ಇಳೆಯ ಸವಿ ಬೆಳಗು
ನೇಸರನ ಆಗಮನವು ನೀಡಿದೆ
ನಿಲ್ಲದ ಉತ್ಸಾಹ ಜಗಕೆ..!
ಹೊಂಬೆಳಗಿದು ಸ್ಫೂರ್ತಿ ತಂದಿದೆ..
ಕವಿಮನದಿ ಮಿಡಿವ ಭಾವಕೆ!!
ಭಾಸ್ಕರನಿರದ ಈ ಬುವಿಗೆ
ಸಹನೀಯವಾಗದು ಬದುಕು..!
ನಿಶೆಯಮಲಲಿ ಮಲಗಿಹ ಜನಕೆ..
ನೀಡಿಹನು ಹೊಂಗಿರಣದಿ ಬೆಳಕು!!
ಹುಲ್ಲಹಾಸಿನಲಿಹ ಇಬ್ಬನಿಯು
ಹೊಳೆದಿದೆ ತಾ ಮುತ್ತಿನಂತೆ.. !
ವಸುಧೆಗೆ ರವಿಯ ಬರುವಿಕೆಯು..
ಆಸರೆಗೆ ಬಳ್ಳಿ ಮರವ ಸುತ್ತಿದಂತೆ!!
ತೆನೆಗಳು ಹೊಂಬಣ್ಣದಿ ವಿಜೃಂಭಿಸಿ
ಹಸಿರದು ನಳನಳಿಸಿ ಚಿಗುರಿದೆ..!
ದಿನಕರನ ಕಿರಣದ ಚುಂಬನಕೆ..
ಧರೆಯ ಮೊಗವು ನಾಚಿ ಅರಳಿದೆ!!
ಅಹಸ್ಕರನ ಹೊನ್ನ ದೀಪದಿ
ಕವಿದ ಅಂಧಕಾರವು ಕಳೆದಿದೆ..!
ಜಗದ ಭಾರ ನಿತ್ಯ ಹೊರುವ..
ಮಹಿಯ ಬಾಳು ಚೆಂದದಿ ಬೆಳಗಿದೆ!!
ಸುಮನಾ ರಮಾನಂದ