ಕಳೆದ ಸಂಚಿಕೆಯಿಂದ….
ಕಿರಾತ ತನ್ನ ಭವನದಲ್ಲಿಯೇ ಇದ್ದನು. ಅವನು ನಗುನಗುತ್ತ ಚಿತ್ರಕನೊಡನೆ ಮಾತನಾಡಿದನು. ‘ದೂತಮಹಾಶಯರೆ, ತಾವು ವಾಪಸು ಹೋಗಲು ಬಹಳ ಕಾತರರಾಗಿದ್ದೀರಿ. ಆದರೆ ವಿಷಾದ ಸಂಗತಿಯೆಂದರೆ ಧರ್ಮಾದಿತ್ಯರ ಆರೋಗ್ಯ ಮೊದಲಿನಂತೆಯೇ ಯಥಾಸ್ಥಿತಿ. ಯಾವುದೇ ಬದಲಾವಣೆಯಾಗಲೀ ಸುಧಾರಣೆಯಾಗಲೀ ಕಂಡು ಬರುತ್ತಿಲ್ಲ. ತಾವು ಇನ್ನೂ ಒಂದೆರಡು ದಿನ ಇಲ್ಲಿಯೇ ಇರಬೇಕಾಗುತ್ತದೆ. ಚಿತ್ರಕ ಉತ್ತರ ಕೊಡಲಿಲ್ಲ. ಕಿರಾತನನ್ನೇ ದುರುಗುಟ್ಟಿಕೊಂಡು ನೋಡುತ್ತ ಇದ್ದು ಬಿಟ್ಟನು.
ಕಿರಾತ- ಒಂದು ವೇಳೆ ತಾವು ಹೋಗಲೇಬೇಕು ಎನ್ನುವುದಾದರೆ ನಾಳೆ ಬೆಳಗ್ಗೆ ಹೋಗಬಹುದು. ಆದರೆ ತಾವು ಇಲ್ಲಿ ಯಾವ ಉದ್ದೇಶಕ್ಕಾಗಿ ಬಂದಿರೋ, ಅದನ್ನು ಪೂರೈಸಿಕೊಳ್ಳದೆ ಹೋಗುವುದು ಉಚಿತವೆನಿಸಲಾರದು, ಅಲ್ಲವೆ? ಅವನ ಮಾತಿನ ಹಿಂದೆ ಇರುವ ವ್ಯಂಗ್ಯ ಚೆನ್ನಾಗಿ ಎದ್ದು ಕಾಣುತ್ತಿತ್ತು.
ಚಿತ್ರಕ (ಕಿರಾತನ ಮುಖವನ್ನು ದೃಷ್ಟಿಸಿ ನೋಡುತ್ತ) ನಾವು ಹಿಂದಿರುಗಿ ಹೋಗಬಾರದೆಂದು ನಿಮ್ಮ ಇಚ್ಛೆಯೇ?
‘ಹೌದು, ಖಂಡಿತವಾಗಿ ಸಮ್ರಾಟರ ಆದೇಶ-’
‘ಆದರೆ ಅದರಿಂದ ನಿಮಗೇನೂ ಲಾಭವಾಗಲಾರದು.’
‘ನಮಗೆ ಲಾಭವೆ?- ಕಿರಾತ ತೀಕ್ಷ್ಣ ದೃಷ್ಟಿಯಿಂದ ನೋಡಿದನು.
