ಅಳಿದ – ಅಳಿವಿನಂಚಿನ ವನ್ಯಜೀವಿಗಳು – ದ್ವೀಪದ ಹಕ್ಕಿಗಳ ಕಣ್ಮರೆ – 1

ದ್ವೀಪದ ಹಕ್ಕಿಗಳ ಕಣ್ಮರೆ

ಹಿಂದಿನ ಸರಣಿಯಲ್ಲಿ ಡೋಡೋ ಪಕ್ಷಿಗಳ ಅವನತಿಯ ಮರುಪರಿಚಯ ಮಾಡಿದ್ದೆ. ಅದರಾನಂತರ ಇನ್ನೂ ಕೆಲವು ಪಕ್ಷಿಗಳು ಅವನತಿ ಹೊಂದಿ ಇತಿಹಾಸ ಪುಟಗಳನ್ನೂ ಸೇರಿದ್ದು ಅವುಗಳ ಕಿರು ಪರಿಚಯ ಇಲ್ಲಿದೆ. ವಿಚಿತ್ರವೆಂದರೆ ಕಣ್ಮರೆಯಾದ ಈ ಎಲ್ಲಾ ಹಕ್ಕಿಗಳು ದ್ವೀಪಗಳನ್ನೇ ತಮ್ಮ ಮೂಲನೆಲೆಯಾಗಿಸಿಕೊಂಡಂತವು.

ಮಿಸ್ಟೀರಿಯಸ್ ಸ್ಟಾರ್ಲಿಂಗ್

ಮಿಸ್ಟೀರಿಯಸ್ ಸ್ಟಾರ್ಲಿಂಗ್” ಅಥವಾ “ಅಪ್ಲೋನಿಸ್ ಮಾವೊರ್ನಾಟ” ಎಂಬ ಈ ಪಕ್ಷಿ “ಸ್ಟಾರ್ಲಿಂಗ್” ಎಂಬ ಪಕ್ಷಿ ಜಾತಿಗೆ ಸೇರಿದ್ದು. ಸ್ಟಾರ್ಲಿಂಗ್ ಎಂದರೆ ಚಿಕ್ಕದರಿಂದ ಮಧ್ಯಮ ಗಾತ್ರದ “ಸ್ಟುರ್ನೀಡೆ” ಎಂಬ ಕುಟುಂಬಕ್ಕೆ ಸೇರಿದ ಪಕ್ಷಿಗಳು. ಈ ಪಕ್ಷಿ ಮೊದಲು ಕಂಡದ್ದು ದಕ್ಷಿಣ ಪೆಸಿಫಿಕ್ ಮಹಾಸಾಗರದ “ಕುಕ್” ದ್ವೀಪಗಳಲ್ಲಿ. ಸಣ್ಣ ರೆಕ್ಕೆಗಳಿದ್ದ ಕಂದು ಬಣ್ಣದ ಈ ಹಕ್ಕಿಗಳನ್ನು “ಮೌಕೆ” ದ್ವೀಪದ ಮರಗಳ ಮೇಲೆ  ಕಂಡೆನೆಂದು “ಆಂಡ್ರೂ ಬ್ಲಾಕ್ಸಾಮ್” ಎಂಬ ಪಕ್ಷಿ ಶಾಸ್ತ್ರಜ್ಞ 1825 ರಲ್ಲಿ ದಾಖಲಿಸಿದ್ದಾನೆ. ವಿಚಿತ್ರವೆಂದರೆ 1825 ರಿಂದ 1973 ರವರೆಗೆ ಯಾವ  ಪಕ್ಷಿಶಾಸ್ತ್ರಜ್ಞರು ಸಹ ಇಲ್ಲಿಗೆ ಭೇಟಿ ನೀಡಿಲ್ಲ ಬಹುಷಃ ಯುದ್ಧಗಳ ಬಿಸಿ ಇದ್ದುದ್ದರಿಂದಲೇನೋ!

1973 ರಲ್ಲಿ ಪಕ್ಷಿ ಶಾಸ್ತ್ರಜ್ಞರು ಇಲ್ಲಿಗೆ ಭೇಟಿ ನೀಡಿದಾಗ ಎಲ್ಲೂ ಸಹ ಈ ಪಕ್ಷಿಗಳ ಇರುವಿಕೆಯೇ ಪತ್ತೆಯಾಗಲಿಲ್ಲ ಬದಲಾಗಿ ಕಂದು ಬಣ್ಣದ ಉದ್ದ ಬಾಲದ ಇಲಿಗಳ ಪ್ರಭೇದ ಆಶ್ಚರ್ಯಕರ ರೀತಿಯಲ್ಲಿ ದ್ವೀಪಗಳ ತುಂಬಾ ಎಲ್ಲೆಂದರಲ್ಲಿ ಹರಡಿಕೊಂಡಿದ್ದವು ಹಾಗಾಗಿ “ಅಪ್ಲೋನಿಸ್ ಮಾವೊರ್ನಾಟ” ಎಂಬ ಪಕ್ಷಿ ಸಂಪೂರ್ಣವಾಗಿ ನಶಿಸಿ ಹೋಗಿವೆ ಎಂದು ತೀರ್ಮಾನಕ್ಕೆ ಬರಲಾಗಿದೆ. ಇದರ ಕಣ್ಮರೆ ಇಂದಿಗೂ ಸಹ ನಿಗೂಢವಾಗಿದ್ದು ಇದಕ್ಕೆ “ಮೌಕೆ ಸ್ಟಾರ್ಲಿಂಗ್” ಎಂದು ಸಹ ಕರೆಯುತ್ತಾರೆ.

ಪಾಗನ್ ರೀಡ್ ವಾರ್ಬ್ಲೇರ್

ಯುನೈಟೆಡ್ ಸ್ಟೇಟ್ಸ್ ನ ಉತ್ತರ ಮರಿಯಾನಾ ದ್ವೀಪಗಳಲ್ಲಿ ನೆಲೆಸಿದ್ದ “ಪಾಗನ್ ರೀಡ್ ವಾರ್ಬ್ಲೇರ್” ಎಂಬ ಈ ಪುಟ್ಟ ಹಕ್ಕಿ 1960 ರವರೆಗೂ ಕಂಡುಬಂದಿತ್ತು. ಮರಿಯಾನಾ ದ್ವೀಪಗಳಲ್ಲಿ ಒಂದಾದ “ಪಾಗನ್” ಎಂಬ ದ್ವೀಪದಲ್ಲಿ ಇದರ ನೆಲೆ ಇದ್ದುದ್ದರಿಂದ ಇದನ್ನು “ಪಾಗನ್ ರೀಡ್ ವಾರ್ಬ್ಲೇರ್” ಎಂದೇ ಹೆಸರು. ಚೂಪಾದ ಕೊಕ್ಕಿನ ಕಂದು ಹಾಗು ಬಿಳಿ ಬಣ್ಣ ಮಿಶ್ರಣದ ಈ ಹಕ್ಕಿ ಕಾಡಿನ ಬೆಳವಣಿಗೆಗೆ ಮಾರಕವಾದ ಅರಣ್ಯ ಕೀಟಗಳನ್ನು ತಿಂದು ಪರಿಸರ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುತಿತ್ತು.

20 ನೇ ಶತಮಾನದಲ್ಲಾದ ಮಾನವನ ಬೆಳೆವಣಿಗೆಗಳು, ಕಾಡಿನ ಮರಗಳ ಕಡಿಯುವೆಕೆಯಿಂದ ಇವುಗಳ ಆವಾಸಸ್ಥಾನದ ನಾಶ ಹಾಗು 1981 ರಲ್ಲಿ ಘಟಿಸಿದ ಜ್ವಾಲಾಮುಖಿ ಸ್ಫೋಟ “ಪಾಗನ್ ರೀಡ್ ವಾರ್ಬ್ಲೇರ್” ಸಂತತಿಯ ಸಂಪೂರ್ಣ ನಿರ್ನಾಮಕ್ಕೆ ಮುಖ್ಯ ಕಾರಣಗಳಾಗಿವೆ. ಇದರಿಂದಾಚೆಗೆ ಈ ಹಕ್ಕಿಯ ದಾಖಲಾತಿ ಇಲ್ಲವಾದ್ದರಿಂದ ಪಕ್ಷಿ ತಜ್ಞರು ಇದನ್ನು ಇತಿಹಾಸದ ಪುಟಗಳಿಗೆ ಸೇರಿಸಿದ್ದಾರೆ.

