ಪವರ್ ಸ್ಟಾರ್ ಅಪ್ಪುವಿನ ಅಕಾಲ ಮರಣ ಘಟಿಸಿ ಹಲವು ತಿಂಗಳುಗಳು ಕಳೆದು ವರ್ಷದತ್ತಿರ ಆಗುತ್ತಾ ಬಂದರು ನಮ್ಮ ನಡುವೆ ಅಪ್ಪು ಇಲ್ಲ ಎಂಬುವ ಸತ್ಯವನ್ನು ಎಷ್ಟೋ ಜನರಿಗೆ ಈಗಲೂ ಒಪ್ಪಲು ಕಷ್ಟ ಎಂಬುದು ಎಲ್ಲರಿಗೂ ತಿಳಿದಿರುವಂತದ್ದೇ. 2012 ರಲ್ಲಿ ಬಿಡುಗಡೆಯಾಗಿದ್ದ “ಯಾರೇ ಕೂಗಾಡಲಿ” ಚಿತ್ರದ ನಂತರ ಎರಡು ವರ್ಷದ ದೀರ್ಘ ಸಮಯದ ನಂತರ ಬಿಡುಗಡೆಗೊಂಡ ಅಪ್ಪುವಿನ “ನಿನ್ನಿಂದಲೇ” ಚಿತ್ರವು ಜನರನ್ನು ತಲುಪಲು ವಿಫಲವಾಗಿತ್ತು. ಆಗ ಅದೇ ವರ್ಷ 6 ತಿಂಗಳ ನಂತರ ತೆಲುಗು ಚಿತ್ರವಾದ ಮಹೇಶ್ ಬಾಬು ನಟಿಸಿದ್ದ “ದೂಕುಡು” ಚಿತ್ರವನ್ನು ಅಪ್ಪುವಿಗಾಗಿ ಕನ್ನಡದಲ್ಲಿ “ಪವರ್ ***” ಎಂದು ರಿಮೇಕ್ ಮಾಡಿ ಆ ಚಿತ್ರ ಬಿಡುಗಡೆಗೆ ಸಿದ್ದವಾಗಿತ್ತು.
ನಾನಾಗ ವಸಂತನಗರ ದಲ್ಲಿನ ಒಂದು ಖಾಸಗಿ ಸಂಸ್ಥೆಯೊಂದರಲ್ಲಿ ಪೂರ್ಣ ಪ್ರಮಾಣದ ಉದ್ಯೋಗಿಯಾಗಿದ್ದು ಸಂಜೆ ವೇಳೆ ಸೀನಿಯರ್ ಹೈ-ಕೋರ್ಟ್ ವಕೀಲರಾದ ಎಚ್. ಬಿ. ರುದ್ರೇಶ್ ಎಂಬುವವರ ಆಫೀಸಿನಲ್ಲಿ ಪಾರ್ಟ್ ಟೈಮ್ ಟೈಪಿಸ್ಟ್ ಆಗಿದ್ದೆ. ಅದು ಹೇಗೆಂದರೆ ನಮ್ಮ ಸ್ನೇಹಿತರೊಬ್ಬರಿಗಾಗಿ ಲೀಗಲ್ ಅಡ್ವೈಸ್ ತೆಗೆದುಕೊಳ್ಲಲು ರುದ್ರೇಶ್ ರವರ ಆಫೀಸಿಗೆ ಹೋಗಿದ್ದಾಗ ಅವರ ಜೂನಿಯರ್ ಒಬ್ಬರು ಒಂದೊಂದೇ ಅಕ್ಷರವನ್ನು ಕಂಪ್ಯೂಟರ್ ಕೀಬೋರ್ಡ್ ನಲ್ಲಿ ಹುಡುಕಿ ಹುಡುಕಿ ಕುಟ್ಟುತ್ತ ಯಾವುದೋ ನೋಟೀಸ್ ಒಂದನ್ನು ಸಿದ್ಧಪಡಿಸುತ್ತಿದ್ದರು. ಲಾಯರ್ ಸಾಹೇಬರು ಡಿಕ್ಟ್ಟೇಷನ್ ಕೊಡುತ್ತ ‘ ಸ್ವಲ್ಪ ವೇಟ್ ಮಾಡಿ, ಎರಡು ನಿಮಿಷ ಇದೊಂದು ನೋಟೀಸ್ ಮುಗಿಸಿಬಿಡುತ್ತೇನೆ’ ಎಂದರು. ಅವರ ಜೂನಿಯರ್ ಕುಟ್ಟುತ್ತಿದ್ದ ಸ್ಪೀಡ್ ನೋಡಿ ನನಗ್ಯಾಕೋ ಇದು ಎರಡು ದಿನವಾದರೂ ಮುಗಿಯುವ ನೋಟೀಸ್ ಅಲ್ಲ ಎಂದುಕೊಂಡು ‘ಸರ್ ನೋಟೀಸ್ ನಾನು ಟೈಪ್ ಮಾಡಿಕೊಡಲೇ ‘ ಎಂದು ಹೇಳಿದ್ದೆ ತಡ ಆ ಜೂನಿಯರ್ ಚಂಗನೆ ತನ್ನ ಸೀಟಿನಿಂದ ಎದ್ದವರೇ ‘ಬನ್ನಿ ಚಂದ್ರು’ ಎಂದು ತಮ್ಮ ಸೀಟಿಗೆ ಪರ್ಮನೆಂಟ್ ರಾಜೀನಾಮೆ ಕೊಟ್ಟುಬಿಟ್ಟರು. ಅಲ್ಲಿಂದ ಆ ಕುರ್ಚಿ ಅನಾಮತ್ತು ಎರಡು ವರ್ಷ ನನ್ನದಾಗಿತ್ತು.
ನನ್ನ ಕೆಲಸ ಮುಗಿಯುತಿದದ್ದು ಸಂಜೆ 6.30 ಕ್ಕೆ ಏಳು ಘಂಟೆಗೆ ರುದ್ರೇಶ್ ರವರ ಆಫೀಸಿನಲ್ಲಿ ಹಾಜರಿರುತ್ತಿದ್ದೆ. ನ್ಯಾಯಾಲಯದ ಎಷ್ಟೋ ವಿಷಯಗಳು ನನ್ನ ತಲೆಗೆ ಹೋಗಿದ್ದೆ ಆ ಎರಡು ವರ್ಷದಲ್ಲಿ. ರುದ್ರೇಶ್ ರವರು ಥೇಟ್ ನಮ್ಮ ಟಿ.ಎನ್. ಸೀತಾರಾಮ್ ರವರ ಸೀರಿಯಲ್ ನಲ್ಲಿ ಬರುವ ಅವರದೇ ಆದ ಸಿ.ಎಸ್.ಪಿ. ಪಾತ್ರದಂತೆ, ತಮ್ಮ ಕಕ್ಷಿದಾರರ ಹತ್ತಿರ ದುಡ್ಡಿಲ್ಲದೆ ಹೋದರು ಕೇಸು ನೆಡೆಸುತ್ತ, ಡೈವೋರ್ಸ್ ಕೇಸಿಗೆ ಬಂದವರಿಗೆ ಬುದ್ದಿ ಹೇಳುತ್ತಾ, ಆದಷ್ಟು ಕೋರ್ಟ್ ಮೆಟ್ಟಿಲು ಹತ್ತುವುದನ್ನು ತಪ್ಪಿಸುತ್ತಿದ್ದರು.
ಅಪ್ಪುವಿನ ‘ಪವರ್***’ ಚಿತ್ರ ಮುಂದಿನ ವಾರಕ್ಕೆ ಬಿಡುಗಡೆ ದಿನಾಂಕವನ್ನು ಸಹ ಅನೌನ್ಸ್ ಮಾಡಿಯಾಗಿತ್ತು. ನಾವು ಆಫೀಸಿನಿಂದ ಒಂದಷ್ಟ್ಟು ಗೆಳೆಯರು ಆಗಲೇ ಚಿತ್ರವನ್ನು ಮೊದಲನೇ ದಿನವೇ ನೋಡಲು ಕಾತುರದಿಂದ ಇದ್ದಾಗಲೇ ಶನಿವಾರ ಮಧ್ಯಾಹ್ನ ರುದ್ರೇಶ್ ಸಾಹೇಬರ ಆಫೀಸಿನಿಂದ ಕರೆ ಬಂದಿತು. ಬಿಡುಗಡೆಗೆ ಸಿದ್ದವಾಗಿರುವ ಪುನೀತ್ ಚಿತ್ರವಾದ ಪವರ್ ಟೈಟಲ್ ಅದಾಗಲೇ ಸೂರ್ಯ ಎಂಬ ನಿರ್ಮಾಪಕರ ಕಡೆಯಿಂದ ನೋಂದಣಿಯಾಗಿದ್ದು ಸಾಕ್ಷಾತ್ ಆ ಸೂರ್ಯರೇ ಲಾಯರ್ ಆಫೀಸಿಗೆ ಬಂದಿರುವುದಾಗಿ ಅರ್ಜೆಂಟ್ ಟೈಪ್ ಮಾಡಬೇಕು ಸ್ವಲ್ಪ ಬೇಗ ಬನ್ನಿ ಎಂದು ಅವರ ಜೂನಿಯರ್ ಹೇಳಿದ್ದು ಕೇಳಿ ನನಗಾದ ಕಸಿವಿಸಿ ಹೇಳತೀರದು.
