ಪರಿಚ್ಛೇದ – 4
–ಪ್ರಾಸಾದ ಶಿಖರದಲಿ–
ಆಕಾಶದಲ್ಲಿ ಪೂರ್ಣಚಂದ್ರ. ಬೆಳುದಿಂಗಳ ಬೆಳಕಿನಲ್ಲಿ ಕಪೋತಕೂಟ ನಗರ ಸುಂದರವಾಗಿ ಕಂಗೊಳಿಸುತ್ತಿದೆ.
ವಿಟಂಕ ರಾಜ್ಯವು ನಾಲ್ಕು ಕಡೆ ಭೂಮಿಯಿಂದ ಸ್ವಲ್ಪ ಎತ್ತರವಾದ ದಿಣ್ಣೆಯ ಮೇಲೆ ಇದೆ. ದಿಣ್ಣೆಯೂ ಸಮತಟ್ಟಾಗಿಲ್ಲ. ರಾಜ್ಯದ ಮಧ್ಯಭಾಗಕ್ಕೆ ವೃತ್ತಾಕಾರವಾಗಿ ಹೋದಂತೆಲ್ಲ ಅದು ಎತ್ತರವಾಗುತ್ತ ಹೋಗುತ್ತದೆ. ಕೇಂದ್ರ ಸ್ಥಳದಲ್ಲಿ ಕಪೋತಕೂಟ ನಗರ. ರಾಜ್ಯದ ಸರ್ವೋಚ್ಚ ಶಿಖರದ ಮೇಲೆ ಇರುವುದರಿಂದಲೋ ಏನೋ ಅದಕ್ಕೆ ಕಪೋತಕೂಟವೆಂಬ ಹೆಸರು ಬಂದಿರ
ಬಹುದು. ನಗರವು ರಾಜ್ಯದ ಸಂಕ್ಷಿಪ್ತ ಪ್ರತಿರೂಪ. ಎಲ್ಲಿಯೂ ನೆಲ ಸಮತಟ್ಟಾಗಿಲ್ಲ. ನಾಲ್ಕು ಕಡೆ ಎತ್ತರವಾದ ಬಲವಾದ ಕೋಟೆ. ಮಹೇಶ್ವರನ ಜಟಾದೂಟದಲ್ಲಿನ ಚಂದ್ರಕಲೆಯ ಹಾಗೆ ಆ ಕೋಟೆಯ ಒಳಗೆ ಆ ನಗರವು ಅಪೂರ್ವವಾಗಿ ಶೋಭಿಸುತ್ತಿದೆ.
ವಸಂತ ಋತುವಿನ ರಾತ್ರಿಯಲ್ಲಿ ಬೆಳುದಿಂಗಳ ಜೊತೆಗೆ ದೀಪಗಳಿಂದ ಬೆಳಗಿದ ನಗರದ ಸೌಂದರ್ಯವು ನೂರ್ಮಡಿಯಾಗಿ ವರ್ಧಿಸಿದೆ. ಅಂಕು ಡೊಂಕಾದ ರಸ್ತೆಗಳು. ಎರಡು ಪಕ್ಕಗಳಲ್ಲಿ ಕಲ್ಲುಕಟ್ಟಡಗಳು. ಅಲ್ಲಲ್ಲಿ ಪ್ರಮೋದವನಗಳು. ರಸ್ತೆಗಳು ಕೂಡುವ ಸ್ಥಳಗಳಲ್ಲಿ ಗೋಮುಖದಿಂದ ಮೇಲೆ ಚಿಮ್ಮುವ ಕಾರಂಜಿಗಳು. ಶಿಲಾಪ್ರತಿಮೆಗಳಾದ ದೀಪದ ಮಲ್ಲಿಯರ ಕೈಗಳಲ್ಲಿರುವ ಪಂಜುಗಳಿಂದ ರಾಜಬೀದಿಯು ಬೆಳಗುತ್ತಿದೆ. ಅನೇಕ ನರನಾರಿಯರು