ಲೀಸ್ಟ್ ವೇರ್ಮಿಲಿಯನ್ ಫ್ಲೈ ಕ್ಯಾಚರ್ಸ್ (ನೊಣ ಹಿಡುಕ)

ಪೆಸಿಫಿಕ್ ಮಹಾಸಾಗರದಲ್ಲಿನ ಗ್ಯಾಲಪಗೋಸ್ ದ್ವೀಪಗಳಲ್ಲಿ ವಾಸಿಸುತ್ತಿದ್ದ ಈ ಸುಂದರ ನೊಣ ಹಿಡುಕ ಹಕ್ಕಿ (ನಮ್ಮಲ್ಲಿ ಫ್ಲೈ ಕ್ಯಾಚರ್ಸ್ ಹಕ್ಕಿಗಳನ್ನು ನೊಣ ಹಿಡುಕ ಎನ್ನುತ್ತಾರೆ) “ಚಾರ್ಲ್ಸ್ ಡಾರ್ವಿನ್” ಅವರ ಸಮುದ್ರಯಾನದ ವೇಳೆಯಲ್ಲಿ ಅಂದರೆ ಸುಮಾರು 1830 ರ ಆಸುಪಾಸಿನಲ್ಲಿ ಕಂಡು “ಜಾನ್ ಗೌಲ್ಡ್” ಎಂಬ ಪಕ್ಷಿ ತಜ್ಞರು 1839 ರಲ್ಲಿ ದಾಖಲಿಸಿದ್ದಾರೆ.

ಕಡುಗೆಂಪು ಹಾಗು ಕಪ್ಪು ಬಣ್ಣ ಮಿಶ್ರಣದ ಈ ಆಕರ್ಷಕ ಹಕ್ಕಿ 10.8 ರಿಂದ 11 ಸೆಂಟಿಮೀಟರ್ ನಷ್ಟು ಪುಟ್ಟದು. ಈ ಹಕ್ಕಿಯ ಮುಖ್ಯ ಆವಾಸ ಗ್ಯಾಲಪಗೋಸ್ ದ್ವೀಪಗಳಲ್ಲಿ ಒಂದಾದ “ಸ್ಯಾನ್ ಕ್ರಿಸ್ಟೋಬಲ್” ಆದರಿಂದ ಇದನ್ನು “ಸ್ಯಾನ್ ಕ್ರಿಸ್ಟೋಬಲ್ ಫ್ಲೈ ಕ್ಯಾಚರ್ಸ್” ಎಂದು ಸಹ ಕರೆಯಲಾಗಿದೆ. ಈ ನೊಣಹಿಡುಕ ಸಂತತಿಯ ನಾಶಕ್ಕೆ ನಿಖರವಾದ ಕಾರಣ ದಾಖಲಿಸಿಲ್ಲವಾದರೂ ಆ ದ್ವೀಪದಲ್ಲಿನ ಮಿತಿಮೀರಿದ ಇಲಿಗಳ ಸಂತತಿ ಈ ಹಕ್ಕಿಗಳ ಗೂಡನ್ನು ಹೊಕ್ಕಿ ಅದರ ಮೊಟ್ಟೆಗಳನ್ನು ಹಾಗು ಮರಿಗಳನ್ನು ನಾಶಪಡಿಸಿರಬಹುದು ಎಂದು ಎಲ್ಲಾ ಪಕ್ಷಿ ತಜ್ಞರ ಬಲವಾದ ಊಹೆ ಮತ್ತು ಎಂದಿನಂತೆ ಕಾಡು ಮರಗಳ ಕಡಿಯುವಿಕೆಯಿಂದಾದ ಆವಾಸ ಸ್ಥಾನದ ನಾಶ ಹಾಗು ಅಲ್ಲಿ ಆಗಾಗ ಸಂಭವಿಸುವ ಜ್ವಾಲಾಮುಖಿ ಸ್ಫೋಟಗಳು ಕೂಡ ಇತರೆ ಕಾರಣಗಳಾಗಿವೆ.