ಎಷ್ಟಾದರೂ ಅಪ್ಪುವಿನ ಅಭಿಮಾನಿಯಾದ ನನಗೆ ಅವರ ಚಿತ್ರಕ್ಕೆ ತಡೆ ತರುವುದು ನಿಜಕ್ಕೂ ಕಷ್ಟವಾಗಿ ನನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡುಬಿಟ್ಟೆ. ಭಾನುವಾರ ಸಂಜೆ ರುದ್ರೇಶ್ ರವರ ಜೂನಿಯರ್ ನಮ್ಮ ಮನೆ ಬಾಗಿಲಿಗೆ ಖುದ್ದು ಪ್ರತ್ಯಕ್ಷವಾಗಿಬಿಟ್ಟರು. ‘ಚಂದ್ರು ಸರ್ ರುದ್ರೇಶ್ ಮಾತನಾಡಬೇಕಂತೆ’ ಎಂದು ಅವರಿಗೆ ಫೋನ್ ಮಾಡಿಕೊಟ್ಟರು. ರುದ್ರೇಶ್ ‘ಚಂದ್ರು ಅರ್ಜೆಂಟ್ ಬನ್ನಿ ಒಂದು ಪಿಟಿಷನ್ ಟೈಪ್ ಆಗಬೇಕಾಗಿದೆ, ಭಾನುವಾರ ಹೊರಗೆ ಮಾಡಿಸೋಣವೆಂದರೆ ರಜೆ, ಬೆಳಿಗ್ಗೆಯೇ ಇದು ಕೋರ್ಟಿಗೆ ಅಡ್ಮಿಟ್ ಆಗಬೇಕು’ ಎಂದು ವಿನಂತಿಸಿಕೊಂಡರು. ಪ್ರಯತ್ನ ಪಟ್ಟಿದ್ದರೆ ಅವರು ಹೊರಗೆ ಮಾಡಿಸಬಹುದಿತ್ತು ಆದರೆ ಸತ್ಯ ಬೇರೆಯೇ ಇತ್ತು. ರುದ್ರೇಶ್ ಗೆ ನನ್ನ ಟೈಪಿಂಗ್ ಸ್ಪೀಡ್ ಅವರ ಡಿಕ್ಟ್ಟೇಷನ್ ಸ್ಪೀಡ್ ಗೆ ಅಡ್ಜಸ್ಟ್ ಆಗಿದ್ದರಿಂದ ಹಾಗು ಕೆಲವು ಅದ್ಬುತ ತರಲೆ ಐಡಿಯಾಗಳು ಟೈಪಿಂಗ್ ನಡುವೆ ನನಗೆ ಹೊಳೆದು ಅವುಗಳನ್ನು ನೋಟೀಸುಗಳ ತುಂಬಾ ತುಂಬುತ್ತ ನೋಟೀಸ್ ಗಳು ಬಹಳ ಸ್ಟ್ರಾಂಗ್ ಆಗಿ ರೂಪಗೊಳ್ಳುತಿತ್ತು. ನಮ್ಮಿಬ್ಬರ ಈ ಜುಗಲ್ಬಂದಿಯಿಂದ ಅದೆಷ್ಟೋ ನೋಟೀಸ್ ಗಳು ಕಕ್ಕ್ಷಿದಾರರ ಪರವಾಗಿ ಕೋರ್ಟಿಗೆ ಯಶಸ್ವಿಯಾಗಿ ಕ್ಯಾನ್ಸಲ್ ಆಗದೆ ಅಡ್ಮಿಟ್ ಆಗುತಿದ್ದವು. ಸರಿ ಇನ್ನೇನು ಮಾಡುವುದು ಎಂದು ರುದ್ರೇಶ್ ರವರ ಆಫೀಸಿಗೆ ಹೋದಾಗ ರಾತ್ರಿ ಏಳರ ಸಮಯವಾಗಿ ಸೂರ್ಯಾಸ್ತವಾಗಿದ್ದರು ಸಹ ನಿರ್ಮಾಪಕ ಸೂರ್ಯ ನಮ್ಮ ಆಫೀಸಿಗೆ ಬಂದು ಕುಳಿತಿದ್ದರು. ನಾನು ಎಂದಿನಂತೆ ಶಿಸ್ತಾಗಿ ಕುರ್ಚಿಯಲ್ಲಿ ಕುಳಿತು ಮುಂದೇನು ಎಂಬಂತೆ ರುದ್ರೇಶ್ ರವರತ್ತ ಮುಖ ಮಾಡಿದೆ. ರುದ್ರೇಶ್ ‘ ಚಂದ್ರು ಇವರು ಸೂರ್ಯ ಎಂಬ ನಿರ್ಮಾಪಕರು, ಪುನೀತ್ ನಟಿಸಿರುವ ಪವರ್ ಸಿನಿಮಾದ ಟೈಟಲ್ ಇವರ ಹೆಸರಿನಲ್ಲಿ ಆಗಲೇ ರಿಜಿಸ್ಟರ್ ಆಗಿದೆ’ ಎಂದು ಸಂಬಂಧಿತ ಪತ್ರಗಳ್ಳನ್ನು ಕೊಟ್ಟರು. ಅದನ್ನೆಲ್ಲಾ ಪರಿಶೀಲಿಸಿದ ನಾನು ಸರ್ ಕಾಫಿಗೆ ಹೋಗಿ ಬಂದು ಶುರು ಮಾಡುವ ಎಂದೇಳಿ ಹೋಟೆಲಿನಲ್ಲಿ ಅವರನ್ನು ಪ್ರತ್ಯೇಕವಾಗಿ ನಿಲ್ಲಿಸಿಕೊಂಡು ‘ಸರ್ ಸುಮಾರು ಎಂಟು ತಿಂಗಳಿಗೂ ಮುಂಚೆಯೇ ಅಪ್ಪುವಿನ ಪವರ್ ಚಿತ್ರ ತಯಾರಾಗುತ್ತಿರುವ ಸುದ್ದಿ ಎಲ್ಲರಿಗೂ ತಿಳಿದಿದೆ, ಈಗ ಗುರುವಾರ ಚಿತ್ರ ರಿಲೀಸ್ ಹಾಗುವಾಗ ಈ ಮನುಷ್ಯ ಬಂದಿರುವುದು ಏನಕ್ಕೆ ಸರ್’ ಎಂದೊಡನೆ ರುದ್ರೇಶ್ ‘ ಏನಕ್ಕೋ ಬಿಡಿ ನಮ್ಮ ಕೆಲಸ ನಾವು ಮಾಡೋಣ ಅದು ಏನು ಆಗಬೇಕೋ ಅದೇ ಆಗುತ್ತದೆ ಜಾಸ್ತಿ ತಲೆಕೆಡಸಿಕೊಳ್ಳಬೇಡಿ’ ಎಂದು ಮತ್ತೆ ಆಫೀಸಿಗೆ ಕರೆದುಕೊಂಡು ಹೋದರು.
