ಆ ಒಂದು ಕ್ಷಣ…… ನಿಮ್ಮೊಂದಿಗೆ – ಸುನೀಲ

ಆ ಒಂದು ಕ್ಷಣ……

ಜೀವನ ಪಯಣದಲ್ಲಿ ನಮ್ಮದು ಯಾವಾಗಲೂ ಗೆಲುವಿಗಾಗಿ ತುಡಿಯುವ ಮನಸ್ಸು!!!.ಗೆಲುವಿಗಾಗಿ ಕಾಯುತ್ತಾ ಕುಳಿತು ಬಹುತೇಕ ಸಂದರ್ಭಗಳಲ್ಲಿ ನಿರಾಶರಾಗುವುದೂ ಇದೆ.

ಹಣ, ಹೆಸರು, ಕೀರ್ತಿ, ಸಾಮಾಜಿಕ ಸ್ಥಾನಮಾನ ಇವೆಲ್ಲವೂ ನಮ್ಮ ಗೆಲುವಿನ ಮೇಲೆ ಹೆಚ್ಚಿನಂಶ ಅವಲಂಬಿತವಾಗಿದೆ ಎನ್ನುವುದು ಸುಳ್ಳಲ್ಲ. ಈ ಎಲ್ಲವನ್ನೂ ತಂದು ಕೊಡುವ ಆ ಗಳಿಗೆ ಇದೆಯಲ್ಲ!!! ಅದು ನಮ್ಮ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಆ ನಿಮಿಷ, ಆ ಕ್ಷಣದ ನಿರ್ಧಾರ ನಮ್ಮನ್ನು ಎತ್ತರಕ್ಕೂ ಕೊಂಡೊಯ್ಯುತ್ತದೆ…ಎಚ್ಚರ ತಪ್ಪಿದರೆ ಪಾತಾಳಕ್ಕೂ ನೂಕುತ್ತದೆ.. .

ಒಬ್ಬ ಕಲಾವಿದ ಕಕ್ಕುಲತೆಯಿಂದ,ಜವಾಬ್ದಾರಿಯಿಂದ ಬಣ್ಣಗಳ ಚಿತ್ತಾರ ಮೂಡಿಸಿ ಒಂದು ಅಪ್ರತಿಮ ಕಲಾಕೃತಿಯನ್ನು ರಚಿಸಿ ಇನ್ನೇನು ಆಯಿತು ಎನ್ನುವಾಗ ಕೈತಪ್ಪಿದ ಬ್ರಶ್ ಆ ಚಿತ್ರದ ಮೇಲೆ ಗೆರೆ ಎಳೆದುಬಿಟ್ಟರೆ…..ಆ ಕ್ಷಣ ಕೈ ತಪ್ಪದಿದ್ದರೆ!? ಅದ್ಭುತ ಕಲಾಕೃತಿ ಲೋಕಾರ್ಪಣೆ ಆಗುತ್ತಿತ್ತು ಅಲ್ಲವೇ!?…

ನಮ್ಮ ಬದುಕಿನ ಸೋಲು ಮತ್ತು ಗೆಲುವನ್ನು ನಿರ್ಧರಿಸುವ ಆ ಒಂದು ಕ್ಷಣದಲ್ಲಿ ಏನಿದೆ..!?…

ನಮ್ಮ ಬದುಕಿನ ಸೋಲು ಗೆಲುವನ್ನು ನಿರ್ಧರಿಸುವ ಆ ಒಂದು ಕ್ಷಣದಲ್ಲಿ ಏನಿದೆ..!?…

ವ್ಯಕ್ತಿಯೊಬ್ಬ ತುಂಬಾ ಅಸ್ವಸ್ಥನಾಗಿದ್ದಾನೆ…ಪ್ರಾಥಮಿಕವಾಗಿ ಆತನಿಗೆ ಕೊಡಬೇಕಾದ ಚಿಕಿತ್ಸೆ ಕೊಡಲೇಬೇಕು…ಹಾಗೂ ಹೀಗೂ ಅವನನ್ನು ತುರ್ತಾಗಿ ಆಸ್ಪತ್ರೆಗೆ ಒಯ್ಯಲಾಯಿತು…ಪರೀಕ್ಷೆ ಮಾಡಿ ಚಿಕಿತ್ಸೆ ನೀಡಿದ ವೈದ್ಯರು ನೀವು ಅವರನ್ನು ಕರೆತರುವುದು ಒಂದು ನಿಮಿಷ ತಡವಾಗಿದ್ದರೂ, ಬದುಕುವುದು ಕಷ್ಟವಾಗುತ್ತಿತ್ತು ಎನ್ನುತ್ತಾರೆ.
ಅರೆ!!! ಮತ್ತೆ ಕ್ಷಣದ ಮಾತು!!!! ಏನಪ್ಪಾ ಇದು!?..

