ಆಹಾ, ಇಲ್ಲೆ ಸ್ವರ್ಗ…!

ಆಹಾ, ಇಲ್ಲೆ ಸ್ವರ್ಗ…!

ಬೆಳಗಿನ ವಾಯುವಿಹಾರ ಇಂದೇಕೋ ಬಹಳ ಆಪ್ತವೆನಿಸಿತು, ಬೆಚ್ಚಗಿನ ಸೂರ್ಯನ ಕಿರಣಗಳು, ವಿಶಾಲವಾದ ಹಸಿರಿನ ತೋಪನ್ನು ಸೀಳಿ, ನನ್ನ ಮೈಮನದ ಮೇಲೆ ಚೈತನ್ಯದ ಬೆಳಕು ಬೀರಿದವು, ಮುಖವೆತ್ತಿ, ಕಣ್ಣು ಮುಚ್ಚಿ, ಆ ಹಿತವನ್ನು ಸವಿದೆ, ಅಲ್ಲಲ್ಲಿ ಹಕ್ಕಿಗಳ ಕಲರವ, ಸಣ್ಣದಾಗಿ ಬೀಸುವ ಶೀತಗಾಳಿಗೆ ಕೈ ಚಾಚಿ, ಮೈ ಒಡ್ಡ ಬೇಕೆಂಬ ಬಯಕೆ ಮೂಡಿತು, ಹಾಕಿದ ‘ಹೂಡಿ’ ಬೇಡವಾಗಿತ್ತು….. ಇಂತಹ ಹಸಿರು ಸ್ವರ್ಗದಲ್ಲಿ ನಾ ಇರುವುವೆನೆಲ್ಲ ಎಂದು ಹೆಮ್ಮೆಯ ಭಾವ ಮೂಡಿತು.

ಹೌದು ನಾನಿರುವ ಊರು, ಸ್ವರ್ಗಕಿಂತ ಏನೂ ಕಮ್ಮಿ ಇಲ್ಲ. ಇಡೀ ದೇಶ ‘ಮೇ’ ತಿಂಗಳಿನಲ್ಲಿ ಸೂರ್ಯನ ಶಾಖದಿಂದ ನಲಗುತ್ತಿದ್ದರೆ, ನನ್ನ ಬೆಂಗಳೂರು 22 ಡಿಗ್ರಿ ತೋರಿಸುತ್ತದೆ. ಬೆಂಗಳೂರು ಭೂಮಿ ತಾಯಿಗೆ ಸ್ವಲ್ಪ ಸೆಕೆಯಾದರೂ ಸಾಕು ಮೋಡಗಳು ನೀರು ಸುರಿಸಿ ಅವಳನ್ನು ತಂಪಾಗಿಡುವ ತವಕಿಸುತ್ತವೆ ಮನಾಲಿ, ಮಸೂರಿ, ಶಿಮ್ಲ ಗರಿಧಾಮಗಳು ಕೂಡಾ ಬೆಂಗಳೂರಿನ ಮುಂದೆ ಮಂಡಿ ಉರಿದ್ದು ನೋಡಿದ್ದೇವೆ. ಪ್ರತಿ ಬಾರಿ ಚಳಿಗಾಲದಲ್ಲಿ ಈ ಸುಂದರ ಉದ್ಯಾನ ನಗರಿ ಜಾಲತಾಣದಲ್ಲಿ ನವವಧುವಿನಂತೆ ಎಲ್ಲರ ದೃಷ್ಟಿಗೆ ಗುರಿಯಾಗುತ್ತದೆ. ಇಲ್ಲಿನ ಸೌಮ್ಯ ಚಳಿಗೆ, ಉತ್ತರ ಭಾರತೀಯರ ಅನಿಭವಿಸುವ ಕೊರೆಯುವ ಚಳಿಗೆ ಬಹಳ ವ್ಯತ್ಯಾಸವಿದೆ.