ವಿಚಿತ್ರ ವೇಷಭೂಷಗಳಿಂದ ಸಿಂಗರಿಸಿಕೊಂಡು ಅತ್ತ ಇತ್ತ ಅಡ್ಡಾಡುತ್ತಿದ್ದಾರೆ. ತಂಪಾದ ಬೆಳುದಿಂಗಳಲ್ಲಿ ವಾಯು ಸೇವನೆ ಮಾಡುತ್ತ ಹಗಲಿನ ಬಿಸಿಲಬೇಗೆಯನ್ನು ಪರಿಹರಿಸಿಕೊಳ್ಳುತ್ತಿದ್ದಾರೆ. ಪ್ರಮೋದ ವನದಲ್ಲಿ ಒಮ್ಮೊಮ್ಮೆ ಕೊಳಲ ಗಾನ ಕೇಳಿಬರುತ್ತದೆ. ಮತ್ತೆ ಎಲ್ಲಿಂದಲೋ ಲತಾಕುಂಜಗಳಿಂದ ಮೃದುವಾಗಿ ಮಾತನಾಡಿಕೊಳ್ಳುತ್ತಿರುವ ಪ್ರಣಯ ಕೂಜನ ಹಾಗೂ ಕಿಲಕಿಲ ನಗು ಕೇಳಿಬರುತ್ತಿದೆ. ಜೊತೆ ಜೊತೆಗೆ ಕೈ ಬಳೆಗಳ ಸದ್ದು ಕಿವಿಗಳನ್ನು ತಾಕುತ್ತಿದೆ. ಕೆಲವು ಕಡೆ ಮದದಿಂದ ನೆಲದ ಮೇಲೆ ಹೊರಳಾಡುತ್ತ ಕೆಲವರು ಬಿದ್ದಿದ್ದಾರೆ. ಕಪೋತಕೂಟದಲ್ಲಿ ಪಾರಿವಾಳಗಳ ಜೋಡಿಗೇನೂ ಕೊರತೆ ಇಲ್ಲ.
ನಗರದ ಒಂದು ರಸ್ತೆ. ದೀಪಮಾಲೆಗಳಿಂದ ಝಗ ಝಗಿಸುತ್ತಿದೆ. ವಿಲಾಸಿನಿಯ ಹಾಗೆ ಇರುಳಿನಲ್ಲಿ ಬೀದಿಯ ಸೊಬಗೇ ಸೊಬಗು. ಕಾರಣ ಇದು ವಿಲಾಸದ ತಾಣ. ದಾರಿಯ ಇಕ್ಕೆಲಗಳಲ್ಲಿ ಲೆಕ್ಕವಿಲ್ಲದಷ್ಟು ಅಂಗಡಿಗಳು. ಕೆಲವು ಅಂಗಡಿಗಳಲ್ಲಿ ಸುವಾಸಿತ ಬೀಡಾಗಳ ಮಾರಾಟ. ಮಾರಾಟ ಮಾಡುವವಳು ಚಂಚಲಾಕ್ಷಿ ಚಂದುಟಿಯ ಯುವತಿಯರು. ಕೊಳ್ಳುವವರಿಗೇನೂ ಕಡಿಮೆ ಇಲ್ಲ. ತರುಣಿಯ ರೂಪಕ್ಕೆ ಮರುಳಾದ ಯುವಕರ ಗುಂಪು ಅಂಗಡಿ ಸುತ್ತಲೂ ನೆರೆದಿರುತ್ತದೆ. ಪರಿಹಾಸ. ಕಣ್ಣ ಸನ್ನೆಗಳಿಂದಲೇ ಮಾತಾಡುವ ಯುವಕರ ನೆರವಿ. ಅಂಗಡಿಯವಳು ಸುಂದರಿಯೂ ರಸಿಕಳೂ ಆಗಿದ್ದಷ್ಟೂ ವ್ಯಾಪಾರ ಜೋರು.
