ದ್ವೀಪದ ಹಕ್ಕಿಗಳ ಕಣ್ಮರೆ – 2
ಹಿಂದಿನ ಸರಣಿಯ ಮುಂದಿನ ಭಾಗ……
ದ್ವೀಪದ ಹಕ್ಕಿಗಳ ಕಣ್ಮರೆ –1 – https://bit.ly/3PkGZXy
ಓ’ಆಹೂ ಅಕಿಯಲೋ – ಜೇನು ಬಳ್ಳಿಗ
“ಓ’ಆಹೂ ಅಕಿಯಲೋ” ಎಂಬ ವಿಚಿತ್ರ ಹೆಸರಿರುವ ಈ ಪಕ್ಷಿಯು ಪೆಸಿಫಿಕ್ ಮಹಾಸಾಗರದ ಹವಾಯಿ ದ್ವೀಪದಲ್ಲಿನ ಪ್ರಮುಖ ಆಕರ್ಷಕ ಪಕ್ಷಿಗಳಲೊಂದಾಗಿತ್ತು. ಜೇನು ಬಳ್ಳಿಗ (ಹನಿ ಕ್ರೀಪರ್) ಎಂದು ಕೂಡ ಕರೆಯುವ ಈ ಹಕ್ಕಿಯು ತನ್ನ ಆಕರ್ಷಕವಾದ ಬಾಗುಕತ್ತಿಯಂತಹ ಕೊಕ್ಕಿನಿಂದ ಮರಗಳಿಗೆ ಮಾರಕವಾದ ಮರದ ತೊಗಟೆಗಳಲ್ಲಿ ಸಿಗುವ ಜೇಡ, ಮತ್ತಿತರ ಕೀಟಗಳನ್ನು ಭಕ್ಷಿಸಿ ಅರಣ್ಯಗಳನ್ನು ಉಳಿಸುವಲ್ಲಿ ಮಹತ್ವದ ಪಾತ್ರವಹಿಸುತಿತ್ತು. ಇಷ್ಟಲ್ಲದೆ ಮುಂಜಾನೆ ಸಮಯದಲ್ಲಿ ಗಿಡ ಮರಗಳಲ್ಲಿನ ಹೂ ಮೊಗ್ಗುಗಳನ್ನು ತನ್ನ ಬಾಗು ಕೊಕ್ಕಿನಿಂದ ಅರಳಿಸಿ ಮಕರಂದವನ್ನು ಸಹ ಹೀರುತಿತ್ತು.
ಬಿಳಿ ಮಿಶ್ರಿತ ತೆಳು ಹಸಿರು ಬಣ್ಣದ ಈ ಹಕ್ಕಿ “ಫ್ರಿಂಗಿಲ್ಲಿಡೆ” ಎಂಬ ಕುಟುಂಬ ವರ್ಗಕ್ಕೆ ಸೇರಿದ್ದು ಇದು ಮೊದಲು ದಾಖಲಾಗಿದ್ದು 1937 ರಲ್ಲಿ. ಕಾಲಾನಂತರ ಅರಣ್ಯನಾಶದ ಫಲವಾಗಿ ಇದರ ಸಂತತಿಯಲ್ಲಿ ನಿರಂತರ ಕುಗ್ಗುವಿಕೆ ಕಂಡು ಬಂತು. ನಂತರದ ವರ್ಷಗಳಲ್ಲಿ ಅಲ್ಲಿನ ಸೊಳ್ಳೆಗಳು ತಂದು ಹರಡಿದ “ಏವಿಯನ್ ಇನ್ಫ್ಲುಯೆಂಜಾ” ಎಂಬ ಸಾಂಕ್ರಾಮಿಕ ಹಕ್ಕಿ ರೋಗಕ್ಕೆ ಇದರ ಇಡೀ ಸಂತತಿ ಬಲಿಯಾಯಿತು. ಈಗ ಈ ಜೇನು ಬಳ್ಳಿಗ ಹಕ್ಕಿಯನ್ನು ಲಿವರ್ ಪೂಲ್ ನ ಮ್ಯೂಸಿಯಮ್ ನಲ್ಲಿ ಮಾತ್ರ ನೋಡಬಹುದಾಗಿದೆ.