ಆಗಾಗ ಚೆನ್ನೈ ಚಂಡ ಮಾರುತಗಳು ಬೆಂಗಳೂರಿಗರಿಗೆ ಚಳಿಗಾಲದಲ್ಲಿಯೂ ತುಂತುರು ಮಳೆಯ ಅನುಭವ ದಯಪಾಲಿಸುತ್ತವೆ. ಈ ಅಕಾಲಿಕ ಮಳೆ ಬರಲೋ ಬೇಡವೋ ಎನ್ನುವ ಸೂರ್ಯನನ್ನು ಮತ್ತೆ ಮೋಡಗಳು ಮುಸುಕೆಳೆದು ಬಿಡುತ್ತವೆ.

ಅದೆಷ್ಟೋ ಬಾರಿ ಬೇಸಿಗೆಯಲ್ಲಿ ಭಾರತದ ರಾಜಧಾನಿ ದಿಲ್ಲಿ, ಅಂದು 49 ಡಿಗ್ರಿ ಉಷ್ಣಾಂಶ ಹೊಂದಿತ್ತು. ದಿಲ್ಲಿವಾಸಿಗಳು ಬೆಂಗಳೂರಿನ ಹವಾಮಾನ ವರದಿ ನೋಡಿ…ಹೊಟ್ಟೆ ಉರಿಸಿಕೊಳ್ಳುತ್ತಾರೆ . ಎಷ್ಟೋ ಉತ್ತರ ಭಾರತೀಯರು ‘ಕನ್ನಡ್ ಕನ್ನಡ್’ ಎಂದು ತಪ್ಪು ತಪ್ಪಾಗಿ ಹೇಳುತ್ತಾ , ಹಿಂದಿ ಮಾತನಾಡುತ್ತಾ ನಮ್ಮ ದಕ್ಷಿಣ ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ರಜೆಗೂ ತಮ್ಮ ಊರಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ತಮ್ಮ ಪೂರಿ ಛೋಲೆ ತೊರೆದು ಅವರೂ ದೋಸೆ ದಾಸರಾಗುತ್ತಿದ್ದಾರೆ.

ಎನ್ ಮಾಡೋದು ನಮ್ಮ ಬೆಂಗಳೂರೇ ಹಾಗೆ, ಆಕರ್ಷಕ ಊರು, ಬೆಂಗಳೂರಿಗರೇ ಹಾಗೆ ಸಹಿಷ್ಣುತರು. ಎಲ್ಲರಿಗೂ ತಮ್ಮ ತೆಕ್ಕೆಯಲ್ಲಿ ಜಾಗಕೊಡುವವರು.

ನಾನು ಉತ್ತರ ಕರ್ನಾಟಕದವಳಾದರೂ, ನನ್ನ ತವರೂರಿನ ಬಗ್ಗೆ ಹೆಮ್ಮೆ, ಪ್ರೀತಿ ಎರಡೂ ಇದ್ದರೂ, ಮದುವೆಯಾಗಿ ಹೋಗುವದು ಬೆಂಗಳೂರಿಗೆ ಎಂದು ಮನಸಾರೆ ಇಚ್ಚಿಸಿದ್ದು ಸುಳ್ಳಲ್ಲ. ನನ್ನಂತೆಯೇ ಹಲವಾರು ಕನ್ಯೆಯರ ಬೇಡಿಕೆ ಇದಾಗಿದೆ. ತಪ್ಪೇನು? ಬೆಂಗಳೂರು ಹಾಗಿದೆ….

ಯಾಕೆ ಗೊತ್ತಾ ಬೆಂಗಳೂರೇ ಸ್ವರ್ಗ!….?

