಸುವಂಥ ಪೆಂಡಾಲ್ ಮಾದರಿಯನ್ನು ಅವರೂ ಬಳಸುತ್ತಿದ್ದರೆಂಬುದನ್ನು ನಾವು ಗಮನಿಸಬಹುದು. ಭಿತ್ತಿ ಚಿತ್ರಗಳನ್ನು ರಚಿಸಲು ಗೋಡೆಯ ಮೇಲ್ಮೈಯನ್ನು ಸಿಧ್ಧಪಡಿಸುವ ರೀತಿ ಮೊದಲನೆಯದಾಗಿ ಕಲ್ಲಿನ ಧೂಳು ಅಥವಾ ಮರಳು, ತರಕಾರಿ ಮತ್ತು ಸೊಪ್ಪುಗಳ ನಾರುಗಳು, ಭತ್ತದ ಹೊಟ್ಟು, ಹುಲ್ಲು, ಕೆಮ್ಮಣ್ಣು ಮತ್ತು ಜೇಡಿ ಮಣ್ಣಿನೊಂದಿಗೆ ಬೆರೆಸಿ ಗೋಡೆ ಮತ್ತು ಮೇಲ್ಛಾವಣಿಗಳಿಗೆ ಒರಟು ಮೈಯಂತೆ ಹಚ್ಚುತ್ತಾರೆ. ಇದು ಗೋಡೆಯನ್ನು ಮತ್ತು ಚಿತ್ರಗಳನ್ನು ಭದ್ರವಾಗಿ ಹಿಡಿಯುವ ಹಲ್ಲುಗಳಂತೆ ಕೆಲಸ ಮಾಡುತ್ತದೆ. ಎರಡನೆಯದಾಗಿ ಮಣ್ಣು, ಕೆಮ್ಮಣ್ಣುಗಳನ್ನು ನಯವಾದ ಕಲ್ಲುಪುಡಿ ಅಥವಾ ಮರಳು, ತರಕಾರಿ ಅಥವಾ ಸೊಪ್ಪುಗಳ ನಾರು, ಮಿಶ್ರಣವನ್ನು ನುಣುಪಾಗಿ ಹಚ್ಚುತ್ತಾರೆ. ಅಂತಿಮವಾಗಿ ನವಿರಾದ ತಿಳಿ ಸುಣ್ಣದ ಕಲ್ಲಿನ ಮಿಶ್ರಣವನ್ನು ನಾಜೂಕಾಗಿ ಹಚ್ಚುತ್ತಾರೆ. ನುಣುಪಾಗಿ ಸಿಧ್ಧವಾದ ಈ ಮೇಲ್ಮೈ ಮೇಲೆ ಮೊದಲನೆಯದಾಗಿ ಹೊರಮೈ ರೇಖೆಗಳನ್ನು ಹಾಕುವ ಮೂಲಕ ಚಿತ್ರಗಳನ್ನು ಆರಂಭಿಸಿ ನಂತರ ಬೇಕಾದ ವರ್ಣಗಳನ್ನು ಮಿಶ್ರಣಮಾಡಿ ಸೂಕ್ತ ಅವಕಾಶಗಳಲ್ಲಿ ತುಂಬಲು ಬಳಸಿಕೊಳ್ಳುತ್ತಾರೆ. ಚಿತ್ರಗಳಲ್ಲಿ ಮೂರು ಆಯಾಮಗಳನ್ನು ತರುವ ಸಲುವಾಗಿ ಚಿತ್ರಗಳಲ್ಲಿ ನೆರಳು ಬೆಳಕುಗಳನ್ನು ಮೂಡಿಸುತ್ತಾರೆ. ಖನಿಜಗಳಿಂದ ಪಡೆದ ಹಸಿರು, ನಿಂಬೇ ಹಣ್ಣು, ಜೇಡಿಮಣ್ಣು, ಜಿಪ್ಸಮ್ ಲವಣ, ದೀಪದ ಮಸಿ, ಹರಳುಗಳು ಮತ್ತಿತರ ನೈಸರ್ಗಿಕವಾಗಿ ದೊರೆಯಬಲ್ಲ ಹೂ, ಎಲೆ ಮೊದಲಾದವುಗಳನ್ನು ಬಣ್ಣಗಳ ತಯಾರಿಗಾಗಿ ಬಳಸಿಕೊಳ್ಳುತ್ತಿದ್ದರು. ಆಗಿನ ಕಾಲದಲ್ಲಿ ನೀಲ ವರ್ಣವು ನಮ್ಮಲ್ಲಿ ದೊರೆಯದ ಕಾರಣ ಪರ್ಷಿಯಾದಿಂದ ತರಿಸಿಕೊಳ್ಳುತ್ತಿದ್ದರು. ಆ ಬಣ್ಣ ಈಗಲೂ ಈಗ ತಾನೇ ಹಚ್ಚಿದಷ್ಟು ತಾಜಾವಾಗಿಯೇ ಇದೆ ಇದೊಂದು ವಿಸ್ಮಯ. ಸಾಧಾರಣವಾಗಿ ವರ್ಣಗಾರಿಕೆ ಮಾಡುವಾಗ ಮರದ ಅಂಟನ್ನು ಅದರ ಬಣ್ಣಗಳ ಸ್ಥಿರತೆಗಾಗಿ ಬಳಸುತ್ತಾರೆ ಆದರೆ ಅಜಂತಾ ಗುಹೆಗಳಲ್ಲಿನ ಚಿತ್ರಗಳಲ್ಲಿ ಈ ಯಾವುದೇ ಅಂಟುಗಳನ್ನು ಬಳಸದೇ ಕೇವಲ ನೀರಿನ ಮಿಶ್ರಣದಿಂದ ಮಾತ್ರ ಚಿತ್ರಿಸಲಾಗಿದೆ. ಒದ್ದೆಯಾದ ಗೋಡೆಯ ಮೇಲ್ಮೈ ಮೇಲೆ ನೇರವಾಗಿ ಹಚ್ಚಿದ ಈ ಬಣ್ಣಗಳು ಇಂದಿಗೂ ಸ್ಥಿರವಾಗಿ ತಾಜಾ ತನದಿಂದ ಇವೆ. ಅಜಂತಾದ ಈ ಚಿತ್ರಗಳಿಗೆ ಸಮಾನವಾದವು ಇನ್ನೊಂದಿಲ್ಲ.
ಬುದ್ದ ದೇವನ ಮತ್ತು ಇತರ ಗಂಧರ್ವ ಸ್ತ್ರೀಯರು ಧರಿಸಿರುವ ಮುತ್ತುಗಳ ಹಾರಗಳ ಮೇಲೆ ಟಾರ್ಚ ಬೆಳಕನ್ನು ಹರಿಸಿದಾಗ ಇಂದಿಗೂ ಹೊಳೆಯುತ್ತವೆ ಇಂಥಾ ತಂತ್ರಗಾರಿಕೆಗೆ ಮಾರುಹೋಗದವರಾರು? ಇಲ್ಲಿ ಮಾಡಿರುವ ಅಂಚುಗಳ ವಿನ್ಯಾಸಗಳು ಈಗಿನ ಸೋಲಾಪುರದ ಹಾಸಿಗೆ ಮತ್ತು ಹೊದಿಕೆಗಳಷ್ಟು ವರ್ಣಮಯವಾಗಿ ಆಕರ್ಷಕವಾಗಿವೆ. ಇದೇ ರೀತಿಯ ವಿನ್ಯಾಸಗಳನ್ನು ಸೀರೆಯ ಅಂಚು, ಸೆರಗು ಮತ್ತು ಅದರ ಮೇಲೆಲ್ಲಾ ಸಂಯೋಜಿಸಿರುವುದನ್ನು ಇಂದಿನ ಆಧುನಿಕ ಕಾಲದಲ್ಲೂ ಕಾಣಬಹುದು.
ಇಲ್ಲಿ ಜಾನಪದ ಚಿತ್ರಗಳಲ್ಲಿ ಸಂಸ್ಕೃತಿಯ ಮಹತ್ವವನ್ನು ಸಾರುವ ಅಂಶ ಕಳೆದು ಹೋಗಿಲ್ಲ. ಕಾರಣ ಅನಕ್ಷರಸ್ಥ ಮತ್ತು ಅಜ್ಞಾತರು ಮಾಡಿದ ಚಿತ್ರಗಳಲ್ಲಿ ಕಾಣುವ ಸಂಶೋಧನಾ ಅಂಶವು ನನಗೆ ಇಲ್ಲೂ ಕಾಣುತ್ತಿದೆ. ಇಲ್ಲಿ ಕಾರ್ಯ ನಿರ್ವಹಿಸಿದ ಜನಸ್ತೋಮ, ಅವರ ನಿರ್ಮಾಣ ತಂತ್ರಗಾರಿಕೆ, ಬಣ್ಣಗಳ ಸಿಧ್ಧತೆ ಮತ್ತು ಆಯ್ಕೆ ಮಾಡಿಕೊಂಡ ವಸ್ತು ವಿಷಯಗಳು ಜನಪದೀಯವೆಂದು ಆ ಮೂಲಕ ಒಂದು ಸಂಸ್ಕೃತಿಯನ್ನೂ, ಜಾನಪದವನ್ನೂ ನಾವು ಕಟ್ಟಿಕೊಳ್ಳಬಹುದೆಂದು ನನ್ನ ಬಲವಾದ ನಂಬಿಕೆ.
