ಹಿಂದಿನ ಸಂಚಿಕೆಯಿಂದ….
ಹೋರಾಡಬೇಕಾದ ಸಂದರ್ಭ ಒದಗಿ ಬಂದರೆ ಚಿತ್ರಕ ಎಂದೂ ಧೈರ್ಯ ಕಳೆದುಕೊಳ್ಳುತ್ತಿರಲಿಲ್ಲ. ಯುದ್ಧಕ್ಕೆ ಮುಂಚೆ ಬುದ್ಧಿವಂತನಾದ ಸೇನಾಪತಿಯ ಹಾಗೆ ಅವನು ಎಲ್ಲ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡನು.
ರಟ್ಟಾಳ ಕೈ ಹಿಡಿದು ಅವನು ಅವಳನ್ನು ಕೊಠಡಿಗೆ ಕರೆದುಕೊಂಡು ಬಂದು ಕುಳ್ಳಿರಿಸಿದನು. ಅವಳ ಕೈ ಹಿಮದಂತೆ ಕೊರೆಯುತ್ತಿತ್ತು. ತುಟಿಗಳು ನಡುಗುತ್ತಿದ್ದವು. ನಾರೀಮಣಿ ಹೊರಗೆ ಪುರುಷರಂತೆ ಎಷ್ಟೇ ಚೆನ್ನಾಗಿ ಅಭಿನಯಿಸಿದರೂ, ಆಂತರ್ಯದಲ್ಲಿ ಅವರು ಅಬಲೆಯರು!
ಚಿತ್ರಕನು ಅವಳ ಮುಂದೆ ಕುಳಿತನು. ಧೈರ್ಯದಿಂದ ಅವಳನ್ನು ನಾಲ್ಕಾರು ಪ್ರಶ್ನೆ ಕೇಳಿ, ಕಿರಾತ ಮತ್ತು ಚಷ್ಟನ ದುರ್ಗದ ಬಗ್ಗೆ ತಿಳಿಯಬೇಕಾದ ವಿಷಯಗಳನ್ನು ಸಂಗ್ರಹಿಸಿಕೊಂಡನು. ರಟ್ಟಾ ಕೂಡ ಚಿತ್ರಕನಿಗೆ ವಿವರಣೆ ಕೊಡುತ್ತ ಕೊಡುತ್ತಾ ವ್ಯಾಕುಲತೆ ಕಳೆದುಕೊಂಡು ಸಾಕಷ್ಟು ಸಮಾಧಾನ ಚಿತ್ತಳಾದಳು.
ಈಗ ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರವಾಗಿ ಚಿತ್ರಕನು ‘ಎರಡು ಮಾರ್ಗಗಳಿವೆ. ಆದರೆ ತಾವು ಕಿರಾತನನ್ನು ವಿವಾಹವಾಗಲು ಸಮ್ಮತಿಸುವುದಾದರೆ ಯಾವ ಮಾರ್ಗವೂ ಪ್ರಯೋಜನಕ್ಕೆ ಬಾರದು’ ಎಂದನು.
ರಟ್ಟಾ- ಕಿರಾತನನ್ನು ವಿವಾಹವಾಗುವುದಕ್ಕೆ ಮೊದಲೇ ನಾನು ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ.
ಚಿತ್ರಕ- ಆ ಎರಡು ಮಾರ್ಗಗಳಾಗುವುದೆಂದರೆ, ಮೊದಲನೆಯದು ಕಪೋತಕೂಟಕ್ಕೆ ಹೋಗುವುದು. ಸೈನ್ಯ ತೆಗೆದುಕೊಂಡು ಚಷ್ಟನ ದುರ್ಗದ ಮೇಲೆ ದಾಳಿ ಮಾಡಿವುದು. ಸೈನ್ಯವನ್ನೆಲ್ಲ ಕೂಡಿ ಹಾಕಿ ಹೊರಡಬೇಕಾದರೆ ಸಾಕಷ್ಟು ಸಮಯ ಹಿಡಿಯುತ್ತದೆ. ಚಷ್ಟನ ದುರ್ಗ ಸಣ್ಣ ದುರ್ಗವೇ ಆದರೂ ಐನೂರು ಮಂದಿ ಸೈನಿಕರಿಗಿಂತ ಕಡಿಮೆ ಸೈನ್ಯ ದುರ್ಗದ ಮೇಲೆ ದಾಳಿ ಮಾಡಲು ಅಸಮರ್ಥವಾಗುತ್ತದೆ.
