ಆ ಒಂದು ಕ್ಷಣ ಅಂಕಣ ಭಾಗ – 8
ನಮ್ಮ ಜೀವನದ ದಿಕ್ಕನ್ನು ಬದಲಿಸಿ ಬಿಡುವಂತಹ ನಿರ್ಧಾರ ಆಗುವುದು ಕೇವಲ ಒಂದು ಕ್ಷಣದಲ್ಲಿ. ನಾವು ಆ ಕ್ಷಣಕ್ಕೆ ತೆಗೆದುಕೊಳ್ಳುವ ಒಂದೇ ಒಂದು ನಿರ್ಧಾರದಿಂದಾಗಿ ನಮ್ಮ ಇಡೀ ಬದುಕು ನಿರ್ಧಾರವಾಗಬಹುದು. ನಮ್ಮ ಬದುಕಿನ ಅನೇಕ ಬದಲಾವಣೆಗಳು ಆ ಒಂದು ನಿಮಿಷದಲ್ಲಿ ಅಡಗಿಕೊಂಡರುತ್ತದೆ.
ಆ ಒಂದು ಕ್ಷಣದ ನಿರ್ಧಾರಗಳು ಒಂದಕ್ಕೊಂದು ತಳಕು ಹಾಕಿಕೊಂಡಿರುತ್ತವೆ ಉದಾಹರಣೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿ ಬೇಗ ಬೇಗನೆ ಪರೀಕ್ಷೆಯನ್ನು ಬರೆದು ನಿಗದಿತ ಸಮಯಕ್ಕಿಂತ ಮುಂಚೆಯೇ ಎದ್ದು ಬಂದಿದ್ದಾನೆ ಎಂದುಕೊಳ್ಳೋಣ. ಫಲಿತಾಂಶ ಬಂದಾಗ ಆತನಿಗೆ ಕಡಿಮೆ ಅಂಕಗಳು ಬಂದು ನಪಾಸಾಗಿದ್ದ. ಆತನಿಗೆ ಅನ್ನಿಸಿದ್ದು ಮತ್ತೊಂದು ಕ್ಷಣ ನಾನು ಅಲ್ಲಿ ಇದ್ದು ಸಮಯ ಮುಗಿಯುವವರೆಗೂ ಒಂದಷ್ಟು ಆಲೋಚಿಸಿ ಉತ್ತರ ಬರೆಯಬಹುದಿತ್ತು ಎಂದು. ಆದರೆ ಕಾಲ ಮಿಂಚಿ ಹೋಗಿ ಆತ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ ,ಅವನ ಶೈಕ್ಷಣಿಕ ವರ್ಷದಲ್ಲಿ ಒಂದು ವರ್ಷ ತಡವಾಯಿತು ಕೊನೆ ಕ್ಷಣದಲ್ಲಿ ಮಾಡಿದ ತಪ್ಪು, ಅವನನ್ನು ಒಂದು ವರ್ಷ ಕಾಯುವಂತೆ ಮಾಡಿತ್ತು.
ನಾವು ಕಾಲನ ಜೊತೆ ಸಾಗಬೇಕಾಗಿರುವುದರಿಂದ ನಮ್ಮ ಪ್ರಯತ್ನವೂ ಕೂಡ ಆ ಕ್ಷಣಗಳ ಜೊತೆಗೆ ಸಾಗಬೇಕು ನಾವು ಕಷ್ಟ ಪಟ್ಟರೆ ಮಾತ್ರ ಆ ಕ್ಷಣ ನಮಗೆ ಅರ್ಥಪೂರ್ಣವಾಗುತ್ತದೆ ಹಾಗೂ ನಿರ್ಧಾರಗಳನ್ನ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ನಾವು ಸೋಮಾರಿಯಂತೆ ಬದುಕನ್ನು ಕಳೆಯಲು ಯಾವ ನಿರ್ಧಾರವೂ ಬೇಕಿಲ್ಲ.
ಹತ್ತಾರು ವರ್ಷಗಳು ಶ್ರಮವಹಿಸಿ ಓದಿ ಕೆಲಸಕ್ಕಾಗಿ ಅರ್ಜಿ ಗುಜರಾಯಿಸಿ ಸಂದರ್ಶನದ ವೇಳೆಯಲ್ಲಿ ಸಿಗುವ ಆ ಕ್ಷಣ ನಮಗೆ ಮಹತ್ವದ್ದು ಎನಿಸುತ್ತದೆ . ಆ ಕೊನೆಯ ಕ್ಷಣದಲ್ಲಿ ಕೊಡುವ ಉತ್ತರ ನಮಗೆ ನೌಕರಿ ದೊರೆಯುವಂತೆ ಮಾಡುತ್ತದೆ. ಆ ಕ್ಷಣಗಳನ್ನು ನಾವು ಬದುಕಿನ ಭಾಗ ಎಂದು ತೀರ್ಮಾನಿಸುತ್ತೇವೆ.