ಚಿತ್ರಕ- (ಸಮಾಧಾನದ ಧ್ವನಿಯಲ್ಲಿ) ತಮ್ಮ ನಿಮಂತ್ರಣಪತ್ರವನ್ನು ನೋಡಿ ಹೂಣ ಸೇನಾಪತಿಯು ಸೇನಾ ಸಮೇತನಾಗಿ ಬಂದು ನಮ್ಮನ್ನು ಹತ್ಯೆ ಮಾಡುವನೆಂದು ತಾವು ಆಸೆ ಇಟ್ಟುಕೊಂಡಿರಬಹುದು. ಆದರೆ ಅದು ಆಗದ ಮಾತು. ಮರುಸಿಂಹ ಸೆರೆಸಿಕ್ಕಿದ್ದಾನೆ. ಆ ಅಧಮ ಗುಪ್ತಚರ ಹೂಣರಿಗೆ ದಾರಿ ತೋರಿಸಿ ಅವರನ್ನು ಕರೆದುಕೊಂಡು ಬರಲು ಹೋಗಿದ್ದನಲ್ಲವೆ? ಈಗ ಅವನು ನಮ್ಮ ವಶದಲ್ಲಿದ್ದಾನೆ. ಕಿರಾತ ಕಲ್ಲಿನ ಬೊಂಬೆಯಂತೆ ನಿಂತು ಬಿಟ್ಟನು. ಸ್ವಲ್ಪ ಹೊತ್ತು ಸುಮ್ಮನಿದ್ದ ಚಿತ್ರಕ ಮತ್ತೆ ಮಾತನ್ನು ಮುಂದುವರಿಸಿದನು, ‘ತಮ್ಮ ಪತ್ರದ ಮೂಲಕ ತಮ್ಮ ಅಭಿಪ್ರಾಯವೆಲ್ಲವೂ ನಮಗೆ ಚೆನ್ನಾಗಿ ಗೊತ್ತಾಗಿದೆ. ತಾವು ಶತ್ರುವನ್ನು ಮನೆಗೆ ಕರೆಸಿಕೊಂಡು ಮೊಟ್ಟಮೊದಲು ಈ ದುರ್ಗ ಹಾಗೂ ಧರ್ಮಾದಿತ್ಯರನ್ನು ಅವರ ಕೈಗೆ ಒಪ್ಪಿಸಬೇಕೆಂದು ಮನಸ್ಸು ಮಾಡಿದ್ದಿರಿ. ಅದಾದ ಮೇಲೆ ಹೂಣರು ಇದರಿಂದ ಸಹಜವಾಗಿ ವಿಟಂಕ ರಾಜ್ಯದ ಅಧಿಕಾರ ಪಡೆದು ಸಮ್ರಾಟ ಸ್ಕಂದಗುಪ್ತರಿಗೆ ಕಂಟಕ ಪ್ರಾಯರಾಗಬೇಕೆಂಬ ಉದ್ದೇಶದಿಂದ ಹೂಣರಿಗೆ ಸಹಾಯ ಮಾಡಲು ಪಿತೂರಿ ನಡೆಸಿದ್ದೀರಿ. ತಾವು ರಾಜದ್ರೋಹಿ ದೇಶದ್ರೋಹಿ ಆಗಿದ್ದೀರಿ. ಆದರೆ ಸಮ್ರಾಟ ಸ್ಕಂದಗುಪ್ತರು ಕ್ಷಮಾಶೀಲರು, ಒಂದು ವೇಳೆ ಈಗಲೂ ತಾವು ಅವರ ಅಧೀನತೆಯನ್ನು ಸ್ವೀಕಾರಮಾಡಿ, ರಟ್ಟ ಧರ್ಮಾದಿತ್ಯರನ್ನು ನಮ್ಮ ವಶಕ್ಕೆ ಒಪ್ಪಿಸಿದರೆ, ಸಮ್ರಾಟರು ತಮ್ಮನ್ನು ದಯೆಯಿಟ್ಟು ಕ್ಷಮಿಸಿಯಾರು!’
ಕಿರಾತನು ಬೆಂಕಿಯುಗುಳುವ ಅಗ್ನಿ ಪರ್ವತದ ಹಾಗೆ ಕೆಂಡಮಂಡಲವಾದನು. ಅವನ ಮುಖ ಕೆಂಪಾಯಿತು. ಕೊರಳ ಸೆರೆ ಉಬ್ಬಿತು. ಅವನು ಉನ್ಮತ್ತನಂತೆ ಗರ್ಜಿಸುತ್ತ ‘ರಾಜದ್ರೋಹಿ! ದೇಶದ್ರೋಹಿ! ಎಲೈ ಮೂರ್ಖ ದೂತ, ನಾನು ಹೂಣನನ್ನು ಕರೆದೆನೆಂದು ನಿನಗೆ ಹೇಗೆ ಗೊತ್ತಾಯಿತು! ಈ ರಾಜ್ಯ ನನ್ನದು. ಅಧಮನಾದ ಧರ್ಮಾದಿತ್ಯನು ಮೋಸಮಾಡಿ, ನಮ್ಮ ಪೈತೃತ ಅಧಿಕಾರವನ್ನು ಕಸಿದುಕೊಂಡಿದ್ದಾನೆ. ನಾನೇ ವಿಟಂಕ ರಾಜ್ಯದ ನ್ಯಾಯವಾದ ರಾಜ-’ ಎಂದನು.