ರಟ್ಟಾ- ಎರಡನೆಯ ಮಾರ್ಗವಾವುದು?
ಚಿತ್ರಕ- ಎರಡನೆಯ ಮಾರ್ಗ, ಸ್ಕಂದಗುಪ್ತರ ಸನ್ನಿಧಿಗೆ ಹೋಗಿ ಸಹಾಯ
ಭಿಕ್ಷೆ ಬೇಡುವುದು.
ರಟ್ಟಾ- ಅವರು ಸಹಾಯ ಮಾಡುವರೇ?
ಚಿತ್ರಕ – ಅವರು ಕ್ಷತ್ರಿಯ ಚೂಡಾಮಣಿ. ಅವರ ಶರಣು ಹೊಕ್ಕರೆ ಖಂಡಿತವಾಗಿ ಸಹಾಯ ಮಾಡಿಯೇ ಮಾಡುವರು.
ರಟ್ಟಾ- ಹಾಗಾದರೆ ಅವರಿಗೆ ಶರಣಾಗೋಣ. ಅವರ ಹೆಸರನ್ನು ಕೇಳಿಯೇ ಕಿರಾತ ನಡುಗಿ ಹೋಗುವನು. ಅವರ ವಿರುದ್ಧವಾಗಿ ಸೆಣಸುವ ಸಾಹಸ ಮಾಡಲಾರನು.
ಚಿತ್ರಕ- ಅದೂ ಸರಿ. ಆದರೆ ಸ್ಕಂದಗುಪ್ತರ ಸನ್ನಿಧಿಗೆ ಹೋಗುವವರಾರು?
ರಟ್ಟಾ- ನಾನು ಹೋಗುತ್ತೇನೆ. ತಾವು ಜೊತೆಯಲ್ಲಿರಬೇಕು.
ಚಿತ್ರಕ ಕ್ಷಣಕಾಲ ಮೌನವಾಗಿದ್ದು ನಂತರ ‘ತಮ್ಮಂಥ ಹೆಂಗಸರಿಗೆ, ಲಕ್ಷಗಟ್ಟಲೆ ಸೈನಿಕರಿರುವ ಸೇನಾ ಶಿಬಿರ ಯೋಗ್ಯವಾದುದಲ್ಲ. ನಾನು ಜೊತೆಯಲ್ಲಿರುವುದರಿಂದ ತಮಗೇನೂ ಭಯವಿಲ್ಲ. ಅಭಿಜ್ಞಾನ (ಗುರುತಿನ)ದ ಉಂಗುರವನ್ನು ತೋರಿಸಿ ಅವರ ಸನ್ನಿಧಿಗೆ ಹೋಗಬಹುದು. ಆದರೆ ಒಂದು ವಿಷಯ…’ ಎಂದನು.
‘ಏನು ಅದು?’
‘ಅವುಗಳನ್ನೆಲ್ಲ ಹೇಳಲು ಈಗ ಸಮಯವಿಲ್ಲ. ಆದರೆ ನಾನು ಸ್ಕಂದಗುಪ್ತರ ದೂತ ಎಂಬ ವಿಷಯ ಅವರಿಗೆ ಹೇಳಬಾರದು. ನಾನು ವಿಟಂಕ ರಾಜ್ಯದ ಒಬ್ಬ ಸೇನಾನಿ ಎಂದು ಮಾತ್ರ ಪರಿಚಯ ಮಾಡಿಕೊಡಬೇಕು. ಸ್ಕಂದಗುಪ್ತರಿಗೆ ನನ್ನ ಪರಿಚಯವಿಲ್ಲ. ನಾನು ಹೇಳಿದ ಹಾಗೆ ಮಾಡಿದರೆ ಯಾವುದೇ ಗೊಂದಲ ಉಂಟಾಗುವುದಿಲ್ಲ.
