ಈ ಹೃದಯ ಮಾರಾಟಕ್ಕಿದೆ

ಈ ಹೃದಯ ಮಾರಾಟಕ್ಕಿದೆ

ಈ ಹೃದಯ ಮಾರಾಟಕ್ಕಿದೆ
ಬನ್ನಿ ಗ್ರಾಹಕರೇ ಬನ್ನಿ
ಸೀಮಿತ ಅವಧಿಗೆ ಮಾತ್ರವೇ ಉಂಟು
ಮಾರಾಟದ ಕೊಡುಗೆಗಳು ಲಭ್ಯ
ನಿಯಮಗಳು ಅನ್ವಯ.

ಕೊಳ್ಳುವವನ ಅಧೀನ
ಈ ಹೃದಯ ಸ್ವಾಧೀನ
ಈ ದೇಹ ಪರಾಧೀನ!
ಹೃದಯದ ನೋವುಗಳು ಅಗಣಿತ
ಕೊಳ್ಳಲೇಬೇಕಿದೆ ಗ್ರಾಹಕ ಸಂಭ್ರಮದ ಜೊತೆ ಜೊತೆಗೆ

ಹೃದಯದ ಭಾರಕೆ ಸೊರಗಿದೆ
ಒಲವೆಂಬ ದೀಪದ ಬೆಳಕು
ಅದೆಷ್ಟು ದಿನ ಉರಿದೀತು
ಬಯಸುವಂತಿಲ್ಲ ನೀವು ನಿರಂತರ
ಹಣತೆ ಹಚ್ಚುವವನು ಬರಲಾರನೇ?
ನಿರೀಕ್ಷೆಗೆ ಕೊನೆಯೆಂದು

ಹಳತು ಎನ್ನುವಂತಿಲ್ಲ,
ಈ ಹೃದಯದ ಕವಾಟಿನಲಿ
ಅದೆಷ್ಟೋ ಕನಸುಗಳು ಬೆಚ್ಚಗೆ ಮಲಗಿವೆ ಹಾಗೆಯೇ,
ಎಚ್ಚರಗೊಳಿಸುವವನ ತಾಕತ್ತು ಯಾರು ಬಲ್ಲರು..
ಕನಸುಗಳು ಮಾತ್ರ ಮಾರಾಟಕ್ಕಿಲ್ಲ
ಬನ್ನಿ ಗ್ರಾಹಕರೇ ಬನ್ನಿ ಈ ಹೃದಯ ಮಾರಾಟಕ್ಕಿದೆ

ಹೃದಯದ ಜೊತೆ ಜೊತೆಗೇ
ಅಗಣಿತ ನೋವುಗಳ
ಕೊಳ್ಳುವವನಿಗೆ ಆದ್ಯತೆ
ಸೀಮಿತ ಅವಧಿಗೆ ಮಾತ್ರವೇ..
ಹೃದಯದ ಚಲನೆ ನಿಂತಾಗ
ಈ ದೇಹ ಮುಕ್ಕಿಬಿಡಿ ಹರಿದು…

ಪವನ ಕುಮಾರ ಕೆ ವಿ
ಬಳ್ಳಾರಿ
ಮೊಬೈಲ್ : 9663346949

Related post