ಸರಿ ನಮ್ಮಿಬ್ಬರ ಎಂದಿನ ಜುಗಲ್ಬಂದಿ ಶುರುವಾಗಿ ಮಧ್ಯೆ ಅಲ್ಲೇ ಕುಳಿತ್ತಿದ್ದ ನಿರ್ಮಾಪಕ ಸಾಹೇಬರನ್ನು ‘ ಸರ್ ಇನ್ನು ಬರಿ ಮೂರು ದಿನವಿದೆ ಸಿನಿಮಾ ರಿಲೀಸ್ ಆಗಲು, ಕಷ್ಟ ಸರ್ ನಿಮ್ಮ ಪಿಟಿಷನ್ ಅಡ್ಮಿಟ್ ಆಗೋದು’ ಎಂದು ಚುಡಾಯಿಸುವ ಧ್ವನಿಯಲ್ಲಿ ಹೇಳಿದ್ದೆ ತಡ ನಿರ್ಮಾಪಕರು ‘ಸರ್ ಏನಾದರೂ ಮಾಡಿ ಸರ್, ಇದು ನನ್ನ ಡ್ರೀಮ್ ಪ್ರಾಜೆಕ್ಟ್, ನನಗೆ ಅನ್ಯಾಯ ಆಗಿದೆ, ಏನಾದರೂ ಮಾಡಿ ಈ ಚಿತ್ರಕ್ಕೆ ಟೆಂಪರರಿ ಸ್ಟೇ ತನ್ನಿ, ಅವರು ಬೇಕಾದರೆ ಬೇರೆ ಟೈಟಲ್ ಇಟ್ಟುಕೊಳ್ಳಲಿ’ ಎಂದು ಗೋಗರೆಯಲು ಶುರು ಮಾಡಿದರು. ಇಷ್ಟೆಲ್ಲ ಮಾತನಾಡಿದರು ರುದ್ರೇಶ್ ರವರು ಏನು ಮಾತನಾಡದೆ ಡಿಕ್ಟ್ಟೇಷನ್ ಮುಂದುವರೆಸಿದರು. ನನಗಾಗಲೇ ಅನಿಸಿತ್ತು ನಮ್ಮ ಸಾಹೇಬರ ತಲೆಯಲ್ಲಿ ಯಾವುದೋ ಐಡಿಯಾ ಆಗಲೇ ಬಂದಿರುವುದರಿಂದ ಸುಮ್ಮನೆ ಇದ್ದಾರೆ ಎಂದು, ಎಷ್ಟಾದರೂ ಅನುಭವಿ ವಕೀಲರಲ್ಲವೇ? ನಿರ್ಮಾಪಕರು ಬೆಳಿಗ್ಗೆ ಕೋರ್ಟಿಗೆ ಬಂದು ದಾವೆಯ ಪ್ರತಿಗೆ ಸಹಿ ಹಾಕುವೆನೆಂದು ಮನೆಗೆ ಹೋದರು. ಆದರೆ ನಾವು ನಮ್ಮ ಮನೆಗಳಿಗೆ ಹೋಗಿದ್ದು ಮಧ್ಯರಾತ್ರಿ ಮೂರರ ವೇಳೆಗೆ ಪಿಟೀಷನ್ ಪೂರ್ತಿಯಾದ ನಂತರವೇ.
ನಿರ್ಮಾಪಕರ ತಗಾದೆ ಪಿಟೀಷನ್ ಸಿಟಿ ಸಿವಿಲ್ ಕೋರ್ಟಿನಲ್ಲಿ ಬೆಳಿಗ್ಗೆ ಅಡ್ಮಿಟ್ ಆಗಿ ಮಧ್ಯಾಹ್ನ ತುರ್ತು ವಿಚಾರಣೆ ಕೂಡ ಹಾಗಿ ನಾಲ್ಕರ ವೇಳೆಗೆ ರುದ್ರೇಶ್ ರವರ ಜೂನಿಯರ್ ತಡೆಯಾಜ್ಞೆ ಆದೇಶವನ್ನು ಆಫೀಸಿಗೆ ತಂದು ಅದು ಎಲ್ಲಾ ಟಿವಿ ಮಾಧ್ಯಮದವರೆಗೂ ತಲುಪಿ ರುದ್ರೇಶ್ ಐದರ ವೇಳೆಗೆ ಚಾನೆಲ್ ಒಂದರ ಲೈವ್ ಶೋ ಗೆ ಅಣಿಯಾಗಿ ನನಗೆ ಕೂಡಲೇ ಬರಬೇಕೆಂದು ಲೈವ್ ಟೆಲಿಕಾಸ್ಟ್ ನಲ್ಲಿ ನೀವು ಇರಬೇಕೆಂದು ಕರೆ ಮಾಡಿ ಹೇಳಿದರು. ನನಗೆ ಇದರಲ್ಲಿ ಗುರುತಿಸಿಕೊಳ್ಳಲ್ಲು ಇಷ್ಟವಿಲ್ಲ ಯಾಕೆಂದರೆ ಪುನೀತ್ ಅಭಿಮಾನಿಗಳ ಕೈಗೆ ಸಿಗದೇ ಹೋದರು ನಮ್ಮ ಆಫೀಸಿನ ಗೆಳೆಯರ ಕೈಲಿ ನನಗೆ ಮಂಗಳಾರತಿ ಆಗುವುದು ಖಂಡಿತ ಎಂದು ಗೊತ್ತಿತ್ತು. ಆದ್ದರಿಂದ ಆದಷ್ಟು ನಿಧಾನಕ್ಕೆ ಹೋಗಿ ಅವರ ಜೊತೆ ಲೈವ್ ಟೆಲಿಕಾಸ್ಟ್ ನಲ್ಲಿ ಕೊಳ್ಳುವುದನ್ನು ತಪ್ಪಿಸಿಕೊಂಡೆ.
