ಇರುಳ ಹಕ್ಕಿಯ ಅಳಿವು ಉಳಿವು – ಜೆರ್ಡನ್ಸ್ ಚಿಟವ
“ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ” ನಮ್ಮ ಭಾರತದಲ್ಲಿನ ಪ್ರಕೃತಿ ಸಂರಕ್ಷಣೆ ಹಾಗು ವನ್ಯಜೀವಿ ಸಂಶೋಧನೆಯ ಒಂದು ಪ್ರಖ್ಯಾತ ಸರ್ಕಾರೇತರ ಸಂಸ್ಥೆ (NGO). ನಮ್ಮ ಪ್ರಕೃತಿಯ ಬಗ್ಗೆ ಸಾರ್ವಜನಿಕರಲ್ಲಿ ಆಸಕ್ತಿ ಹಾಗು ಜಾಗೃತಿ ಮೂಡಿಸಿ, ಅಳಿವಿನಂಚಿನ ಜೀವಿಗಳನ್ನು ಗುರುತಿಸುತ್ತ ಅವುಗಳ ಸಂರಕ್ಷಣೆಗೆ ಹಲವಾರು ಕ್ರಮಗಳನ್ನು ಅಳವಡಿಸಿ ಅದರಲ್ಲಿ ಬಹುಪಾಲು ಯಶಸ್ವಿಯನ್ನು ಕಂಡಿರುವ ಈ ಸಂಸ್ಥೆಯಲ್ಲಿ ಪ್ರಖ್ಯಾತ ವನ್ಯ ವಿಜ್ಞಾನಿಗಳು, ಹಾಗು ಪ್ರಕೃತಿ ಪ್ರಿಯರು ಕೆಲಸ ಮಾಡುತ್ತಾ ಬಂದಿದ್ದಾರೆ. ನಮ್ಮ ಭಾರತದ ಪಕ್ಷಿ ಮನುಷ್ಯ ಎಂದೇ ಖ್ಯಾತರಾದ ಡಾ. ಸಲೀಮ್ ಅಲಿ ಕೂಡ ಈ ಸಂಸ್ಥೆಯ ಜೊತೆಗೂಡಿ ಹಲವಾರು ಯಶಸ್ವಿ ಕೆಲಸಗಳನ್ನು ಮಾಡಿದ್ದಾರೆ.
ಇಂತಹದೊಂದು ಸಂಸ್ಥೆಯ ಕಡೆಯಿಂದ ಅಳಿದ ಪಕ್ಷಿಗಳ ಬಗ್ಗೆ ಸಂಶೋಧಿಸಲು ಜೀವಶಾಸ್ತ್ರಜ್ಞ ಹಾಗು ಪರಿಸರವಾದಿ “ಭರತ್ ಭೂಷಣ್” ರವರು 1986 ರಲ್ಲಿ ಆಂಧ್ರಪ್ರದೇಶದ ಕಡಪ ಜಿಲ್ಲೆಯ ರೆಡ್ಡಿಪಲ್ಲಿ ಎಂಬ ಹಳ್ಳಿಯಲ್ಲಿ ಬೀಡುಬಿಟ್ಟುರುತ್ತಾರೆ. ಅವರು ಆ ಸುತ್ತಮುತ್ತಲ ಹಳ್ಳಿಯ ಪ್ರಾಣಿ ಪಕ್ಷಿಗಳನ್ನು ಗುರುತಿಸುವ ಹಾಗು ಹಿಡಿಯುವ ಅನೇಕ ಸ್ಥಳೀಯವಾಸಿಗಳನ್ನು ಪರಿಚಯ ಮಾಡಿಕೊಂಡು ತಮ್ಮ ಸಂಶೋದನೆಯಲ್ಲಿ ನಿರತರಾಗಿದ್ದಾಗ ಒಂದು ದಿನ ‘ಐತಾನ‘ ಎಂಬ ಸ್ಥಳೀಯ ಭರತ್ ಭೂಷಣ್ ರವರನ್ನು ಸಂಪರ್ಕಿಸಿ ತಾನು ರಾತ್ರಿ ಹೊತ್ತು ಸಂಚರಿಸುತ್ತಿದ್ದ ಹಕ್ಕಿಯೊಂದನ್ನು ನೋಡಿದನೆಂದು ಹಾಗು ಅದು ನನನ್ನು ನೋಡಿದ ಕೂಡಲೇ ಹಾರದೆ ಓಡಿಹೋಯಿತು ಎಂದು ವಿವರಿಸುತ್ತಾನೆ. ತಕ್ಷಣ ಭರತ್ ಭೂಷಣ್ ರವರು ಅವನು ತೋರಿಸಿದ ಪ್ರದೇಶದಲ್ಲೆಲ್ಲಾ ಹುಡುಕಾಡಿ ಆ ಹಕ್ಕಿಯು ಕಾಣದೆ ವಾಪಸ್ಸಾಗುತ್ತಾರೆ. ಕೆಲದಿನಗಳ ನಂತರ ಅದೇ ಐತಾನ ಮತ್ತೊಮ್ಮೆ ಭರತ್ ಭೂಷಣ್ ರವರು ಇಳಿದುಕೊಂಡಿದ್ದ ಹೋಟೆಲ್ ಗೆ ಕರೆಮಾಡಿ ಆ ಹಕ್ಕಿಯನ್ನು ಹಿಡಿದಿಟ್ಟುಕೊಂಡಿರುವೆನೆಂದು ತಕ್ಷಣ ಹಳ್ಳಿಗೆ ಬರಬೇಕೆಂದು ತಿಳಿಸುತ್ತಾನೆ. ಅವಸರದಿಂದ ಧಾವಿಸಿದ ಭರತ್ ಭೂಷಣ್ ರವರಿಗೆ ಕಂಡದ್ದು ಸಂಪೂರ್ಣವಾಗಿ ಅಳಿದು ಹೋಗಿದೆ ಎನ್ನಲಾದ “ಜೆರ್ಡನ್ಸ್ ಕೋರ್ಸರ್” ಎಂಬ ಪುಟ್ಟ ನೆಲದ ಹಕ್ಕಿ.
ತಕ್ಷಣ ಭರತ್ ಭೂಷಣ್ ರವರು ಮುಂಬೈ ನಲ್ಲಿನ “ಡಾ. ಸಲೀಮ್ ಅಲಿ” ಯವರಿಗೆ ಕರೆಮಾಡಿ ಆ ಹಕ್ಕಿಯ ಚಹರೆ ಮತ್ತು ಮಿಕ್ಕ ವಿವರಗಳನ್ನು ತಿಳಿಸುತ್ತಲೇ 90 ರ ಹರೆಯದ ಸಲೀಮ್ ಅಲಿ ಖುಷಿಯಿಂದ ತಾವು ಅಲ್ಲಿಗೆ ಬರುತ್ತೇವೆ ಅಲ್ಲಿಯವರೆಗೂ ಆ ಹಕ್ಕಿಯನ್ನು ಜೋಪಾನವಾಗಿ ನೋಡಿಕೊಳ್ಳಿ ಎಂದು ಆದಷ್ಟು ಬೇಗ ಅಲ್ಲಿಗೆ ಧಾವಿಸಿದಾಗ ಅಲ್ಲಿ ಕಂಡದ್ದು ಜೆರ್ಡನ್ಸ್ ಹಕ್ಕಿಯ ಮೃತದೇಹ. ನಿರಾಸೆಯಾದರು ಆ ಪಕ್ಷಿಯ ದೇಹವನ್ನು ಮುಂದಿನ ಸಂಶೋಧನೆಗಾಗಿ ಮುಂಬೈಗೆ ತೆಗೆದುಕೊಂಡುಹೋಗುತ್ತಾರೆ. ನಂತರದ ದಿನಗಳಲ್ಲಿ ಅದರ ಕಳೇಬರವನ್ನು ಪೂರ್ಣವಾಗಿ ಅಧ್ಯನಿಸಿ 1888 ರಲ್ಲಿ “ಥಾಮಸ್ ಜೆರ್ಡನ್” ಎಂಬ ಪರಿಸರತಜ್ಞ ಗುರುತಿಸಿ “ಜೆರ್ಡನ್ಸ್ ಕೋರ್ಸರ್” ಎಂದು ಹೆಸರಿಸಿದ ನಂತರ 100 ವರ್ಷಗಳಲ್ಲಿ ಎಲ್ಲಿಯೂ ದಾಖಲಾಗದೆ ಸಂಪೂರ್ಣವಾಗಿ ಅವನತಿ ಹೊಂದಿತ್ತೆಂದು ಹೇಳಲಾದ ಹಕ್ಕಿಯು ಮತ್ತೆ ಕಾಣಿಸಿದೆ ಎಂಬ ವಿಷಯವನ್ನು ಸರಕಾರಕ್ಕೆ ಹಾಗು ಮಾಧ್ಯಮದವರಿಗೆ ತಿಳಿಸುತ್ತಾರೆ. ಆ ದಿನಗಳಲ್ಲಿ ರೋಚಕವಾದ ಈ ಸುದ್ದಿಯು ಮಾಧ್ಯಮಗಳಲ್ಲಿ ಪ್ರಕಟವಾಗಿ ಭರತ್ ಭೂಷಣ್ ಹಾಗು ಐತಾನ ಇಬ್ಬರ ಹೆಸರು ಪ್ರಸಿದ್ಧವಾಗುತ್ತದೆ. ಎರಡನೇ ಬಾರಿಗೆ ಅಳಿದ ಪಕ್ಷಿಯ ಗುರುತಿಸಿದ ಖ್ಯಾತಿ ಭಾರತ್ ಭೂಷಣ್ ಗೆ ಲಭಿಸುತ್ತದೆ. ಈ ಸುದ್ಧಿಯಿಂದ ಎಚ್ಚೆತ್ತುಕೊಂಡ ಆಂಧ್ರ ಸರ್ಕಾರವು ಜೆರ್ಡನ್ಸ್ ಹಕ್ಕಿಯು ಕಾಣಿಸಿದ 464 ಚದರ ಕಿಲೋಮೀಟರ್ ಕುರುಚಲು ಅರಣ್ಯ ಪ್ರದೇಶವನ್ನು ಹಕ್ಕಿಯ ಸಂತತಿಯನ್ನು ರಕ್ಷಿಸುವ ಸಲುವಾಗಿ “ಲಂಕಾಮಲ್ಲೇಶ್ವರ ವನ್ಯಜೀವಿ ಅಭಯಾರಣ್ಯ” ಎಂದು ಘೋಷಿಸುತ್ತದೆ.
ಅಳಿದುಹೋಯ್ತು ಎನ್ನಲಾಗಿದ ಜೇರ್ಡನ್ ಹಕ್ಕಿಯು ಹೆಚ್ಚು ಹಾರದೆ ನೆಲದಲ್ಲೇ ಓಡಾಡುವ ನಿಶಾಚರ ಪಕ್ಷಿ. ಆಂಧ್ರಪ್ರದೇಶದ ಪೂರ್ವ ಘಟಗಳ ಗೋದಾವರಿ ನದಿ ತೀರದ ಕುರುಚಲು ಕಾಡಿನ ಪ್ರದೇಶದಲ್ಲಿ “ಟಿ.ಸಿ.ಜೇರ್ಡನ್” ಎಂಬ ಬ್ರಿಟೀಷ್ ಪಕ್ಷಿಶಾಸ್ತ್ರಜ್ಞರು ಈ ಹಕ್ಕಿಯನ್ನು ಗುರುತಿಸಿ ದಾಖಲಿಸಿದ ಫಲವಾಗಿ ಇದಕ್ಕೆ “ಜೆರ್ಡನ್ಸ್ ಕೋರ್ಸರ್” ಎಂದು ನಾಮಕರಣ ಮಾಡಿದ್ದರೂ ಇದರ ವೈಜ್ಞಾನಿಕ ಹೆಸರು “ರೈನೋಪ್ಟಿಲಸ್ ಬಿಟೊರ್ಕ್ವಾಟಸ್” ಎಂದು. ಕನ್ನಡದಲ್ಲಿ “ತುರಾಯಿ ಚಿಟವ” ಎನ್ನುತ್ತಾರೆ. ಇದು ನೆಲದಲ್ಲಿ ಓಡಾಡುವ ಹಕ್ಕಿಯಾದ್ದರಿಂದ ವಲಸೆ ಹಕ್ಕಿಯಂತೂ ಅಲ್ಲ. ಕುರುಚಲು ಕಾಡಿನ ಮುಳ್ಳಿನ ಪೊದೆಗಳಲ್ಲಿ ಹಾಗು ಬಂಡೆಗಳ ಸಂದಿಗಳಲ್ಲಿ ವಾಸಿಸುವ ಇವು ರಾತ್ರಿ ಹೊತ್ತು ಮಾತ್ರ ಚುರುಕಾಗಿ ಓಡಾಡಿ ನೆಲದಲ್ಲಿನ ಗೆದ್ದಲು ಹುಳುಗಳು ಹಾಗು ಇರುವೆಗಳನ್ನು ಹೆಕ್ಕಿ ಹೆಕ್ಕಿ ತಿನ್ನುತ್ತವೆ. ಗಾಢ ಕಂದುಬಣ್ಣದ ಈ ಹಕ್ಕಿಯು ಅಗಲವಾದ ಕಣ್ಣುಗಳನ್ನು ಹೊಂದಿದ್ದು ಕುತ್ತಿಗೆಯ ಮುಂಬಾಗ ಕಿತ್ತಳೆ ಬಣ್ಣದಿಂದ ಕೂಡಿದೆ. ಮರುಪರಿಚಯಿಸಿದ ಸಂದರ್ಭದ ಸಂಶೋಧನೆಯ ಫಲವಾಗಿ ಇದರ ಸಂಖ್ಯೆ ಕೇವಲ 50 ರಿಂದ 250 ರವರೆಗೆ ಇರಬಹುದು ಎಂದು ದಾಖಲಿಸಿ ತೀವ್ರವಾಗಿ ಅಳಿವಿನಂಚಿನಲ್ಲಿರುವ ಪಕ್ಷಿಪ್ರಬೇಧ ಎಂದು ನಿರ್ಧರಿಸಿದ್ದಾರೆ.
ವಿಶ್ವದ ಅಪರೂಪದ ಪಕ್ಷಿಗಳಲ್ಲಿ ಒಂದಾದ ಇದು “ರೈನೋಪ್ಟಿಲಸ್” ಎಂಬ ಪಕ್ಷಿಕುಲದ ಮೂರು ಜಾತಿಗಳಲ್ಲಿ ಒಂದು, ಮಿಕ್ಕ ಎರಡು ಜಾತಿಯ ಚಿಟವ ಹಕ್ಕಿಗಳು ಆಫ್ರಿಕಾ ಖಂಡದಲ್ಲಿ ಕಾಣಸಿಗುತ್ತವೆ. ಅದಕ್ಕಾಗಿಯೇ ಇರಬಹುದು ಇದರ ಸಂತತಿಯನ್ನು ರಕ್ಷಿಸಲು ಇನ್ನಿಲದಂತೆ ಪ್ರಯತ್ನಗಳು ನೆಡೆಯುತ್ತಿರುವುದು. 1988 ರಲ್ಲಿ ಭಾರತ ಅಂಚೆ ಇಲಾಖೆಯು ಇದರ ಚಿತ್ರವಿರುವ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ.
1986 ರಲ್ಲಿ ಈ ಪಕ್ಷಿಯು ಮರುಕಾಣಿಸಿ ಇದರ ಸಂತತಿಯನ್ನು ರಕ್ಷಿಸಲು ಅನೇಕ ಪ್ರಯತ್ನಗಳ ಹೊರತಾಗಿಯೂ ಇದರ ಮೂರು ಆವಾಸ ಸ್ಥಾನಗಳಲ್ಲಿ ಒಂದನ್ನು ಅಂದ್ರ ಸರ್ಕಾರದ “ತೆಲಗು ಗಂಗಾ ಕಾಲುವೆ” ಯೋಜನೆಗೆ ಮೀಸಲಿಟ್ಟಿದ್ದರಿಂದ ಆ ಪ್ರದೇಶದಲ್ಲಿ ಈ ಹಕ್ಕಿಯು ಇಲ್ಲವೇ ಇಲ್ಲ ಎನ್ನಬಹುದು. 2008 ರ ನಂತರ ಈ ಹಕ್ಕಿಯ ಇರುವಿಕೆ ದಾಖಲಾಗಿಲ್ಲವಾದರೂ ಸ್ವಯಂಚಾಲಿತ ಕ್ಯಾಮೆರಾಗಳನ್ನೂ ಹಾಗು ಧ್ವನಿ ಮುದ್ರಿಸಿಕೊಳ್ಳುವ ರೆಕಾರ್ಡರ್ ಗಳನ್ನು ಕುರುಚಲು ಕಾಡು ಪ್ರದೇಶದಲ್ಲಿ ಹಾಗು ಗುಡ್ಡ ಗಾಡಿನ ಬಂಡೆಗಳ ಸಂದಿಗಳಲ್ಲಿ ಇಟ್ಟು ಇದರ ಪತ್ತೆ ಹಚ್ಚುವ ಶ್ರಮ ಅವಿರತವಾಗಿ ನೆಡೆಯುತ್ತಲೇ ಇದೆ. “ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ” ಸಹ ಎಂದಿನಂತೆ ಈ ಕೆಲಸಕ್ಕೆ ಅನೇಕ ವನ್ಯಜೀವಿ ಸರ್ಕಾರೇತರ ಸಂಸ್ಥೆಗಳ ಜೊತೆ ಕೈಗೂಡಿಸಿದೆ. ಅನೇಕ ಜೀವಶಾಸ್ತ್ರಜ್ಞರು ಹಾಗು ಪರಿಸರಪ್ರಿಯರು ಅಲ್ಲಿನ ಹಳ್ಳಿಯ ಬುಡಕಟ್ಟು ಜನಗಳಿಗೆ ಈ ಚಿಟುವ ಪಕ್ಷಿಯ ಚಿತ್ರವನ್ನು ತೋರಿಸಿ ಅದರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ವಿವರಿಸಿತ್ತಾ ಬಂದಿದ್ದಾರೆ. ಈ ಹಕ್ಕಿ ರಾತ್ರಿ ಹೊತ್ತು “ಟ್ವಿಕ್ ಟೂ, ಟ್ವಿಕ್ ಟೂ” ಎಂದು ನಿರಂತರವಾಗಿ ಹೊರಡಿಸುವ ಧ್ವನಿಯನ್ನು 2002 ರಲ್ಲಿ ಡಾ. ಪಿ. ಜಗನ್ನಾಥನ್ ಎಂಬ ಜೀವಶಾಸ್ತ್ರಜ್ಞರು ಮುದ್ರಿಸಿಕೊಂಡಿದ್ದಾರೆ ಅದನ್ನು ಸಹ ಅಲ್ಲಿನ ಜನಗಳಿಗೆ ಕೇಳಿಸಿ ಇದರ ಪತ್ತೆ ಹಚ್ಚುವಿಕೆಗೆ ಅವರ ಸಹಕಾರವನ್ನು ಕೇಳುತಿದ್ದಾರೆ. ಇದರ ಪ್ರಾಮುಖ್ಯತೆಯ ಅರಿವಾಗಿ ಆಂಧ್ರ ಸರಕಾರವೇ ಪ್ರತ್ಯೇಕವಾಗಿ ಹಣವನ್ನು ತನ್ನ ಬಜೆಟ್ ನಲ್ಲಿ ಘೋಷಿಸುತ್ತಾ ಬಂದಿದೆ.
19 ಶತಮಾನದಲ್ಲಿ ಪತ್ತೆಯಾಗಿ, ಕಣ್ಮರೆಯಾಗಿ, ಅವನತಿ ಹೊಂದಿದೆ ಎನ್ನಲಾಗಿ ಮತ್ತೆ ನೂರು ವರ್ಷಗಳ ನಂತರ ಕಾಣಿಸಿ 2008 ರ ನಂತರ ಮಾಯವಾಗಿ ಮರು ಅವನತಿ ಹೊಂದಿದೆ ಎನ್ನಲಾದ ಈ ಜೆರ್ಡನ್ಸ್ ಚಿಟುವ ಎಂಬ ವಿಶ್ವದ ಅಪರೂಪದ ಹಕ್ಕಿಯು ಮತ್ತೆ ಕಾಣಿಸಿ ಅಚ್ಚರಿ ಪಡುವ ದಿನಗಳಿಗಾಗಿ ಪರಿಸರ ಹಾಗು ವನ್ಯಜೀವಿ ಪ್ರಿಯರು ಅಷ್ಟೆ ಏಕೆ ಅಲ್ಲಿನ ಸರಕಾರವು ಕಾಯುತ್ತಿದೆ.
ವನ ಹಾಗು ವನ್ಯಜೀವಿಗಳ ರಕ್ಷಣೆ ಮಾನವನ ಆದ್ಯ ಕರ್ತವ್ಯ….
ಕು ಶಿ ಚಂದ್ರಶೇಖರ್
1 Comment
ತುಂಬಾ ಚೆನ್ನಾಗಿದೆ ನಿಮ್ಮ ಪಕ್ಷಿಗಳ ಮೇಲಿನ ಪ್ರೀತಿ