“ಅಪ್ಪ” ನೆಂಬ ಸ್ನೇಹಿತ
“ಅಪ್ಪ” ಎಲ್ಲಾ ಹೆಣ್ಣು ಮಕ್ಕಳ ಜೀವನದ ನಿಜವಾದ ಹೀರೋ. ಅಪ್ಪ ಅಂದರೆ ಗತ್ತು ಗಾಂಭೀರ್ಯ, ತಂದೆಯ ತ್ಯಾಗಮಯವಾದ ಜವಾಬ್ದಾರಿಕೆಗೆ ಬೆಲೆ ಕಟ್ಟಲಾಗದು. ಅಪ್ಪ ಆಕಾಶ, ಅಪ್ಪ ಶಕ್ತಿ, ಅಪ್ಪ ಪ್ರೀತಿ, ಅಪ್ಪ ನೆರಳು, ಅಪ್ಪ ಸಾಗರ. ಅಪ್ಪ ಭರವಸೆ…
ಮಕ್ಕಳ ನೆರಳಿನಂತೆ ತನ್ನ ಜೀವನವನ್ನು ಸವೆದು ಗುಬ್ಬಚ್ಚಿಯಂತೆ ಮಕ್ಕಳನ್ನು ಕಾಪಾಡಿಕೊಳ್ಳುವ ಜೀವ. ಹೀಗೆ ಅಪ್ಪನ ಬಗ್ಗೆ ಎಷ್ಟೇ ವಿವರಣೆ ಕೊಟ್ಟರು ಕಡಿಮೆಯೇ.
ಸಂಸಾರದಲ್ಲಿ ಅಮ್ಮನ ಪ್ರಾತಿನಿಧ್ಯತೆ ಎಲ್ಲಾ ಕಡೆ ಎದ್ದು ಕಾಣಿಸುತ್ತದೆ. ಆದರೆ ಅಪ್ಪ ಎಲೆ ಮರೆಯ ಕಾಯಿಯ ಹಾಗೆ ತೆರೆಯ ಹಿಂದೆ ಇದ್ದು ಸಂಸಾರದ ನೊಗ ಹೊತ್ತು ಮುನ್ನಡೆಸುತ್ತಿರುವಂತಹ ಜೀವ. ಸಂಸಾರದಲ್ಲಿ ಅಪ್ಪ ಅಮ್ಮ ಇಬ್ಬರೂ ರಥದ ಚಕ್ರಗಳಿದ್ದಂತೆ. ಅಮ್ಮ ಜೀವ ಕೊಟ್ಟು ಲಾಲನೆ ಪೋಷಣೆ ಮಾಡಿದರೆ, ಅಪ್ಪ ನಮ್ಮ ಸರಿ ತಪ್ಪುಗಳ ಮಾರ್ಗದರ್ಶನ ನೀಡಿ ನಮ್ಮ ಮುಂದಿನ ಹಾದಿ ಸುಗಮವಾಗುವಂತೆ ಮಾಡುತ್ತಾರೆ. ಮಕ್ಕಳ ಗುರಿ ಸಾಧನೆಗೆ ಗುರುವಾಗಿ ಬೆಂಬಲವಾಗಿ ಮಕ್ಕಳಲ್ಲಿ ಧೈರ್ಯ ತುಂಬುವುದೇ ಅಪ್ಪ.
