ಅಪ್ಪನೆಂಬ ಹಿರಿಮೆ
ಅಕ್ಷರಗಳಲ್ಲಿ ಅಳೆಯಲಾಗದ
ಆಕಾರವೊಂದಿದೆ ಅಪ್ಪಾ ಎಂಬ
ಅಚ್ಚರಿಯ ಆಕಾಶ
ನಾಗರಿಕತೆಯೊಂದಗೆ ಉದಯಿಸಿದ
ಮೊದಲ ಸೇನಾನಿ
ಅವನಿರುವೇ ಜಗದ
ಬಲ ಬೆರಗು
ಹಳೆ ಚಪ್ಪಲಿಯಂತೆಯೇ ಎತ್ತೆತ್ತಲೊ
ಬಾಯ್ಬಿಟ್ಟ ಬದುಕಿಗೆ ಹೊಲಿಗೆ ಹಾಕುವ ಕಸುಬುದಾರ
ತನ್ನದೇ ಹರಿದ ಬೆನ್ನು ಅವನಿಗೆ ಕಾಣುವುದೇ ಇಲ್ಲ
ಅಪ್ಪನಾದ ಹಿರಿಮೆಗೆ ಅಂಕುರಿಸಿದ
ತನ್ನದೇ ಜೀವ ಚೈತನ್ಯದ
ಕಣ್ಣ ಹೊಳಪಲ್ಲಿ ನಕ್ಷತ್ರ ಎಣಿಸುವ ಅಪ್ಪ
ಮುರಿದು ಬಿದ್ದ ಕನಸುಗಳ ಆಯ್ದು ತಂದು
ಕೌದಿ ಹೊಲಿಯುತ್ತಾನೆ
ಬೇಸಿಗೆಯಲ್ಲೂ ತಂಪಿಡುವ ಅಪ್ಪನ ಹೃದಯ
ನಡುಗಿಸುವ ಚಳಿಯಲ್ಲೂ ಬೆಚ್ಚನೆ ಕಾವು
ಅಂಗಳದ ತುಳಸಿ,
ಜಂಪು ಹಿಡಿದ ನಡುಮನೆ,,
ತಳತಳಿಸುವ ಪಡಸಾಲೆಯ ಜಂತಿ,,,
ಹಿತ್ತಲ ಕಿಲುಬು ಹಿಡಿದ ಚಿಲಕ
ಎಲ್ಲವೂ ಅವನದೇ ಪ್ರತಿರೂಪ
ಲೋಕದ ಕತ್ತಲು ತುಳಿದು ನಿಂತ
ಅವನ ಪಾದವೇ ಸ್ವರ್ಗ
ಅಂಬಾರಿ ನಾಚಿಸುವ
ಅವನ ಹೆಗಲೇ
ಸಿಂಹಾಸನ
ಅವನ ಬೆರಳ ತುದಿಯೇ
ಅಭೇದ್ಯ ಭದ್ರಕೋಟೆ
ಅಸೀಮ ಸೀಮಾತೀತ
ಅಪ್ಪ
ಅಪಾರ ಬಿಳಲುಗಳು
ಅಪ್ಪನೆಂಬ ಆಲದ ಮರಕ್ಕೆ
ಹಸಿವು, ಹಂಬಲ,, ಬಂಧ ಅನುಬಂಧ,,,
ಒಂದೆ ಎರಡೇ
ಮಕ್ಕಳ ನಗು
ಅವ್ವನ ಖುಷಿ
ಇಷ್ಟೇ ಅಪ್ಪನ ದಿಗ್ವಿಜಯ…
ಶಿಲ್ಪಾ ಮ್ಯಾಗೇರಿ