ಭೌಗೋಳಿಕವಾಗಿ ನೋಡಿದರೆ ಬೆಂಗಳೂರು ಸ್ವರ್ಗವಾಗಲು ಅದು ಸಮುದ್ರ ಮಟ್ಟದಿಂದ 3000 ಆಡಿ ಎತ್ತರದಲ್ಲಿ ಇದೆ. ಆದರಿಂದ ಇಲ್ಲಿ ವರ್ಷವಿಡೀ ಮಳೆ ಆಗ್ತಾನೇ ಇರುತ್ತೆ. ಹಿಂದು ಮಹಾಸಾಗರ, ಅರಬ್ಬೀ ಸಮುದ್ರದಲ್ಲಿ ಆಗಾಗ ಬರುವ ಚಂಡಮಾರುತದಿಂದ ಸುಂಟರಗಾಳಿಯುಕ್ತ ಮಳೆ, ಗುಡುಗು ಸಿಡಿಲು ಸಾಮಾನ್ಯವಾಗಿ ಬಿಟ್ಟಿದೆ, ಸರಾಸರಿ ಆರು ತಿಂಗಳೂ ಬೆಂಗಳೂರ ರಸ್ತೆಗಳು ಒದ್ದೆ ಮುದ್ದೆ.

ಅದಕ್ಕೆ ಅಲ್ವಾ ಇಲ್ಲಿ ಹಸಿರು ನಳಿನಳಿಸುತ್ತದೆ, ಚಳಿಗಾಲದಲ್ಲಿ ಹಿತವಾದ ಚಳಿ ಇರುತ್ತದೆ, ಉತ್ತರ ಭಾರತದಂತೆ ತೀರಾ ಕೊರೆಯುವ ಚಳಿ ಏನಿಲ್ಲ. ಬೇಸಿಗೆ ತನ್ನ ಭೀಕರತೆ ತೋರಬೇಕು ಎನ್ನುವಷ್ಟರಲ್ಲಿ ಮತ್ತೆ ಬೇಸಿಗೆ ಮಳೆಯ ಸಿಂಚನ, ಆಣಿ ಕಲ್ಲಿನ ನರ್ತನ. ಬೆಂಗಳೂರಿನ ಮಳೆ, ಮಳೆನಾಡಿನ ಮಳೆಯಂತೆ ದಿನವಿಡೀ ಸುರಿದು ಕಿರಿಕಿರಿ ಮಾಡುವುದಿಲ್ಲ, ಮುಂಬೈ ಮಳೆಯಂತೆ ಜನ ಜೀವನ ಅಸ್ತವ್ಯಸ್ತ ಗೊಳಿಸುವುದಿಲ್ಲ. ಮಧ್ಯಾಹ್ನ ಎರಡು ತಾಸು ರಪ ರಪನೆ ಬಿದ್ದು, ಮತ್ತೆ ಜನರೆಲ್ಲಾ ಮನೆ ಸೇರಿಕೊಂಡ ಮೇಲೆ ರಾತ್ರಿ ಇಡೀ ಧಾರಾಕಾರವಾಗಿ ಸುರಿದು ಮತ್ತೆ ಮುಂಜಾವಿನಲ್ಲಿ ಫ್ರೆಶ್ ಆಗಿ ಕಂಗೊಳಿಸುತ್ತದೆ. ಬೆಂಗಳೂರಿನ ರಸ್ತೆಯ ಎರಡೂ ಬದಿ ದೊಡ್ಡ ದೊಡ್ಡ ಹಳೆ ಮರಗಳು ಆಗ ತಾನೆ ಸ್ನಾನ ಮಾಡಿ, ಕೂದಲು ಕೊಡುವಿ ಕೊಳ್ಳುತ್ತಿರುವ ನೀರೆಯಂತೆ ಟಪ ಟಪ ನೀರಿನ ಹನಿ ಸಿಂಪಡಿಸುತ್ತಿರುತ್ತವೆ .ಆಕಾಶದ ಮೇಲೆ ಹೊಮ್ಮಬಿಸಿಲನ್ನು ಬೀರುತ್ತ ಸೂರ್ಯನ ರಶ್ಮಿ ಇಣುಕುತ್ತಿರುತ್ತವೆ.