ಹೌದು!!
ನಾವು ತೆಗೆದುಕೊಳ್ಳುವ ನಿರ್ಧಾರ, ನಮ್ಮ ಪರಿಶ್ರಮ, ಇಚ್ಛಾಶಕ್ತಿ ಎಲ್ಲವೂ ಸೇರಿಕೊಂಡು ಆ ಕ್ಷಣವನ್ನು ಗೆಲುವಾಗಿ ಪರಿವರ್ತಿಸುತ್ತವೆ.

ಇಲ್ಲೇನಾದರೂ ಸ್ವಲ್ಪ ಎಡವಟ್ಟಾಯಿತಾ,ಒಂದು ಸಣ್ಣ ಉದಾಸೀನತೆ ನುಸುಳಿತಾ….
ಮುಗಿಯಿತು…ಸೋಲು ಬೆನ್ನೇರಿಬಿಡುತ್ತದೆ..ನಾವು ಕುಸಿದಿರುತ್ತೇವೆ.

ಆ ಒಂದು ನಿಮಿಷ, ಕ್ಷಣದಲ್ಲಿ ಏನಿಲ್ಲ ಹೇಳಿ!!?

ನಿರೀಕ್ಷೆ, ಕಾತುರತೆ, ನಿರ್ಧಾರ, ಸಮಯ ಪ್ರಜ್ಞೆ, ಜವಾಬ್ದಾರಿ, ರೋಮಾಂಚಕ ಅನುಭವಗಳು ಎಲ್ಲವೂ ಇದೆ…

ಆ ಒಂದು ನಿಮಿಷ, ಕ್ಷಣದಲ್ಲಿ ಏನಿಲ್ಲ ಹೇಳಿ!!?

ನಿರೀಕ್ಷೆ, ಕಾತುರತೆ, ನಿರ್ಧಾರ, ಸಮಯ ಪ್ರಜ್ಞೆ , ಜವಾಬ್ದಾರಿ, ರೋಮಾಂಚಕ ಅನುಭವಗಳು ಎಲ್ಲವೂ ಇದೆ…

ನಾವು ಸೇರಬೇಕಾದ ಗುರಿಯ ದಾರಿಯಲ್ಲಿ ಆಗುವ ಅನುಭವಗಳು ಗುರಿ ಮುಟ್ಟಲು ಸಹಕಾರಿ.

ಒಬ್ಬರು ಸಾಮಾನ್ಯವಾಗಿ ತಾವು ಮಾಡಲು ಬಯಸಿದ್ದನ್ನು ಸಾಧಿಸಬಲ್ಲರು ಎಂಬುವ ಒಂದು ಸಕಾರಾತ್ಮಕ ನಂಬಿಕೆಯೇ ಆತ್ಮವಿಶ್ವಾಸ.

ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗುತ್ತಾರೆ. ಅವರಲ್ಲಿ ಒಬ್ಬನು ಪಾಠಗಳನ್ನು ಚೆನ್ನಾಗಿ ಓದಿಕೊಂಡಿದ್ದಾನೆ, ಮಾತ್ರವಲ್ಲದೆ ಅಧ್ಯಾಪಕರು ಕೊಟ್ಟ ಸೂಚನೆಗಳಿಗೆ ಅನುಗುಣವಾಗಿ ಸಂಭಾವ್ಯ ಪ್ರಶ್ನೆಗಳಿಗೆ ಉತ್ತರಗಳನ್ನೂ ನೋಡಿಕೊಂಡಿದ್ದಾನೆ. ಕೆಲವು ಮುಖ್ಯ ವಿಷಯಗಳನ್ನು ಕಂಠಪಾಠ ಮಾಡಿದ್ದಾನೆ. ಇನ್ನೊಬ್ಬ ವಿದ್ಯಾರ್ಥಿ ಓದಿದ್ದು ಕಡಮೆ, ಪ್ರಶ್ನೆ ಪತ್ರಿಕೆಗಳನ್ನು ಕೂಡ ಕೊನೆಯ ಗಳಿಗೆಯಲ್ಲಿ ನೋಡಲು ಅವನಿಗೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮೊದಲನೆಯವನು ಎರಡನೆಯವನಿಗಿಂತ ಅಧಿಕ ಅಂಕಗಳನ್ನು ಪಡೆಯಬೇಕಾಗಿತ್ತು.

