ಅಂತಿಮ ಭಾಗ
ಮತ್ತೆ ಕಪೋತಕೂಟ
ಅರಮನೆ ದೀಪಮಾಲಿಕೆಗಳಿಂದ ಝಗಝಗಿಸುತ್ತಿದೆ. ಮಂಗಳ ವಾದ್ಯಗಳು ಮೊಳಗುತ್ತಿವೆ. ಝಲ್ಲರಿ- ಮುರಳಿ- ಮೃದಂಗಗಳ ಮೃದು
ಮಧುರ ನಿನಾದ ವಾತಾವರಣದಲ್ಲೆಲ್ಲ ತುಂಬಿದೆ. ನಗರದ ಬೀದಿ ಬೀದಿಗಳಲ್ಲಿ ಗಂಡು ಹೆಣ್ಣುಗಳ ನೃತ್ಯಗೀತಗಳು ಇನ್ನೂ ಕಡಿಮೆಯಾಗಿಲ್ಲ. ಪುರಾತನ ರಾಜಪುತ್ರನಿಗೂ ನೂತನ ರಾಜಕುಮಾರಿಗೂ ಮದುವೆ ಎರಡು ರಾಜ ವಂಶಗಳು ಒಂದಾಗಿವೆ. ರಟ್ಟ ಧರ್ಮಾದಿತ್ಯರು ಅಳಿಯನ ಕೈಗೆ ರಾಜ್ಯಭಾರವನ್ನು ಒಪ್ಪಿಸಿ ಚಿಲ್ಲಕೂಟ ವಿಹಾರದಲ್ಲಿ ಆಶ್ರಯ ಪಡೆದಿದ್ದಾರೆ. ಸಮ್ರಾಟ ಸ್ಕಂದಗುಪ್ತರು ವಧೂವರರಿಗಾಗಿ ಸೇನಾ ಶಿಬಿರದಿಂದ ಐದು ಆನೆಗಳನ್ನು ಕಾಣಿಕೆಯಾಗಿ ಕಳುಹಿಸಿಕೊಟ್ಟಿದ್ದಾರೆ.
ವಿಶ್ವಾಸಘಾತಕ ಕಿರಾತ ಮರಣ ಹೊಂದಿದ್ದಾನೆ. ಎಲ್ಲರೂ ಸುಖಿಗಳು, ಎಲ್ಲರೂ ಆನಂದದಲ್ಲಿ ಮುಳುಗಿದ್ದಾರೆ. ಅದೇ ರೀತಿ ವೃದ್ಧ ಹೂಣ ಯೋಧ ಮೋಂಗನ ತುಟಿಗಳ ಮೇಲೆ ಸದಾ ನಗು. ಪ್ರತ್ಯೇಕ ಮದಿರಾಲಯಗಳಲ್ಲಿ ನಾಗರಿಕರು ಆನಂದದಿಂದ ನಲಿದಾಡುತ್ತ ಅವನನ್ನು ಕರೆದು ಹೊಟ್ಟೆ ತುಂಬ ಮಧ್ಯ ಕುಡಿಸುತ್ತಾರೆ. ಅವನ ಬಹುಶ್ರುತ ಕತೆಗಳನ್ನು ಕೇಳಿ ಯಾರೂ ಓಡಿಹೋಗುತ್ತಿಲ್ಲ. ಕತೆ ಕೇಳಿ ಜೋರಾಗಿ ನಗುತ್ತಿದ್ದಾರೆ. ‘ಆ ಮೇಲೆ ಏನಾಯಿತು, ಆಮೇಲೆ ಏನಾಯಿತು. ಮೋಂಗ್’ ಎಂದು ಅವನನ್ನು ಕತೆಗಾಗಿ ಒತ್ತಾಯಪಡಿಸುತ್ತಿದ್ದಾರೆ.
ಕುಡಿದ ಅಮಲಿನಲ್ಲಿ ಮೋಂಗ್ ತೂಗಾಡುತ್ತಿದ್ದಾನೆ. ತಟ್ಟಾಡುತ್ತಿದ್ದಾನೆ. ಆದರೆ ಕತೆಯನ್ನು ಚಾಚೂ
ತಪ್ಪದೆ ಕ್ರಮವಾಗಿ ಹೇಳುತ್ತಿದ್ದಾನೆ. ಅರಮನೆಯಲ್ಲಿ ವಿವಾಹ ಕ್ರಿಯೆಗಳು ಮುಗಿದವು. ನಡುರಾತ್ರಿಯಲ್ಲಿ ಒಂದು ಪುಷ್ಪ ಸುರಭಿತ ಕೊಠಡಿಯಲ್ಲಿ ಚಿತ್ರಕ- ರಟ್ಟಾ ಹಾಗೂ ಸುಗೋಪಾ ಇದ್ದರು.
