ಅನಿರೀಕ್ಷಿತವಾಗಿ ಕಷ್ಟಗಳು, ಆಪತ್ತುಗಳು ಬಂದೆರಗಿದಾಗ ದಿಕ್ಕೇ ತೋಚದಂತಾಗುತ್ತದೆ. ಕರೋನ ಸೋಂಕಿನ ಕರಾಳ ನರ್ತನಕ್ಕೆ ಇಡೀ ವಿಶ್ವವೇ ಕಂಗೆಟ್ಟು ಹೋಗಿತ್ತು. ಲಾಕ್ ಡೌನ್ ಸಮಯದಲ್ಲಿ ಮನೆಯಿಂದ ಆಚೆ ಬಾರದೆ ಕುಳಿತು ಪೇಪರ್ ಓದುತ್ತಿದ್ದಾಗ ಒಂದು ಮನೋಲ್ಲಾಸ ಘಟನೆ ಬರಹ ರೂಪದಲ್ಲಿ ಪ್ರಕಟವಾಗಿದ್ದು ಬಹು ದೊಡ್ಡ ಮಾನವೀಯತೆಯ ದರ್ಶನವನ್ನು ಕಷ್ಟದೊಂದಿಗೆ ಸ್ಪಂದನೆ, ಸಹಕಾರಗಳ ಕುರಿತು ವಿಷಯ ಒಂದು ಹೀಗಿತ್ತು.
ಒಮ್ಮೆ ಹಾಲು ದೇವರ ಬಳಿ ಒಂದು ವರವ ಕೇಳಿತು “ದೇವರೇ ನಾನು ಹಾಲು ನಾನು ಹಸು ಎಮ್ಮೆಗಳಿಂದ ಹೊರಬಂದಾಗ ಶುದ್ಧವಾಗಿಯೇ ಬರುತ್ತೇನೆ. ಆದರೆ ಈ ಮನುಷ್ಯರು ನನಗೆ ಹುಳಿ ಹಿಂಡಿ (ಮೊಸರು ಮಾಡಲು) ವಿಕಾರ ಮಾಡಿಬಿಡುತ್ತಾರೆ. ಆದುದರಿಂದ ನಾನು ಹಾಲಾಗಿಯೇ ಇರುವಂತೆ ವರವ ಕೊಡು”. ದೇವರಿಗೆ ನಗು ಬಂತು “ನೀನು ಹಾಲಾಗಿಯೇ ಇರಬೇಕೆನ್ನುವ ಮುನ್ನ ನಾನು ಹೇಳುವುದನ್ನು ಕೇಳು”. ನೀನು ಹಾಲಾಗಿದ್ದರೆ ಒಂದು ದಿನ ಮಾತ್ರ ಬದುಕಿರುವೆ, ಹುಳಿ ಹಿಂಡಿ ಹೆಪ್ಪಾಕಿದರೆ ಎರಡು ದಿನ ಬದುಕುತ್ತಿ. ಕಡೆದು ಬೆಣ್ಣೆಯಾದರೆ ವಾರಗಟ್ಟಲೆ ಇರುತ್ತಿ. ಇನ್ನು ಬೆಣ್ಣೆ ಕಾಯಿಸಿ ತುಪ್ಪ ಮಾಡಿದರೆ ಬಹಳ ದಿನ ಬದುಕುತ್ತೀಯ. ಜೊತೆಗೆ ಜನರಿಗೆ ಊಟಕ್ಕೆ ರುಚಿಕೊಡುವೆ. ನೀನು ನನ್ನ ಎದುರು ದೀಪ ಬೆಳಗಲು ಕಾರಣವಾಗುತ್ತಿ. ಹಾಗಾದರೆ ನಿನಗೆ ಹಾಲಾಗಿಯೇ ಸಾಯಬೇಕೆಂಬ ಹಂಬಲವೇಕೆ? ಮನುಷ್ಯ ಹುಳಿ ಹಿಂಡಿದರು ಅದು ನಿನ್ನ ಅಭಿವೃದ್ಧಿಗೆ ಕಾರಣವೆಂದು ಬಗೆದು ನಾನಾ ಆಕರಗಳನ್ನು ಹೊಂದುತ್ತಾ ಅನುದಿನವೂ ಬೆಳೆದು ಎಲ್ಲರಿಗೂ ಬೆಳಕಾಗಿ ಬಹಳ ದಿನ ಬದುಕುವುದು ಸರಿಯಲ್ಲವೇ.