ಆದರೆ ಫಲಿತಾಂಶ ಬಂದಾಗ ಆದದ್ದೇ ಬೇರೆ. ಎರಡನೆಯವನು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾದರೆ ಮೊದಲನೆಯವನು ದ್ವಿತೀಯ ಶ್ರೇಣಿ ಗಳಿಸಿದ್ದ. ಇದಕ್ಕೆ ಕಾರಣ ಇಷ್ಟೇ. ಮೊದಲನೆಯ ಹುಡುಗ ಎಷ್ಟೇ ಅಭ್ಯಾಸ ಮಾಡಿದ್ದರೂ ಅವನಲ್ಲಿ ಆತ್ಮವಿಶ್ವಾಸದ ಕೊರತೆಯಿತ್ತು. ಇದರಿಂದಾಗಿ ಹೆದರಿಕೊಂಡಿದ್ದ. ಪ್ರಶ್ನೆಪತ್ರಿಕೆ ಸಿಕ್ಕಿದೊಡನೆ ಗಡಿಬಿಡಿಯಲ್ಲಿ ಬಾಯಿಪಾಠ ಮಾಡಿದ ಹಲವು ಉತ್ತರಗಳು ನೆನಪಿಗೆ ಬರಲಿಲ್ಲ. ಗೊತ್ತಿದ್ದುದನ್ನೂ ಸರಿಯಾಗಿ ಬರೆಯಲಾಗಲಿಲ್ಲ. ಆದರೆ ಎರಡನೆಯವನು ಓದಿದ್ದು ಕಡಮೆಯಾದರೂ ಆತ್ಮಶ್ರದ್ಧೆ ಚೆನ್ನಾಗಿತ್ತು. ಇಡಿಯ ಪ್ರಶ್ನೆಪತ್ರಿಕೆಯನ್ನು ಮೊದಲು ಓದಿನೋಡಿ ತನಗೆ ಸರಿಯಾಗಿ ಗೊತ್ತಿರುವ ಪ್ರಶ್ನೆಗಳಿಗೆ ಪ್ರಾರಂಭದಲ್ಲೇ ಸಮರ್ಪಕವಾದ ಉತ್ತರ ಬರೆದ. ಹೀಗೆ ಬರೆಯುತ್ತಾ ಹೋದಂತೆ ಅವನ ಧೈರ್ಯ ಹೆಚ್ಚುತ್ತಾ ಹೋಯಿತು. ತೃಪ್ತಿಕರವಾಗಿ ಪರೀಕ್ಷೆಯನ್ನು ಎದುರಿಸುವುದು ಸಾಧ್ಯವಾಯಿತು.

ಆತ್ಮವಿಶ್ವಾಸ ಅಥವಾ ಆತ್ಮಶ್ರದ್ಧೆ ಎಂದರೆ ತನ್ನ ಕಾರ್ಯಕ್ಷಮತೆ, ಸಾಮರ್ಥ್ಯ ಮತ್ತು ತಿಳಿವಳಿಕೆಗಳಲ್ಲಿ ದೃಢವಾದ ನಂಬಿಕೆ. ಇಂತಹ ನಂಬಿಕೆ ಇದ್ದಾಗ ಮಾತ್ರ ಮನುಷ್ಯ ಅನೇಕ ಕ್ಷೇತ್ರಗಳಲ್ಲಿ ಸಾಫಲ್ಯವನ್ನು ಪಡೆಯಬಲ್ಲ. ಸಂದರ್ಶನಕ್ಕೆ ಹೋಗುವ ಪದವೀಧರ, ಯುದ್ಧರಂಗಕ್ಕೆ ಧುಮುಕುವ ಯೋಧ, ಚುನಾವಣೆಯ ಅಖಾಡಕ್ಕಿಳಿಯುವ ರಾಜಕಾರಣಿ, ಸಾಹಸಕ್ಕೆ ಕೈಹಚ್ಚುವ ತರುಣ, ವಿವಿಧ ವೃತ್ತಿಗಳಿಗೆ ತೊಡಗುವ ಯುವಜನರು- ಎಲ್ಲರಲ್ಲೂ ಅತ್ಯವಶ್ಯವಾಗಿ ಬೇಕಾಗಿರುವುದು ಆತ್ಮವಿಶ್ವಾಸ. ಅದು ಇದ್ದಾಗ ಧೈರ್ಯ-ಸ್ಥೈರ್ಯಗಳು ತಾವಾಗಿಯೇ ಒದಗಿಬರುತ್ತವೆ. ಇಲ್ಲದಾಗ ಅಪನಂಬಿಕೆ, ಹೆದರಿಕೆಗಳು ಧಾವಿಸಿಬರುತ್ತವೆ. ಆದ್ದರಿಂದಲೇ ಆತ್ಮಶ್ರದ್ಧೆಯು ಮನುಷ್ಯನ ಸರ್ವ ಸಾಧನೆಗಳ ಕೀಲಿಕೈ ; ಮುನ್ನಡೆಯ ಹೆಬ್ಬಾಗಿಲು.