ಚಿತ್ರಕ- ನೀನು ನ್ಯಾಯವಾದ ರಾಜನೇ?
ಚಿತ್ರಕನ ಮಾತಿನ ಕಡೆ ಗಮನಕೊಡದೆ ಕಿರಾತ ತನ್ನ ಮಾತನ್ನೇ ಮುಂದುವರಿಸಿದನು- ‘ಆದಾಗ್ಯೂ, ನಾನು ಧೈರ್ಯ ತೆಗೆದುಕೊಂಡು ಇದ್ದೇನೆ. ನಾನು ತಿರುಗಿ ಬಿದ್ದು ನನ್ನ ಅಧಿಕಾರವನ್ನು ಬಲಪ್ರಯೋಗದಿಂದ ತೆಗೆದುಕೊಳ್ಳಲು ಮುಂದಾಗಲಿಲ್ಲ. ಧರ್ಮಾದಿತ್ಯನ ಮಗಳನ್ನು ವಿವಾಹವಾಗಿ ಉತ್ತರಾಧಿಕಾರದ ರೂಪದಲ್ಲಿ ಸಿಂಹಾಸನವನ್ನು ಪಡೆಯಬೇಕೆಂದು ಇದ್ದೆ. ಅಷ್ಟೆ. ಅದರಿಂದ ಯಾರಿಗೂ ನಷ್ಟವಾಗುತ್ತಿರಲಿಲ್ಲ. ಆದರೆ ಬುದ್ಧಿಯಿಲ್ಲದ ಧರ್ಮಾದಿತ್ಯ ಹಾಗೂ ಬುದ್ಧಿಯಿಲ್ಲದ ಅವಿವೇಕಿ ರಾಜಕನ್ಯೆ-’
ಚಿತ್ರಕ ಅವನ ಮಾತಿನಲ್ಲಿ ತಲೆಹಾಕಿ ‘ವಿಟಂಕ ರಾಜ್ಯವು ನ್ಯಾಯವಾಗಿ ನಿನ್ನದು ಎಂದು ಹೇಳಿದೆಯಲ್ಲ ಅದರ ಅರ್ಥವೇನು ಎಂದು ಪ್ರಶ್ನಿಸಿದನು.
‘ಅದೆಲ್ಲ ನಿನಗೆ ತಿಳಿಯುವುದಿಲ್ಲ. ಹೂಣನಾಗಿದ್ದರೆ ತಿಳಿಯುತ್ತಿತ್ತು. ನಮ್ಮ ತಂದೆ ತುಷ್‌ಫಾಣ ತನ್ನ ಕೈಯಿಂದಲೇ ಪೂರ್ವವರ್ತಿ ಆರ್ಯರಾಜನ ತಲೆ ಕತ್ತರಿಸಿದ್ದನು. ಆ ಅಧಿಕಾರದಿಂದ ವಿಟಂಕ ರಾಜ್ಯ ನಮ್ಮ ತಂದೆ ಸಂಪಾದಿಸಿದ್ದು, ಹೂಣರಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಆದರೆ ಚತುರನಾದ ಧರ್ಮಾದಿತ್ಯ-’ ‘ಏನು ಹೇಳಿದೆ?- ನಿನ್ನ ತಂದೆ ಪೂರ್ವವರ್ತಿ ಆರ್ಯರಾಜನನ್ನು ಹತ್ಯೆ ಮಾಡಿದನೇ? ಧರ್ಮಾದಿತ್ಯ ಹತ್ಯೆ ಮಾಡಲಿಲ್ಲವೆ?’
