ಆ ಒಂದು ಕ್ಷಣ….. ನಿಮ್ಮೊಂದಿಗೆ – ಸುನೀಲ – 5
ಎಲ್ಲರೂ ಯಶಸ್ಸಿಗಾಗಿ ಹಾತೊರೆಯುತ್ತಾರೆ.ಆದರೆ ವೈಫಲ್ಯ ಎದುರಿಸಲು ಕಷ್ಟವಾಗುತ್ತದೆ; ಅದು ಇಷ್ಟವಾಗುವುದಿಲ್ಲ.
ಒಂದು ನೆನಪಿನಲ್ಲಿಡಬೇಕು: ಯಶಸ್ಸು ಹಾಗೂ ವೈಫಲ್ಯ ನಿರ್ದಿಷ್ಟ ಘಟನೆಗಳನ್ನು ವಿವರಿಸುವ ಪದಗಳೇ ವಿನಃ ವ್ಯಕ್ತಿಗಳನ್ನಲ್ಲ. ಅಂದರೆ,ನಾವು ಕೆಲವನ್ನು ಸಾಧಿಸುವಲ್ಲಿ ಯಶಸ್ವಿಯಾಗಬಹುದು ಅಥವಾ ವಿಫಲರಾಗಿರಬಹುದು; ಕೆಲ ಮೈಲಿಗಲ್ಲುಗಳನ್ನು ತಲುಪುವಲ್ಲಿ ಸಫಲವಾಗಬಹುದು ಇಲ್ಲವೇ ವಿಫಲರಾಗಬಹುದು.
ಯಶಸ್ಸು ಹಾಗೂ ವೈಫಲ್ಯ ಎನ್ನುವುದನ್ನು ನಮ್ಮ ಜೀವನದಲ್ಲಿ ಒಂದು ನಿರ್ದಿಷ್ಟ ಘಟನೆಯನ್ನು ನಾವು ಹೇಗೆ ನಿರ್ವಹಿಸಿದ್ದೇವೆ ಎನ್ನುವುದನ್ನು ವಿವರಿಸುವ ಸಾಧನವಾಗಿ ಬಳಸುತ್ತೇವೆ.
ಅಂತೆಯೇ ನಾವು ನಮ್ಮ ಉದ್ಯೋಗ ಕಳೆದುಕೊಂಡೆವು ಎಂದುಕೊಳ್ಳೋಣ. ನಮ್ಮ ಸರ್ವಸ್ವವೂ ಮುಗಿದೇ ಹೋಯಿತು ಎಂದು ನಾವು ಅಂದುಕೊಳ್ಳುತ್ತೇವೆ. ನಾವು ಜೀವನದಲ್ಲಿ ಕಳೆದುಕೊಂಡದ್ದನ್ನು ಇನ್ನೆಂದೂ ಪಡೆಯಲು ಸಾಧ್ಯವೇ ಇಲ್ಲ ಎಂದು ಹತಾಶರಾಗುತ್ತೇವೆ. ನಾವು ಆ ಉದ್ಯೋಗ ಅಥವಾ ನಿರ್ಧಾರದ ಬಗ್ಗೆ ಮಾತ್ರ ನಾವು ಯೋಚಿಸುತ್ತೇವೆ. ಹಾಗೂ ಇತರ ಹಲವು ವಿಧಗಳಲ್ಲಿ ಇಡೀ ಜೀವನದಲ್ಲಿ ನಾನು ಹಿಂದಿನಂತಾಗಲು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಬರುತ್ತೇವೆ.
ಹಾಗಾದರೆ ಆ ಕ್ಷಣದ ಮಹತ್ವ ಏನು!?