ಅಂಗಡಿಗಳ ಮಧ್ಯೆ ಅಲ್ಲಲ್ಲಿ ಮದಿರಾಗೃಹಗಳು. ಪಿಪಾಸುಗಳಾದ ನಾಗರಿಕರು ತಮಗೆ ಬೇಕಾದ ಗೌಡೀ ಮಾಧವಿ ಮುಂತಾದ ಮದ್ಯವನ್ನು ಪಾನ ಮಾಡುತ್ತಿದ್ದಾರೆ. ಮದ್ಯಪಾನದಲ್ಲಿ ಆಸಕ್ತಿ ಇಲ್ಲದವರು ಬೇಲದ ಹಣ್ಣಿನ ಪಾನಕ, ಮಜ್ಜಿಗೆ ಅಥವಾ ಹಣ್ಣಿನ ರಸದ ಷರಬತ್ತನ್ನು ಕುಡಿದು ಶರೀರ ತಂಪು ಮಾಡಿಕೊಳ್ಳುತ್ತಿದ್ದಾರೆ. ಮದಿರಾಗೃಹಗಳ ಒಳಗೆ ಅನೇಕ ಕೊಠಡಿಗಳು. ಕೆಲವು ಸುಸಜ್ಜಿತ ಕೊಠಡಿಗಳು. ಅಲ್ಲಿ ನಗರದ ಧನಿಕ ವರ್ತಕರ ಮಕ್ಕಳು ರತ್ನಗಂಬಳಿಯ ಮೇಲೆ ಕುಳಿತು ಜೂಜಾಡುತ್ತಿದ್ದಾರೆ. ಕೆಲವು ಕೊಠಡಿಗಳಲ್ಲಿ ಪಕ್ಕವಾದ್ಯಗಳೊಡನೆ ಸಂಗೀತ ಕಛೇರಿ ನಡೆಯುತ್ತಿದೆ. ಮದಿರಾಗೃಹದ ದಾಸಿಯರು ಪಾನ ಪಾತ್ರೆಗಳನ್ನು ಹಿಡಿದು ಎಲ್ಲರಿಗೂ ಆಸವಗಳನ್ನು ವಿತರಿಸುತ್ತಿದ್ದಾರೆ.
ನಗರ ನಾರಿಯರ ಗೃಹದ್ವಾರಗಳಲ್ಲಿ ಹೂಮಾಲೆ ಜೋಲಾಡುತ್ತಿದೆ. ಒಳಗಿನಿಂದ ಗುಲಾಬಿ ಬಣ್ಣದ ಮಂದವಾದ ಬೆಳಕು ಹಾಗೂ ಮದಿರೆಯನ್ನು ಪಾತ್ರೆಗಳಿಗೆ ಹಾಕುತ್ತಿರುವ ಶಬ್ದ ದಾರಿ ಹೋಕರಿಗೆ ಅಮಲು ಹೆಚ್ಚಿಸುತ್ತಿದೆ.ಬೀದಿಯಲ್ಲಿ ಸುಖವನ್ನರಸುವ ನಾಗರಿಕರ ಮಂದಗತಿಯ ಓಡಾಟ, ಮದ ತರಿಸುವ ಹೂಗಳ ಸುವಾಸನೆ, ಪ್ರಸಾಧನ ಹಾಗೂ ಭೂಷಣಾದಿಗಳ ವೈಚಿತ್ರ್ಯ, ಕೆಲವೊಮ್ಮೆ ಆನಂದಾತಿರೇಕದಿಂದ ಹೊರಹೊಮ್ಮಿದ ಜೋರಾದ ನಗು, ಕೆಲವೊಮ್ಮೆ ಜಗಳ, ಬೈಗುಳದ ಮಾತುಗಳು. ಇವೆಲ್ಲವುಗಳ ಸಮ್ಮಿಶ್ರಿತ ಕೋಲಾಹಲ ಒಂದು ರೀತಿಯ ಅಪೂರ್ವ ಆಕರ್ಷಣೆಯನ್ನು ಉಂಟು ಮಾಡುತ್ತಿತ್ತು.