ನಾಳೆ ಎಂಬ ನಂಬಿಕೆಯಲ್ಲೂ ಅರ್ಥವಿದೆ ಕಾಯೋಣ…

ಆತ್ಮವಿಶ್ವಾಸ ಮನುಷ್ಯನ ಸರ್ವ ಸಾಧನೆಗಳ
ಕೀಲಿಕೈ ; ಮುನ್ನಡೆಯ ಹೆಬ್ಬಾಗಿಲು, ಬದುಕು ಎಂಬ ನಂಬಿಕೆಗೆ ಬುನಾದಿ.
ಆ ಕ್ಷಣ ಎಂದೆನಲ್ಲ , ಅದು ಮಹತ್ವದ ನಿರ್ಧಾರವನ್ನು ಕೈಗೊಳ್ಳುವ ಅಮೃತ ಘಳಿಗೆಯೂ ಹೌದು.

ಶತ್ರುದೇಶದ ಸೈನಿಕರು ನಮ್ಮ ಗಡಿಯನ್ನು ಸಮೀಪಿಸುತ್ತಿದ್ದಾರೆ, ಆಗಾಗ್ಗೆ ಗುಂಡಿನ ಚಕಮಕಿ ಆಗುತ್ತಿರುತ್ತದೆ… ನಮ್ಮನ್ನು ಹಣಿಯಲು ವ್ಯವಸ್ಥಿತ ಸಂಚು ರೂಪಿಸಿದ್ದಾರೆ; ಸಾಕಷ್ಟು ಮದ್ದುಗುಂಡುಗಳ ದಾಸ್ತಾನು ಮತ್ತು ಯುದ್ಧ ಪರಿಕರಗಳನ್ನು ಹೊಂದಿದ್ದಾರೆ.ಈಗ ಶತ್ರುವಿನ ಮೇಲೆ ಸದಾ ಕಣ್ಣಿಟ್ಟು ನೋಡುತ್ತಾ ಅವರ ಚಲನವಲನ ಗಮನಿಸುತ್ತಾ ಅವರ ಮೇಲೆ ದಾಳಿ ಮಾಡುವ ಸಮಯ.
ಈ ಕ್ಷಣ ನಮ್ಮ ಸೇನಾಧಿಕಾರಿ ಆ ದಾಳಿಯ ನಿರ್ಧಾರ ತೆಗೆದುಕೊಳ್ಳದಿದ್ದರೆ ಆಗುವ ಹಾನಿ ನಮ್ಮ ದೇಶಕ್ಕೆ, ನಮ್ಮ ಸೈನಿಕರಿಗೆ!!!

ಯೋಚಿಸಿ,ನಿರ್ಧರಿಸಿ ಅವರ ಮೇಲೆ ದಾಳಿ ನಡೆಸಲು ಸೇನಾಧಿಕಾರಿ ಆಜ್ಞೆ ಹೊರಡಿಸುತ್ತಾನೆ….
ಕೆಲವೇ ನಿಮಿಷ, ಗಂಟೆಗಳಲ್ಲಿ ನಮ್ಮಿಂದ ಹೊರಟ ತುಕಡಿ, ಯುದ್ಧ ವಿಮಾನಗಳು ಶತ್ರುವಿನ ಮೇಲೆ ದಾಳಿ ನಡೆಸಿ ಅವರ ಕಾರ್ಯಕ್ಷೇತ್ರವನ್ನು ಧ್ವಂಸ ಮಾಡುತ್ತವೆ… .
ನಮ್ಮ ದೇಶದ ರಕ್ಷಣೆಯ ಜೊತೆಗೆ ಶತ್ರುವಿಗೆ ಎಚ್ಚರಿಕೆಯ ಸಂದೇಶ ನೀಡಿದ್ದು …

ಆ ಕ್ಷಣದ ನಿರ್ಧಾರ ಅಲ್ಲವೇ….

ಅದು ಹೇಗೆ ಸಾಧ್ಯ…!?
ನೋಡೋಣ…….

ಮುಂದುವರೆಯುವುದು…….

ಸುನೀಲ್ ಹಳೆಯೂರು

Related post

Leave a Reply

Your email address will not be published. Required fields are marked *