ಓಜೋನ್ ಪದರ ಇದು ಭೂತಾಯಿಯ ಉದರ

ಓಜೋನ್ ಪದರ ಇದು ಭೂತಾಯಿಯ ಉದರ

ಓಜೋನ್ ಅಂದರೆ ಮೂರು ಆಮ್ಲಜನಕದ ಸಣ್ಣ ಸಣ್ಣ ಕಣಗಳಿಂದ ಆದ ಪದರ. ಇದು ವಾಯುಮಂಡಲದ ಅತಿ ಕೆಳಗಿನ ಪದರಗಳಾದ ಟ್ರೋಪೊಸ್ಪಿಯರ್ ಹಾಗೂ ಸ್ಟ್ರಾಟೋಸ್ಪಿಯರ್‌ ನಲ್ಲಿರುತ್ತದೆ.

ಟ್ರೋಪೊಸ್ಪಿಯರ್ ಭೂಮಿಯಿಂದ 12 ಕಿಮೀ ವರೆಗೂ ಪಸರಿಸಿದ್ದರೆ, ಸ್ಟ್ರಾಟೋಸ್ಪಿಯರ್ ಐವತ್ತು ಕಿಮೀವರೆಗೂ ಹಬ್ಬಿದೆ, ಅದರೆ ಶೇಕಡಾ 90ರಷ್ಟು ಓಜೋನ್ ಕಣಗಳು ವಾಯುಮಂಡಲದ ಸ್ಟ್ರಾಟೋಸ್ಪಿಯರ್ನಲ್ಲಿ ಹರಡಿಕೊಂಡಿರುತ್ತದೆ. ನೈಸರ್ಗಿಕವಾಗಿ ಸೂರ್ಯಕಿರಣಗಳು ಆಮ್ಲಜನಕದ ಕಣಗಳೊಡನೆ ನಡೆಸುವ ಕ್ರಿಯೆಯಿಂದ ಈ ಓಜೋನ್ ಪದರ ನಿರ್ಮಾಣವಾಗುತ್ತದೆ. ಸ್ಟ್ರಾಟೋಸ್ಪಿಯರ್ ನಲ್ಲಿ ಸೂರ್ಯಕಿರಣಗಳ ಪ್ರಭಾವದಿಂದ ಆಮ್ಲಜನಕದ ಕಣಗಳು ಒಡೆದು ಪರಮಾಣು ಆಮ್ಲಜನಕದೊಂದಿಗೆ ಸೇರಿದಾಗ ಓಜೋನ್ ಉತ್ಪತ್ತಿಯಾಗುತ್ತದೆ. ಮನುಷ್ಯ ನಡೆಸುವ ಕೆಲವು ಚಟುವಟಿಕೆಗಳಿಂದಲೂ ಈ ಓಜೋನ್ ಕೆಳಗಿನ ವಾಯುಮಂಡಲದಲ್ಲಿ ಉತ್ಪತ್ತಿಯಾಗುತ್ತದೆ. ಸಸಾರಜನಕಯುಕ್ತ ಗಾಳಿ ಹಾಗೂ ಹೈಡ್ರೋಕಾರ್ಬನ್‌ಗಳ ಕ್ರಿಯೆಯಿಂದ ವಾಯುಮಂಡಲದಲ್ಲಿ ಓಜೋನ್ ಪದರ ಉತ್ಪತ್ತಿಯಾಗುತ್ತದೆ.

ಓಜೋನ್ ಪದರ ಭೂಮಿಗೆ ಉಪಕಾರಿ. ಇದು ಸೂರ್ಯನಿಂದ ಬರುವ ಅತಿನೇರಳೆ ಕಿರಣಗಳನ್ನು ಶೇಖಡ ೯೭-೯೯% ರವರೆಗೂ ತಡೆಯುತ್ತದೆ. ಈ ಅತಿ ನೇರಳೆ ಕಿರಣಗಳು ನೇರವಾಗಿ ಮನುಷ್ಯನಿಗೆ ತಾಗಿದರೆ ಚರ್ಮದ ಕ್ಯಾನ್ಸರ್ ಬರುತ್ತದೆ ಎಂದು ಈಗಾಗಲೇ ಸಾಭೀತಾಗಿದೆ. ಅಷ್ಟೇ ಅಲ್ಲ ಇದು ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಸಸ್ಯದ ಬೆಳವಣಿಗೆಯನ್ನು ಸಹ ಈ ಅತಿನೇರಳೆ ಕಿರಣಗಳು ಕುಂಠಿತಗೊಳಿಸುತ್ತದೆ. ಸಸ್ಯ ಹಾಗೂ ವಂಶವಾಹಿಗಳ ಮೇಲೂ ಪರಿಣಾಮ ಬೀರುತ್ತದೆ. ಸೂರ್ಯನಿಂದ ಬರುವ ಅತಿನೇರಳೆ ಕಿರಣಗಳು ಸಮುದ್ರ ಜೀವಿಗಳ ಮೇಲೂ ಪರಿಣಾಮ ಬೀರುತ್ತದೆ. ಸಮುದ್ರದ ಮೇಲ್ಭಾಗದ ಪದರದಲ್ಲಿ ಬೆಳೆಯುವ ಹಸಿರು ಸಸ್ಯಗಳ ಬೆಳವಣಿಗೆಯ ಮೇಲೆ ಪ್ರಭಾವ ಬೀರುವುದರಿಂದ ಅದನ್ನು ತಿಂದು ಬದುಕುವ ಸಮುದ್ರ ಜೀವಿಗಳ ಸಂಕುಲ ನಾಶದತ್ತ ಸಾಗುತ್ತಿದೆ. ಓಜೋನ್ ಪದರಗಳು ಮೇಲಿನ ವಾಯುಮಂಡಲದಲ್ಲಿದ್ದರೆ ಪರಿಣಾಮಕಾರಿ ಹಾಗೂ ಉಪಯೋಗಕಾರಿ. ಆದರೆ ಕೆಳಗಿನ ವಾಯುಮಂಡಲ ಟ್ರೋಪೊಸ್ಪಿಯರ್ ಪದರದಲ್ಲಿದ್ದರೆ ಇದು ಅಪಾಯಕಾರಿ. ರಿಮೋಟ್ ವ್ಯವಸ್ಥೆಯಿಂದ ವಾಯುಮಂಡಲದಲ್ಲಿರುವ ಓಜೋನ್ ಪ್ರಮಾಣವನ್ನು “ಡಾಬ್ಸನ್” ಯೂನಿಟ್ ನಿಂದ ಆಳೆಯುತ್ತಾರೆ.

