ಈಸ ಬೇಕು, ಇದ್ದು ಜೈಸ ಬೇಕು
ಜೀವನ ಎಲ್ಲರಿಗೂ ಸುಖದ ಸುಪ್ಪತ್ತಿಗೆಯಲ್ಲ. ಕೆಲವರು ಬಹಳಷ್ಟು ದುಃಖ, ನಷ್ಟಗಳನ್ನು, ನೋವುಗಳನ್ನೂ ಜೀವನದಲ್ಲಿ ಕಂಡಿರುತ್ತಾರೆ. ಎಷ್ಟೋ ವೇಳೆ, ಸಾಕಪ್ಪಾ ಈ ಜೀವನ ಎಂದು ಹತಾಶರಾಗಿ ಸಾಯಬೇಕು ಎಂದುಕೊಂಡಾಗ ಈ ಮಾತುಗಳು ಜನ ಸಾಮಾನ್ಯರಿಗೆ ಅಮೃತವಾಣಿಯಂತೆ ಚೈತನ್ಯ ನೀಡಿದೆ. ತಮಗೆದುರಾಗುವ ಪ್ರತಿಯೊಂದು ಆಪತ್ತನ್ನೂ ಒಂದು ಅವಕಾಶವೆಂದು ಭಾವಿಸಿ, ಅದನ್ನು ಉಪಯೋಗಿಸಿಕೊಂಡು ಸಂತಸದಿಂದ ಬಾಳುವಂತೆ ನಮ್ಮ ಹಿರಿಯರು ಹೇಳಿದ್ದಾರೆ, ಅವರು ಅದರಂತೆಯೇ ನಡೆದಿದ್ದಾರೆ. *ಮಾನವ ಜನ್ಮ ದೊಡ್ಡದು* ಎಂಬ ದಾಸವಾಣಿಯಂತೆ ಆ ದೇವರು ನಮಗಿತ್ತಿರುವ ಈ ಜೀವನವನ್ನು ಹಾಳು ಮಾಡದೆ, ಸಾರ್ಥಕಗೊಳಿಸಿಕೊಳ್ಳೋಣ. ಬದುಕು ಎಂದರೆ ಅದು ಬರೀ ದೇಹದ ಬದುಕಲ್ಲ, ಅದು ಮನಸ್ಸು ಮತ್ತು ಆತ್ಮದ ಚೈತನ್ಯಪೂರ್ಣ ಬದುಕು.
ಅನೇಕ ಮಹಾಮಹಿಮರ ಮಾತಿನಂತೆ ಸಾಯುವುದು ಹೇಡಿಗಳ ಲಕ್ಷಣ. ಕಷ್ಟ ಬಂದಾಗ, ಜಗ್ಗದೆ, ಕುಗ್ಗದೆ ಜೀವನವೆಂಬ ಕಡಲಿನಲ್ಲಿ ಈಜುವವನು ನಿಜಾರ್ಥದಲ್ಲಿ ಜಯಶಾಲಿಯಾಗುತ್ತಾನೆ. ತಾನು ಬಾಡಿ, ಬಿದ್ದು ಹೋಗಲಿರುವೆ ಎಂದು ತಿಳಿದೂ ಅರಳುವ ಹೂವಿನಂತೆ, ಆರಿ ಹೋಗಲಿರುವೆ ಎಂದು ತಿಳಿದೂ ಬೆಳಗುವ ದೀಪದಂತೆ, ಇರುವತನಕ ಬಾಳಿ ಬದುಕಬೇಕು.
ಎಂದಿಗೂ ನಮ್ಮದು ಪ್ರದರ್ಶನದ ಬದುಕಾಗಬಾರದು, ನಿದರ್ಶನದ ಬದುಕಾಗಬೇಕು. ನಾವು ಎಷ್ಟು ಕಾಲ ಬದುಕಿದೆವು ಎನ್ನುವುದಕ್ಕಿಂತ ಹೇಗೆ ಬದುಕಿದೆವು, ಯಾರಿಗೆಲ್ಲಾ ನಾವು ಬೆಳಕಾಗಿ ಬದುಕಿದೆವು ಎನ್ನುವುದು ಮುಖ್ಯವಾಗುತ್ತದೆ.
