ಆರ್ಕಿಡ್ ಮಿಡತೆ

ಆರ್ಕಿಡ್ ಮಿಡತೆ

ಹೆಣ್ಣನ್ನ ಹೂವಿಗೆ ಹೋಲಿಸಿ ಸಂಪಿಗೆಯ ನಾಸಿಕದವಳೇ ,ಮಲ್ಲಿಗೆಯ ಮೈಯವಳೇ ,ಹೂವಂತ ಮನಸ್ಸಿನವಳೇ ಅಂತೆಲ್ಲಾ ಅಗಾಧ ರಸಿಕತೆಯಿಂದ ಬರೆಯವ ಪೇಸ್ಬುಕ್ ಕವಿಗಳ ಕವನಗಳನ್ನ ಓದುವಾಗ , ಒಂದೊಂದ್ಸಲಾ ನನಗೂ ಆ ತರ ಬರೆಯಲಿಕ್ಕೆ ಬರುವುದಿಲ್ಲವಲ್ಲ ಅಂತ ಮತ್ಸರವಾಗುತ್ತೆ. ನಾನೂ ಒಂದಿನ ನಿಮ್ಮನೆಲ್ಲಾ ಮೀರಿಸೋವಂತ ಒಂದು ಕವನದ ಗ್ರಂಥವನ್ನೇ ಬರೆದುಬಿಡ್ತೇನೆ .ಹ್ಞಾಂ ಇರಲಿ…

ಅಂದಂಗೆ ಭಾರತೀಯ ಉಪಖಂಡಕ್ಕೆ ಹೊಂದಿಕೊಂಡಿರುವ ಆಗ್ನೇಯ ಏಷ್ಯಾದ ಬರ್ಮಾ, ಬ್ರೂನಿ, ಕಾಂಬೋಡಿಯಾ, ಇಂಡೋನೇಶಿಯಾ, ಲಾವೋಸ್,ಮಲೇಷಿಯಾ, ಫಿಲಿಪೀನ್ಸ್‌, ಸಿಂಗಾಪುರ್, ವಿಯೆಟ್ನಾಂ ದೇಶಗಳ ನಿತ್ಯಹರಿದ್ವರ್ಣದ ಮಳೆಕಾಡುಗಳಲ್ಲಿ ವಿಶಿಷ್ಟ ಪ್ರಭೇದದ ಮಿಡತೆಯೊಂದು ಕಂಡುಬರುತ್ತದೆ. ನೋಡಲು ಕಣಗಲಿ ಹೂವನ್ನ ಹೋಲುವ ಈ ಮಿಡತೆಯ ವೈಜ್ಞಾನಿಕ ಹೆಸರು ಹೈಮನೋಪಸ್ ಕೊರೊನಾಟಸ್ ಎಂದು (Hymenopus Coronatus) .

ತಮ್ಮ ಬಿಳಿ ಮತ್ತು ಗುಲಾಬಿ ಬಣ್ಣಗಳಿಂದ ಆಕರ್ಷಕವಾಗಿ ಆರ್ಕಿಡ್ ಹೂವಿನಂತೆ ಕಾಡುಮರಗಳ ಕಾಂಡ, ಬೊಡ್ಡೆ ಟೊಂಗೆಗಳ ಮೇಲೆ ಕಂಡು ಬರುವುದರಿಂದಾಗಿ ಇವುಗಳನ್ನ ಆರ್ಕಿಡ್ ಮಿಡತೆ ( Orchid mantis) ಎಂದು ಕರೆಯಲಾಗುತ್ತದೆ.

ಸಾಮಾನ್ಯ ಮಿಡತೆಗಳ ಪ್ರಭೇದಗಳಲ್ಲಯಂತೆಯೇ ಇವುಗಳಲ್ಲಿಯೂ ಹೆಣ್ಣು ಮಿಡತೆಗಳು ಗಾತ್ರ ಗಂಡಿಗಿಂತ ದೊಡ್ಡದಾಗಿರುತ್ತೆ. ಹೆಣ್ಣು ಮಿಡತೆ 2.3 ರಿಂದ 2.7 ಇಂಚ್ ಗಾತ್ರ ಹೊಂದಿದ್ದು ಗಂಡು ಮಿಡತೆ 1 ಇಂಚಿನಷ್ಟು ಮಾತ್ರ ಗಾತ್ರ ಹೊಂದಿರುತ್ತವೆ. ಹೆಣ್ಣು ಮಿಡತೆಗಿಂತಲೂ ಶೀಘ್ರವಾಗಿ ಪ್ರಭುದ್ದಾವಸ್ತೆ ತಲುಪುವ ಗಂಡು ಮಿಡತೆಗಳು ಐದು ತಿಂಗಳಗಳ ಜೀವಿತಾವದಿ ಹೊಂದಿರುತ್ತವೆ. ಹೆಣ್ಣು ಮಿಡತೆಗಳು ಸರಾಸರಿ ಎಂಟು ತಿಂಗಳು ಜೀವಿತಾವದಿ ಹೊಂದಿರುತ್ತವೆ.

ಹೂವಿನಂತೆ ಆಕರ್ಷಕವಾಗಿ ಕಂಡುಬರುವ ಈ ಆರ್ಕಿಡ್ ಮಿಡತೆಗಳು ತಮ್ಮ ದೇಹದಿಂದ ಕೀಟಗಳನ್ನ ಆಕರ್ಷಿಸುವ ಪರಿಮಳವನ್ನ ಹೊರಸೂಸುತ್ತವೆ. ಇವುಗಳ ಬಣ್ಣ ಮತ್ತು ವಾಸನೆಯಿಂದಾಗಿ ಸುಲಭವಾಗಿ ಕೀಟಗಳು ಇವಗಳ ಹತ್ತಿರ ಆಕರ್ಷಿತವಾಗುತ್ತವೆ . ಹೆಣ್ಣು ಆರ್ಕಿಡ್ ಮಿಡತೆಗಳು ಕೀಟಗಳ ಜೊತೆಗೆ ಪತಂಗ,ಜೀರುಂಡೆ,ಚಿಟ್ಟೆ ,ಬಾಲದ ಹುಳು ಮತ್ತು ಕೆಲವೊಮ್ಮೆ ಸಣ್ಣ ಕಪ್ಪೆ ಮತ್ತು ಚೇಳುಗಳನ್ನೂ ಸಹ ಭಕ್ಷಿಸುತ್ತವೆ. ನೋಡಲು ಹೂವಿನಂತೆ ಕಂಡು ಬರುವುದರಿಂದಾಗಿ ಶತ್ರುಗಳಿಂದ ರಕ್ಷಣೆ ಪಡೆಯಲು ಕೂಡ ಸಹಕಾರಿಯಾಗುತ್ತದೆ.

ಸಂಪೂರ್ಣವಾಗಿ ಹೂವಿನ‌ ಬಣ್ಣ ಹಾಗು ಎಸಳುಗಳನ್ನ ಪ್ರತಿರೂಪಿಸುವ ಏಕೈಕ ಪ್ರಾಣಿ ಈ ಆರ್ಕಿಡ್ ಮಿಡತೆ.

ಮೃತ್ಯುಂಜಯ ನ. ರಾ.

Related post