ಲೇಸನ್ ಹನಿಕ್ರೀಪರ್ – ಹಿಮಟಿಯೊನ್ ಫ್ರ್ಯಾತೀ
ಈ ಲೇಸನ್ ಜೇನುಬಳ್ಳಿಗ ಹಕ್ಕಿ ಕೂಡ ಹವಾಯಿಯ “ಲೇಸನ್” ದ್ವೀಪದಲ್ಲಿನ ನಿವಾಸಿ. 1982 ರಲ್ಲಿ “ವಾಲ್ಟೇರ್ ರೋತ್ಸ್ ಚೈಲ್ಡ್” ಎಂಬ ಪಕ್ಷಿ ತಜ್ಞ ಇವುಗಳನ್ನು ಮೊದಲು ಕಂಡೆನೆಂದು ದಾಖಲಿಸಿದ್ದಾನೆ. ಈ ಹಕ್ಕಿ “ಅಪಾಪನೆ” ಎಂಬ ಕಡುಗೆಂಪು ಹಕ್ಕಿಯ ಉಪಜಾತಿಗೆ ಸೇರಿದ್ದು. ಗಂಡು ಹಾಗು ಹೆಣ್ಣು ಹಕ್ಕಿಗಳೆರಡೂ ಬಿಳಿ ಮಿಶ್ರಿತ ಕಂದು ಬಣ್ಣವನ್ನು ಹೊಂದಿದ್ದು ಹೆಣ್ಣು ಹಕ್ಕಿಗೆ ಮಾತ್ರ ತೆಳು ಕೆಂಪನೆಯ ಗರಿಗಳು ಇದ್ದವು. ಇವು ಕೂಡ ಅಲ್ಲಿನ ದ್ವೀಪಗಳಲ್ಲಿನ ಹೇರಳವಾಗಿದ್ದ “ಕ್ಯಾಪ್ರಿಸ್ ಸ್ಯಾಂಡ್ವಿಚಿಯಾನಾ” ಎಂಬ ಸಸ್ಯಜಾತಿಯ ಹೂವುಗಳಲ್ಲಿರುವ ಮಕರಂದವನ್ನು ತಮ್ಮ ಮುಖ್ಯ ಆಹಾರವನ್ನಾಗಿ ಸೇವಿಸಿ ಬದುಕುತಿದ್ದವು. ನೆಲದ ಹಕ್ಕಿಯಾದ ಇವು ಒಮ್ಮೆಗೆ 5 ರಿಂದ 6 ಮೊಟ್ಟೆಗಳನ್ನು ಅಲ್ಲಿನ ಸಸ್ಯಪೊದೆಗಳಲ್ಲಿ ಗೂಡು ಕಟ್ಟಿ ಸಂತಾನೋತ್ಪತಿ ಮಾಡುತ್ತಿದ್ದವು.
1980 ರಲ್ಲಿ ಆ ದ್ವೀಪದ ಸುತ್ತಮುತ್ತ ನೆಡೆಸಲಾದ ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಗಣಿಗಾರರಿಗೆ ಆಹಾರ ರೂಪವಾಗಿ “ಯುರೋಪಿಯನ್ ಹೇರ್” ಎಂಬ ದೈತ್ಯ ಮೊಲಗಳನ್ನು ತಂದು ಲೇಸನ್ ದ್ವೀಪದಲ್ಲಿ ಸಾಕಲಾಯಿತು. ಆ ದೈತ್ಯ ಮೊಲಗಳು ಅಲ್ಲಿನ ಅಸ್ಟೂ ಸಸ್ಯಗಳನ್ನು ತಿಂದು ತೇಗಲು ಶುರುಮಾಡಿದವು. ಅಲ್ಲಿನ ಸಸ್ಯಗಳನ್ನು