ಪರಿಚ್ಛೇದ – 17
ಹೂಣರಕ್ತ
ಮೀನಿನಾಕಾರದ ಒಂದು ತಪ್ಪಲಿನಲ್ಲಿ ಚಷ್ಟನ ದುರ್ಗ ಇದ್ದಿತು. ಉತ್ತರ ದಿಕ್ಕಿನಿಂದ ಆರ್ಯಾವರ್ತವನ್ನು ಪ್ರವೇಶಿಸುವ ಕಣಿವೆ ಮಾರ್ಗಗಳಲ್ಲಿ ಇದೂ ಒಂದು. ಆದುದರಿಂದಲೇ ಈ ದುರ್ಗಕ್ಕೆ ವಿಶೇಷ ಸ್ಥಾನವಿದೆ. ಈ ಮಾರ್ಗದಿಂದಲೇ ಹಿಂದಿನ ಕಾಲದಲ್ಲಿ ಯುದ್ಧ ವೀರರು ದಂಡಯಾತ್ರೆ ಮಾಡಲು ಆರ್ಯಭೂಮಿಗೆ ಬಂದಿದ್ದರು, ವ್ಯಾಪಾರ ಮಾಡುವ ಸಲುವಾಗಿ ವಿದೇಶಿ ವ್ಯಾಪಾರಿಗಳು ಬಹುಮೂಲ್ಯ ವಸ್ತುಗಳನ್ನು ತೆಗೆದುಕೊಂಡು ಬಂದು ಹೋಗಿ ಮಾಡುತ್ತಿದ್ದರು. ಚೀನಾ ದೇಶದ ಯಾತ್ರಿಕರು ತೀರ್ಥಯಾತ್ರೆಗಾಗಿ ಬರುತ್ತಿದ್ದರು.
ಈ ತಪ್ಪಲಿನ ಪ್ರದೇಶವು ಉತ್ತರ ದಕ್ಷಿಣವಾಗಿ ಐದು ಹರಿದಾರಿ ಉದ್ದವಿತ್ತು. ಅಗಲ ಮಾತ್ರ ಅರ್ಧ ಹರಿದಾರಿಯಷ್ಟು. ಪೂರ್ವ ಮತ್ತು ಪಶ್ಚಿಮದಲ್ಲಿ ಗಿರಿ ಶ್ರೇಣಿ. ಚಷ್ಟನ ದುರ್ಗದಸಿಂಹದ್ವಾರ ದಕ್ಷಿಣ ಮುಖವಾಗಿತ್ತು. ಆ ದುರ್ಗವು ಕೂರ್ಮಾಕೃತಿಯದಾಗಿ ಬಲಿಷ್ಠವಾಗಿತ್ತು. ಆದರೆ ವಿಸ್ತಾರದಲ್ಲಿ ಅಷ್ಟು ದೊಡ್ಡದಲ್ಲ. ಸುತ್ತಲೂ ಎತ್ತರವಾದ ಕೋಟೆ ಗೋಡೆ. ಮಧ್ಯಭಾಗದಲ್ಲಿ ಮುನ್ನೂರು ನಾಲ್ಕುನೂರು ಜನ ವಾಸ ಮಾಡಬಹುದಾಗಿತ್ತು. ಮಧ್ಯಾಹ್ನ ದುರ್ಗದ ಕೋಟೆ ಬಾಗಿಲು ತೆರೆದಿತ್ತು. ದೂರದಲ್ಲಿ ಅಶ್ವಾರೋಹಿಗಳ ದಂಡು ಬರುತ್ತಿರುವುದನ್ನು ಕಂಡು ಕಬ್ಬಿಣದ ಬಾಗಿಲನ್ನು ಮುಚ್ಚಿದರು.
ಗುಲಿಕ ಹಾಗೂ ಚಿತ್ರಕ ದುರ್ಗದ ಸಮೀಪಕ್ಕೆ ಬಂದು ನೂರು ಮಾರು ದೂರದಲ್ಲಿ ಕುದುರೆಯನ್ನು ನಿಲ್ಲಿಸಿದರು. ಈ ಜಾಗದಲ್ಲಿ ಮರಗಳು ದಟ್ಟವಾಗಿ ಬೆಳೆದು ತೋಪಿನ ಹಾಗಿತ್ತು. ಗುಲಿಕನ ಸೂಚನೆಯ ಮೇರೆಗೆ ಸೈನಿಕರು ಕುದುರೆಯಿಂದ ಇಳಿದು ಕುದುರೆಗಳ ಯೋಗಕ್ಷೇಮ ನೋಡಿಕೊಂಡರು. ಆ ದಿನ ಈ ಮರಗಳ ಕೆಳಗೆ ರಾತ್ರಿ ಕಳೆಯಬೇಕಾಗಬಹುದು. ಎಲ್ಲರ ಬಳಿಯೂ ಎರಡು ಮೂರು ದಿನಗಳಿಗೆ ಸಾಕಾಗುವಷ್ಟು ಆಹಾರ ಪದಾರ್ಥ ಇತ್ತು.