‘ಇಲ್ಲ. ಈ ವಿಷಯ ಎಲ್ಲರಿಗೂ ಗೊತ್ತಿದೆ. ಆದರೆ ಜಗತ್ತಿನಲ್ಲೆಲ್ಲ ಪ್ರಚಾರವಾಗಲಿಲ್ಲ-’ ಚಿತ್ರಕನ ತಿಲಕವು ತ್ರಿಲೋಚನನ ಹಣೆಗಣ್ಣಿನ ಹಾಗೆ ಪ್ರಜ್ವಲಿಸಲಾರಂಭಿಸಿತು. ಅವನು ಕಿರಾತನ ಕಡೆಗೆ ಒಂದು ಹೆಜ್ಜೆ ಮುಂದೆ ಇಟ್ಟನು- ಅಷ್ಟರಲ್ಲಿ ಹೊರಗಡೆ ದೊಡ್ಡ ಪ್ರಮಾಣದ ಕೋಲಾಹಲವುಂಟಾಯಿತು. ಇಬ್ಬರು ಮೂವರು ದುರ್ಗರಕ್ಷಕರು ಕೊಠಡಿಯೊಳಕ್ಕೆ ನುಗ್ಗಿದರು. ಅವರೊಳಗೆ ಒಬ್ಬ ಒಂದೇ ಉಸಿರಿಗೆ ‘ದುರ್ಗೇಶ! ನೂರಾರು ಯುದ್ಧದ ಆನೆಗಳನ್ನು ತೆಗೆದುಕೊಂಡು ಒಂದು ಬಲವಾದ ಸೈನ್ಯ ದಕ್ಷಿಣ ದಿಕ್ಕಿನ ಕಡೆಯಿಂದ ಬರುತ್ತಿದೆ. ಸ್ವಯಂ ಸ್ಕಂದಗುಪ್ತರೇ ಇರಬಹುದು. ಒಂದು ಆನೆಯ ಮೇಲೆ ಶ್ವೇತಚ್ಛತ್ರ ಕಾಣಿಸುತ್ತಿತ್ತು’ ಎಂದು ಏದುತ್ತ ಹೇಳಿದನು.
**************************
ಸ್ಕಂದಗುಪ್ತ- (ತನ್ನಲ್ಲಿ ತಾನು) ರಟ್ಟಾ ಯಶೋಧರಾಳ ಜೊತೆಯಲ್ಲಿ ಆಡಿದ ಪಗಡೆ ಆಟದಲ್ಲಿ ನಾನು ಸೋತು ಹೋದೆ. ಆ ಪಣದ ಮಾತಿಗೆ ಕಟ್ಟುಬಿದ್ದು, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ಇಲ್ಲಿಗೆ ಬರಬೇಕಾಯಿತು. ಈಗ ನೋಡಿದರೆ ಬಂದದ್ದು ಒಳ್ಳೆಯದೇ ಆಯಿತೆಂದು ತೋರುತ್ತದೆ. ದುರ್ಗದ ಮಧ್ಯೆ ಬಯಲಿನಲ್ಲಿ ಸಭೆ ಸೇರಿದೆ. ಸ್ಕಂದನ ಯುದ್ಧದಾನೆಗಳ ಸೈನ್ಯವು ಚಕ್ರಾಕಾರದಲ್ಲಿ ಸಭೆ ನಡೆಯುತ್ತಿರುವ ಜಾಗದ ಸುತ್ತಲೂ ನಿಂತಿದೆ. ದುರ್ಗವು ಈಗ ಸ್ಕಂದಗುಪ್ತನ ಅಧಿಕಾರ ವ್ಯಾಪ್ತಿಗೆ ಬಂದಿದೆ. ಕಿರಾತನು ಸ್ಕಂದಗುಪ್ತನಿಗೆ ವಿರುದ್ಧವಾಗಿ ದುರ್ಗದ ಬಾಗಿಲನ್ನು ತೆಗೆಸದಿರುವ ಸಾಹಸ ಮಾಡಲಿಲ್ಲ. ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಅವರ ಮುಂದೆ ತಾನೇ ಹೋಗಿ ಶರಣಾದನು.