ಅಜಂತ ಕಲೆಯು ಕ್ರಿ. ಪೂ. ಇನ್ನೂರ ಐವತ್ತರಿಂದ ಕ್ರಿ. ಶ ಏಳುನೂರ ಐವತ್ತರವರೆಗೆ ಸುಮಾರು ಒಂಭತ್ತು ಶತಮಾನಗಳು ನಿರ್ಮಾಣವಾಗಿದೆ. ಈ ಕಲೆಯನ್ನು ಪೂಷಿಸಲು ಆಯಾ ಕಾಲಘಟ್ಟದ ಶಾಲಿವಾಹನ, ಶಾತವಾಹನ, ವಾಕಾಟಕ, ಮಥುರ, ನಳಂದ, ನಾಗಸೇನ, ಮಿಳಿಂದ, ಪರಿಜನ್, ವರಾಹದೇವ, ಧರ್ಮಕೀರ್ತನ ಮತ್ತು ಮೃತ್ಯುಂಜಯ ಮೊದಲಾದ ರಾಜರು ಧರ್ಮ ಪ್ರಚಾರಕ್ಕಾಗಿ ಹೇರಳವಾಗಿ ಧನಸಹಾಯ ಮಾಡಿ ಪ್ರೋತ್ಸಾಹಿಸಿದ್ದಾರೆ. ಆಗಿನ ಸಮಯದಲ್ಲಿ ವಿದ್ಯುತ್ ಇಲ್ಲದ ಕಾರಣ ಆ ಕಲಾವಿದರೆಲ್ಲಾ ಸೂರ್ಯನನ್ನು ಅವಲಂಬಿಸಿ ಕೆಲಸವನ್ನು ಮಾಡಿದ್ದಾರೆ. ಸೂರ್ಯ ಉದಯಿಸಿದಾಗ ಅದರ ವಿರುದ್ಧ ದಿಕ್ಕಿನಲ್ಲಿ ಪಶ್ಚಿಮಾಭಿಮುಖವಾಗಿ ಚಿತ್ರಗಳನ್ನು ಮೂಡಿಸಿದ್ದಾರೆ. ಅದೇ ಸೂರ್ಯಾಸ್ಥ ಸಮಯದಲ್ಲಿ ಪೂರ್ವಾಭಿಮುಖವಾಗಿ ಚಿತ್ರಿಸಿದ್ದಾರೆ. ಗುಹೆಯ ಒಳಭಾಗಕ್ಕೆ ಆಳವಾಗಿ ಹೋದಂತೆ ಚಿತ್ರಿಸಬೇಕಾದ ಗೋಡೆಯ ಕೆಳಗೆ ಸಮಾಂತರವಾಗಿ ನೀರು ನಿಲ್ಲುವಂತೆ ವ್ಯವಸ್ಥೆ ಮಾಡಿ ಗೋಡೆಯ ಕೆಳಭಾಗದಿಂದ ಮೇಲ್ಭಾಗಕ್ಕೆ ಚಿತ್ರಗಳನ್ನು ಮಾಡುತ್ತಿದ್ದುದು ಅಚ್ಚರಿ. ಏಕೆಂದರೆ ಚಿತ್ರಗಳನ್ನು ಮೇಲಿನಿಂದ ಕೆಳಕ್ಕೆ ಎಡದಿಂದ ಬಲಕ್ಕೆ ಚಿತ್ರಿಸುವುದು ಸರಳ ಮತ್ತು ಸಾಮಾನ್ಯ. ಆದರೆ ಇದು ತದ್ವಿರುದ್ಧವಾಗಿದ್ದು ಚಿತ್ರಿಸಲು ಕಷ್ಟಕರವಾದುದು. ಅಂಥಾದ್ದರಲ್ಲೂ ಈ ಚಿತ್ರಗಳು ಇಷ್ಟು ಸುಂದರವಾಗಿ ಮೂಡಿ ಬಂದಿರುವುದು ಸೋಜಿಗದ ಸಂಗತಿ.