‘ಆದರೆ ಇದೇಕೆ? ಹೀಗೆಲ್ಲ’
‘ಆ ವಿಷಯವನ್ನೆಲ್ಲ ಈಗ ಹೇಳಲಾರೆ. ನನ್ನಲ್ಲಿ ನಂಬಿಕೆ ಇಡಿರಿ. ನಾನು ನಂಬಿಕೆ ದ್ರೋಹ ಮಾಡುವುದಿಲ್ಲ.
ರಟ್ಟಾ- ಆರ್ಯ ಚಿತ್ರಕ. ನಾನು ಸಂಪೂರ್ಣವಾಗಿ ತಮಗೆ ಅಧೀನಳಾಗಿದ್ದೇನೆ. ತಾವು ಹೇಳಿದ ಹಾಗೆಯೇ ಮಾಡುತ್ತೇನೆ.
ಚಿತ್ರ- ನಾನು ತಮ್ಮ ದಾಸ (ಸೇವಕ). ತಮ್ಮ ಒಳಿತಿಗಾಗಿ ನನ್ನ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡುತ್ತೇನೆ. ಹಾಗಾದರೆ ಸ್ಕಂದಗುಪ್ತರಿಗೆ ಶರಣಾಗುವುದು ಖಚಿತವೇ?
ರಟ್ಟಾ- ಹೌದು.
ಚಿತ್ರಕ ಮೇಲೆದ್ದು ನಿಂತು, ‘ಹಾಗಾದರೆ ಏಳಿರಿ. ತಡಮಾಡದೆ ಪ್ರಯಾಣ ಮಾಡಬೇಕು ಎಂದು ಹೇಳಿ, ಬಾಗಿಲವರೆಗೂ ಹೋದವನು ಮತ್ತೆ ಹಿಂದಿರುಗಿ ಬಂದು ‘ಒಂದು ವಿಷಯ ತಾವು ಪ್ರಾಯ ಹುಡುಗನ ಹಾಗೆ ಉಡುಪು ಧರಿಸಬೇಕು. ಯಾರಿಗೂ ಅನುಮಾನ ಬರಬಾರದು. ಇಷ್ಟೇ ತಾವು ಮಾಡಬೇಕಾದ ಕೆಲಸ’ ಎಂದು ಹೇಳಿ ಶೀಘ್ರವಾಗಿ ಕೊಠಡಿಯಿಂದ ಹೊರ ನಡೆದನು.
ರಟ್ಟಾಳ ಮುಖದಲ್ಲಿ ಹುಮ್ಮಸ್ಸು ಹೊರಹೊಮ್ಮಿತು. ಆಕೆ ಕೊಠಡಿ ಬಾಗಿಲು ಹಾಕಿಕೊಂಡು ಹೊಸ ಬಗೆಯಲ್ಲಿ ಉಡುಪು ಧರಿಸತೊಡಗಿದಳು. ಚಿತ್ರಕ ಹೊರಬಂದನು. ಚೀನಾ ದೇಶದ ಭಿಕ್ಷುಗಳು ಪಕ್ಕದ ಕೊಠಡಿಯಲ್ಲಿಯೇ ಆಶ್ರಯ ಪಡೆದಿರುವುದು ನೋಡಿದನು. ಜಂಬುಕ ಅವರ ಸೇವೆ ಶುಶ್ರೂಷೆಯಲ್ಲಿ ತೊಡಗಿದ್ದನು. ಚಿತ್ರಕನು ಅವರ ಹತ್ತಿರಕ್ಕೆ ಹೋಗಿ ‘ಜಂಬುಕ, ಭಿಕ್ಷು ಮಹಾಶಯರನ್ನು ನಾನೊಂದು ಪ್ರಶ್ನೆ ಕೇಳಬೇಕಾಗಿದೆ. ‘ಮಹಾರಾಜ ಸ್ಕಂದಗುಪ್ತರ ವಿಚಾರವಾಗಿ ಅವರಿಗೆ ಏನಾದರೂ ಮಾಹಿತಿ ಇದೆಯೇ? ಎಂದು ಅವರಲ್ಲಿ ಕೇಳಿ ತಿಳಿಸುವೆಯಾ?’ ಎಂದನು.
