ಆ ಒಂದು ಕ್ಷಣ – ಅಂಕಣ ಭಾಗ-02
ಆ ಕ್ಷಣದ ನಿರ್ಧಾರ …. ಅದು ಹೇಗೆ ಸಾಧ್ಯ…!?
ನಿರ್ದಿಷ್ಟ ಗುರಿ ಅಥವಾ ಉದ್ದೇಶವನ್ನು ಸಾಧಿಸಲು ಅಗತ್ಯವಾದ ಪೂರ್ವ ನಿರ್ಧರಿತ ಕಾರ್ಯಮಾರ್ಗ “ಯೋಜನೆ”. ಅದನ್ನು ಕಾರ್ಯರೂಪಕ್ಕೆ ತರುವುದು ನಿರ್ಧಾರ.
ಏನು ಮಾಡಬೇಕು, ಹೇಗೆ ಮಾಡಬೇಕು, ಯಾವಾಗ ಮಾಡಬೇಕು ಮತ್ತು ಅದನ್ನು ಯಾರು ಮಾಡಬೇಕು ಎಂಬುದನ್ನು ಪೂರ್ವಭಾವಿಯಾಗಿ ಯೋಚಿಸಿ ಕಾರ್ಯರೂಪಕ್ಕೆ ಇಳಿಸಿದರೆ ಅದು ನಿರ್ಧಾರ. ಯೋಜಿಸುವಿಕೆಯು ನಾವು ಎಲ್ಲಿದ್ದೇವೆ ಮತ್ತು ಎಲ್ಲಿಗೆ ಹೋಗಬೇಕು ಎಂಬುದರ ನಡುವಿನ ಸಂಪರ್ಕ ಸೇತು.ಇದು ಯೋಜನೆ ಇಲ್ಲದಿದ್ದಾಗ ಕಾರ್ಯ ಸಾಧ್ಯವಾಗದ ಸಂಗತಿಗಳನ್ನು ಕಾರ್ಯಸಾಧ್ಯವಾಗುವಂತೆ ಮಾಡುತ್ತದೆ.
“ಆ ಕ್ಷಣದ ನಿರ್ಧಾರ” ದ ಬೆನ್ನೆಲುಬು ‘ಯೋಜನೆ’. ನಾನು ಮನೆಯೊಂದನ್ನು ಕಟ್ಟಬೇಕು ಎನ್ನುವ ಉದ್ದೇಶ ಇಟ್ಟುಕೊಂಡರೆ…..ಅದಕ್ಕೆ ಅಗತ್ಯವಾದ ಭೂಮಿ ಗುರುತಿಸಬೇಕು, ಮನೆಯ ನೀಲಿನಕ್ಷೆ ತಯಾರಿಸಿಬೇಕು ಸ್ಥಳೀಯವಾಗಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ಅಲ್ಲಿ ಮಾಡಬೇಕಾದ ಕೆಲಸಗಳ ಪಟ್ಟಿ ಮಾಡಬೇಕು. ಇದಕ್ಕೆ ತಗಲುವ ವೆಚ್ಚದ ಅಂದಾಜು ಮಾಡಬೇಕು; ಹಣ ಹೊಂದಿಸಿಕೊಳ್ಳಬೇಕು, ನಂತರ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಕಾರ್ಮಿಕವರ್ಗದ ಜೊತೆಗೆ ಚರ್ಚಿಸಿ ಕಟ್ಟಡ ನಿರ್ಮಾಣ ಪ್ರಾರಂಭಿಸಬೇಕು ..ಅಲ್ಲವೇ!?