ಈ ವಿಲಾಸ ಕೇಂದ್ರದಿಂದ ದೂರವಾಗಿ ನಗರದ ಇನ್ನೊಂದು ಕಡೆ ಅರಮನೆ. ನಗರ ಎಲ್ಲಾ ಕಡೆ ಸಮತಟ್ಟಾಗಿಲ್ಲ. ಕೆಲವು ಕಡೆ ಎತ್ತರವಾಗಿದ್ದರೆ ಇನ್ನು ಕೆಲವು ಕಡೆ ತಗ್ಗು. ಅರಮನೆ ನಗರ ಮಧ್ಯದಲ್ಲಿ ಎಲ್ಲ ಪ್ರದೇಶಗಳಿಗಿಂತ ಎತ್ತರದಲ್ಲಿದೆ. ನಗರ ಪ್ರವೇಶ ಮಾಡಿ ಕತ್ತೆತ್ತಿ ನೋಡಿದರೆ ಮೊಟ್ಟ ಮೊದಲು ಕಣ್ಣಿಗೆ ಕಾಣುವುದು ಅರಮನೆಯ ಭೀಮಕಾಂತಿ ಹಾಗೂ ಅದರ ವಿಸ್ತಾರ. ಕಪೋತಕೂಟದ ದುರ್ಗದ ಮಧ್ಯದಲ್ಲಿ ಮತ್ತೊಂದು ದುರ್ಗವು ಗರ್ವದಿಂದ ತಲೆಯೆತ್ತಿ ನಿಂತಿದೆಯೋ ಎನ್ನುವ ಹಾಗೂ ಅರಮನೆಯು ಕಣ್ಣಿಗೆ ಕಾಣಿಸುತ್ತದೆ.
ಅರಮನೆಯ ಸುತ್ತಲೂ ಬಲಿಷ್ಠವಾದ ಕಲ್ಲಿನ ಪ್ರಾಕಾರ. ಪ್ರಾಕಾರದ ಒಳಗೆ ಸುರಂಗಗಳು. ನಗರಗಳು ಪ್ರಧಾನ ರಸ್ತೆಯು ಪ್ರಾಕಾರವನ್ನು ತಲುಪುವ ಜಾಗದಲ್ಲಿ ಎತ್ತರವಾದ ತೋರಣದ್ವಾರ. ಇದೇ ಅರಮನೆಯಿಂದ ಹೋಗಿ ಬರುವ ಮುಖ್ಯ ಪಥ. ಸಲಾಕಿಗಳಿಂದ ಮುಳ್ಳುಮುಳ್ಳಾಗಿರುವ ಕಬ್ಬಿಣದ ಬಲವಾದ ಬಾಗಿಲು, ಎರಡೂ ಪಕ್ಕಗಳಲ್ಲಿ ವರ್ತುಲಾಕಾರದ ದೊಡ್ಡ ತೋರಣ
ಸ್ತಂಭಗಳು. ಈ ತೋರಣ ಸ್ತಂಭಗಳಲ್ಲಿ ಕಾವಲುಗಾರರ ಮನೆಗಳು. ಭರ್ಜಿಗಳನ್ನುಹಿಡಿದ ಕಾವಲುಗಾರರು ಹಗಲು ರಾತ್ರಿ ತೋರಣದ್ವಾರವನ್ನು ಕಾಯುತ್ತಿರುತ್ತಾರೆ.
ತೋರಣವನ್ನು ದಾಟಿ ಮುಂದೆ ಹೋದರೆ ಎದುರಿಗೆ ಕಾಣುವುದೇ ಸಭಾಗೃಹ. ಅದರ ಹಿಂಭಾಗದಲ್ಲಿ ಮಂತ್ರಾಲೋಚನ ಗೃಹ. ಅಲ್ಲಿಂದ ಮುಂದೆ ಎಡ ಬಲಗಳಲ್ಲಿ ಅನೇಕ ಭವನಗಳು. ಕೋಷಾಗಾರ ಆಯುಧಾಗಾರ ಯಂತ್ರಾಗಾರ, ಅಕ್ಕಪಕ್ಕಗಳಲ್ಲಿದ್ದರೂ ಒಂದೊಂದೂ ಸ್ವತಂತ್ರವಾದ ವಿಶಾಲವಾದ ಕಟ್ಟಡಗಳು, ಮಧ್ಯಭಾಗದಲ್ಲಿ ರಾಜಮನೆತನದ ಅಂತಃಪುರ. ಮೂರು ಮಹಡಿಯ
ಅಮೃತಶಿಲೆಯ ಪ್ರಾಸಾದ- ಏಳು ಕೋಟೆಗಳ ನಡುವೆ ಇರಿಸಿದ ಮುತ್ತು ರತ್ನಗಳನ್ನು ಏಳುನೂರು ರಾಕ್ಷಸಿಯರು ನಿದ್ದೆಗೆಟ್ಟು ನಿರಂತರವಾಗಿ ಕಾಯುತ್ತಿದ್ದಾರೆಯೋ ಎಂಬಂತೆ ಆ ಅಂತಃಪುರದ ಪ್ರತಿಬಾಗಿಲಿನಲ್ಲಿಯೂ ಯವನ ಸ್ತ್ರೀಯರ ಪಹರೆ ಇದೆ.