ಫೆಬ್ರವರಿ ತಿಂಗಳಿನಲ್ಲಿ ಮಾತ್ರ ಮಳೆಯಿಂದ ವಿರಾಮ, ವಸಂತನ ಆಗಮನ ಸೂಚಿಸುತ್ತದೆ, ಮಾರ್ಚ್ ಹಾಗು ಏಪ್ರಿಲ್ ನಲ್ಲಿ ಬೆಂಗಳೂರು ರಸ್ತೆಗಳಲ್ಲಿ ಮರಗಳಿಂದ ಉದುರಿದ ಕೆಂಪು, ಗುಲಾಬಿ ಹಳದಿ ಸುಂದರ ಹೂವುಗಳಿಂದ ಅಮೋಘ ಸೌಂದರ್ಯವನ್ನು ಪ್ರದರ್ಶಿಸುತ್ತದೆ. ಬೆಂಗಳೂರಿನ ಫ್ಲೈ ಓವರ್, ನೈಸ್ ರೋಡ, ಔಟರ್ ರಿಂಗ್ ರೋಡ, ರಾಜ ಮಹಲ್ ರಸ್ತೆ, ಸಂಪಿಗೆ ರಸ್ತೆ ಚೆರ್ರಿ ಹೂವು, ಬೊಗನ್ ವಿಲ್ಲಾ ಹೂಗಳ ರಾಶಿಯಿಂದ ಇದು ಜಪಾನ್ ದೇಶನಾ ಅಥವಾ ಯಾವುದೋ ಯುರೋಪಿಯನ್ ದೇಶವಿರಬಹುದು ಎಂದು ಮೊದಲ ನೋಟಕೆ ಅನಿಸಿದ್ದುಂಟು. ಎಲ್ಲೋ ಹೋಗಿ ಇದೇ ದೃಶ್ಯಗಳನ್ನು ನೋಡಿ ವ್ಹಾವಾ…! ಎನ್ನುವರು, ತಮ್ಮ ಊರಿನ ಸೌಂದರ್ಯವನ್ನೇ ಆಸ್ವಾದಿಸಿರುವುದಿಲ್ಲ. ಪಾಪ ಅವರದೇನು ತಪ್ಪು ವೇಗದ ಜೀವನದಲ್ಲಿ ಇದೆಕ್ಕೆಲ್ಲ ಟೈಮ್ ಇರಲ್ಲ ಬೀಡಿ.

ಈ ಸ್ವರ್ಗದಂತಹ ಊರು ಸೇರುವ ಕಾತುರತೆಗೆ ಇನ್ನೂ ಹಲವಾರು ಕಾರಣಗಳಿವೆ. ಇದು ಉದ್ಯಾನ ನಗರಿ ಅಲ್ಲದೆ ಸಿಲಿಕಾನ್ ಸಿಟಿ ಕೂಡಾ. ಈಗ ಸ್ಟಾರ್ಟ್ ಅಪ್ ಗಳ ಅಬ್ಬರ ಸೇರಿ ಕೊಂಡಿದೆ. ಒಳ್ಳೆ ಹವಾಮಾನ, ಶುದ್ಧ ಗಾಳಿ, ಹುಡಿಕೆದಾರರಿಗೆ ಕೈಬೀಸಿ ಕರೆಯುತ್ತವೆ. ಎಲ್ಲ ದಿಗ್ಗಜ ಸಾಫ್ಟ್ವೇರ್ ಕಂಪನಿಗಳ ಹೆಡ್ ಕ್ವಾರ್ಟರ್ಸ್ ಇದು. ಇದರಿಂದಾಗಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿವೇ, ವಿದೇಶಿ ಹೂಡಿಕೆದಾರರು ಬೆಂಗಳೂರಿಗೆ ಮನಸೋತು ಇದ್ದನ್ನೇ ಕಾಯಂ ಸ್ಥಳ ಮಾಡಿಕೊಂಡಿದ್ದಾರೆ. ಇದೆಕ್ಕೆಲ್ಲ ನಮ್ಮ ರಾಜಕಾರಣಿಗಳ ಅಗಾದ ಕೊಡುಗೆ ಇದೇ. ಕಡಿಮೆ ಭೂಬಾಡಿಗೆ, ತೆರಿಗೆ ವಿನಾಯಿತಿ ಮುಂತಾದ ಒಳ್ಳೆಯ ಆಫರ್ ಗಳ ಜಾಲ ಬಿಸಿ ದೊಡ್ಡ ದೊಡ್ಡ ಕಾರ್ಪೊರೇಟ್ ಮೀನುಗಳನ್ನು ಹಿಡಿದಿದ್ದಾರೆ. ಅದರಿಂದಾಗಿ ಹತ್ತು ಹದಿನೈದು ವರ್ಷಗಳಲ್ಲಿ ದೈತ್ಯಕಾರದ ಆರ್ಥಿಕ ಹಾಗು ಸಾಮಾಜಿಕ ಅಭಿವೃದ್ಧಿ ಕಂಡಿತು ನಮ್ಮ ಬೆಂಗಳೂರು. ಬೆಂಗಳೂರನ್ನು ಎರಡನೆಯ ಸಿಂಗಾಪುರ ಮಾಡುತ್ತೇವೆ ಎನ್ನುವ ಗುರಿ ಇಟ್ಟು, ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಿದೆ.