ಭಿಕ್ಷು (ಜಂಬುಕನು ಕೇಳಿದ ಪ್ರಶ್ನೆಗೆ ಉತ್ತರ ಕೊಡುತ್ತ) ಹೌದು ಸ್ವಲ್ಪ ಗೊತ್ತಿದೆ. ಸ್ಕಂದಗುಪ್ತರು ಹೂಣರ ದಮನಕ್ಕಾಗಿ ಬಂದಿದ್ದಾರೆ. ಸಮೀಪದಲ್ಲಿಯೇ ಇದ್ದಾರೆ.
ಚಿತ್ರಕ- ಯಾವ ಜಾಗದಲ್ಲಿದ್ದಾರೆ?
ಭಿಕ್ಷು- ಈ ತಪ್ಪಲಿನ ಪಶ್ಚಿಮಕ್ಕಿರುವ ಪರ್ವತ ಶ್ರೇಣಿಯನ್ನು ದಾಟಿದರೆ ಇನ್ನೊಂದು ದೊಡ್ಡದಾದ ತಪ್ಪಲಿನ ಪ್ರದೇಶವಿದೆ. ಅಲ್ಲಿಯೇ ಮಹಾರಾಜರ ಸೇನೆ ಬೀಡು ಬಿಟ್ಟಿದೆ.
ಚಿತ್ರಕ- ತಮಗೆ ಈ ವಿಷಯ ಹೇಗೆ ಗೊತ್ತಾಯಿತು?
ಭಿಕ್ಷು- ಚಷ್ಟನ ದುರ್ಗದಲ್ಲಿ ತಿಳಿಯ ಬಂದಿತು. ಕೆಲವು ಸೈನಿಕರು ಬೇಟೆಗಾಗಿ ಹೋಗಿದ್ದರಂತೆ. ಅವರು ನೋಡಿ ಬಂದಿದ್ದಾರೆ. ಚಿತ್ರಕನು ಭಿಕ್ಷುವಿಗೆ ಧನ್ಯವಾದ ಸಮರ್ಪಿಸಿ, ಜಂಬುಕನನ್ನು ಮರೆಗೆ ಕರೆದು, ‘ಜಂಬುಕ, ನಾವು ಸ್ಕಂದಗುಪ್ತರ ಸೇನಾ ಶಿಬಿರಕ್ಕೆ ಹೋಗಬೇಕೆಂದು ನಿರ್ಧರಿಸಿದ್ದೇವೆ’ ಎಂದನು.
ಜಂಬುಕ – ಒಳ್ಳೆಯದು.
ಚಿತ್ರಕ- ನೀನು ಕಪೋತಕೂಟಕ್ಕೆ ಹೋಗಿ ಬರಬೇಕು. ಮಂತ್ರಿ ಚತುರಾನನ ಭಟ್ಟರನ್ನು ಭೇಟಿ ಮಾಡಿ ಎಲ್ಲಾ ವಿಷಯವನ್ನು ಅವರಿಗೆ ತಿಳಿಸು. ಆಮೇಲೆ ಯಾವುದು ಸೂಕ್ತವೋ ಅದನ್ನು ಅವರು ನಿರ್ಧರಿಸುತ್ತಾರೆ.
ಜಂಬುಕ- ಅಪ್ಪಣೆಯಾದಂತೆ.
ಚಿತ್ರಕ- ಈಗ ನಮ್ಮ ಕುದುರೆಗಳನ್ನು ತರ ಹೇಳು. ಈಗಲೇ ಪ್ರಯಾಣ ಬೆಳೆಸಿದರೆ ಸೂರ್ಯಾಸ್ತದ ವೇಳೆಗೆ ಶಿಬಿರವನ್ನು ತಲುಪಬಹುದು.