ಚಿತ್ರಕ ಹಾಗೂ ಗುಲಿಕ ಕುದುರೆಗಳಿಂದ ಇಳಿಯಲಿಲ್ಲ. ಆ ಕಡೆ ದುರ್ಗದ ಬಾಗಿಲೇನೋ ಮುಚ್ಚಿತ್ತು. ಆದರೆ ಕೋಟೆಯ ಗೋಡೆಯ ಮೇಲೆ ಬಹಳಷ್ಟು ಜನ ಅತ್ತ ಇತ್ತ ಓಡಾಡುವುದನ್ನು ನೋಡಿದರೆ, ಆಕ್ರಮಣ ನಡೆಯಬಹುದೆಂಬ ಅನುಮಾನದಿಂದ ದುರ್ಗದ ರಕ್ಷಣೆಗೆ ತಯಾರಿಮಾಡಿಕೊಳ್ಳುತ್ತಿರುವಂತೆ ತೋರಿತು.
ಇವರುಗಳು ಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳುವುದನ್ನು ಕಂಡ ಚಿತ್ರಕನಿಗೆ ನಗು ಬಂತು. ಅವನು ‘ಇವರು ಯುದ್ಧ ಮಾಡದೆ ದುರ್ಗದ ಬಾಗಿಲನ್ನು ತೆರೆಯುವ ಹಾಗೆ ಕಾಣುತ್ತಿಲ್ಲ. ನಾವು ಯಾರು? ಎಲ್ಲಿಂದ ಬಂದವರು? ಎಂಬುದನ್ನು ತಿಳಿಯುವ ಗೋಜಿಗೆ ಹೋಗದೆ ದುರ್ಗದ ರಕ್ಷಣೆಗೆ ಸಿದ್ಧರಾಗುತ್ತಿದ್ದಾರೆ’ ಎಂದನು.
ಗುಲಿಕ-ನಮ್ಮ ಸಂಖ್ಯೆಯನ್ನು ನೋಡಿ ಬಹುಶಃ ಅವರು ಹೆದರಿರಬೇಕೆಂದು ತೋರುತ್ತದೆ. ನಾವೆಲ್ಲರೂ ದುರ್ಗದ ಕಡೆಗೆ ಮುಂದುವರಿದರೆ ಅವರು ನಮ್ಮ ಮೇಲೆ ಬಾಣ ಬಿಡಬಹುದು. ಕವಣೆ ಕಲ್ಲು ಬೀರಬಹುದು. ಆದರೆ ನಾವು ಒಬ್ಬರೋ ಇಬ್ಬರೋ, ಹೋದರೆ ಅವರು ಮಾತನಾಡುವುದಿಲ್ಲವೆಂದು ಕಾಣುತ್ತದೆ. ‘ನಾವು ಯಾರು’ ಎಂದು ತಿಳಿಯುವ ಉದ್ದೇಶ ಅವರಿಗೂ ಇರಬಹುದು.
ನಡೆ, ನಾವಿಬ್ಬರೂ ಹೋಗೋಣ. ನಾವು ಯಾರೆಂದು ಗೊತ್ತಾದ ಮೇಲೆ ಅವರು ನಮ್ಮನ್ನು ಒಳಗೆ ಬಿಡಬಹುದು.
ಚಿತ್ರಕ- ಅದೂ ಸರಿಯೆ. ಆದರೆ ನಾವಿಬ್ಬರೂ ಹೋಗುವುದು ಸರಿ ಎನಿಸಲಾರದು. ಒಂದು ವೇಳೆ ಅವರು ನಮ್ಮಿಬ್ಬರನ್ನೂ ಬಂಧಿಸಿದರೆ ನಮ್ಮ ಸೈನ್ಯಕ್ಕೆ ನಾಯಕರಿಲ್ಲದಂತಾಗುತ್ತದೆ. ಆಗ ಅವರ ಗತಿ ಏನು?