ತಿನ್ನುತ್ತಿದ್ದ ಈ ಮೊಲಗಳಿಂದಾಗಿ ನೆಲದಲ್ಲಿಯೇ ಗೂಡುಕಟ್ಟುತಿದ್ದ ಲೇಸನ್ ಜೇನುಬಳ್ಳಿಗ ಹಕ್ಕಿಗಳಿಗೆ ಸಹಜವಾಗಿಯೇ ಆವಾಸ ಸ್ಥಾನದ ಅಭಾವ ಉಂಟಾಯಿತು. ಮಕರಂದ ಹೀರಲು ಅಲ್ಲಿನ ಹೂವುಗಳು ದಿನೇ ದಿನೇ ಮಾಯವಾಗತೊಡಗಿದವು. ಇದರ ಪರಿಣಾಮವಾಗಿ ಮುಂಬರುವ ವರ್ಷದಲ್ಲಿ ಅವುಗಳ ಸಂತತಿಯಲ್ಲಿ ದಿಢೀರನೆ ಕುಸಿತವುಂಟಾಯಿತು. ಆನಂತರ 1920 ರಲ್ಲಿ ಅಲ್ಲಿನ ದ್ವೀಪಕ್ಕೆ ಅಪ್ಪಳಿಸಿದ ದೊಡ್ಡ ಚಂಡಮಾರುತವು ಅವುಗಳ ಉಳಿದ ಸಂತತಿಯನ್ನು ಸಹ ಬಲಿತೆಗೆದುಕೊಂಡಿತ್ತು ಎಂದು ದಾಖಲಾಗಿದೆ. 1923 ರ ಆಚೆಗೆ ಲೇಸನ್ ಜೇನುಬಳ್ಳಿಗ ಹಕ್ಕಿಗಳು ಕಂಡುಬಂದ ದಾಖಲೆಗಳಿಲ್ಲ.
ಮೋಹೋ ಬಿಷೋಪಿ – ಬಿಷಪ್ ಓ
ಹವಾಯಿ ದ್ವೀಪಗಳಾದ ಮೊಲೊಕಾಯ್ ಹಾಗು ಮೌಂಟ್ ಓಲೋಕಾಯ್ ಗಳಲ್ಲಿ ಜೀವಿಸುತ್ತಿದ್ದ ಈ ಮೋಹೋ ಪಕ್ಷಿ ತನ್ನ “ಟುಕ್ ಟುಕ್, ಟುಕ್ ಟುಕ್” ಎಂಬ ಆಕರ್ಷಕ ಜೋರು ಧ್ವನಿಯಿಂದಾಗಿ ಹಾಡುಗಾರ ಹಕ್ಕಿ ಎಂದು ಪ್ರಸಿದ್ಧವಾಗಿತ್ತು. 29 ಸೆಂಟಿಮೀಟರ್ ನಷ್ಟು ಉದ್ದ ಇದ್ದ ಈ ಆಕರ್ಷಕ ಹಕ್ಕಿಯ ಪುಕ್ಕದ ಬಾಲವೇ 10 ಸೆಂಟಿಮೀಟರ್ಸ್ ನಷ್ಟು ಉದ್ದವಿತ್ತು. ಹಳದಿ ಮಿಶ್ರಿತ ಕಪ್ಪು ಬಣ್ಣದ ಈ ಸುಂದರ ಹಕ್ಕಿ “ಮೊಹೋಹಿಡೇ” ಎಂಬ ಕುಟುಂಬ ವರ್ಗಕ್ಕೆ ಸೇರಿದ್ದಾಗಿದೆ. ಪಕ್ಷಿಗಳ ಮಾಹಿತಿ ಸಂಗ್ರಹಿಸುತ್ತಿದ್ದ “ಹೆನ್ರಿ ಸಿ ಪಾಲ್ಮರ್” ಎಂಬಾತ 1892 ರಲ್ಲಿ ಇದನ್ನು ಕಂಡೆನೆಂದು ದಾಖಲಿಸಿದ್ದಾನೆ.