ಕಳೆದ 20-25 ವರ್ಷಗಳಿಂದಿಚೆಗೆ ಈ ಓಜೋನ್ ಪದರ ಹರಿಯಲಾರಂಬಿಸಿದೆ. ಅಂಟಾರ್ಟಿಕದ ಮೇಲ್ಭಾಗದ ವಾಯು ಮಂಡಲದಲ್ಲಿ ಈ ಓಜೋನ್ ಪದರ ಹರಿಯುವ ಪ್ರಕ್ರಿಯೆ ಜಾಸ್ತಿ ಎಂದು ಸಮೀಕ್ಷೆಗಳು ತಿಳಿಸಿವೆ. 1957 ರಿಂದ 1964 ರವರೆಗೂ 320 ಡಾಬ್ಸನ್ ಇದ್ದ ಓಜೋನ್ ಪ್ರಮಾಣ ಇತ್ತೀಚಿನ ದಿನಗಳಲ್ಲಿ 200ಕ್ಕೆ ಕುಸಿದಿದೆ. ಅಂಟಾರ್ಟಿಕವಲ್ಲದೇ ಉತ್ತರ ಹಾಗೂ ದಕ್ಷಿಣ ಧ್ರುವಗಳಲ್ಲೂ ಓಜೋನ್ ಭಾರಿ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ವಾಯುಮಂಡಲದ ಉಳಿದ ಭಾಗಗಳಲ್ಲಿ ಓಜೋನ್ ಪದರದ ಪತನ 10 ವರ್ಷಕ್ಕೆ ಶೇಕಡಾ 1 ರಷ್ಟು ಇದೆ. ಆದರೆ ಉತ್ತರ ಯೂರೋಪಿನ ಮೇಲ್ಭಾಗದಲ್ಲಿ ಈ ಪತನ ಪ್ರತಿ 10 ವರ್ಷಕ್ಕೆ ಶೇಕಡಾ 3.5 ರಂತೆ ಕುಗ್ಗುತ್ತಿರುವುದು ಅತಂಕಕಾರಿ ವಿಷಯ.

ಮನುಷ್ಯನ ಆಟೋಪಗಳಿಗೆ ಸಿಕ್ಕಿ ಪರಿಸರ ಕಲುಷಿತಗೊಂಡಿದ್ದರಿಂದ ಈ ಓಜೋನ್ ಪದರ ಹರಿಯಲು ಕಾರಣವಾಗಿದೆ. ಮನುಷ್ಯನ ದಿನನಿತ್ಯದ ಚಟುವಟಿಕೆಗಳಿಂದ ವಾತಾವರಣಕ್ಕೆ ಸೇರುವ ರಾಸಾಯನಿಕಗಳಿಂದಲೂ ಓಜೋನ್ ಪದರ ಹರಿಯುತ್ತಿದೆ. ಸೂಪರ್‌ಸಾನಿಕ್ ಏರ್‌ಕ್ರಾಫ್ಟ್ ಹಾಗು ಕೈಗಾರಿಕೆಗಳಿಂದ ಹೊರಬರುವ ” ನೈಟ್ರೊಜನ್ ಆಕ್ಸಾಯ್ಡ್ ” ಓಜೋನ್ ಪದರ ಹಾಳಾಗಲು ಕಾರಣ ಎಂದು ಹಿಂದೆ ನಂಬಲಾಗಿತ್ತು. ಆದರೆ ಇತ್ತೀಚಿನ ಪುರಾವೆಗಳು ಮಾನವ ನಿರ್ಮಿತ ಕ್ಲೋರಿನ್, ಬ್ರೋಮಿನ್ ಹಾಗೂ ಸಾವಯವ ರಾಸಾಯನಿಕಗಳಾದ ಕ್ಲೋರೋ ಕಾರ್ಬನ್ ಹಾಗೂ ಹಾಲೋನ್ಸಗಳು ಈ ಓಜೋನ್ ಪದರ ಹಾಳಾಗಲು ಕಾರಣ ಎಂದು ದೃಡಪಡಿಸಿವೆ. ಈ ಕ್ಲೋರೋ ಕಾರ್ಬನ್ ಹಾಗೂ ಹಾಲೋನ್‌ಗಳು ಓಜೋನ್ ಕಣಗಳನ್ನು ಒಡೆದು ವಾಯುಮಂಡಲದಲ್ಲಿ ಓಜೋನ್ ರಂಧ್ರ ಉಂಟಾಗಲು ಕಾರಣವಾಗಿದೆ.