ಇತ್ತೀಚಿಗಿನ ದಿನಗಳಲ್ಲಿ ಅಪ್ಪನ ಪರಿಕಲ್ಪನೆ ಸ್ವಲ್ಪ ಬದಲಾವಣೆಯಾಗಿದೆ. ಹಿಂದೆ ಅಪ್ಪ ಅಂದರೆ ಪೀತಿಯ ಜೊತೆಗೆ ಭಯನೂ ಇತ್ತು. ಇಂದು ಅಪ್ಪನೊಂದಿಗೆ ಸ್ನೇಹಿತನ ಸಲುಗೆಯ ಪ್ರೀತಿ ಇದೆ. ಕೇಳದೇನೆ ಎಲ್ಲಾನು ಕೊಡಬಲ್ಲ ಏಕೈಕ ವ್ಯಕ್ತಿ ಎಂದರೆ ಅಪ್ಪ. ಹೆಣ್ಣು ಮಕ್ಕಳಿಗೆ ತವರು ಮನೆ ಆಸರೆ ನಿಜ. ತವರು ಮನೆಯಲ್ಲಿ ಅಪ್ಪನೊಂದಿಗಿನ ಒಡನಾಟವೇ ತುಂಬಾ ಹಿತ. ಅಮ್ಮನ ಬಗ್ಗೆ ಗಂಟೆಗಟ್ಟಲೆ ನಾವು ಮಾತನಾಡಬಹುದು. ಆದರೆ ಅಪ್ಪನ ಬಗ್ಗೆ ಮಾತನಾಡಲು ಪದಗಳು ಸಿಗುವುದಿಲ್ಲ ಹಾಗಂತ ಅಪ್ಪನ ಪ್ರಾಮುಖ್ಯತೆ ಇಲ್ಲವೆಂದಲ್ಲ. ಎಲ್ಲಾ ಪದಗಳಿಗಿಂತಲೂ ಮೀರಿದ ಒಂದು ಪದ ” ಅಪ್ಪ”. ಅಪ್ಪ ಇದ್ದಾರೆ ಎಂಬುದೇ ಮಕ್ಕಳಿಗೆ ಧೈರ್ಯ.
ಮಕ್ಕಳ ಜೀವನದಲ್ಲಿ ಅಮ್ಮನಷ್ಟೇ ಪಾಲು ತಂದೆಯದು ಇದೆ. ಆದರೆ ಅದ್ಯಾವುದು ಕಣ್ಣಿಗೆ ಕಾಣಿಸಲಾರದು. ಅಮ್ಮನಿಗೆ ಮಕ್ಕಳ ಪ್ರೀತಿ ಮುಂದೆ ಮಕ್ಕಳು ಮಾಡುವ ತಪ್ಪುಗಳು ಕಾಣಿಸದೆ ಇರಬಹುದು. ಆದರೆ ಅಪ್ಪನಿಗೆ ಹಾಗಲ್ಲ ಮಕ್ಕಳ ಪ್ರತಿ ಹೆಜ್ಜೆಯಲ್ಲೂ ಅಪ್ಪನ ಕಣ್ಗಾವಲಿರುತ್ತದೆ. ಅಮ್ಮನೊಂದಿಗೆ ಹಂಚಿಕೊಳ್ಳದೇ ಇರುವಂತಹ ಎಷ್ಟೋ ವಿಷಯಗಳು ಅಪ್ಪನೊಂದಿಗೆ ಹಂಚಿಕೊಂಡಿದ್ದೇವೆ. ಯಾಕೆಂದರೆ ಆ ವಿಷಯಗಳನ್ನು ಪೂರ್ತಿಯಾಗಿ ಕೇಳುವ ತಾಳ್ಮೆ ಇರುವುದು ಅಪ್ಪನಿಗೆ ಮಾತ್ರ. ಹಾಗೂ ಅದಕ್ಕೆ ಪರಿಹಾರ ಕೂಡ ಅಪ್ಪನಿಂದಲೇ. ಹಾಗೂ ಮಕ್ಕಳಿಗೆ ಅಪ್ಪ ಜೊತೆ ನಿಲ್ಲುತ್ತಾರೆ ಎಂಬ ಧೈರ್ಯ. ಹೆಣ್ಣು ಮಕ್ಕಳ ಬೇಕು ಬೇಡಗಳನ್ನು ಪೂರೈಸುವ ಸಾಹುಕಾರನೇ ಸರಿ, ಅಪ್ಪ.