ನಮ್ಮೆಲ್ಲರದ್ದೂ ಅಸ್ಥಿರದ ಭ್ರಮೆಯ ಬದುಕು. ಬೀಸುತ್ತಿರುವ ಗಾಳಿಗೊಡ್ಡಿರುವ ದುರ್ಬಲವಾದ ಸೊಡರಿನಂತಿದೆ ಬದುಕು. ಬೆಂಕಿಗೆ ಸುಲಭವಾಗಿ ಕರಗುವ ಅರಗಿನ ಅರಮನೆಯಂತಹ ಬದುಕು. ಆದರೂ ಇರುವವರೆಗೂ ನಮ್ಮ ಜೀವಕ್ಕೆ ನಾವು ಹೇಗೆ ಬೆಲೆಕೊಡಬೇಕು ಎಂಬುದನ್ನು ಒಬ್ಬರು ಮನಶಾಸ್ತ್ರಜ್ಞರು ತಿಳಿಸಿಕೊಟ್ಟಿರುವ ರೀತಿ ಹೀಗಿದೆ ನೋಡಿ:
ಆತ್ಮಹತ್ಯೆಗೆ ಶರಣಾಗಲು ಪ್ರಯತ್ನಿಸಿ ಬದುಕುಳಿದಿದ್ದ ಅನೇಕರನ್ನು ಸೇರಿಸಿದ ಮನಶಾಸ್ತ್ರಜ್ಞರೊಬ್ಬರು, ಅವರಿಗೆ ಎರಡು ಸಾವಿರ ರೂಪಾಯಿಯ ನೋಟನ್ನು ತೋರಿಸಿ ಇದು ಯಾರಿಗೆ ಬೇಕು ಎಂದಾಗ ಎಲ್ಲರೂ ಕೈಯೆತ್ತಿದರು, ಆಗ ಆ ನೋಟನ್ನು ಅವರು ಮುದುರಿ, “ಈಗ ಯಾರಿಗೆಲ್ಲಾ ಈ ಹಣ ಬೇಕು” ಎಂದಾಗಲೂ ಎಲ್ಲರೂ ಬೇಕು ಎಂದೇ ಹೇಳಿದರು. ಅವರು ಅದನ್ನು ನೆಲಕ್ಕೆಸೆದು ಕಾಲಿನಿಂದ ತುಳಿದು “ಯಾರಿಗೆ ಬೇಕು ಈ ಹಣ” ಎಂದಾಗಲೂ ಎಲ್ಲರೂ ಆ ಹಣ ತಮಗೆ ಬೇಕೆಂದರು. ಆಗ ಮನಶಾಸ್ತ್ರಜ್ಞರು “ನಾನು ಏನೇ ಮಾಡಿದರೂ, ಹೇಗೆ ಈ ಹಣದ ಬೆಲೆ ಕಡಿಮೆಯಾಗಲಿಲ್ಲವೋ ಹಾಗೆಯೇ ನಿಮ್ಮ ಬೆಲೆಯೂ ಯಾವತ್ತೂ ಕಡಿಮೆಯಾಗದಂತೆ ನೋಡಿಕೊಳ್ಳಿ. ನಿಮ್ಮ ಮೇಲೆ ನಿಮಗೆ ನಂಬಿಕೆಯಿರಲಿ. ಎಷ್ಟೇ ಕಷ್ಟ ನಷ್ಟವಾದರೂ, ತೊಂದರೆ ಬಂದರೂ ನಿಮ್ಮ ಬಗ್ಗೆ ನೀವು ಕೀಳರಿಮೆ ಬೆಳೆಸಿಕೊಳ್ಳಬೇಡಿ, ಕುಗ್ಗ ಬೇಡಿ. ನಿಮ್ಮ ಬೆಲೆ ನಿಮಗಿದ್ದೇ ಇರುತ್ತದೆ. ಸಾವೇ ಎಲ್ಲದಕ್ಕೂ ಪರಿಹಾರವಲ್ಲ. ನಮ್ಮ ಬಾಳು ನಾವೇ ಅಂತ್ಯಗೊಳಿಸುವಷ್ಟು ನಿಕೃಷ್ಟವಲ್ಲ. ಎಲ್ಲವನು ಮೊದಲಿನಿಂದಆರಂಭಿಸುವಂತೆ ಈ ಬದುಕು ನಿಮಗೆ ಮತ್ತೊಂದು ಅವಕಾಶವನ್ನಿತ್ತಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ.” ಎಂದು ಕಿವಿ ಮಾತು ಹೇಳಿದರು.
ಒಂದು ಕಬ್ಬನ್ನು ಗಾಣಕ್ಕೆ ಹಾಕಿದರೆ ಅದರಿಂದ ಹೇಗೆ ಸಿಹಿಯಾದ ಕಬ್ಬಿನ ರಸ ಬರುವುದೋ, ಚಂದನದ ಕೊರಡನ್ನು ಉಜ್ಜಿದಷ್ಟೂ ಶ್ರೀಗಂಧದ ಪರಿಮಳ ಹೊರಹೊಮ್ಮುವುದೋ, ಹಾಗೆಯೇ ನಮ್ಮ ಜೀವನದಲ್ಲಿ ಬರುವ ಕಷ್ಟ, ದುಃಖಗಳನ್ನು ಎದುರಿಸಿದರೂ ಅಂಜದೆ, ಅಳುಕದೆ ನಗುನಗುತ್ತಾ ಬಾಳೋಣ, ಚಂದದ ಬದುಕ ಬದುಕೋಣ.
ಶ್ರೀವಲ್ಲಿ ಮಂಜುನಾಥ