ಗುಲಿಕ- ಅದೂ ನಿಜವೇ. ಹಾಗಾದರೆ ನೀನು ಇಲ್ಲಿಯೇ ಇರು, ನಾನು ಹೋಗುತ್ತೇನೆ.
ಚಿತ್ರಕ- ಇಲ್ಲ. ನೀನು ಇಲ್ಲಿಯೇ ಇರು. ನಾನು ಹೋಗುತ್ತೇನೆ. ಮೊದಲನೆಯದಾಗಿ, ನಿನ್ನನ್ನು ಬಂಧಿಸಿದರೆ, ನನಗೆ ಏನು ಮಾಡಲೂ
ಆಗುವುದಿಲ್ಲ. ಸೈನ್ಯವೆಲ್ಲ ನಿನ್ನ ಅಧೀನ, ನನ್ನ ಆದೇಶವನ್ನು ಅವರು ಪಾಲಿಸದೆ ಇರಬಹುದು. ಎರಡನೆಯದಾಗಿ, ನಾನು ಕಿರಾತ ವರ್ಮಾನನ್ನು ಭೇಟಿ ಮಾಡಿದರೆ, ನಿನಗೆ ತಿಳಿಯದ ಎಷ್ಟೋ ವಿಷಯಗಳನ್ನು ನಾನು ಅವನಿಗೆ ತಿಳಿಸುತ್ತೇನೆ. ಆದ್ದರಿಂದ ನಾನು ಹೋಗುವುದೇ ಎಲ್ಲ ರೀತಿಯಿಂದ ಸಮೀಚೀನವಾದುದು.
ಯುಕ್ತಿಯ ಸಾರಾಸಾರವನ್ನು ಚಿಂತಿಸಿ ಕಡೆಗೆ ಗುಲಿಕ ಸಮ್ಮತಿಸಿದನು. ಆನಂತರ ಅವನು ‘ಒಳ್ಳೆಯದು. ದುರ್ಗದ ಒಳಗೆ ಹೋಗುವುದು ಸಾಧ್ಯವೇ ಎಂಬುದನ್ನು ನೋಡು. ಒಳಗೆ ಹೋಗಿದ್ದೇ ಆದರೆ ಸೂರ್ಯ ಮುಳುಗುವುದಕ್ಕೆ ಮೊದಲೇ ವಾಪಸು ಒಂದು ಬಿಡು. ಹಾಗೆ ನೀನು ಬರದಿದ್ದರೆ ನಿನ್ನನ್ನು ಬಂಧಿಸಿದ್ದಾರೆ ಅಥವಾ ಹತ್ಯೆ ಮಾಡಿದ್ದಾರೆ ಎಂದು ತಿಳಿಯುತ್ತೇನೆ. ಆಗ ಮುಂದಿನ ಕರ್ತವ್ಯದ ಕಡೆಗೆ ಗಮನ ಹರಿಸುತ್ತೇನೆ’ ಎಂದನು.
ಚಿತ್ರಕನು ಕುದುರೆಯನ್ನು ದುರ್ಗದ ಕಡೆಗೆ ನಡೆಸಿದನು. ಅವನು ತೋರಣ ದ್ವಾರದಿಂದ ಇಪ್ಪತ್ತು ಮಾರು ದೂರದಲ್ಲಿರುವಾಗಲೇ, ಬಾಗಿಲ ಮೇಲಿಂದ ಜೋರಾದ ಧ್ವನಿಯಲ್ಲಿ ‘ನಿಲ್ಲು’ ಎಂಬ ಕೂಗು ಕೇಳಿಸಿತು. ಚಿತ್ರಕ ಕುದುರೆಯ ಲಗಾಮು ಎಳೆದು ನಿಲ್ಲಿಸಿದನು. ತಲೆಯೆತ್ತಿ ಮೇಲೆ ನೋಡುತ್ತಾನೆ. ಕೋಟೆ ಗೋಡೆಯ ಮೇಲಿನ ರಂಧ್ರಗಳ ಮೂಲಕ ಅನೇಕ ಬಿಲ್ಲುಗಾರರು ಬಾಣಗಳನ್ನು ಹೆದೆಗೇರಿಸಿ ತಮ್ಮ ಕಡೆಗೆ ಗುರಿ ಇಟ್ಟಿದ್ದಾರೆ.
ಒಂದು ಬುರುಜಿನ ಮೇಲಿಂದ ‘ಯಾರು ನೀನು? ಏನು ಬೇಕು?’ ಎಂಬ ಕೂಗು ಕೇಳಿಸಿತು.