ನಾವು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ನಮ್ಮ ಮನಸ್ಸು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾಮಾನ್ಯವಾಗಿ ನಮ್ಮ ಮನಸ್ಸು ನಕಾರಾತ್ಮಕವಾಗಿ ಯೋಚಿಸುತ್ತದೆ. ನನ್ನಿಂದ ಈ ಕೆಲಸ ಸಾಧ್ಯವೇ ಇದನ್ನು ಮಾಡಲಿಕ್ಕೆ ಆಗುವುದೇ ಎನ್ನುವ ಮನಸ್ಥಿತಿ ಮೊದಲಿಂದಲೇ ಇರುತ್ತದೆ ಹಾಗಾಗಿ ಪ್ರಯತ್ನವೂ ಕೂಡ ಕಡಿಮೆಯಾಗುತ್ತದೆ. ವರ್ಷಗಳಿಂದ ಕಾಯ್ದುಕೊಂಡು ಬಂದಿದ್ದ ಶ್ರದ್ದೆ ಏಕಾಗ್ರತೆ ಪ್ರಯತ್ನಿಶೀಲತೆ ಎಲ್ಲವನ್ನು ಕೊನೆಯ ಕ್ಷಣಗಳಲ್ಲಿ ನಾವು ಕಳೆದುಕೊಂಡು ಬಿಡುತ್ತೇವೆ. ಯಾವಾಗ ನಕಾರಾತ್ಮಕತೆ ನಮ್ಮ ಮನಸ್ಸಿನಲ್ಲಿ ಮನೆ ಮಾಡುತ್ತದೆಯೋ ಅಂದು ಆ ಕ್ಷಣ ಎನ್ನುವುದು ಯುಗಗಳಂತೆ ತೋರುತ್ತದೆ. ನಾನು ಹಿಡಿದು ಕೆಲಸವನ್ನು ಮುಗಿಸುತ್ತೇನೆ ಅಂದುಕೊಂಡ ಗುರಿಯನ್ನು ಮುಟ್ಟುತ್ತೇನೆ ಎನ್ನುವಂತಹ ಸಕಾರಾತ್ಮಕ ಮನೋಭಾವ ಕೊನೆಯ ಕ್ಷಣದವರೆಗೂ ಇದ್ದಿದ್ದೆ ಆದಲ್ಲಿ ನಾವು ಕೂಡ ಸಾಧನೆಯ ಹಾದಿಯಲ್ಲಿ ಸಾಗಬಹುದು.
ಕಾಲವಕ್ಷಯದೀಪವದರ ಪಾತ್ರೆಯಪಾರ ।
ಬಾಳ್ ಅದರಿನಾದೊಂದು ಕಿರುಹಣತೆ ಮಿಣಕು ॥
ಗಾಳಿಯಾರಿಪುದೊಂದನಿನ್ನೊಂದ ಹೊತ್ತಿಪುದು ।
ತೈಲಧಾರೆಯಖಂಡ – ಮಂಕುತಿಮ್ಮ
ಕಾಲವೆಂಬುದು ಅವ್ಯಾಹತವಾಗಿ, ನಿರಂತರ ಉರಿಯುವ ದೀಪ. ಅದರ ಪಾತ್ರ ಬಹಳ ದೊಡ್ಡದು. ಒಂದು ಕ್ಷಣ ಮುಗಿದರೆ ಮತ್ತೊಂದು ಕ್ಷಣ ನಮ್ಮ ಬಾಳು ಕಾಲದ ಈ ಅವ್ಯಾಹತ ಪ್ರವಾಹದಲ್ಲಿ ಉರಿಯುವ ಒಂದು ಸಣ್ಣ ಹಣತೆಯಂತೆ. ಗಾಳಿಯು ಒಂದು ಹಣತೆಯನ್ನು ಆರಿಸಿದರೆ ಇನ್ನೊಂದು ದೀಪ ಹೊತ್ತಿಕೊಳ್ಳುವುದು.
ಜೀವನದ ತೈಲಧಾರೆಗೆ ಅಂತ್ಯವೇ ಇಲ್ಲ ಎಂಬುದನ್ನು ಮನಗಂಡು ಕಾಲನೊಡನೆ ನಾವು ಸಾಗುತ್ತಿರಬೇಕು.
ಸುನೀಲ್ ಹಳೆಯೂರು