ಮನೆಯ ನಿರ್ಮಾಣ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದ “ಆ ಕ್ಷಣ” ನಮಗೆ ಅತ್ಯಂತ ಮಹತ್ವದ್ದಾಗಿರುತ್ತದೆ. ಏಕೆಂದರೆ, ಯೋಜಿಸುವಿಕೆಯು ಅನಿಶ್ಚಿತತೆಯ ಅಪಾಯವನ್ನು ಕಡಿಮೆ ಮಾಡುತ್ತದೆ . ಇದು ನಮ್ಮ ಅನುಭವಗಳಿಂದಲೂ ತಿಳಿಯುತ್ತದೆ. ಯೋಜನೆ ಎನ್ನುವುದು ನಮಗೆ ಮಾರ್ಗದರ್ಶನ ನೀಡುತ್ತದೆ; ಅನಗತ್ಯ ಚಟುವಟಿಕೆಗಳನ್ನು ಕಡಿಮೆ ಮಾಡುತ್ತದೆ. ಯೋಜನೆ ಹೊಸ ಕಲ್ಪನೆಗಳಿಗೆ ಅವಕಾಶ ಮಾಡಿಕೊಡುತ್ತದೆ. ಉದ್ದೇಶಗಳು, ಕಾರ್ಯತಂತ್ರಗಳು, ನೀತಿಗಳು ಹಾಗೂ ಕಾರ್ಯವಿಧಾನಗಳು ಯೋಜನೆ ಮತ್ತು ಆ ಕ್ಷಣದ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆ ಕ್ಷಣದ ಪಾತ್ರವೇನು!? ಚಿಂತನ-ಮಂಥನ ನಡೆಸೋಣ ನಮ್ಮ ಬದುಕಿನ ಹಲವಾರು ಘಟ್ಟಗಳಲ್ಲಿ “ಆ ಒಂದು ಕ್ಷಣ” ಪ್ರಮುಖ ಪಾತ್ರ ವಹಿಸುತ್ತದೆ.
ಹಾಗಾದರೆ ಆ ಕ್ಷಣದಲ್ಲಿ ಏನಿದೆ!?…ನಿರೀಕ್ಷೆ, ಆತಂಕ, ಉದ್ವೇಗ, ಭಯ ಇವುಗಳು ನಕಾರಾತ್ಮಕ ಮನೋಭಾವ ಇರುವ ವ್ಯಕ್ತಿಗಳಲ್ಲಿ ಕಂಡುಬಂದರೆ; ಕುತೂಹಲ, ವಿಶ್ವಾಸ, ಪ್ರಯತ್ನದಲ್ಲಿ ಕಂಡ ಸಣ್ಣ ಸಣ್ಣ ಯಶಸ್ಸುಗಳು ನಾನು ಗೆಲ್ಲಬಲ್ಲೆ ಎಂಬ ಆತ್ಮಸ್ಥೈರ್ಯ ಸಕಾರಾತ್ಮಕ ಮನೋಭಾವದ ವ್ಯಕ್ತಿಗಳಲ್ಲಿ ಕಂಡುಬರುತ್ತದೆ. ಒಬ್ಬ ವಿಜ್ಞಾನಿ ಯಾವುದೋ ಒಂದು ವಸ್ತುವಿನ ಮೇಲೆ ಪ್ರಯೋಗ ನಡೆಸುತ್ತಿದ್ದಾನೆ. ಆ ವಸ್ತುವಿನಿಂದ ಜೈವಿಕವಾಗಿ ಭೂಮಿಯೊಳಗೆ ಬೆರೆಯುವ ಬಹೂಪಯೋಗಿ ಪ್ಲಾಸ್ಟಿಕ್ ಸಾಧನವೊಂದನ್ನು ತಯಾರಿಸುವ ಉದ್ದೇಶ ಅವನದ್ದು.ಅದಕ್ಕೆ ಪೂರ್ವಭಾವಿಯಾಗಿ ಆತ ಸಾಕಷ್ಟು ಕೆಲಸ ಮಾಡಿದ್ದಾನೆ….