ಚಿತ್ರಕ- (ಗಂಭೀರ ಧ್ವನಿಯಲ್ಲಿ) ನಾನು ಪರಮ ಭಟ್ಟಾರಕ ಶ್ರೀಮನ್ಮಹಾರಾಜ ಸ್ಕಂದಗುಪ್ತರ ದೂತ ದುರ್ಗಾಧಿಪ ಕಿರಾತ ವರ್ಮರಿಗೆ ಸುದ್ದಿಯೊಂದನ್ನು ತಂದಿದ್ದೇನೆ.
ದುರ್ಗದ ಮೇಲುಗಡೆ ಸ್ವಲ್ಪ ಹೊತ್ತು ತಗ್ಗಿದ ಧ್ವನಿಯಲ್ಲಿ ಮಾತುಕತೆ ನಡೆಯಿತು. ಮತ್ತೆ ಅತ್ತ ಕಡೆಯಿಂದ ‘ಏನು ಸುದ್ದಿ ತಂದಿದ್ದೀಯೆ?’ ಎಂದು ಕಠೋರಧ್ವನಿ ಕೇಳಿಸಿತು.
ಚಿತ್ರಕ- (ದೃಢವಾದ ಧ್ವನಿಯಲ್ಲಿ) ಅದು ಎಲ್ಲರಿಗೂ ತಿಳಿಸುವಂಥದಲ್ಲ. ದುರ್ಗದ ಅಧಿಪತಿಗೆ ಮಾತ್ರ ತಿಳಿಸುವಂಥದು.
ಮತ್ತೆ ಸ್ವಲ್ಪ ಹೊತ್ತು ಗುಟ್ಟಾಗಿ ಮಂತ್ರಾಲೋಚನೆ ಮಾಡಿದ ನಂತರ ತೋರಣದ ಮೇಲಿಂದ ‘ಒಳ್ಳೆಯದು ಸ್ವಲ್ಪ ಇರು’ ಎಂಬ ಆಶ್ವಾಸನೆ ದೊರೆಯಿತು. ಸ್ವಲ್ಪ ಹೊತ್ತಿನ ಮೇಲೆ ಕೋಟೆಯ ಬಾಗಿಲು ಸ್ವಲ್ಪ ತೆರೆಯಲ್ಪಟ್ಟಿತು. ಚಿತ್ರಕನು ದುರ್ಗದ ಒಳಕ್ಕೆ ಪ್ರವೇಶ ಮಾಡಿದನು. ಮತ್ತೆ ಬಾಗಿಲು ಮುಚ್ಚಿತು. ತೋರಣವನ್ನು ದಾಟಿ ಕೋಟೆಯ ಒಳಕ್ಕೆ ಹೋದ ಕೂಡಲೆ ಒಬ್ಬ ವ್ಯಕ್ತಿ ಬಂದು ಅವನ ಕುದುರೆಯ ಲಗಾಮನ್ನು ಹಿಡಿದುಕೊಂಡನು. ಚಿತ್ರಕನು ಕುದುರೆಯ ಮೇಲಿಂದ ಕೆಳಗಿಳಿದನು. ಸುತ್ತಲೂ ಸುಮಾರು ಮೂವತ್ತು ಜನ ಆಯುಧಪಾಣಿಗಳಾದ ಸೈನಿಕರು ಅವನನ್ನು ನೋಡುತ್ತಿದ್ದರು. ಇವರೆಲ್ಲ ಹೆಚ್ಚಾಗಿ ಹೂಣರಂತೆ ಕಾಣಿಸುತ್ತಿದ್ದರು. ಅವರು ಕುಳ್ಳರು; ಭುಜ ದೊಡ್ಡದು, ಕಿರಿದಾದ ಕಣ್ಣುಗಳು, ಕುರುಚಲು ಮೀಸೆ. ಅನುಮಾನದ ನೋಟ.
ಲಗಾಮು ಹಿಡಿದುಕೊಂಡ ವ್ಯಕ್ತಿಯು ಚಿತ್ರಕನನ್ನು ಕುರಿತು ‘ನೀನು ದೂತಅಲ್ಲವೆ! ಏನಾದರೂ ಸುಳ್ಳು ಹೇಳಿಕೊಂಡು ಒಳಗೆ ಬಂದಿರುವೆಯಾದರೆ ತಕ್ಕ ಶಾಸ್ತಿಯಾಗುತ್ತದೆ. ನಡಿ, ದುರ್ಗಾಧಿಪರು ತಮ್ಮ ಭವನದಲ್ಲಿದ್ದಾರೆ. ಅಲ್ಲಿಯೇ ಅವರನ್ನು ನೋಡುವೆಯಂತೆ’ ಎಂದು ಹೇಳಿದನು.