ಈ ಕಡೆ ಕಪೋತ ಕೂಟದಿಂದ ಚತುರಾನನ ಭಟ್ಟನೂ ಕೂಡ ಸುಮಾರು ನಾಲ್ಕು ನೂರು ಸೈನಿಕರನ್ನು ಕೂಡಿಕೊಂಡು ಸ್ಕಂದಗುಪ್ತನು ಬರುವ ವೇಳೆಗೆ ಸರಿಯಾಗಿ ಬಂದು ಸೇರಿದನು. ಕತ್ತೆಯ ಮೇಲೆ ಕುಳಿತು ಪ್ರಯಾಣ ಮಾಡುತ್ತ ಜಂಬುಕನೂ ಕೂಡ ಜೊತೆಯಲ್ಲಿಯೇ ಬಂದಿದ್ದನು. ಸ್ಕಂದಗುಪ್ತ ಮಹಾರಾಜರು ಒಂದು ಪ್ರಶಸ್ತವಾದ ವೇದಿಕೆಯ ಮೇಲೆ ಆಸೀನರಾಗಿದ್ದಾರೆ. ಪಕ್ಕದಲ್ಲಿ ಧರ್ಮಾದಿತ್ಯ- ಧರ್ಮಾದಿತ್ಯರ ದೇಹ ಕೃಶವಾಗಿ ದುರ್ಬಲವಾಗಿದೆ. ಆದರೆ ಅವರನ್ನು ನೋಡಿದರೆ ಮರಣಾಸನ್ನ ರೋಗಿ ಎಂದು
ಹೇಳಲಾಗುವುದಿಲ್ಲ. ರಟ್ಟಾ ಯಶೋಧರಾ ಅವರ ಮಂಡಿಗಳನ್ನು ತಬ್ಬಿಕೊಂಡು ಅವರ ಪಾದಗಳ ಬಳಿ ಕುಳಿತಿದ್ದಾಳೆ. ಚಿತ್ರಕ, ಗುಲಿಕ ಹಾಗೂ ಅವರ ಅನೇಕ ಸೇನಾ ಮುಖ್ಯರು ಸಭೆಯ ಮುಂಭಾಗದಲ್ಲಿ ನಿಂತಿದ್ದಾರೆ. ಕಿರಾತ ಸ್ವಲ್ಪ ದೂರದಲ್ಲಿ ಏಕಾಕಿಯಾಗಿ ಎದೆಯ ಮೇಲೆ ಕೈ ಕಟ್ಟಿಕೊಂಡು ನಿಂತಿದ್ದಾರೆ.
ಧರ್ಮಾದಿತ್ಯ- (ಕ್ಷೀಣಧ್ವನಿಯಲ್ಲಿ) ನಮಗೆ ಇನ್ನು ಈ ರಾಜ್ಯ ಸುಖದಲ್ಲಿ ಆಸಕ್ತಿ ಇಲ್ಲ. ನಾನು ‘ಸಂಘ’ಕ್ಕೆ ಶರಣಾಗುತ್ತೇನೆ. ರಾಜಾಧಿರಾಜ, ತಾವು ನಮ್ಮ ಈ ಪುಟ್ಟ ರಾಜ್ಯವನ್ನು ಒಪ್ಪಿಸಿಕೊಳ್ಳಬೇಕು. ಆತತಾಯಿಗಳ ಕಾಟದಿಂದ ಪ್ರಜೆಗಳನ್ನು ರಕ್ಷಿಸಬೇಕು.
ಸ್ಕಂದ- ಆಯಿತು. ಅದನ್ನು ನೆರವೇರಿಸಿ ಕೊಡುತ್ತೇನೆ. ಆದರೆ ನಾನು ವಿಟಂಕ ರಾಜ್ಯದಲ್ಲಿ ಇದ್ದುಕೊಂಡು ಶಾಸನ ಮಾಡಲಾರೆ. ಒಬ್ಬ ಸಾಮಂತ ರಾಜರ ಅಗತ್ಯತೆ ಇದೆ. ಆತನು ಸಿಂಹಾಸನದ ಮೇಲೆ ಕುಳಿತು ಪ್ರಜೆಗಳ ಯೋಗಕ್ಷೇಮ ನೋಡಿಕೊಳ್ಳುವಂತಾಗಬೇಕು. ಅಂಥ ವ್ಯಕ್ತಿ ಯಾರಿದ್ದಾರೆ?
ಧರ್ಮಾದಿತ್ಯ- ನನಗೆ ಒಬ್ಬಳೇ ಒಬ್ಬಳು ಮಗಳಿದ್ದಾಳೆ- ಇವಳೇ ರಟ್ಟಾ ಯಶೋಧರಾ. ಹೀಗೆ ಹೇಳುತ್ತ ಅವರು ತಮ್ಮ ಮಗಳ ತಲೆಯ ಮೇಲೆ ಕೈಯಿಟ್ಟರು.