ಇಂದು ಅದನ್ನು ಆತ ನೂರಾರು ಜನರ ಎದುರಿಗೆ ಪ್ರಾತ್ಯಕ್ಷಿಕೆ ತೋರಿಸಬೇಕು …ನೆರೆದ ಜನರಲ್ಲಿ ತೀವ್ರ ಕುತೂಹಲ ಮತ್ತು ನಿರೀಕ್ಷೆ. ಆ ಕ್ಷಣ ಬಂದೇ ಬಿಟ್ಟಿತು.. ಆತ್ಮವಿಶ್ವಾಸದಿಂದ, ನಂಬಿಕೆಯಿಂದ ಆ ವಿಜ್ಞಾನಿ ತನ್ನ ಸಂಶೋಧನೆಯ ಸಂಗತಿಗಳನ್ನು ವಿವರವಾಗಿ ತೋರಿಸುತ್ತಾ ಅದರ ಸಾಧಕ ಬಾಧಕಗಳನ್ನು ವಿಶದವಾಗಿ ತಿಳಿಸಿದ….ಆತನ ಆ ಸಂಶೋಧನೆ ಮತ್ತು ಸಾಧನೆಗೆ ತಕ್ಕ ಪ್ರತಿಕ್ರಿಯೆ ದೊರೆಯಿತು ಎಲ್ಲರೂ ಎದ್ದು ನಿಂತು ಆತನ ಪ್ರಶಂಸೆ ಮಾಡಿದ್ದಲ್ಲದೇ ಅವನಿಗೆ ಆ ವಸ್ತುವನ್ನು ಉತ್ಪಾದನೆ ಮಾಡುವ ಯೋಜನೆಗೆ ಸಹಕರಿಸುವುದಾಗಿ ಭರವಸೆ ನೀಡಿದರು. ಆ ಕ್ಷಣ ಆ ವಿಜ್ಞಾನಿ ತನ್ನ ವಿಶ್ವಾಸ ಕಳೆದುಕೊಂಡಿದ್ದರೆ!?ಏನಾಗಿರುತ್ತಿತ್ತು!?
ಬುದ್ಧಿವಂತಿಕೆ, ವಿಚಾರವಂತಿಕೆಗಳು ಪ್ರತಿಯೊಂದು ಕಾರ್ಯದ ಹಿಂದೆ ಕೆಲಸ ಮಾಡುತ್ತವೆ. ಯಾವುದೇ ಕೆಲಸ ಮಾಡುವಾಗ ಆತ್ಮವಿಶ್ವಾಸ ಇಲ್ಲದಿದ್ದರೆ ಯಶಸ್ಸು ಕಾಣಲು ಸಾಧ್ಯವಾಗುವುದಿಲ್ಲ . ಸೋಲನ್ನೇ ಅರಿಯದ ಸ್ಕಾಟ್ ಲ್ಯಾಂಡಿನ ದೊರೆ ರಾಬರ್ಟ್ ಬ್ರೂಸ್ ತನ್ನ ಸರಣಿ ಸೋಲುಗಳಿಂದ ಹಣ್ಣಾಗಿ ಒಮ್ಮೆ ಯುದ್ಧಭೂಮಿಯಿಂದ ಓಡಿಹೋಗಿ ಗುಹೆಯೊಂದರಲ್ಲಿ ಅವಿತಿದ್ದನಂತೆ. ಆ ಗುಹೆಯ ಮೂಲೆಯೊಂದರಲ್ಲಿ ಜೇಡರ ಹುಳವೊಂದು ಗುಹೆಯ ಒಂದು ಬದಿಯಿಂದ ಮತ್ತೊಂದು ಬದಿಯನ್ನು ಮುಟ್ಟುವ ಯತ್ನದಲ್ಲಿ ಕೆಳಗೆ ಬಿದ್ದರೂ ತನ್ನ ಪುಟ್ಟ ಬಲೆಗಳನ್ನು ನೇಯುತ್ತಾ ಏಳನೇ ಭಾರಿ ಯಶಸ್ವಿಯಾದದ್ದನ್ನು ಕಂಡನಾತ. ತಾನೂ ಅಂತೆಯೇ ಆಗಬೇಕೆಂದು ನಿರ್ಧರಿಸಿ ಮತ್ತೆ ಯುದ್ಧದಲ್ಲಿ ಜಯಗಳಿಸುತ್ತಾನೆ.ನಾವು ಮಾಡಬೇಕಾದುದೂ ಅಷ್ಟೇ…