ಚಿತ್ರಕನು ಆ ವ್ಯಕ್ತಿಯನ್ನು ಶಾಂತಚಿತ್ತನಾಗಿ ನೋಡಿದನು. ಅವನು ನಲ್ವತ್ತು ವರ್ಷ ವಯಸ್ಸಿನ ಗಟ್ಟಿಮುಟ್ಟಾದ ಆಳು. ಅವನು ಹೂಣ. ಎಡ ಕೆನ್ನೆಯ ಮೇಲೆ ಕತ್ತಿ ಏಟಿನ ಗಾಯವಿದ್ದು ಮುಖದ ಅಂದಕ್ಕೆ ಭಂಗ ತಂದಿತ್ತು. ಮಾತನಾಡುವ ರೀತಿ ಬಹಳ ಒರಟು; ಅಸಭ್ಯ ಇಷ್ಟಾದರೂ ಚಿತ್ರಕ ಕೋಪ ಮಾಡಿಕೊಳ್ಳದೆ ತಾತ್ಸಾರ ಭಾವನೆಯಿಂದ ‘ನೀನು ಯಾರು?’ ಎಂದು ಪ್ರಶ್ನಿಸಿದನು.
ಹೂಣನ ಮುಖ ಕಪ್ಪಾಯಿತು. ಚಿತ್ರಕನ ಕಡೆ ಕಣ್ಣು ಕೆಂಪಗೆ ಮಾಡಿಕೊಂಡು ‘ನನ್ನ ಹೆಸರು ಮರುಸಿಂಹ. ನಾನು ಚಷ್ಟನ ದುರ್ಗದ ರಕ್ಷಕ ದುರ್ಗಪಾಲ’ ಎಂದನು.
ಮತ್ತೆ ಮಾತಿಲ್ಲ. ಚಿತ್ರಕ ಶಾಂತಚಿತ್ತನಾಗಿ ದುರ್ಗದ ನಾಲ್ಕೂ ಕಡೆ ನೋಡುತ್ತ ಹೊರಟನು. ದುರ್ಗವು ಸಾಧಾರಣ ಕೋಟೆ ಗೋಡೆಯ ನಡುವೆ ಇರುವ ಊರಿನ ಹಾಗೆ ಇತ್ತು. ಅದರಲ್ಲಿ ವಿಶೇಷತೆಯೇನೂ ಇರಲಿಲ್ಲ. ಮಧ್ಯಭಾಗದಲ್ಲಿ ದುರ್ಗಾಧಿಪನಿಗಾಗಿ ನಿರ್ಮಿಸಿದ ಎರಡು ಮಹಡಿಯ ಕಲ್ಲು ಕಟ್ಟಡ. ಭವನದ ಕೆಳ ಅಂತಸ್ಥಿನಲ್ಲಿರುವ ಸುಂದರವಾದ ಹೊರ ಕೋಣೆಯಲ್ಲಿ ಕಿರಾತನು ಎದೆಯ ಮೇಲೆ ಕೈಕಟ್ಟಿಕೊಂಡು ಹುಬ್ಬು ಗಂಟಿಕ್ಕಿಕೊಂಡು ಶತಪಥ ಹಾಕುತ್ತಿದ್ದಾನೆ. ಕೊಠಡಿಯ ನಾಲ್ಕು ಬಾಗಿಲುಗಳಲ್ಲಿ ನಾಲ್ಕು ಜನ ಶಾಸ್ತ್ರದಾರಿಗಳ ಪಹರೆ. ಚಿತ್ರಕ ಹಾಗೂ ಮರುಸಿಂಹ ಕೊಠಡಿಯೊಳಕ್ಕೆ ಬಂದರೂ ಅವರನ್ನು ಗಮನಿಸದೆ, ಹಿಂದಿನಂತೆಯೇ ತಿರುಗಾಡುತ್ತಿದ್ದನು. ಅನಂತರ ಇದ್ದಕ್ಕಿದ್ದಂತೆ ಮುಖವೆತ್ತಿ ವೇಗವಾಗಿ ಚಿತ್ರಕನ ಮುಂದೆ ಬಂದು ನಿಂತನು.
ಮುಂದುವರೆಯುವುದು……
ಎನ್. ಶಿವರಾಮಯ್ಯ (ನೇನಂಶಿ)