ದ್ವೀಪದ ಹೂವುಗಳ ಮಕರಂದವನ್ನು ಹೀರಿ, ಅಲ್ಲಿನ ಮರಗಳ ತೊಗಟೆಯಲ್ಲಿ ಉಪದ್ರವ ಕೀಟಗಳನ್ನು ತಿನ್ನುತ್ತ ತನ್ನ ಸಂತಾನಭಿವೃದ್ಧಿಯನ್ನು ಮಾಡುತಿದ್ದ ಈ ಹಕ್ಕಿ ಕೊನೆಯದಾಗಿ ಕಂಡದ್ದು 1904 ರಲ್ಲಿ. ಇದರ ಉದ್ದ ಕಪ್ಪು ಬಣ್ಣದ ಪುಕ್ಕವೇ ಇದರ ಸಂತತಿಯ ಅಳಿವಿಕೆಗೆ ಕಾರಣವಾಯಿತು. ಹವಾಯಿ ದ್ವೀಪಗಳ ಮೂಲನಿವಾಸಿಗಳು ಇದರ ಪುಕ್ಕಗಳಿಂದ ತಮ್ಮ ಪ್ರತಿಷ್ಠೆಯ ಟೊಪ್ಪಿಗೆಗಳನ್ನು ತಯಾರಿಸಲು ಶುರು ಮಾಡಿ ಈ ಪಕ್ಷಿಗಳನ್ನು ಇನ್ನಿಲ್ಲದಂತೆ ಬೇಟೆಯಾಡಿದರು. ಬರಿಯ ಟೊಪ್ಪಿಗೆಯಲ್ಲದೆ ಇದರ ಪುಕ್ಕಗಳಿಂದ ವಿಧವಿಧವಾದ ಕರಕುಶಲ ವಸ್ತುಗಳನ್ನು ಮಾಡುತಿದ್ದರು. ಇತರೆ ಅಳಿದ ಪಕ್ಷಿಗಳಂತೆ ಮರಗಳ ಕಡಿಯುವಿಕೆಯಿಂದಾದ ಆವಾಸ ನಷ್ಟ, ಇಲಿಗಳ ಉಪದ್ರವ, ಸೊಳ್ಳೆಗಳು ತಂದ ಸಾಂಕ್ರಾಮಿಕ ರೋಗಗಳು ಈ ಪಕ್ಷಿ ಸಂತತಿ ಅವನತಿ ಹೊಂದುವಿಕೆಗೆ ಇತರೆ ಕಾರಣಗಳಾಗಿವೆ. ಈಗ ಈ ಪಕ್ಷಿಯನ್ನು ಸುಂದರವಾದ ಪೈಂಟಿಂಗ್ಸ್ ನಲ್ಲಿ ಮಾತ್ರ ಕಾಣಬಹುದಾಗಿದೆ.
ಮೇರಿಯಾನ್ನೆ ವೈಟ್-ಐ – ಬಿಳಿಗಣ್ಣ
ಮೇರಿಯಾನ್ನೆ ಬಿಳಿಗಣ್ಣ ಹಕ್ಕಿ ಫಿಲಿಪೈನ್ಸ್ ನ ದ್ವೀಪಗಳೊಂದಾದ “ಮೇರಿಯಾನ್ನೆ” ಎಂಬ ಹವಳದ ದ್ವೀಪದಲ್ಲಿ ವಾಸವಿದ್ದವು. ಗಾತ್ರದಲ್ಲಿ 10 ಸೆಂಟಿಮೀಟರ್ ನಷ್ಟು ಈ ಪುಟ್ಟಹಕ್ಕಿಯ ಕಪ್ಪು ಕಣ್ಣಿನ ಸುತ್ತಲೂ ಬಿಳಿಯ ಉಂಗುರವಿದ್ದು ಇದು ಬಿಳಿಗಣ್ಣ ಹಕ್ಕಿಗಳ (ವೈಟ್ ಐ) ಕುಟುಂಬ ವರ್ಗಕ್ಕೆ ಸೇರಿದ್ದವು. ಆಲಿವ್ ಬಣ್ಣ ಹಾಗು ಹಳದಿ ಮಿಶ್ರಿತ ಈ ಹಕ್ಕಿಗೆ ಪುಟ್ಟದಾದ ಆಕರ್ಷಕವಾದ ಗರಿಗಳಿದ್ದವು. ಇಷ್ಟು ಬಿಟ್ಟರೆ ಈ ಹಕ್ಕಿಯ ಮಾಹಿತಿ ಅಷ್ಟಿಲ್ಲ.