ನ್ಯೂಜಿಲ್ಯಾಂಡ್ ದ್ವೀಪದ “ಪಿಯೊಪಿಯೋ”

ನ್ಯೂಜಿಲ್ಯಾಂಡ್ ನ ಉತ್ತರ ಹಾಗು ದಕ್ಷಿಣ ದ್ವೀಪಗಳಲ್ಲಿ ಜೀವಿಸಿದ್ದ “ಪಿಯೊಪಿಯೋ” ಪಕ್ಷಿಗಳನ್ನು ಎರಡು ಪ್ರಬೇಧಗಳಲ್ಲಿ ಗುರುತಿಸಲಾಗಿದೆ. ಉತ್ತರ ದ್ವೀಪದಲ್ಲಿನ ಪಕ್ಷಿಯನ್ನು “ತುರ್ನಾಗ್ರ ತನಗ್ರ” ಎಂದು ದಕ್ಷಿಣ ದ್ವೀಪದಲ್ಲಿನ ಪಕ್ಷಿಯನ್ನು “ತುರ್ನಾಗ್ರ ಕ್ಯಾಪೆನ್ಸಿಸ್” ಎಂದು ದಾಖಲಿಸಲಾಗಿದೆ. ಮೊದಲಿಗೆ ಈ ಎರಡು ಪಕ್ಷಿಗಳು ಒಂದೇ ಎಂದು ಗುರುತಿಸಿದ್ದರು ಕ್ರಮೇಣ ಅವುಗಳ ಪ್ರಬೇಧದಲ್ಲಿನ ವೈವಿದ್ಯತೆಯಿಂದ ಎರಡನ್ನು ಪ್ರತ್ಯೇಕವಾಗಿ ದಾಖಲಿಸಲಾಯಿತು.

ಹಿಂದಿನದು ತುರ್ನಾಗ್ರ ಕ್ಯಾಪೆನ್ಸಿಸ್ ಹಾಗು ಮುಂದೆ ಇರುವುದು ತುರ್ನಾಗ್ರ ತನಗ್ರ

ಉತ್ತರ ದ್ವೀಪದ “ಪಿಯೊಪಿಯೋ” ಹಕ್ಕಿಯು ನೀಲಿಮಿಶ್ರಿತ ಕಂದು ಬಣ್ಣದ ಇವುಗಳ ಕುತ್ತಿಗೆಯ ಕೆಳಗಿನ ಭಾಗ ಬಿಳಿ, ದಕ್ಷಿಣ ದ್ವೀಪದಲ್ಲಿನ ಹಕ್ಕಿಯು ಕಂದು ಬಣ್ಣದಲ್ಲಿ ಸಂಪೂರ್ಣ ಬಿಳಿಯ ಗೆರೆಗಳನ್ನು ಹೊಂದಿತ್ತು. ಇಷ್ಟನ್ನು ಹೊರತುಪಡಿಸಿದರೆ ಇವುಗಳ ಎತ್ತರ, ಜೀವನ ಶೈಲಿ, ಆಹಾರ ಎಲ್ಲಾ ಸಾಮ್ಯದಿಂದ ಕೂಡಿದ್ದು. 1860 ರಲ್ಲಿ ಚಾರ್ಲ್ಸ್ ಡಗ್ಲಾಸ್ ಎಂಬ ಪಕ್ಷಿತಜ್ಞ ಈ ಎರಡೂ ಪಕ್ಷಿಗಳನ್ನು ದಾಖಲಿಸಿದ್ದು ಇವುಗಳು ಇತರೆ ಪಕ್ಷಿಗಳ ಧ್ವನಿಯನ್ನು ಬಹಳ ಚೆನ್ನಾಗಿ ಅನುಕರಿಸುತ್ತವೆ ಹಾಗು ಒಮ್ಮೆಗೆ ಎರಡು ಮೊಟ್ಟೆಗಳನ್ನು ಇಡುತ್ತವೆ ಎಂದು ಅಭಿಪ್ರಾಯಪಟ್ಟಿದ್ದ. 19 ನೇ ಶತಮಾನದ ಮಧ್ಯದಲ್ಲಿ ದಾಖಲಾದ ಈ ಹಕ್ಕಿಗಳು 20 ನೇ ಶತಮಾನದ ಆದಿಯಲ್ಲೇ ಎಂದರೆ 1902 ರ ನಂತರ ಕಾಣಿಸಿಲ್ಲ. ದ್ವೀಪಕ್ಕೆ ಬರುತಿದ್ದ ಹಡಗುಗಳಲ್ಲಿ ತುಂಬಿರುತ್ತಿದ್ದ ಇಲಿಗಳು ಇವುಗಳ ಮೊಟ್ಟೆಗಳನ್ನು ನಾಶಪಡಿಸಿದ್ದು ಹಾಗು ಮರಗಳನ್ನು ಕಡಿದ ಪರಿಣಾಮವಾಗಿ ಇವುಗಳ ಆವಾಸ ಸ್ಥಾನ ನಾಶವಾಗಿ ಕ್ರಮೇಣ ಇವುಗಳ ಸಂತತಿ ಕಡಿಮೆಯಾಗಿ ನಂತರ ಸಂಪೂರ್ಣ ಸಂಕುಲವೇ ಇಲ್ಲವಾಗಿ ಇತಿಹಾಸದ ಪುಟ ಸೇರಿವೆ.