ಗುರಿಯೆಡೆಗೆ ಸಾಗುವ ದಾರಿಯಲ್ಲಿ ನಮಗೆ ಆಗುವ ಅಡಚಣೆಗಳು ನಮ್ಮನ್ನು ಅಧೀರರನ್ನಾಗಿಸುತ್ತವೆ. ಅದನ್ನು ಸೋಲು ಎಂಬುವುದರ ಬದಲಾಗಿ ಸವಾಲು ಎಂದು ಸ್ವೀಕರಿಸಬೇಕು. ಸೋಲಿನ ಮೆಟ್ಟಿಲುಗಳನ್ನು ಗೆಲುವಿನ ಸೋಪಾನವಾಗಿ ಪರಿಗಣಿಸಬೇಕು. ನಮ್ಮ ಪ್ರಯತ್ನ ಬಿಡಬಾರದು. ಇರುವೆಗಳು ತಮಗಿಂತಲೂ ಭಾರವಾದ ವಸ್ತುಗಳನ್ನು ಎಡಬಿಡದೆ ಹೊತ್ತೊಯ್ಯುವುದು ಸಫಲ ಪ್ರಯತ್ನವೇ ಅಲ್ಲವೇ!!!? “ಆ ಒಂದು ಕ್ಷಣ” ಎಂಬುದು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮಹತ್ತ್ವದ ಕ್ಷಣವಾಗಿರುತ್ತದೆ. “ಆ ಒಂದು ಕ್ಷಣ” ಹತ್ತಿರವಾಗುತ್ತಿದ್ದಂತೆಯೇ ನಮ್ಮೊಳಗೇ ನೂರಾರು ಪ್ರಶ್ನೆಗಳು ಏಳತೊಡಗುತ್ತವೆ. “ರೆ!!” ಸಾಮ್ರಾಜ್ಯ ತನ್ನ ಅಧಿಪತ್ಯ ಸ್ಥಾಪಿಸಲು ಪ್ರಯತ್ನ ಮಾಡುತ್ತದೆ. ಏನಿದು “ರೆ!!?” ಸಾಮ್ರಾಜ್ಯ..!? ಉತ್ತರ ದೊರಕಲು ಸಮಯ ಬೇಡುವ ಪ್ರಶ್ನೆಗಳ ಒಂದು ದೊಡ್ಡ ಬಲೆ…ಇದು ಆ ಕ್ಷಣದಲ್ಲಿ ನಮ್ಮನ್ನು ಬಂಧಿಸಿ…ಅಧೀರರನ್ನಾಗಿಸಿ , ನಮ್ಮ ಆತ್ಮಸ್ಥೈರ್ಯ ಕುಗ್ಗಿಸುವ ನಮ್ಮೊಳಗಿನ ಶತ್ರು.. .ಹೀಗಾದರೆ!? ಏನು?ಹೀಗಾಗದಿದ್ದರೆ ಮತ್ತೇನು!? ನಾನು ಧೈರ್ಯಗೆಟ್ಟರೆ ಏನು ಮಾಡುವುದು!? ಅರೆ!? ಈ ಪ್ರಶ್ನೆಗಳಿಗೆ ಉತ್ತರಿಸಬೇಕಾದವರೂ ನಾವೇ ಅಲ್ಲವೇ?.. .ನಾ ಧೈರ್ಯಗೆಡುವುದಿಲ್ಲ…ನನ್ನ ಪ್ರಯತ್ನ ಪ್ರಾಮಾಣಿಕವಾಗಿದೆ..ನಾ ಸಾಗುತ್ತಿರುವ ಹಾದಿ ಸರಿ ಇದೆ..ನಾ ಗೆಲ್ಲುತ್ತೇನೆ ಎಂದು ನಿರ್ಧಾರ ಮಾಡಿ…ನಮಗೆ ನಾವೇ autosuggestion ಕೊಟ್ಟುಕೊಳ್ಳುವ “ಆ ಕ್ಷಣ” ಇದೆಯಲ್ಲ … ಅದೇ ನಮ್ಮ ಗೆಲುವಿನ ಮೊದಲ ಮೆಟ್ಟಿಲು…