ಚಿತ್ರಕ- ಸುಗೋಪಾ, ನೀನು ನನಗೆ ವಿಶ್ವಾಸಘಾತ ಮಾಡಿದೆ.
ಸುಗೋಪಾ-(ಒಯ್ಯಾರದಿಂದ) ವಿಶ್ವಾಸಘಾತ ಮಾಡದಿದ್ದರೆ ಇಂಥ ಗೆಳತಿ ಎಲ್ಲಿ ದೊರೆಯುತ್ತಿದ್ದಳು? ಪುಷ್ಪಾಭರಣಗಳಿಂದ ಭೂಷಿತಳಾದ ರಟ್ಟಾಳ ಕೈಯಲ್ಲಿ ಬೆಳ್ಳಿಯ ಒಂದು ಬಾಣವಿದೆ. ಕನ್ಯೆಯು ವಿವಾಹಕಾಲದಲ್ಲಿ ಇದನ್ನು ಹಿಡಿಯಬೇಕಾಗುತ್ತದೆ. ಆ ಬಾಣದಿಂದ ಸುಗೋಪಾಳ ವಕ್ಷಸ್ಥಳದ ಮೇಲೆ ಮೃದುವಾಗಿ ಹೊಡೆದು ರಟ್ಟಾ ‘ಸುಗೋಪಾ, ನನಗೂ ಕೂಡ ಸ್ವಲ್ಪ ಗುಟ್ಟಿನ ವಿಷಯ ಹೇಳಬಾರದೆ? ನಾಳೆ ಬೆಳಗ್ಗೆ ಬಂದು ಎಲ್ಲ ವಿಷಯಗಳನ್ನು ನನಗೆ ತಿಳಿಸಬೇಕು’ ಎಂದಳು.
ಚಿತ್ರಕನು ರಟ್ಟಾಳ ಕೈಹಿಡಿದು ‘ರಟ್ಟಾ, ನನ್ನ ವಿಷಯ ತಿಳಿದುಕೊಳ್ಳಬೇಕೆಂದು ನಿನಗೆ ಮನಸ್ಸಾಗಿದೆಯೆ?’ ಎಂದು ಪ್ರಶ್ನಿಸಿದನು.
ರಟ್ಟಾಳಿಗೆ ನಿದ್ದೆಯ ಮಂಪರು. ಅವಳು ‘ಆ ದಿನ ಸಂಧ್ಯಾಕಾಲದ ನಂತರ ಬೆಳುದಿಂಗಳ ಬೆಳಕಿನಲ್ಲಿ ಕೋಟೆ ಗೋಡೆಯ ಮೇಲೆ ನಿನ್ನನ್ನು ಕಂಡದ್ದು ‘ಜ್ಞಾಪಕವಿದೆಯೇ? ನಿನ್ನ ಮನಸ್ಸಿನಲ್ಲಿದ್ದ ಭಾವನೆ ನನಗೆ ತಿಳಿದಿತ್ತು. ನೀನು ಸೇಡು ತೀರಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು, ಇಲ್ಲದಿದ್ದರೆ ನಿನ್ನ ಹೃದಯವನ್ನು ಗೆಲ್ಲಬೇಕು ಎಂದು ನಾನು ಸಂಕಲ್ಪ ಮಾಡಿಕೊಂಡೆ. ಆದರೆ ನೀನು ಸೇಡು ತೀರಿಸಿಕೊಳ್ಳಲಿಲ್ಲ. ಆದ್ದರಿಂದಲೇ ನಿನ್ನ ಹೃದಯವನ್ನು ನಾನು ಗೆದ್ದೆ ಮತ್ತು ನಿನ್ನನ್ನು ಪ್ರೀತಿಸ ತೊಡಗಿದೆ’
ಎಂದು ಉತ್ತರಿಸಿದಳು.