ಲಾರ್ಡ್ ಹೋವೆ ಗೆರಿಗೋನ್ ಫ್ಲೈಈಟರ್  – ನೊಣ ಭಕ್ಷಕ

ಗುಲಾಬಿ ಕಣ್ಣಿನ ಈ ನೊಣ ಭಕ್ಷಕಗಳು ಆಸ್ಟ್ರೇಲಿಯಾ ದ ತಸ್ಮಾನ್ ಸಮುದ್ರದ “ಲಾರ್ಡ್ ಹೋವೆ” ಎಂಬ ಪುಟ್ಟ ದ್ವೀಪದಲ್ಲಿ ನೆಲೆಸಿದ್ದವು. ಇದೊಂದು ಪುಟ್ಟ ಕಂದು ಬಣ್ಣದ ಹಾಡು ಹಕ್ಕಿಯಾಗಿದ್ದು “ಅಕ್ಯಾನ್ತಿಜಿಡೇ” (Acanthizidae) ಎಂಬ ಪಕ್ಷಿ ಕುಟುಂಬಕ್ಕೆ ಸೇರಿದ್ದವು. ಮಳೆ ಮಾಸದಲ್ಲಿನ ಇದರ ಚುರುಕು ಚಟುವಟಿಕೆಗಳಿಂದ ಇದನ್ನು ಮಳೆ ಹಕ್ಕಿ ಎಂದು ಸಹ ಕರೆಯುತ್ತಿದ್ದರು.

ಒಮ್ಮೆಗೆ ಮೂರು ಮೊಟ್ಟೆಗಳನ್ನು ಇಡುತಿದ್ದ ಇವು ಕೊನೆಯದಾಗಿ ಕಾಣಿಸಿದ್ದು 1928 ರಲ್ಲಿ. 20 ನೇ ಶತಮಾನದ ಆದಿಯಲ್ಲಿ “ಲಾರ್ಡ್ ಹೋವೆ” ದ್ವೀಪದಲ್ಲಿನ ನಿರಂತರ ಹಡಗುಗಳ ಧ್ವಂಸ ಕಾರ್ಯಾಚರಣೆಯಿಂದಾಗಿ ಮತ್ತು ಇಲ್ಲಿಗಳು ಈ ನೊಣ ಭಕ್ಷಕಗಳ ಮೊಟ್ಟೆ ಗೂಡುಗಳನ್ನು ನಾಶಮಾಡಲಾಗಿ ಈ ಪಕ್ಷಿಸಂಕುಲವು ಕೂಡ ಸಂಪೂರ್ಣ ಅವನತಿ ಹೊಂದಿ ಇತಿಹಾಸದ ಪುಟಗಳಲ್ಲಿ ಸೇರಿಹೋಯಿತು.

ಮುಂದುವರೆಯುವುದು….

ವನ ಹಾಗು ವನ್ಯಜೀವಿಗಳ ರಕ್ಷಣೆ ಮಾನವನ ಆದ್ಯ ಕರ್ತವ್ಯ….

ಕು ಶಿ ಚಂದ್ರಶೇಖರ್
ಚಿತ್ರಗಳು: ಅಂತರ್ಜಾಲ ಕೃಪೆ

Related post

1 Comment

  • ,

Leave a Reply

Your email address will not be published. Required fields are marked *