ಜಂಬುಕ ಕುದುರೆಗಳನ್ನು ಕರೆ ತರಲು ಅತ್ತ ಹೊರಟನು. ಚಿತ್ರಕ ರಟ್ಟಾ ಇದ್ದ ಕೊಠಡಿಯ ಬಳಿಗೆ ಬಂದು ಬಾಗಿಲು ತಟ್ಟಿದನು. ರಟ್ಟಾ ಬಾಗಿಲು ತೆರೆದು ತಲೆ ತಗ್ಗಿಸಿ ಎದುರಿಗೆ ಬಂದು ನಿಂತಳು. ಚಿತ್ರಕ ಕಣ್ಣಗಳಿಸಿ ನೋಡುತ್ತಾನೆ. ವೇಷ ಬದಲಾಯಿಸಿಕೊಂಡ ರಟ್ಟಾಳನ್ನು ಬೇಗ ಗುರುತು ಹಿಡಿಯಲಾಗಲಿಲ್ಲ. ಅವಳು ಬೇರೆಯಾಗಿಯೇ ಕಂಡಳು. ರಟ್ಟಾಳನ್ನು ಮೊಟ್ಟ ಮೊದಲು ನೋಡಿದಾಗ ಹೆಂಗಸೆಂದು ಹೇಗೆ ಗುರುತು ಹಿಡಿಯಲಾಗಲಿಲ್ಲವೋ ಅದೇ ರೀತಿ ಈಗಲೂ ಕಾಣಿಸಿದಳು. ಬೂದಿ ಮುಚ್ಚಿದ ಬೆಂಕಿಯ ಹಾಗೆ ಅವಳ ಸ್ವರೂಪವು ಮರೆಯಾಗಿತ್ತು. ಆದರೆ ತಲೆಗೆ ಶಿರಸ್ತ್ರಾಣವಿರಲಿಲ್ಲ. ಜಡೆಯೂ ಬೆನ್ನ ಮೇಲೆ ಇಳಿದಿತ್ತು.
ಚಿತ್ರಕನು ತನ್ನ ಸೊಂಟಕ್ಕೆ ಕಟ್ಟಿಕೊಂಡಿದ್ದ ವಸ್ತçವನ್ನು ಬಿಚ್ಚಿ ಅವಳ ತಲೆಗೆ ಪೇಟ ಸುತ್ತಿದನು. ಪೇಟದ ಒಳಗೆ ಜಡೆಯು ಮರೆಯಾಯಿತು. ಚಿತ್ರಕನು ವಿಮರ್ಶೆಯ ದೃಷ್ಟಿಯಿಂದ ರಟ್ಟಾಳನ್ನು ಆಪಾದ ಮಸ್ತಕ ನಿರೀಕ್ಷಿಸಿ, ಗಂಭೀರವಾದ ಧ್ವನಿಯಲ್ಲಿ ‘ಈಗ ನಿನ್ನ ಛದ್ಮವೇಶ ಸಂತೋಷ ಜನಕವಾಗಿದೆ! ಸ್ಕಂದಗುಪ್ತರ ಸನ್ನಿಧಾನವನ್ನು ಸೇರುವವರೆಗೂ ಈ ಛದ್ಮವೇಶ ಅತಿ ಅವಶ್ಯಕ. ಯುದ್ಧ ಭೂಮಿಯು ಎಂಥ ಜಾಗವೆಂದು ತಮಗೆ ತಿಳಿಯದು. ನನಗೆ ಗೊತ್ತಿದೆ. ಆದ್ದರಿಂದಲೇ ಈ ಎಲ್ಲ ಮುನ್ನೆಚ್ಚರಿಕೆ’ ಎಂದು ಹೇಳಿದನು.
ರಟ್ಟಾಳ ಕಣ್ಣುಗಳಲ್ಲಿ ನೀರು ಹನಿಯಿತು. ಅವಳು ಗದ್ಗದಳಾಗಿ ‘ಹೆಣ್ಣಿನ ಬಾಳೆ ಬಹಳ ಜಂಜಡ’ ಎಂದಳು.
ಚಿತ್ರಕ ತಲೆ ಅಲ್ಲಾಡಿಸಿ ‘ಇಲ್ಲ. ಇಲ್ಲ. ಗಂಡಿನ ಬಾಳೂ ಜಂಜಡವೇ!’ ಎಂದನು.
ಮುಂದುವರೆಯುವುದು….
ಎನ್. ಶಿವರಾಮಯ್ಯ (ನೇನಂಶಿ)