ದ್ವೀಪದಲ್ಲಿ ಮನುಷ್ಯರ ಸಂಖ್ಯೆ ಅಭಿವೃದ್ಧಿಯಾಗಿ ಕೃಷಿಗಾಗಿ ಕಾಡು ಕಡಿದುದ್ದರ ಪರಿಣಾಮ ಈ ಹಕ್ಕಿಗಳ ಆವಾಸಸ್ಥಾನಕ್ಕೆ ನಷ್ಟ ಉಂಟಾಗಿ ಕ್ರಮೇಣ ಇಲ್ಲವಾಗಿ ಈ ಪಕ್ಷಿಯ ಸಂತತಿ ಸಂಪೂರ್ಣ ಅವನತಿ ಹೊಂದಿ ಇತಿಹಾಸದ ಪುಟ ಸೇರಿದೆ. 1890 ರ ನಂತರ ಈ ಹಕ್ಕಿಯು ಯಾವುದೇ ಪಕ್ಷಿತಜ್ಞರ ಕಣ್ಣಿಗೆ ಬಿದ್ದಿಲ್ಲ ಆದರೆ ಈ ಪಕ್ಷಿಯ ಪ್ರತಿರೂಪವನ್ನು ಲಂಡನಿನ್ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ನಲ್ಲಿ ಮಾತ್ರ ನೋಡಬಹುದಾಗಿದೆ.
ಬೋನಿನ್ ಗ್ರೋಸ್ಬೀಕ್ – ಕಾರ್ಪೊಡಕಸ್ ಫೆರೆರೊಸ್ಟ್ರಿಸ್
ಬೋನಿನ್ ಗ್ರೋಸ್ಬೀಕ್ ಎಂಬ ಈ ವೈವಿಧ್ಯಮಯ ಹಕ್ಕಿಯು ಜಪಾನಿನ “ಒಗಸವಾರ” ದ್ವೀಪಗಳ “ಚಿಚಿ-ಜಿಮಾ” ಎಂಬ ದ್ವೀಪದ ನಿವಾಸಿಯಾಗಿತ್ತು. ಇದು ಕೂಡ ಇತರೆ ಹಕ್ಕಿಗಳ ಹಾಗೆ 18 ನೇ ಶತಮಾನದ ಪೆಸಿಫಿಕ್ ದ್ವೀಪಗಳ ಯಾತ್ರೆಯ ವೇಳೆಯಲ್ಲಿ ಕಂಡು ಬಂದು ದಾಖಲಾಗಿದೆ. “ಫ್ರಿಂಗಿಲ್ಲಿಡೆ” ಕುಟುಂಬಕ್ಕೆ ಸೇರಿದ ಈ ಹಕ್ಕಿಗಿರುವ ದಪ್ಪ ಕೊಕ್ಕಿನಿಂದಾಗಿ ಇದನ್ನು ಗ್ರೋಸ್ಬೀಕ್ ವರ್ಗದಿಂದ ಗುರುತಿಸಲಾಗಿದೆ.
ಅಪರೂಪಕ್ಕೆ ತನ್ನ ಮಧುರವಾದ ಧ್ವನಿಯಿಂದ ಮರಗಿಡಗಳ ಮೇಲೆ ಕುಳಿತು ಹಾಡುತಿದ್ದರಿಂದ ಇದನ್ನು “ಹಾಡು ಹಕ್ಕಿ” ಎಂದು ಸಹ ಕರೆಯಬಹುದು ಮತ್ತು ಡೋಡೋ ಪಕ್ಷಿಯ ಹಾಗೆ ಇವು ನಿಸ್ಸಂಕೋಚದ ಪಕ್ಷಿಗಳು. ದ್ವೀಪದಲ್ಲಿನ ಮರ ಗಿಡಗಳ ಮೇಲಿಂದ ಬಿದ್ದ ಹಣ್ಣುಗಳನ್ನು ತಿಂದು ಬೀಜಗಳನ್ನು ಪಸರಿಸಿ ದ್ವೀಪದ ಕಾಡು ಬೆಳೆಯಲು ಕಾರಣವಾಗಿದ್ದವು. ಎಂದಿನಂತೆ ದ್ವೀಪಗಳಲ್ಲಿನ ಮನುಷ್ಯರ ಸಂತತಿ ಹೆಚ್ಚಿ ಕಾಡುಗಳನ್ನು ಕಡಿದು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದ್ದರಿಂದ ಇವುಗಳ ಆವಾಸ ನಷ್ಟವಾಗಿ ಕ್ರಮೇಣ ಸಂತತಿಯಲ್ಲಿ ಕ್ಷೀಣಿಶಿ 1850 ರ ಆಚೆಗೆ ಈ ಪಕ್ಷಿ ಸಂತತಿ ಸಂಪೂರ್ಣ ಅವನತಿ ಹೊಂದಿದ್ದು ಯಾರ ಕಣ್ಣಿಗೆ ಬಿದ್ದ ದಾಖಲಾತಿಯಿಲ್ಲ.