ಸ್ಕಂದಗುಪ್ತ- ತಮ್ಮ ಮಗಳು ರಟ್ಟಾ ಇನ್ನೂ ಅವಿವಾಹಿತೆ. ತಮಗೆ ಒಬ್ಬ ಅಳಿಯನಿದ್ದಿದ್ದರೆ, ತಮ್ಮ ಜಾಗದಲ್ಲಿ ಆತನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ, ಪಟ್ಟಕಟ್ಟಿ, ರಾಜ್ಯಾಡಳಿತ ಕೊಡಬಹುದಾಗಿತ್ತು. ಆಗ ಯಾರೂ ‘ಚ’ ಕಾರವೆತ್ತಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅನಧಿಕಾರಿ ವ್ಯಕ್ತಿಯೊಬ್ಬನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿದರೆ ರಾಜ್ಯದಲ್ಲಿ ಅಶಾಂತಿ ಉಂಟಾಗುವ ಸಂಭವವಿದೆ. ಈಗಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲದ ಮಾತು. ಧರ್ಮಾದಿತ್ಯರೆ, ತಾವು ಇನ್ನೂ ಸ್ವಲ್ಪ ಕಾಲ ರಾಜದಂಡವನ್ನು ಧರಿಸಿದ್ದರೆ ಕ್ಷೇಮ. ಆನಂತರ
ಧರ್ಮಾದಿತ್ಯ- (ಸವಿನಯದಿಂದ ಕೈಮುಗಿದು) ನಮ್ಮನ್ನು ಕ್ಷಮಿಸಬೇಕು. ಪ್ರಾಪಂಚಿಕ ವಿಷಯದಲ್ಲಿ ನಮಗೆ ನಿರ್ವೇದ ಉಂಟಾಗಿದೆ. ರಾಜ್ಯ ತಮ್ಮದು. ತಮ್ಮ ಇಚ್ಛೆ. ಯಾರಿಗೆ ಬೇಕಾದರೂ ಕೊಡಬಹುದು. ನನ್ನ ಮಗಳಿಗಾಗಿಯೂ ನಾನು ಅನುಗ್ರಹ ಭಿಕ್ಷೆ ಬೇಡುವುದಿಲ್ಲ. ರಟ್ಟಾ ತಮ್ಮ ಪ್ರೀತಿ ಸಂಪಾದಿಸಿದ್ದಾಳೆ. ಅವಳು ನಿಮ್ಮ ಕನ್ಯೆ ತಾವು ಪ್ರಜೆಗಳ ಕಲ್ಯಾಣಕ್ಕಾಗಿ ಏನು ಮಾಡಬೇಕೋ
ಅದು ತಮಗೆ ಬಿಟ್ಟ ವಿಚಾರ. ಸಭೆ ಕ್ಷಣಕಾಲ ಸ್ತಬ್ಧವಾಗಿತ್ತು. ಅನಂತರ ರಟ್ಟಾ ನಿಧಾನವಾಗಿ ಮೇಲೆದ್ದು ನಿಂತಳು. ಒಂದು ಸಲ ಚಿತ್ರಕನ ಕಡೆ ದೃಷ್ಟಿ ಹರಿಸಿ ಮೃದುವಾಗಿ ನಕ್ಕಳು. ಆಮೇಲೆ ಸ್ಕಂದಗುಪ್ತರ ಕಡೆ ತಿರುಗಿದಳು. ಅವರನ್ನು ಕುರಿತು ‘ಆಯುಷ್ಮನ್,
ರಾಜ್ಯಕ್ಕೆ ನ್ಯಾಯಯುತವಾದ ಅಧಿಕಾರಿಯೊಬ್ಬರ ಅಭಾವ, ಒಂದು ವೇಳೆ, ಉಂಟಾಗುವುದಾದರೆ, ನಾನು ಅಂಥ ನ್ಯಾಯಯುತವಾದ ಒಬ್ಬ ವ್ಯಕ್ತಿಯನ್ನು ಹುಡುಕಿ ಕೊಡುತ್ತೇನೆ’ ಎಂದಳು. ಎಲ್ಲರೂ ಆಶ್ಚರ್ಯದಿಂದ ಅವಳ ಕಡೆ ನೋಡಿದರು.