ಒಂದು ಮ್ಯಾರಥಾನ್ ಸ್ಪರ್ಧೆ ನಡೀತಾ ಇದೆ…ಪ್ರತಿಯೊಬ್ಬ ಸ್ಪರ್ಧಿಯೂ ಬಲಶಾಲಿಯೇ ಹೌದಾದರೂ ಕೊನೆಗೆ ಗೆಲ್ಲಬೇಕಾದವ ಒಬ್ಬನೇ ಅಲ್ಲವೇ!?. ಸ್ಪರ್ಧಾಳು , ಸ್ಪರ್ಧೆಯ ಪ್ರಾರಂಭದಿಂದ ಕೊನೆಯವರೆಗೂ ಮನೋಸ್ಥೈರ್ಯ ಮತ್ತು ದೇಹದ ಕ್ಷಮತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ..ಇದು ಅತಿಮುಖ್ಯ.ಮೊದ ಮೊದಲು ಜೋರಾಗಿ ಓಡಿದರೆ ಕೊನೆಯ ಹಂತದಲ್ಲಿ ಅವನ ದೇಹದ ಕ್ಷಮತೆ ಕಡಿಮೆಯಾಗಿ ಅವನ ಸೋಲು ಸಂಭವ ಹೆಚ್ಚು ಇರುತ್ತದೆ. ಹಾಗೆಂದು ಅವನು ನಿಧಾನಗತಿಯ ಓಟದಿಂದ ಪ್ರಾರಂಭಿಸಿ ಕೊನೆಯಲ್ಲಿ ಜೋರಾಗಿ ಓಡಿದರೆ …ಅವನೇ ಗೆಲ್ಲುತ್ತಾನೆ ಎಂದು ಹೇಳಲಾಗುವುದಿಲ್ಲ…!!!ಮಧ್ಯಮ ಗತಿಯ ವೇಗ ಮಾನಸಿಕ ಸಮತೋಲನ ಮತ್ತು ದೇಹದ ಕ್ಷಮತೆ ಎರಡನ್ನೂ ಬ್ಯಾಲೆನ್ಸ್ ಮಾಡುತ್ತದೆ… ಇನ್ನೇನು ಗುರಿ ತಲುಪಲು ಒಂದೆರೆಡು ನಿಮಿಷ ಇದೆ ಎನ್ನುವಾಗ ತನ್ನ ವೇಗ ಹೆಚ್ಚಿಸುತ್ತಾನೆ ವಿಶ್ವಾಸವೂ ಇಮ್ಮಡಿಗೊಂಡು ಆತ ಅಂತಿಮ ಗುರಿ ತಲುಪುತ್ತಾನೆ. “ಆ ಕ್ಷಣ” ಇದೆಯಲ್ಲ …ಅದೇ ನಮ್ಮ ಗೆಲುವಿನ ಬಲ.
ಒಬ್ಬ ವ್ಯಕ್ತಿ ಆಸ್ಪತ್ರೆಯ ತೀವ್ರ ನಿಗಾ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಪರಿಸ್ಥಿತಿ ಗಂಭೀರವಾಗಿದೆ. ಅವನನ್ನು ನೋಡಿಕೊಳ್ಳುವ ವೈದ್ಯರ ಮುಂದೆ ಎರಡೇ ಆಯ್ಕೆ ಇದೆ. ರೋಗಿಗೆ ಆಪರೇಷನ್ ಮಾಡಿದರೆ ಅವನಿಗೆ ಆಗಿರುವ ಅಪಾಯದ ತೀವ್ರತೆಯನ್ನು ಕಡಿಮೆ ಮಾಡಿ ಸೂಕ್ತವಾದ ಚಿಕಿತ್ಸೆ ಕೊಡುತ್ತಾ ಕಾಲಾಂತರದಲ್ಲಿ ಅವನನ್ನು ಸಹಜವಾದ ಸ್ಥಿತಿಗೆ ತರುವುದು…ಇಲ್ಲವೇ ಅತ್ಯಂತ ಕ್ಲಿಷ್ಟಕರವಾದ ಈ ಆಪರೇಷನ್ ಕೈ ಬಿಡುವುದು….