ಮೆಟ್ರೋ ರೈಲು, ರಸ್ತೆ ಅಗಲಿಕರ್ಣ, ಗಗನಚುಂಬಿ ಕಟ್ಟಡಗಳು, ಅಪಾರ್ಟ್ಮೆಂಟ್ಗಳು, ಮಾಲ್ ಗಳು, ಪಂಚತಾರಾ ಹೋಟೆಲ್ಗಳು, ಸುಸಜ್ಜಿತ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮೂಲ ಸೌಕರ್ಯಗಳನ್ನು ಸರ್ಕಾರ ಕಾಲಕಾಲಕ್ಕೆ ಒದಗಿಸುತ್ತಿದೆ. ಸಿಟಿ ಬಸ್ ಸೌಕರ್ಯ, ಸ್ವಚ್ಛ ಭಾರತದ ಅಭಿಯಾನದ ಅಡಿಯಲ್ಲಿ ಕೆರೆಗಳ ಸುಧಾರಣೆ, ಕುಡಿಯುವ ನೀರಿನ ಘಟಕ, ಮಕ್ಕಳಿಗೆ ಆಟದ ಮೈದಾನ,ಉಚಿತ ವ್ಯಾಯಾಮ ಸಲಕರಣೆಗಳು ಬೃಹತ್ ಬೆಂಗಳೂರು ನಗರ ಪಾಲಿಕೆ ಬೆಂಗಳೂರಿಗರಿಗೆ ಕೊಟ್ಟಿದೆ. ಅದನ್ನು ಚೊಕ್ಕವಾಗಿ ನಿರ್ವಹಣೆ ಕೂಡ ಮಾಡುತ್ತಿದೆ. ಅದಕ್ಕೆ ನಾವು ಕೃತಜ್ಞರಾಗಿರಬೇಕು.

ಪ್ರತಿ ಬಡಾವಣೆಯಲ್ಲಿ ಉದ್ಯಾನವನಗಳನ್ನು ಇತ್ತಿಚಿಗಷ್ಟೇ ಸುಂದರವಾಗಿ ನವಿಕರಿಸಲಾಗಿದೆ. ಇನ್ನು ಶಿಕ್ಷಣಕ್ಕೆ ಬೆಂಗಳೂರು ‘ವರ್ಲ್ಡ್ ಫೇಮಸ್’. ಇಲ್ಲಿನ ಐ ಐ ಎಂ, ಐ ಐ ಎಸ್ ಸಿ, ಉನ್ನತ ಪ್ರಸಿದ್ಧ ವಿದ್ಯಾ ಸಂಸ್ಥೆ ಗಳು, ಒಳ್ಳೆಯ ತಾಂತ್ರಿಕ ಮಹಾವಿದ್ಯಾ ಲಯಗಳನ್ನು ಅರಸಿ ರಾಜ್ಯದ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿ ಪಡೆಯಲು ಇಲ್ಲಿಗೆ ಧಾವಿಸುತ್ತಾರೆ..