ರಟ್ಟಾ- ಯಾವ ಆರ್ಯರಾಜನನ್ನು ಗೆದ್ದು ನಮ್ಮ ತಂದೆ ರಾಜ್ಯದ ಅಧಿಕಾರವನ್ನು ಪಡೆದಿದ್ದರೋ ಆ ಆರ್ಯರಾಜನ ವಂಶೋದ್ಧಾರಕ ಇನ್ನೂ ಜೀವಂತವಾಗಿದ್ದಾರೆ-
ಸ್ಕಂದಗುಪ್ತ- ಆತನಾರು? ಆತನೆಲ್ಲಿದ್ದಾನೆ?
ಪ್ರಶ್ನೆಗೆ ಉತ್ತರ ಕೊಡದೆ, ರಟ್ಟಾ ಗಂಭೀರವಾಗಿ ಚಿತ್ರಕನ ಬಳಿಗೆ ಹೋಗಿ ಆತನ ಮುಂದೆ ನಿಂತಳು. ಚಿತ್ರಕ ಭಾವಾವೇಶಕ್ಕೆ ಒಳಗಾಗಿ, ಗದ್ಗದಿತನಾಗಿ ‘ರಟ್ಟಾ-’ ಎಂದು ಕೂಗಿ ಮೌನ ತಾಳಿದನು ರಟ್ಟಾ ಚಿತ್ರಕನ ಕೈ ಹಿಡಿದುಕೊಂಡು ಸ್ಕಂದಗುಪ್ತನ ಬಳಿಗೆ ಕರೆ ತಂದು ‘ಇವರೇ ಸಿಂಹಾಸನಕ್ಕೆ ನ್ಯಾಯಯುತವಾದ ಅಧಿಕಾರಿ’ ಎಂದಳು.
ಸ್ಕಂದಗುಪ್ತ- (ವಿಸ್ಮಯದಿಂದ) ಚಿತ್ರಕ ವರ್ಮಾ-!
ರಟ್ಟಾ- ಇವರ ನಿಜವಾದ ಹೆಸರು ‘ತಿಲಕ ವರ್ಮಾ.’
ಸ್ಕಂದಗುಪ್ತ- ತಿಲಕವರ್ಮಾ, ನೀವು ಭೂತಪೂರ್ವ ಆರ್ಯರಾಜರ ಪುತ್ರರೇನು?
ಚಿತ್ರಕ- ಹೌದು. ಮೊದಲು ತಿಳಿದಿರಲಿಲ್ಲ. ಇತ್ತೀಚೆಗೆ ತಿಳಿಯಿತು. ಸ್ಕಂದಗುಪ್ತ- ಪ್ರಮಾಣವೇನಾದರೂ ಇದೆಯೇ?
ಚಿತ್ರಕ- ಯಾರು ನನ್ನ ಗೌಪ್ಯತೆಯನ್ನು ಬಹಿರಂಗ ಪಡಿಸಿದರೋ ಅವರೇ ಪ್ರಮಾಣವನ್ನು ಒದಗಿಸುವರು. ಅದಕ್ಕೆ ನನ್ನದೇನೂ ಒತ್ತಾಯವಿಲ್ಲ.
ರಟ್ಟಾ- ಪ್ರಮಾಣವಿದೆ. ಅಗತ್ಯತೆ ಬಿದ್ದಾಗ ಕೊಡುತ್ತೇನೆ. ಆದರೆ, ಆರ್ಯ, ಪ್ರಮಾಣದಿಂದ ಏನಾದರೂ ಪ್ರಯೋಜನವಿದೆಯೇ?
ಸ್ಕಂದಗುಪ್ತರು ತೀಕ್ಷ್ಣದೃಷ್ಟಿಯಿಂದ ಒಂದು ಬಾರಿ ರಟ್ಟಾಳ ಮುಖವನ್ನು ಮತ್ತು ಚಿತ್ರಕನ ಮುಖವನ್ನು ನೋಡಿದರು. ಸಮ್ರಾಟರ ತುಟಿಗಳ ಮೇಲೆ ಒಂದು ರೀತಿ ಕಷ್ಟಕರವಾದ ನಗು ಮೂಡಿತು. ಅವರು ‘ಇಲ್ಲ. ಏನೂ ಪ್ರಯೋಜನವಿಲ್ಲ. ತಿಲಕ ವರ್ಮಾ, ವಿಟಂಕದ ಸಿಂಹಾಸನವನ್ನು ನಿಮಗೆ ಕೊಡುತ್ತೇನೆ. ರಟ್ಟಾ ಯಶೋಧರಾ, ವಿಟಂಕದ ರಾಜಮಹಿಷಿಯಾಗಲು ನಿಮ್ಮದೇನೂ ಆಕ್ಷೇಪಣೆ ಇಲ್ಲವಲ್ಲಾ?’ ಎಂದು ಕೇಳಿದರು.