ರಟ್ಟಾ ಚಿತ್ರಕನ ಕಡೆಗೆ ಮಿಂಚಿನಂತಿರುವ ಕಟಾಕ್ಷವನ್ನು ಬೀರಿ, ಅನಂತರ ಸುಗೋಪಾಳ ಕಿವಿಯಲ್ಲಿ ‘ಸುಗೋಪಾ, ಇನ್ನು ಈಗ ನೀನು ಮನೆಗೆ ಹೋಗು. ರಾತ್ರಿ ಬಹಳ ಹೊತ್ತಾಯಿತು. ಈ ದಿನ ರಾತ್ರಿ ನಿನ್ನ ಮಾಲಾಕರನಿಗೆ ವಂಚನೆ ಮಾಡಬೇಡ’ ಎಂದು ಪಿಸುಮಾತು ಹೇಳಿದಳು.
ಸುಗೋಪಾ ಕೂಡ ಪಿಸು ಮಾತಿನಲ್ಲಿ ‘ಏನೂ ಹೇಳಬೇಡ. ನಿನಗೂ ನಿಮ್ಮ ಮಾಲಾಕರ ಸಿಕ್ಕಿದ್ದಾನೆಂದು ನನ್ನನ್ನು
ಕಳುಹಿಸಿಕೊಡುತ್ತಿದ್ದೀಯೆ. ನಿನಗೂ ಆತುರ ಸಹಿಸಲಾಗುತ್ತಿಲ್ಲ. ಅಲ್ಲವೆ?’ ಎಂದು ಹೇಳಿ ‘ಉಫ್’ ಎಂದು ದೀಪವನ್ನು ಊದಿ ಆರಿಸಿ, ನಗು ನಗುತ್ತ ಅಲ್ಲಿಂದ ಪರಾರಿಯಾದಳು.
ಅದಾದ ಮೇಲೆ ಸುಖ ಸ್ವಪ್ನದ ಹಾಗೆ ಆರು ತಿಂಗಳು ಕಳೆದು ಹೋಯಿತು. ಅತ್ತ ಹೂಣರ ಜೊತೆ ಸ್ಕಂದಗುಪ್ತನ ಯುದ್ಧ ಮುಂದುವರಿದಿದೆ. ಹೂಣರು ಕೆಲವೊಮ್ಮೆ ಹಿಮ್ಮೆಟ್ಟುತ್ತಾರೆ, ಇನ್ನು ಕೆಲವೊಮ್ಮೆ ಮುಂದುವರಿದು ದಾಳಿ ಮಾಡುತ್ತಾರೆ. ವಿಟಂಕ ರಾಜಕ್ಕೆ ಅವರು ಪ್ರವೇಶ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ. ಚಷ್ಟನ ದುರ್ಗದಲ್ಲಿದ್ದು ಕೊಂಡು ಗುಲಿಕ ವರ್ಮಾ ಸಾವಿರ ಕಣ್ಣುಗಳಿಂದ ಕಣಿವೆ ಮಾರ್ಗವನ್ನು ಕಾಯುತ್ತಿದ್ದಾನೆ.
ಚಿತ್ರಕ ತನ್ನ ರಾಜ್ಯದಲ್ಲಿ ಒಂದು ಸೈನಿಕರ ದಳವನ್ನು ರಚಿಸಿದ್ದಾನೆ. ಮೂರು ಸಾವಿರ ಜನ ಸೈನಿಕರು ಕಪೋತ ಕೂಟದ ರಕ್ಷಣೆಗಾಗಿ
ಸದಾ ಸಿದ್ಧವಾಗಿದ್ದಾರೆ. ಒಂದು ದಿನ ಸೂರ್ಯ ಮುಳುಗುವ ಸಮಯದಲ್ಲಿ ಪ್ರಾಸಾದದ ಮೇಲೇರಿ ಹೋಗಿ ರಟ್ಟಾ ನೋಡುತ್ತಾಳೆ, ಚಿತ್ರಕ ಸ್ಥಿರವಾಗಿ ನಿಂತು ಪಶ್ಚಿಮ ದಿಗಂತದ ಕಡೆ ನೋಡುತ್ತಿದ್ದಾನೆ’. ರಟ್ಟಾ ಹತ್ತಿರ ಹೋಗಿ ಅವನ ತೋಳುಗಳನ್ನು ಹಿಡಿದು ನಿಂತು ‘ಏನು ನೋಡುತ್ತಿದ್ದೀರಿ?’ ಎಂದು ಕೇಳಿದಳು.