ಮಾಧ್ಯಮಗಳಲ್ಲಿ ಸೋಮವಾರ ಮಂಗಳವಾರವಿಡೀ ಅಪ್ಪು ವಿನ “ಪವರ್ ***” ಚಿತ್ರದ್ದೇ ಸುದ್ದಿ. ಕೋರ್ಟಿನಲ್ಲಿ ಜಡ್ಜ್ ಸಾಹೇಬರು ಕೂಡ ಹೋಗಲಿ ಬಿಡಿ ತಡವಾಗಿದೆ ಈಗ ಈ ನಿರ್ಮಾಪಕರಿಗೂ ನಷ್ಟವಾಗುತ್ತದಲ್ಲವೇ ಎಂದು ಹೇಳಿ ಪವರ್ ಜೊತೆಗೆ ಮೂರು ಸ್ಟಾರ್ (***) ಗಳನ್ನೂ ಹಾಕಿಕೊಂಡಿದ್ದಾರಲ್ಲ ಎಂದು ತಡೆಯಾಜ್ಞೆ ಕೊಡುವುದಕ್ಕೆ ಹಿಂದೆ ಮುಂದೆ ನೋಡಿದರಂತೆ, ಆದರೆ ನಮ್ಮ ರುದ್ರೇಶ್ ಸಾಹೇಬರು ‘ಸರ್ ಎಲ್ಲರಿಗೂ ಗೊತ್ತಿರುವ ಹಾಗೆ ಸ್ಟಾರ್ ಗಳು ಲಿಪಿಯಲ್ಲ ಅವು ಬರಿಯ ಚಿಹ್ನೆ, ಆದರಿಂದ ಈ ಕೇಸಿಗೆ ನ್ಯಾಯ ದೊರಕಿಸಬೇಕೆಂದು ಗಟ್ಟಿಯಾಗಿ ವಾದ ಮಾಡಿ ತಡೆ ಆದೇಶವನ್ನು ತಂದುಬಿಟ್ಟಿದ್ದರು. ಈ ಮಧ್ಯೆ ಮೊದಲು ಆಫೀಸಿಗೆ ಬಂದಾಗ ಸ್ವಲ್ಪ ಹಣ ಕೊಟ್ಟಿದ್ದ ನಿರ್ಮಾಪಕರು ಅದ್ಯಾಕೋ ತಮ್ಮ ಫೋನನ್ನು ಬಂದ್ ಮಾಡಿ ಕಾಣೆಯಾಗಿಬಿಟ್ಟಿದ್ದರು. ಇಲ್ಲಿ ನಮ್ಮ ಆಫೀಸಿನಲ್ಲಿ ಗೆಳೆಯರು ‘ಥೂ ನಿನ್ನ ನೀನೇ ಫಿಲಂ ಗೆ ಪ್ಲಾನ್ ಮಾಡಿ ನೀನೇ ಸ್ಟೇ ತಂದುಬಿಟ್ಟೆಯಲ್ಲೋ’ ಎಂದು ಝಾಡಿಸುವುದಕ್ಕೆ ಶುರುಮಾಡಿದ್ದರು.