ನವ್ಯಜೀವಿಯ ಈ ಚೌಪದಿಯನ್ನು ನೋಡೋಣ
ಮುಳುಗುತಿಹ ದೋಣಿಯೊಳೆ ಮುಳುಗಿದವರುಂಟೇನು?|
ಉಳಿಯಲೆಂದೆಲ್ಲರೂ ಹೊರ ಹಾರಿದವರೆ||
ಮುಳುಗು ದೋಣಿಯೊಳಾರು ಯಾನಗೈವವರಿಲ್ಲ|
ಉಳಿದು ಬೆಳೆವುದೆ ಬದುಕು – ನವ್ಯಜೀವಿ||
ಈ ಮುಕ್ತಕ ಕಾರ್ಪೊರೇಟ್ ಜಗತ್ತಿನ ಒಂದು ಕಹಿ ಸತ್ಯವನ್ನು ಬಿಂಬಿಸುತ್ತದೆ. ಕಂಪನಿಯೊಂದು ಲಾಭದಾಯಕವಾಗಿ ನಡೆಯುತ್ತಿದ್ದಾಗ, ಅದು ಸರಾಗವಾಗಿ ಸಾಗುವ ನೌಕೆಯೇ ಹೌದು. ಎಲ್ಲರೂ ಅದರೊಡನೆ ವ್ಯವಹಾರ ನಡೆಸಲು ತಾ ಮುಂದು ನಾ ಮುಂದು ಎಂದವರೇ. ಆದರೆ, ಆ ನೌಕೆಯಲ್ಲಿ ಬಿರುಕು ಬಿಟ್ಟು ಅದು ಮುಳುಗುವುದು ಖಚಿತ ಎಂದಾಗ, ಅದರ ನಂಭಿಕಸ್ಥ ನೌಕರರೇ ಅದರಿಂದ ತಕ್ಷಣ ಹೊರಕ್ಕೆ ಹಾರಿಬಿಡುತ್ತಾರೆ. ಇದು ವಾಸ್ತವ. ಕಂಪನಿ ನಡೆಸುವ ಮಾಲಿಕರು ಹಾಗೂ ಹಿರಿಯ ಅಧಿಕಾರಿಗಳು ಈ ಸತ್ಯವನ್ನು ಸದಾ ಅರಿತಿದ್ದು, ತಮ್ಮ ನೌಕೆಗೆ ಬಿರುಕು ಬಿಟ್ಟ ಆ ಕ್ಷಣವೇ ಅದನ್ನು ಮುಚ್ಚುವತ್ತ ಎಚ್ಚರಿಕೆ ವಹಿಸಬೇಕು.
ಹಾಗೆಯೇ, ಬದುಕು ಎಂಬುವ ದೋಣಿಯಲ್ಲಿ, ನಾವೆಲ್ಲರೂ ಪಯಣಿಗರೇ! ಬಾಳನೌಕೆಯನ್ನು ಸರಿದೂಗಿಸಿಕೊಂಡು ಪಯಣಿಸಬೇಕಾದುದು ನಮ್ಮ ಕರ್ತವ್ಯವೂ ಹೌದು.
ನಮ್ಮ ಈ ಪಯಣದಲ್ಲಿ ಕೊಂಚ ಮಟ್ಟಿಗೆ ಏರುಪೇರಾಗುವುದು ಸಹಜ.ಆದರೆ,ಗಮನವಿಡಬೇಕಾದದ್ದು ಏನೆಂದರೆ!! ಒಂದು ಸಣ್ಣ ರಂಧ್ರ,ಒಂದು ಸಣ್ಣ ತಪ್ಪು ನಮ್ಮನ್ನು ಕಂಗೆಡಿಸಬಹುದು. ಜೀವಹಾನಿಯೂ ಆಗಬಹುದು.
ಜೀವನ ಸಾಗಿಸಲೇಬೇಕೆಂಬ ಧ್ಯೇಯ ಉಳ್ಳವರು ಮುಳುಗುವ ದೋಣಿಯಲ್ಲಿ ಪ್ರಯಾಣಿಸುವುದಿಲ್ಲ. ಹೊರಗೆ ಹಾರಿ ಈಜುತ್ತಾ ದಡ ಸೇರಿ ಜೀವ ಉಳಿಸಿಕೊಂಡು ಮತ್ತೆ ಮುಂದಿನ ಪ್ರಯಾಣಕ್ಕೆ ಪರ್ಯಾಯದ ಹಾದಿ ಹುಡುಕುತ್ತಾರೆ.