ರಾಜಕೀಯ ಪರಿಸ್ಥಿತಿಗಳಲ್ಲಿ ಈ ಕಲಾವಿದರಿಗೆ ಸಲ್ಲಬೇಕಾದ ಸಂಭಾವನೆಗಳು ಮುಂದಿನ ರಾಜಪೀಳಿಗೆಯವರು ನೀಡಲು ಸಾಧ್ಯವಾಗದಾಗ ಕಲಾವಿದರೆಲ್ಲ ಆ ಚಿತ್ರ, ಶಿಲ್ಪ ಕೆಲಸಗಳನ್ನೂ ಹೇಗಿದ್ದವೋ ಹಾಗೇ ತೊರೆದು ಹೊರಟುಬಿಟ್ಟರು. ಹಾಗೆ ಒಂದು ಸಾವಿರ ವರ್ಷಗಳ ಸಮಯ ಈ ಕಲಾತಾಣವು ಆ ಪ್ರಕೃತಿಯ ಮಡಿಲಿನ ಮಣ್ಣಿನಲ್ಲಿ ಲೀನವಾಗಿ ಕಣ್ಮರೆಯಾಗಿ ಹೋಗಿತ್ತು. ಯಾವ ನರಮಾನವನಿಗೂ ಇಲ್ಲೊಂದು ಅಪ್ರತಿಮ ಕಲಾನಿಧಿ ಇದೆ ಎಂಬ ಕುರುಹೇ ಇಲ್ಲದಾಯ್ತು. ನಂತರ ಬ್ರಿಟೀಷರ ಆಡಳಿತ ಆರಂಭವಾಯಿತು. ಆಗ ಬಂದ ಮೇಜರ್ ಎಡ್ವರ್ಡ ಎಂಬ ಬ್ರಿಟೀಷ್ ಅಧಿಕಾರಿಯು ಹುಲಿಯ ಭೇಟೆಗಾಗಿ ಈ ಕಾಡಿಗೆ ಬಂದಿದ್ದ. ಹಾಗೆ ಬೇಟೆಯಾಡುತ್ತ ಬಂದವನು ಸಂಖ್ಯೆ ಹತ್ತನೇ ಗುಹೆಗೆ ಬಂದು ಗಾಯಗೊಂಡ ಹುಲಿಗಾಗಿ ಹುಡುಕುತ್ತಿದ್ದಾಗ ಆಕಸ್ಮಿಕವಾಗಿ ತನ್ನ ದೂರದರ್ಶಕದ ಮಸೂರದ ಬೆಳಕು ಪ್ರತಿಫಲನಗೊಂಡು ಗುಹೆಯ ಮೇಲ್ಛಾವಣಿಗೆ ತಗುಲಿತು. ಆ ಚಿತ್ರ ವಿಸ್ಮಯವನ್ನು ಕಂಡು ಹೈದರಾಬಾದ್ ನಿಜಾಮರಿಗೆ ಪತ್ರಬರೆದು ಇಲ್ಲಿ ಅಭೂತಮೂರ್ವವಾದ ಯಾವುದೋ ನಿಧಿ ಇದೆ ಉತ್ಖನನದ ಕೆಲಸ ಆಗಬೇಕು ಎಂದು ಪತ್ರ ಬರೆದಿದ್ದನಂತೆ. ಹಾಗೆ ಮುಂದುವರೆದ ಗುಹೆಗಳಲ್ಲಿನ ಮಣ್ಣನ್ನು ತೆಗೆಯಲು ಸುದೀರ್ಘ ಮುವತ್ತೈದು ವರ್ಷಗಳೇ ಬೇಕಾದವು.
ಲಕ್ಷ್ಮೀನಾರಾಯಣ ಟಿ
ಮಾಹಿತಿಗಳು :
೧. ಪುಟ:೫. ಪುಸ್ತಕ: ಅಜಂತ-ಎಲ್ಲೋರ. ಪ್ರಕಟಣೆ: ಮೇಘ ಪಬ್ಲಿಕೇಷನ್ಸ್ ಔರಂಗಬಾದ್. ೨.ಪುಟ:೬ ೩.ಪುಟ:೧೬
೨. ಆರ್. ಸಿ. ಮಿಶ್ರಾ ಡೈರೆಕ್ಟರ್ ಜನರಲ್(ಐ/ಸಿ) ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ. ಪುಸ್ತಕ-ಅಜಂತ – ವರ್ಡ ಹೆರಿಟೇಜ್. ಪ್ರಕಟಣೆ: ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ. ೨.ಪುಟ:೧೮ ೩.ಪುಟ:೨೫
೩. ಪುಸ್ತಕ-ಅಜಂತ – ವರ್ಡ ಹೆರಿಟೇಜ್. ಪ್ರಕಟಣೆ: ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ.
೪. ಪುಟ-೩೯. ಪುಸ್ತಕ: ಅಜಂತ-ಎಲ್ಲೋರ. ಪ್ರಕಟಣೆ: ಮೇಘ ಪಬ್ಲಿಕೇಷನ್ಸ್ ಔರಂಗಬಾದ್.
೫. ಆರ್. ಸಿ. ಮಿಶ್ರಾ ಡೈರೆಕ್ಟರ್ ಜನರಲ್(ಐ/ಸಿ) ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ. ಪುಸ್ತಕ-ಅಜಂತ – ವರ್ಡ ಹೆರಿಟೇಜ್. ಪ್ರಕಟಣೆ: ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ. ಪುಟ:೧೮ ಪುಟ:೧೯