ಈ ಮೂರು ಮಹಡಿಯ ಪ್ರಾಸಾದದ ಬಿಸಿಲು ಮಚ್ಚಿನ ಮೇಲೆ ಹೂ ಚೆಲ್ಲಿದ ಕೋಮಲ ರತ್ನಗಂಬಳಿಯ ಮೇಲೆ ಅರ್ಧಮರ್ಧ ಮಲಗಿರುವ ರಾಜಕುಮಾರಿ ರಟ್ಟಾ ಯಶೋಧರೆಯು ಪ್ರಿಯಸಖಿಯಾದ ಸುಗೋಪಳ ಜೊತೆ ವಿನೋದವಾಗಿ ಮಾತುಕತೆ ನಡೆಸುತ್ತಿದ್ದಾಳೆ. ಹಾಗೆ ನೋಡಿದರೆ. ಗಂಭೀರವಾದ ವಿಷಯವೇನೂ ಇಲ್ಲ. ಆಕಾಶದ ಕಡೆ ನೋಡುತ್ತ ಒಂದೆರಡು ಮಾತುಗಳು, ನಡುವೆ ಮೌನ, ಮತ್ತೆ ಒಂದೆರಡು ಮಾತು, ಅರವಂಟಿಗೆಯನ್ನು ನೋಡಿಕೊಳ್ಳುತ್ತಿದ್ದ ಸುಗೋಪಾಳ ಪರಿಚಯ ಪಾಠಕರಿಗೆ ಆಗಲೇ ಆಗಿದೆಯಲ್ಲವೆ! ಕುಮಾರಿ ರಟ್ಟಾ ಯಶೋಧರೆಯನ್ನೂ ಆಗ ನೋಡಿರಬಹುದು. ಆದರೆ ಗುರುತಿಸಿರಲಾರರು. ಆಕೆಯು ಕಿಶೋರ ಕಾರ್ತಿಕೇಯನ ಹಾಗೆ ಅರವಂಟಿಗೆಯ ಬಳಿ ಕಾಣಿಸಿಕೊಂಡು ಮಿಂಚಿ. ಮಾಯವಾಗಿದ್ದಳು. ಯಾರ ಕುದುರೆಯನ್ನು ಚಿತ್ರಕನು ಅಪಹರಿಸಿ ಪಲಾಯನ ಮಾಡಿದ್ದನೋ ಆಕೆ ಬೇರೆ ಯಾರೂ ಅಲ್ಲ. ಅವಳೇ ಬೇಟೆಗಾರನ ವೇಷದಲ್ಲಿದ್ದ ರಾಜ ನಂದಿನಿ ರಟ್ಟಾಯಶೋಧರೆ. ಹೂಣ ದುಹಿತೆಯಾದ ಅವಳು ಬೇಟಿಯುಡುಪು ಧರಿಸಿ ಬೇಟೆ ಆಡುವುದು ಅವಳ ಅಭ್ಯಾಸವಾಗಿತ್ತು.
ಮುಂದುವರೆಯುವುದು…
ಎನ್. ಶಿವರಾಮಯ್ಯ (ನೇನಂಶಿ)
ಚಿತ್ರಗಳು: ಮಂಜುಳಾ ಸುದೀಪ್