ರಟ್ಟಾ ತಲೆ ತಗ್ಗಿಸಿಕೊಂಡು ಮತ್ತೆ ತಮ್ಮ ತಂದೆಯ ಕಾಲ ಬಳಿ ಕುಳಿತುಕೊಂಡಳು. ಸಭೆಯಲ್ಲಿದ್ದವರೆಲ್ಲ ಚಿತ್ರದ ಗೊಂಬೆಗಳಂತೆ ಈ ದೃಶ್ಯವನ್ನು ನೋಡುತ್ತಿದ್ದರು. ನಂತರ ಹರ್ಷಧ್ವನಿ ಮೊಳಗಿತು. ರಟ್ಟ ಧರ್ಮಾದಿತ್ಯರು ಆಸನ ಬಿಟ್ಟು ಮೇಲೆದ್ದು ನಿಂತರು. ಚಿತ್ರಕನನ್ನು ಸಂಬೋಧಿಸಿ, ಕಂಪಿತಧ್ವನಿಯಲ್ಲಿ ‘ವತ್ಸ, ಯೌವನದ ಆವೇಶದಲ್ಲಿ ನಾನು ಮಾಡಿದ ಹಿಂಸಾವೃತ್ತಿಗಾಗಿ ಪಶ್ಚಾತ್ತಾಪ ಪಟ್ಟು ನನ್ನ ಹೃದಯ ಬೆಂದು ಹೋಗಿದೆ. ವಿಟಂಕದ ಸಿಂಹಾಸನ ನಿನ್ನದು. ಅದನ್ನು ನೀನು ಅನುಭವಿಸು. ಮತ್ತು ನಮ್ಮ ರಟ್ಟಾ ಯಶೋಧರಾಳನ್ನು ಸ್ವೀಕರಿಸಿ ನನ್ನನ್ನು ಋಣಮುಕ್ತನನ್ನಾಗಿ ಮಾಡು’ ಎಂದು ಕೇಳಿಕೊಂಡರು.
ಚಿತ್ರಕ ತಲೆ ತಗ್ಗಿಸಿ ‘ತಾವು ಸ್ವಇಚ್ಛೆಯಿಂದಲೇ ಋಣವನ್ನು ತೀರಿಸಿದ್ದೀರಿ. ತಾವು ಮಹಾನುಭಾವರು, ಆದರೆ ಇನ್ನೊಂದು ಆದಾನ ಪ್ರದಾನ ಇನ್ನೂ ಹಾಗೆಯೇ ಉಳಿದಿದೆ’ ಎಂದನು. ಚಿತ್ರಕ ಸರಸರನೆ ನಡೆದು ಕಿರಾತನ ಮುಂದೆ ಹೋಗಿ ನಿಂತನು. ಅವನನ್ನು ಕುರಿತು ‘ಈಗ ನನ್ನ ಪರಿಚಯವಾಯಿತಲ್ಲವೆ? ಪಿತೃಋಣ ತೀರಿಸಲು ಸಿದ್ಧವಾಗಿದ್ದೀರೇನು?’ ಎಂದು ಕೇಳಿದನು.
ಕಿರಾತ ತನ್ನ ರಕ್ತಹೀನವಾಗಿದ್ದ ಮುಖವನ್ನು ಮೇಲೆತ್ತಿ ‘ಇದ್ದೇನೆ’ ಎಂದನು.
ಚಿತ್ರಕ ಹಾಗಾದರೆ ಕತ್ತಿ ತೆಗೆದುಕೊಳ್ಳಿ. ನಾನೂ ಕೂಡ ಪಿತೃಋಣ ತೀರಿಸಬೇಕಾಗಿದೆ.
ಮುಂದಿನ ವಾರ ಮುಕ್ತಾಯ………
ಎನ್. ಶಿವರಾಮಯ್ಯ (ನೇನಂಶಿ)