ಬೆಂಗಳೂರು ವೈದ್ಯಕೀಯ ಸೌಲಭ್ಯಗಳಿಗೂ ಪ್ರಖ್ಯಾತಿ ಹೊಂದಿದೆ. ಮುಂಬೈ ನಂತರ ಅತ್ಯಾಧುನಿಕ ವೈದ್ಯಕೀಯ ಚಿಕೆತ್ಸೆ ಗಳು ಇಲ್ಲಿ ಲಭ್ಯ.. ನಾರಾಯಣ ಹೃದಯಾಲಯ ದಂತಹ ಸೂಪರ ಸ್ಪೆಷಲಿಟಿ ಆಸ್ಪತ್ರೆಗಳಿಗೆ ಹೃದಯ ಸಂಬಂಧಿ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಲು ಹೊರದೇಶದಿಂದ ಕೂಡ ರೋಗಿಗಳು ಬರುತ್ತಾರೆ. ಅದಕ್ಕೆ ಬೆಂಗಳೂರಿಗೆ ಅಷ್ಟೊಂದು ಬೇಡಿಕೆ.

ಬೆಂಗಳೂರು ತಿಂಡಿ ಪೋತರಿಗಂತೂ ಸ್ವರ್ಗವೇ ಸರಿ. ಇಲ್ಲಿ ದಕ್ಷಿಣ ಭಾರತದ ದೋಸೆ ಇಡ್ಲಿ, ರವೆ ಇಡ್ಲಿ, ಪೂರಿ ಬಿಸಿಬೇಳೆ ಭಾತನೊಂದಿಗೆ, ಉತ್ತರ ಭಾರತದ ನಾನ್ ಕುಲ್ಚಾ ಪನೀರ್ ಸಬ್ಝಿ ಜೊತೆಗೆ ಗುಜರಾತಿ, ಮರಾಠಿ, ಅಂದ್ರ ಸ್ಟೈಲ್, ಕೇರಳ ಸ್ಟೈಲ್ ಆಹಾರ ಕೂಡಾ ಲಭ್ಯ. ಎಲ್ಲ ವರ್ಗದವರೂ ಹೊರಗಡೆ ತಿಂಡಿ ಊಟ ಮಾಡಬಹುದಾದ ಎಲ್ಲ ತರಹದ ಹೋಟೆಲ್ ಗಳು ಸಿಗುತ್ತವೆ. ಹತ್ತು ರೂಪಾಯಿ ಇಡ್ಲಿ ಚಟ್ನಿಯಿಂದ ಹಿಡಿದು 500 ರೂಪಾಯಿಯ ಇಡ್ಲಿವರೆಗೂ ದೊರಕುತ್ತವೆ.

ಪಬ್ ಸಂಸ್ಕೃತಿ ಯುವಜನರನ್ನು ಆಕರ್ಷಿಸಿದರೆ, ಇಲ್ಲಿನ ಫಿಲ್ಟರ್ ಕಾಫಿ ದರ್ಶಿನಿಗಳು ಹಿರಿಯ ನಾಗರಿಕರನ್ನು ಆಕರ್ಷಿಸುತ್ತವೆ. ಮಧ್ಯವಯಸ್ಕರು ಅನ್ಲಿಮಿಟೆಡ್ ಲಂಚ್ ಸವಿದರೆ ಮಕ್ಕಳೂ ಪಿಜ್ಜಾ ಬರ್ಗರ್ ಸವಿಯಲು ಹಲವಾರು ಆಹಾರ ತಾಣಗಳಿವೆ.

ದಕ್ಷ ಪೊಲೀಸ್ ಡಿಪಾರ್ಟ್ಮೆಂಟ್ ನಿಂದ, ಅಪರಾಧಗಳ ಸಂಖ್ಯೆ ಹದ್ದುಬಸ್ತಿನಲ್ಲಿ ಇದೆ. ಬಿಹಾರ್ ಗುರುಗಾವ್ ನಂತಹ ಗುಂಡಾಗಿರಿ ಇಲ್ಲಿಲ್ಲ. ಮಹಿಳೆಯರು, ಮಕ್ಕಳು ವೃದ್ಧರು ಆರಾಮಾಗಿ ಓಡಾಡಿಕೊಂಡು ಇದ್ದಾರೆ.

ಇನ್ನು ಹುಡುಕಿಕೊಂಡು ಹೊರಟರೆ….ಅಲ್ಲಲ್ಲಿ ಲೋಪ ದೋಷಗಳು ಕಾಣಬಹುದು. ಗಲ್ಲಿ ಗಲ್ಲಿಯಲ್ಲಿ ಸಮಸ್ಯೆಗಳು ಇರಬಹುದು. ಕೊರತೆಗಳು ಎದ್ದು ಕಾಣಬಹುದು. ಆದರೂ ಇಲ್ಲಿನ ದುಂಡು ಮಲ್ಲಿಗೆ, ಸಂಪಿಗೆ, ಜಾಜಿ ಮಲ್ಲೆಯ ಹೂವಾಡಗಿತ್ತಿಯರ ಕೈಲ್ಲಿನ ಮೊಳಗಟ್ಟಲೆ ಮಾಲೆಯನ್ನು ನೋಡಿದಾಕ್ಷಣ, ಆ ಘಮ ಸವಿದಾಕ್ಷಣ ಎಲ್ಲ ಕೊರತೆಗಳು ಗೌಣವಾಗಿಬಿಡುತ್ತವೆ.

ಇಲ್ಲಿನ ಸುಂದರ ದೇವಾಲಯಗಳು, ವಿಧಾನ ಸೌಧ, ಲಾಲ್ ಬಾಗ್, ಕಬ್ಬನ್ ಪಾರ್ಕ್ ನೋಡಿದ ಮೇಲೆ ಹೇಗೆ ತಾನೇ ಅದು ಇಲ್ಲ, ಇದು ಇಲ್ಲ ಅಂತ ಕಂಪ್ಲೇಂಟ್ ಮಾಡಲು ಸಾಧ್ಯ. ಇನ್ನೂ ವಿದ್ಯಾರ್ಥಿ ಭವನ್ ನ ಬಂಗಾರ ಬಣ್ಣದ ಗರಿಗರಿ ದೋಸೆ, ವೀಣಾ ಸ್ಟೋರ್ಸ್ ನ್ ಮೃದುವಾದ ಮಲ್ಲಿಗೆ ಇಡ್ಲಿ, ಕೇಸರಿ ಭಾತ್ ತಿಂದ ಮೇಲಂತೂ ಅಯ್ಯೋ…! ಸ್ವರ್ಗ ಹುಡ್ಕೊಂಡು ಸ್ವಿಜರ್ಲ್ಯಾಂಡ್ ಗೆ ಹೊರಟಿದ್ದೆ. ನಮ್ಮ ಬೆಂಗಳೂರೇ ಸ್ವರ್ಗದಂತಿದೆ ಎಂದು 3 BHK ಫ್ಲಾಟ್ ಬುಕ್ ಮಾಡುವುದೇ ಅಲ್ಲವೇ…

ನಮ್ಮ ಬೆಂಗಳೂರು ನಮ್ಮ ಹೆಮ್ಮೆ
ಬನ್ನಿ ಒಮ್ಮೆ ನೋಡಲು, ಇದ್ದು ಬಿಡುವಿರಿ ಕಾಯಮ್ಮೇ …

ಮೃಣಾಲಿನಿ

Related post