ಚಿತ್ರಕನು ‘ಏನು ಇಲ್ಲ. ಸೂರ್ಯಾಸ್ತದ ವರ್ಣವೈಭವ ಎಷ್ಟು ಅಪೂರ್ವ ವಾದುದು! ಮೋಡ- ಪರ್ವತ-ಆಕಾಶ ಎಲ್ಲವೂ ಕೆಂಪಾದ
ಯುದ್ಧಭೂಮಿ ಯಂತೆ ಏಕಾಕಾರವಾಗಿ ಹೋಗಿವೆ! ಎಂದನು. ರಟ್ಟಾ ಸ್ವಲ್ಪ ಹೊತ್ತು ಚಿತ್ರಕನ ಮುಖದ ಮೇಲೆ ಕಣ್ಣು ಹಾಯಿಸಿ
‘ಯುದ್ಧಕ್ಕೆ ಹೋಗಲು ನಿಮ್ಮ ಮನಸ್ಸು ಹಾತೊರೆಯುತ್ತಿರುವಂತೆ ಕಾಣುತ್ತಿದೆ’ ಎಂದಳು.
ರಟ್ಟಾಳ ಕೈಗೆ ಸಿಕ್ಕಿಬಿದ್ದ ಚಿತ್ರಕ, ಕರುಣಾಜನಕವಾದ ನಗೆ ನಕ್ಕನು. ರಟ್ಟಾ ಅವನ ಭುಜದ ಮೇಲೆ ಕೈಯಿಟ್ಟು ‘ಮನಸ್ಸು ಅಧೀರವಾಗಿದ್ದರೆ ಯುದ್ಧಕ್ಕೆ ಏಕೆ ಹೋಗಬಾರದು?’ ಎಂದಳು.
ಚಿತ್ರಕ ಆಶ್ಚರ್ಯಪಟ್ಟು ಅವಳ ಕಡೆ ಒಮ್ಮೆ ನೋಡಿ, ಸುಮ್ಮನಾದನು. ರಟ್ಟಾ ಆಗ ನಕ್ಕು ‘ನಿಮ್ಮ ಮನಸ್ಸಿನಲ್ಲಿರುವುದು ನನಗೆ ಅರ್ಥವಾಗುತ್ತದೆ. ಹೂಣರು ನಮ್ಮ ಜಾತಿಯವರು. ಅವರ ವಿರುದ್ಧ ನೀವು ಯುದ್ಧಕ್ಕೆ ಹೋದರೆ ನನಗೆ ದುಃಖವಾಗುತ್ತದೆ ಎಂದು ನೀವು ತಿಳಿದಿರಬಹುದು. ಸ್ವಜಾತಿಯವರ ವಿರುದ್ಧ ಯುದ್ಧ ಮಾಡಬೇಕಾಗುತ್ತದೆ ಎಂದು ಭಾವಿಸಿ ನಮ್ಮ ತಂದೆಯವರು ರಾಜ್ಯವನ್ನು ತ್ಯಜಿಸಿದರೆಂದು ನೀವು ನಂಬಿರಬಹುದು. ನಿಜ ತಾನೆ?’ ಎಂದು ಕೇಳಿದಳು.
ಚಿತ್ರಕ- ಇಲ್ಲ. ಧರ್ಮಾದಿತ್ಯರು ತುಂಬು ಹೃದಯದಿಂದ ಬುದ್ಧ ತಥಾಗತನ ಶರಣು ಹೋಗಿದ್ದಾರೆ. ಆದರೆ ನೀನು ರಟ್ಟಾ? ನಿನ್ನ
ದೇಹದಲ್ಲಿ ಹೂಣ ರಕ್ತವಿದೆ. ನಾನು ಹೂಣರ ವಿರುದ್ಧ ಯುದ್ಧಕ್ಕೆ ಹೋದರೆ ನಿನಗೆ ನಿಜವಾಗಿಯೂ ದುಃಖವಾಗುವುದಿಲ್ಲವೆ?