ಏಕೆಂದರೆ ಈ ಆಪರೇಷನ್ ಕೂಡಾ ಸಾವು ಬದುಕಿನ ಪ್ರಶ್ನೆಯೇ ಆಗಿದೆ. ಇಂತಹ ಸಂದರ್ಭದಲ್ಲಿ ನುರಿತ ವೈದ್ಯ ಏನು ಮಾಡುತ್ತಾನೆ!? ಪರಿಸ್ಥಿತಿಯನ್ನು ರೋಗಿಯ ಕುಟುಂಬದವರಿಗೆ ಮನವರಿಕೆ ಮಾಡಿಕೊಟ್ಟು ಅವರಿಗೆ ಧೈರ್ಯ ತುಂಬಿ ಸಾಂತ್ವನ ಹೇಳುತ್ತಾ ಆಪರೇಷನ್ ಮಾಡಲು ಅಣಿಯಾಗುತ್ತಾನೆ. ವೈದ್ಯನಿಗೆ ವಿಶ್ವಾಸ ಇದೆ…Line of treatment ಬಗ್ಗೆ ಅರಿವಿದೆ…ಎಂದಾದಾಗ ಆಪರೇಷನ್ ಯಶಸ್ವಿಯಾಗಿ ಮುಗಿದು ರೋಗಿಯೂ ಚೇತರಿಸಿಕೊಳ್ಳುತ್ತಾನೆ. ಅದೇ ವೈದ್ಯ ಕೊಂಚಮಟ್ಟಿಗೆ ವಿಚಲಿತನಾಗಿ ತನ್ನಲ್ಲಿ ಆತ್ಮವಿಶ್ವಾಸ ಕಳೆದುಕೊಂಡರೆ..ರೋಗಿಯ ಜೀವ ಮತ್ತಷ್ಟು ತೊಂದರೆಗೆ ಸಿಲುಕಿಕೊಳ್ಳುತ್ತದೆ. ಒಬ್ಬ ವ್ಯಕ್ತಿ ಉತ್ತಮ ವೈದ್ಯ ಎಂದು ಕರೆಸಿಕೊಳ್ಳಲು ತನ್ನ ಖಾಸಗಿ ಜೀವನಕ್ಕಿಂತ ವೈದ್ಯಕೀಯ ಜೀವನಕ್ಕೆ ಹೆಚ್ಚು ಮಹತ್ವ ಕೊಡಬೇಕಾಗುತ್ತದೆ. ನೊಂದ ರೋಗಿಯ ಬದುಕಿನಲ್ಲಿ ಭರವಸೆ ಮೂಡಿಸಬೇಕಾಗುತ್ತದೆ. ಎಷ್ಟೇ ಸುಸ್ತು ಇದ್ದರೂ ಅದನ್ನು ತೋರಿಸಿಕೊಳ್ಳದೆ ಅವನನ್ನು ನಂಬಿ ಬಂದ ರೋಗಿಯನ್ನು ಬದುಕಿಸುವ ಅಥವಾ ರೋಗವನ್ನು ಗುಣಪಡಿಸುವುದೇ ಅವರ ಮುಖ್ಯ ಗುರಿಯಾಗಿರುತ್ತದೆ. ಅದೇ ಅವರ ವೃತ್ತಿಧರ್ಮ. ನೀಡಬೇಕಾದ ಚಿಕಿತ್ಸೆ ಮತ್ತು ಅದರ ಸಮಯದ ನಿರ್ಧಾರ ಮಾಡಿ ತಾಳ್ಮೆ,ಶ್ರದ್ಧೆ ಮತ್ತು ವಿಶ್ವಾಸದಿಂದ ವೈದ್ಯ ತನ್ನ ಕಾರ್ಯವನ್ನು ಮಾಡಿದಾಗ…ಎಲ್ಲರ ಮುಖದಲ್ಲಿ ಸಂತಸದ ಹೊನಲು!!! *ಆ ಕ್ಷಣದ* ಮಹತ್ವ ವರ್ಣಿಸಲು ಅಸಾಧ್ಯ….
ಸುನೀಲ್ ಹಳೇಯೂರು