ಉಪಸಂಹಾರ : ಹಿಂದಿನ ಸರಣಿಯಿಂದ ವಿವರಿಸಲಾದ ಈ ದ್ವೀಪದ ಹಕ್ಕಿಗಳ ದುರಂತ ಅವನತಿಗೆ ಮೂಲ ಕಾರಣ ಹುಡುಕಿದರೆ ಇವ್ಯಾವೂ ವಲಸೆ ಪಕ್ಷಿಗಳಲ್ಲ ಎಂದು. ಇತರ ಪಕ್ಷಿಗಳಂತೆ ವಲಸೆ ಹೋಗದೆ ಮೂಲ ದ್ವೀಪಗಳನ್ನೇ ನೆಚ್ಚಿಕೊಂಡ ಇವು ಅಪಾಯ ಬಂದಾಗ ತಮ್ಮ ಸಂತತಿಯನ್ನು ಉಳಿಸಿಕೊಳ್ಳಲು ವಿಫಲವಾದ ಅಸಹಾಯಕ ಜೀವಿಗಳು. ಕಾಡಿನ ಸಂಪತ್ತಿನಲ್ಲಿ ಮಾನವನ ಹಸ್ತಕ್ಷೇಪ, ಮನುಷ್ಯ ದ್ವೀಪಗಳಿಗೆ ಹೊತ್ತು ತಂದ ಇಲಿ ಮೊಲಗಳಂತಹ ಪ್ರಾಣಿಗಳು, ಕಾಡು ಕಡಿದು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿಕ್ಕೊಂಡದ್ದು, “ಮೊಹೋ” ಪಕ್ಷಿಗಳ ಗರಿಗಳಿಗಾಗಿ ಸ್ವಾರ್ಥದಿಂದ ಬೇಟೆಯಾಡಿದ್ದು ಮತ್ತಿತರ ಕಾರಣಗಳು ಮನುಷ್ಯನಿಂದಾದರೆ, ಅಲ್ಲಿನ ದ್ವೀಪಗಳಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟಗಳು, ಚಂಡಮಾರುತಗಳು, ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗ ಹರಡುವಿಕೆ ಇವೆಲ್ಲವೂ ಪ್ರಕೃತಿಯ ಏರುಪೇರು ಅಥವಾ ಪರಿಸರದಲ್ಲಿನ ಅಸಹಜ ಚಟುವಟಿಕೆಗಳಿಂದಾದದ್ದು. ಏನೇ ಇರಲಿ ಈ ಸುಂದರ ಹಕ್ಕಿಗಳ ದುರಂತದಿಂದಾಗಿ ನಾವು ಕಲಿಯುವ ಪಾಠ ಸಾಕಷ್ಟಿದೆ ಮತ್ತು ಈಗಲೂ ಅದೆಷ್ಟೋ ಪಕ್ಷಿ ಪ್ರಾಣಿಗಳು ಅಳಿವಿನಂಚಿನಲ್ಲಿವೆ. ಅವುಗಳನ್ನು ರಕ್ಷಿಸಿಕೊಳ್ಳೋಣ ಮತ್ತು ಸಹಬಾಳ್ವೆ ನೆಡೆಸೋಣ.
ವನ ಹಾಗು ವನ್ಯಜೀವಿಗಳ ರಕ್ಷಣೆ ಮಾನವನ ಆದ್ಯ ಕರ್ತವ್ಯ….
ಕು ಶಿ ಚಂದ್ರಶೇಖರ್
ಚಿತ್ರಗಳು: ಅಂತರ್ಜಾಲ ಕೃಪೆ