ದೇವರ ಮಾತಿಗೆ ಹಾಲು ಮೌನವಾಯಿತು. ಶರಣಾಗಿ ಸುಮ್ಮನಾಗಿದ್ದಷ್ಟೇ ಅಲ್ಲ ತನ್ನ ಮನದ ಅಂಧಕಾರದಿಂದ ಹೊರಬಂದು ದೀಪಕ್ಕೆ ಸೇರಿ ಬೆಳಗಿ ತೊಳಗಿ ಜೀವನ ಸಾರ್ಥಕಗಳಿಸಿಕೊಂಡಿತು ಎಂಬ ಕಥೆಯೊಂದು ನಮ್ಮ ಜೀವನಕ್ಕೆ ನೀಡುವ ಸಂದೇಶ ಬಹುಮುಖ್ಯ.
ನಮ್ಮ ಮನಸ್ಸು ಹಾಲಿನ ಮನಸ್ಥಿತಿಯಲ್ಲಿಯೇ ಇರುತ್ತದೆ. ಯಾರೋ ಹುಳಿ ಹಿಂಡುತ್ತಾರೆ, ತೊಂದರೆ ಕೊಡುತ್ತಾರೆ ಕಷ್ಟವಾಗುತ್ತದೆ, ನಮ್ಮ ಏಳಿಗೆ ಕಂಡು ಅಸೂಯೆಪಡ್ಡುತ್ತಾರೆ, ಅಡ್ಡಗಾಲು ಹಾಕುತ್ತಾರೆ, ನಮ್ಮ ಪ್ರಗತಿಗೆ ಅಡ್ಡಿಪಡಿಸುತ್ತಾರೆ ಎಂದು ಯೊಚಿಸುತ್ತಾ ಕೊರಾಗುತ್ತಾ ಕಾಲನೂಕುತ್ತೇವೆ. “ಆದದ್ದೆಲ್ಲ ಒಳಿತೇ ಆಯಿತು, ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು” ಎಂಬ ದಾಸರ ನುಡಿಯಂತೆ ಒಳಿತಾಗಲೆಂದು ಹಂಬಲಿಸಿ ಬಾಳಲು ಮುಂದಾಗಬೇಕು.
ಸಮಸ್ಯೆಗಳು ಬರುತ್ತವೆಂದು ನಿಂದನೆಗಳಿಗೆ ಕಷ್ಟಗಳಿಗೆ ಹೆದರಿ ಕೂರದೆ ಅವುಗಳನ್ನು ಮೆಟ್ಟಿನಿಂತು ಮೇಲೆ ಬರುವುದಕ್ಕೆ ಪ್ರಯತ್ನಿಸಬೇಕಿದೆ. ಏಕೆಂದರೆ ಹಾಲು ಮೊಸರಾಗಿ ಮಜ್ಜಿಗೆ, ಬೆಣ್ಣೆ, ತುಪ್ಪವಾಗಿ ಜ್ಯೋತಿ ಬೆಳಗಲು ಕಾರಣವಾದಂತೆ ನಾವು ಅನುದಿನವೂ ಬೆಳೆದು ಬೆಳಕಾಗಿ ಬದುಕಲು ಚಿಂತಿಸೋಣ.
ಹುರುಳಿ ಎಂ ಬಸವರಾಜ
ಸಾಹಿತಿಗಳು, ಚಿತ್ರದುರ್ಗ