ಮುಳುಗುವುದರ ಬದಲು ,ಉಳಿದು ಬೆಳೆಯುತ್ತಾ ಹೋಗುವುದೇ ಬದುಕು ಎನ್ನುವ ಒಂದು ಅತ್ಯಮೂಲ್ಯವಾದ ಸಂದೇಶ ಈ ಚೌಪದಿಯಲ್ಲಿ ಇದೆ.
ಹೌದಲ್ಲ !!!ಜೀವನಾನುಭವದ ಮೂಲಕ,ಹೊಸ ಚಿಂತನೆಗೆ,ಸದ್ವಿಚಾರಗಳಿಗೆ ನನ್ನ ಮನಸ್ಸು ತೆರೆದುಕೊಂಡು ಸತ್ಕಾರ್ಯಗಳನ್ನು ಮಾಡುತ್ತ ಹೋದರೆ ಆ ಕ್ಷಣದ ಮಹತ್ವದ ಅರಿವು ಭೌತಿಕವಾಗಿ,ಬೌದ್ಧಿಕವಾಗಿ ಮತ್ತು ಭಾವನಾತ್ಮಕವಾಗಿ ಆಗುತ್ತದೆ.
‘ಸಾವಿನ ಬಗ್ಗೆ ಮಾತನಾಡುವುದು ಸುಲಭ. ಸಾವು ಹೀಗೆ ಬರಬಹುದೋ ಹಾಗೆ ಬರಬಹುದೋ ಎಂದು ಕಲ್ಪಿಸಿಕೊಳ್ಳುವುದೂ ಸುಲಭ. ಸಾವು ಹೀಗೇ ಬರಲಿ ಎಂದು ಆಸೆ ಪಡುವುದೂ ಸುಲಭ. ತುಂಬು ಆರೋಗ್ಯವಂತನೊಬ್ಬ ಸಾವಿನ ಬಗ್ಗೆ, ಆ ಕ್ಷಣದ ತಲ್ಲಣದ ಬಗ್ಗೆ, ಸಾವಿನ ಅನಿವಾರ್ಯತೆಯ ಬಗ್ಗೆ ಭಾಷಣ ಹೊಡೆಯುವುದು, ಪ್ರಬಂಧ ಬರೆಯುವುದು ಇನ್ನೂ ಸುಲಭ. ಆದರೆ ಸಾವೆಂಬುದು ಕಣ್ಮುಂದೆಯೇ ಗಿರಿಗಿಟ್ಲೆ ತಿರುಗುತ್ತಿದೆ ಮುಂದಿನ ಕೆಲವೇ ದಿನಗಳಲ್ಲಿ ನನ್ನ ಬದುಕೇ ಮುಗಿದು ಹೋಗಲಿದೆ ಎಂದು ಗೊತ್ತಾದಾಗ ನಗು ನಗುತ್ತಲೆ ಬದುಕು ಸುಂದರ, ಸಂತೋಷದಿಂದ ಇರಿ ಎಂದು ಹೇಳುವುದಿದೆಯಲ್ಲ ಅದು ಕಷ್ಟ.
ಅಮೆರಿಕದ ಕಾರ್ನಿಗಿ ಮೆಲನ್ ವಿಶ್ವವಿದ್ಯಾಲಯದಲ್ಲಿ ಗಣಕವಿಜ್ಞಾನದ ಪ್ರಾಧ್ಯಾಪಕನಾಗಿದ್ದ ರ್ಯಾಂಡಿ ಪಾಶ್ .
ಆತನಿಗೆ ತನ್ನ ೪೧ನೇ ವಯಸ್ಸಿನಲ್ಲಿ ವಾಸಿಯಾಗದ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಕಾಯಿಲೆ ಬಂದೆರಗಿತು.
ಪಾಶ್ ಆ ಹೆಮ್ಮಾರಿಯನ್ನು ಮೆಟ್ಟಿ ನಿಲ್ಲುವ ಪಣ ತೊಡುತ್ತಾನೆ. ಆದರೆ ಈ ರೋಗ ಗುಣವಾಗದೆ ಇರುವ ಹಂತ ತಲುಪಿರುತ್ತದೆ.ಇದೆಲ್ಲ ಅರಿತ ಪಾಶ್ ಜೀವನೋತ್ಸಾಹದಿಂದ ಬದುಕಿದ ರೀತಿ ಅನನ್ಯ. ತನ್ನ ಮೋಹದ ಮಡದಿ ಜೈ ಹಾಗೂ ಮೂರು ಸಣ್ಣ ಸಣ್ಣ ಮಕ್ಕಳೊಂದಿಗೆ ಪ್ರತಿ ಕ್ಷಣವನ್ನೂ ಸ್ಮರಣೀಯವಾಗಿ ಇರುವಂತೆ ನೋಡಿಕೊಳ್ಳುತ್ತಾನೆ.
ನಾನು ಸಾಯುವುದು ಗ್ಯಾರಂಟಿ ಅನ್ನಿಸಿದ ಮೇಲೆ ಬದುಕನ್ನು ಪ್ರೀತಿಸುತ್ತಲೇ ಸಾವನ್ನು ಒಪ್ಪಿಕೊಂಡು ಬದುಕಿನ ಕಥೆಯನ್ನು ಹೇಳಿದವನು ರ್ಯಾಂಡಿ ಪಾಶ್.
ಸಾವಿನ ಕೊನೆ ಸಂಧರ್ಭದಲ್ಲಿ ಅಲ್ಲಿನ ಪ್ರಸಿದ್ದ ವಿಶ್ವವಿದ್ಯಾಲಯ ಅಂತಿಮ ಉಪನ್ಯಾಸ ನೀಡುವ ಅವಕಾಶ ಒದಗಿಸಿಕೊಡುತ್ತದೆ.ಈ ಕ್ಷಣಗಳನ್ನು ಸರಿಯಾಗಿ ಉಪಯೋಗಿಸಿಕೊಂಡ ರ್ಯಾಂಡಿ ಸಾವಿನ ಬಗ್ಗೆ ಮಾತಾಡಲಿಲ್ಲ. ಬದಲಿಗೆ ಬದುಕಿನ ಬಗ್ಗೆ, ಬದುಕನ್ನು ಸಾರ್ಥಕಗೊಳಿಸಿಕೊಳ್ಳುವ ಬಗ್ಗೆ, ಕನಸುಗಳ ಬಗ್ಗೆ, ಅವುಗಳನ್ನು ನನಸು ಮಾಡಿಕೊಳ್ಳುವ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡುತ್ತಾನೆ. ಉಪನ್ಯಾಸಕ್ಕೆ ಮುನ್ನ ತನ್ನ ಕ್ಯಾನ್ಸರ್ ಪೀಡಿತ ಅಂಗದ ಚಿತ್ರವನ್ನು ತೋರಿಸಿ, ಅಲ್ಲಿನ ಕ್ಯಾನ್ಸರ್ ಗಡ್ಡೆಗಳ ಬಗ್ಗೆ ಮಾಹಿತಿ ನೀಡಿದ. ನಂತರ ಮಾತು ಮುಂದುವರಿಸಿದ್ದ ರ್ಯಾಂಡಿ, ‘ನಾನು ಮೂರರಿಂದ ಆರು ತಿಂಗಳು ಮಾತ್ರ ಬದುಕುವುದಾಗಿ ವೈದ್ಯರು ಹೇಳಿದ್ದಾರೆ. ಅದೂ ಒಂದು ತಿಂಗಳ ಹಿಂದೆ ಹೀಗೆ ಹೇಳಿದ್ದಾರೆ. ಸರಿ! ಇದು ಇರುವುದೇ ಹೀಗೆ, ಅದನ್ನೇನೂ ಬದಲಿಸಲು ಸಾಧ್ಯವಿಲ್ಲವಲ್ಲ ಎನ್ನುತ್ತಾನೆ.
ಇನ್ನೂ ಸಾಕಷ್ಟು ಮಾತಾಡೋಣ ಆ ಕ್ಷಣಗಳ ಕುರಿತು…..
ಸುನೀಲ್ ಹಳೆಯೂರು