ರಟ್ಟಾ- (ದೃಢವಾದ ದನಿಯಲ್ಲಿ) ಇಲ್ಲ. ಹೂಣರು ನಿನಗೆ ಹೇಗೆ ಶತ್ರುಗಳೋ ಹಾಗೆ ನನಗೂ ಅವರು ಶತ್ರುಗಳು. ನಮ್ಮ ದೇಶದ
ಮೇಲೆ ಆಕ್ರಮಣ ಮಾಡಿದ ಅವರು, ಎಷ್ಟೇ ಪರಮಾತ್ಮೀಯರಾದರೂ ಅವರು ನನಗೆ ಶತ್ರುವೇ, ನಿಮ್ಮ ಮನಸ್ಸು ಆ ಕಡೆ ಎಳೆಯುತ್ತಿದ್ದರೆ, ನೀವು ಯುದ್ಧಕ್ಕೆ ಹೋಗಿರಿ. ಸ್ಕಂದಗುಪ್ತರಿಗೆ ನೆರವಾಗಿರಿ.
ಚಿತ್ರಕ- (ರಟ್ಟಾಳನ್ನು ಆಲಿಂಗಿಸಿ) ರಟ್ಟಾ, ನಮ್ಮ ರಾಜ್ಯವು ಪರಕೀಯರ ದಾಳಿಗೆ ತುತ್ತಾಗದೇಇರುವವರೆಗೂ ನಾನು ನಿಶ್ಚಿಂತೆಯಿಂದ ಇರುತ್ತೇನೆ. ಆದರೂ ನನ್ನ ಹೃದಯವೇಕೋ ಅಧೀರವಾಗಿದೆ. ನೀನು ನನ್ನ ಮನಸ್ಸಿನಲ್ಲಿರುವುದನ್ನು ಹೇಗೆ ಪತ್ತೆ ಮಾಡಿದೆ?
ರಟ್ಟಾ- (ನಕ್ಕು) ನಾನು ಅಂತರ್ಯಾಮಿ ಎಂಬುದು ಈವರೆಗೂ ತಿಳಿದೇ ಇರಲಿಲ್ಲ.
ಚಿತ್ರಕ- (ಉತ್ಸಾಹದಿಂದ) ಹಾಗಾದರೆ ಹೋಗಲೆ? ನಾನು ಒಂದು
ಸಾವಿರ ಸೈನಿಕರೊಂದಿಗೆ ಹೋಗುತ್ತೇನೆ. ಉಳಿದ ಎರಡು ಸಾವಿರ ಸೈನಿಕರು ಇಲ್ಲಿನ ರಕ್ಷಣೆಗಾಗಿ ಇರುತ್ತಾರೆ.
ರಟ್ಟಾ- ನೀವು ರಾಜರು. ನಿಮಗೆ ತೋಚಿದಂತೆ ಮಾಡಿರಿ. ಆದರೆ ನಿಮ್ಮ ಅನುಪಸ್ಥಿತಿಯಲ್ಲಿ ರಾಜ್ಯವನ್ನು ನೋಡಿಕೊಳ್ಳುವವರಾರು?
ಚಿತ್ರಕ- ನೀನು ನೋಡಿಕೊಳ್ಳುತ್ತೀಯೆ. ಚತುರ ಭಟ್ಟರು ನೋಡಿಕೊಳ್ಳುತ್ತಾರೆ.
ರಟ್ಟಾ ಬಹಳ ಹೊತ್ತು ತನ್ನ ಪತಿಯ ಮುಖವನ್ನೇ ನೋಡುತ್ತಿದ್ದಳು. ಕಣ್ಣುಗಳು ಹನಿಗೂಡಿದವು. ಕೊನೆಗೆ ಭಾರವಾದ ಧ್ವನಿಯಲ್ಲಿ ‘ನೀವು ಯಾವಾಗ ಯುದ್ಧದಲ್ಲಿ ಜಯಗಳಿಸಿ ವಾಪಸ್ಸು ಬರುವಿರೋ, ಆಗ ಒಬ್ಬ ಹೊಸ ಮನುಷ್ಯನು ಪುರದ್ವಾರದಲ್ಲಿ ನಿಮ್ಮನ್ನು ಸ್ವಾಗತಿಸುವನು’ ಎಂದು ಹೇಳಿ ತನ್ನ ಪತಿಯ ವಕ್ಷ ಸ್ಥಳದಲ್ಲಿ ಅವಿತುಕೊಂಡಳು.
ಮುಕ್ತಾಯ
ಎನ್. ಶಿವರಾಮಯ್ಯ (ನೇನಂಶಿ)