ಬುಧವಾರ ಮಧ್ಯಾಹ್ನ ಪವರ್*** ಚಿತ್ರಕ್ಕೆ ತಂದಿದ್ದ ತಡೆಯಾಜ್ಞೆ ರದ್ದಾಯಿತೆಂದು ರುದ್ರೇಶ್ ರವರ ಜೂನಿಯರ್ ತಿಳಿಸಿದರು. ಅಷ್ಟಕ್ಕೂ ಮಂಗಳವಾರ ತನಕ ಪತ್ತೆಯಿಲ್ಲದ ನಿರ್ಮಾಪಕರು ರುದ್ರೇಶ್ ರವರ ಆಫೀಸಿಗೆ ಬುಧವಾರ ಬೆಳಿಗ್ಗೆ ಬಂದು ತಡೆಯಾಜ್ಞೆ ರದ್ದುಮಾಡಿ ಎಂದು ಮಿಕ್ಕ ಹಣವನ್ನು ಕೊಟ್ಟು ಪಿಟೀಷನ್ ಹಿಂದಕ್ಕೆ ಪಡೆದುಕೊಂಡಿದ್ದರು. ಸರಿ ಬುಕ್ ಮೈ ಶೋ ಕಡೆಯಿಂದ ನಮ್ಮ ಗೆಳೆಯರೆಲ್ಲರೂ ಗುರುವಾರದ ಮೊದಲ ದಿನದ ಸಂಜೆ ಏಳರ ಶೋ ನೋಡಲು ಟಿಕೇಟುಗಳನ್ನು ಬುಕ್ ಮಾಡಿದೆವು (ನನ್ನ ಸ್ವಂತ ಖರ್ಚಿನಿಂದಲೇ). ಸಂಜೆ ರುದ್ರೇಶ್ ಆಫೀಸಿಗೆ ಹೋಗಲಾಗುವುದಿಲ್ಲವಲ್ಲ! ಏನೋ ಒಂದು ಸುಳ್ಳು ಹೇಳಿದರಾಯ್ತು ಎಂದು ಸುಮ್ಮನಾದೆ. ಆದರೆ ಯಾಕೋ ಅವರ ಕಡೆಯಿಂದ ಕರೆಯೇ ಬರಲಿಲ್ಲ.
ನಿನ್ನಿಂದಲೇ ಚಿತ್ರದಿಂದ ಆದ ನಿರಾಸೆಯನ್ನು ಅಪ್ಪು ಅಭಿಮಾನಿಗಳು ಮೊದಲ ದಿನವೇ ಸಂಭ್ರಮದಿಂದ ರಾಜ್ಯಾದ್ಯಂತ ಸಂಭ್ರಮಿಸುತ್ತ ಮರೆಯುತಿದ್ದರು. ಥಿಯೇಟರ್ ನಲ್ಲಿ ನಮ್ಮ ಗೆಳೆಯರು ‘ಸ್ಟೇ ತರೋದು ಇವನೇ ಮೊದಲ ಶೋ ಗೆ ಟಿಕೆಟ್ ಬುಕ್ ಮಾಡಿ ಫಿಲಂ ತೋರಿಸೋದು ಇವನೇ’ ಎಂದು ನನ್ನ ಕುರಿತು ನಗಾಡುತಿದ್ದರು. ಫಿಲಂ ನ ಇಂಟರ್ವಲ್ ನಲ್ಲಿ ಆಚೆ ಬಂದಿದ್ದಾಗ ಹೆಗಲ ಮೇಲೊಂದು ಕೈ ಬಿತ್ತು, ನೋಡಿದರೆ ರುದ್ರೇಶ್ ಪತ್ನಿ ಮಗಳ ಸಮೇತ ಅಲ್ಲಿ ಪ್ರತ್ಯಕ್ಷ. ನಗುತ್ತಾ ‘ಏನು ಫ್ರೆಂಡ್ಸ್ ಜೊತೆ ಬಂದಿದ್ದೀರಾ, ನನ್ನ ಮಗಳಿಗೆ ಪುನೀತ್ ಎಂದರೆ ತುಂಬಾ ಇಷ್ಟ ಅದಕ್ಕೆ ಮೊದಲ ದಿನವೇ ತೋರಿಸೋಣ ಎಂದು ಬಂದೆವು’ ಎಂದು ಮುಗುಳ್ನಕ್ಕರು. ನನ್ನ ಗೆಳೆಯರು ತಟ್ಟೆಯಲ್ಲಿ ಕರ್ಪೂರ ಇಟ್ಟುಕೊಂಡು ಇನ್ನೊಂದು ರೌಂಡ್ ಮಂಗಳಾರತಿ ಎತ್ತಲು ಸಿದ್ಧವಾಗುತಿದ್ದರು.
ಕು ಶಿ ಚಂದ್ರಶೇಖರ್