ಅಪ್ಪನ ಬಗ್ಗೆ ಚೌಕ ಸಿನಿಮಾದಲ್ಲಿ ಡಾ. ನಾಗೇಂದ್ರ ಪ್ರಸಾದ್ ಅಪ್ಪನ ಬಗ್ಗೆ ಬರೆದಿರುವಂಥ ಚಿನ್ನದ ಸಾಲುಗಳು ನೆನಪಾಗುತ್ತದೆ.
ನಾನು ನೋಡಿದ ಮೊದಲ ವೀರ
ಬಾಳು ಕಳಿಸಿದ ಸಲಹೆಗಾರ
ಬೆರಗು ಮೂಡಿಸೋ ಜಾದೂಗಾರ ಅಪ್ಪ
ಹಗಲು ಬೆವರಿನ ಕೂಲಿಕಾರ
ರಾತ್ರಿ ಮನೆಯಲಿ ಚೌಕಿದಾರ
ಎಲ್ಲಾ ಕೊಡಿಸೋ ಸಾಹುಕಾರ ಅಪ್ಪಾ
ಇದೊಂದು ಹಾಡಿನಲ್ಲಿ ಅಪ್ಪನ ಕುರಿತು ಇಡೀ ವಿಶ್ಲೇಷಣೆಯನ್ನೇ ಕೊಟ್ಟಿದ್ದಾರೆ. ಅಬ್ಬಾ! ಅಪ್ಪನ ಬಗ್ಗೆ ಎಂಥಾ ಒಂದು ಅದ್ಭುತವಾದ ಪರಿಕಲ್ಪನೆ.
ಪ್ರತಿ ಘಳಿಗೆ ಮಕ್ಕಳಿಗಾಗಿಯೇ ಅವರ ಏಳಿಗೆಗಾಗಿಯೇ ಬದುಕುವಂತಹ ವ್ಯಕ್ತಿ “ಅಪ್ಪ”. ತನ್ನ ಕಷ್ಟದಲ್ಲಿ ಮಕ್ಕಳ ಖುಷಿ, ನೆಮ್ಮದಿ ಕಾಣುವಂತಹ ಒಂದು ಅದ್ಭುತ ವ್ಯಕ್ತಿ “ಅಪ್ಪ”. ಅಪ್ಪ ಬರೀ ಅಪ್ಪನಾಗಿ ಉಳಿದಿಲ್ಲ. ಒಬ್ಬ ಒಳ್ಳೆ ಸ್ನೇಹಿತನಾಗಿ, ಹಿತೈಷಿಯಾಗಿದ್ದಾರೆ. ಎಷ್ಟೋ ಮನೆಗಳಲ್ಲಿ ತಾಯಿಯ ಸ್ಥಾನವನ್ನು ಅಪ್ಪ ಪೂರೈಸುತ್ತಿದ್ದಾರೆ. ಎಲ್ಲವನ್ನು ಹಂಚಿಕೊಳ್ಳುವ ಒಬ್ಬ ಒಳ್ಳೆಯ ಗೆಳೆಯನಾಗಿ ಅಪ್ಪ ಬೆಳೆಯುತ್ತಿದ್ದಾರೆ. ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಅಪ್ಪನು ಬದಲಾಗುತ್ತಿದ್ದಾರೆ.
“ನಿನ್ನಂಥ ಅಪ್ಪ ಇಲ್ಲ. ಒಂದೊಂದು ಮಾತು ಬೆಲ್ಲ. ನೀನೆ ನನ್ನ ಜೀವ ನೀನೆ ನನ್ನ ಪ್ರಾಣ ಯಾವ ದೇವಾ ತಂದ ವರವೋ ಇನ್ನು ನಾನು ಅರಿಯೆನು.”
ಸೌಮ್ಯ ನಾರಾಯಣ್
1 Comment
No one in this world can love a girl more than her Father❤️