ಯಾವುದು ಕ್ಲೋರೋ ಕಾರ್ಬನ್‌ಗಳ ಮೂಲ: ನಾವು ಬಳಸುವ ರಿಫ್ರೆಜರೇಟರ್‌ಗಳು ಹಾಗೂ ಹವಾನಿಯಂತ್ರಕಗಳಿಂದ ಈ ರಾಸಯನಿಕಗಳು ಅಧಿಕವಾಗಿ ಬಿಡುಗಡೆಯಾಗಿ ವಾತಾವರಣವನ್ನು ಸೇರುತ್ತಿದೆ. ಈಗಂತೂ ಮನೆ ಮನೆಯಲ್ಲೂ ಎ ಸಿ ಗಳು ಬೇಕು. ಇದಲ್ಲದೇ ನಾವು ಬಳಸುವ ಕೀಟನಾಶಕ ಸ್ಪ್ರೇಗಳು. ಡೀಒಡರೆಂಟಗಳು ಏರೋಸಾಲ್ ಸ್ಪ್ರೇಗಳು ಕೂಡ ಈ ರಾಸಾಯನಿಕಗಳನ್ನು ವಾತಾವರಣಕ್ಕೆ ಸೇರಿಸುತ್ತದೆ. ಈಗ ಇವುಗಳಲ್ಲಿ ಕಡಿಮೆ ಪರಿಣಾಮ ಬೀರುವ ಹೈಡ್ರೋಕಾರ್ಬನಗಳನ್ನು ಬಳಸುತ್ತಿದ್ದಾರಾದರೂ 1999 ಕ್ಕಿಂತ ಮುಂಚೆ ಉತ್ಪಾದನೆಯಾಗುತ್ತಿದ್ದ ಇಂಥಹ ಏರೋಸಾಲ್‌ಗಳಿಂದ ಹೊರಬಂದಿರುವ ರಾಸಾಯನಿಕಗಳು ಸುಮಾರು ಮುಂದಿನ 80-90 ವರ್ಷಗಳ ಕಾಲ ಸ್ಟ್ರಾಟೋಸ್ಪಿಯರ್‌ನಲ್ಲಿರುವುದರಿಂದ ಓಜೋನ್ ಪದರಕ್ಕೆ ಅಪಾಯ ತಪ್ಪಿದ್ದಲ್ಲ. ಹಾಳಾದ ರೆಫ್ರಿಜರೇಟರ್ ಅನ್ನು ಬಳಸಬಾರದು ಅಲ್ಲದೇ ಡಿಒಡರೆಂಟ್‌ಗಳನ್ನು ಆದಷ್ಟು ಬಳಸದೇ ಇರುವುದೇ ಒಳ್ಳೆಯದು.

ಓಜೋನ್ ಪದರ ಹರಿದರೇ ಆಗುವ ದುಷ್ಪರಿಣಾಮ: ಈ ಓಜೋನ್ ಪದರ ಹರಿಯುತ್ತಿರುವುದರಿಂದ ಅನೇಕ ದುಷ್ಪರಿಣಾಮಗಳು ಭೂಮಿಯ ಮೇಲಿನ ಜೀವರಾಶಿಗಳ ಮೇಲೆ ಆಗುತ್ತಿದೆ. ಮನುಷ್ಯನ ಮೇಲೆ ಆಗುವ ಪರಿಣಾಮಗಳಲ್ಲಿ ಮುಖ್ಯವಾಗಿ ಕಣ್ಣಿಗೆ ಸಂಭಂದಿಸಿದ ತೊಂದರೆಗಳು, ಮುಖ್ಯವಾಗಿ ಕ್ಯಾಟರಾಕ್ಟ್ ಹಾಗೂ ಚರ್ಮ ಸಂಭಂದಿ ಕ್ಯಾನ್ಸರ್ ಮುಖ್ಯವಾಗಿ ಸ್ಕ್ವೇಮೊಸ್ ಕ್ಯಾನ್ಸರ್ (Squmous)ಗೆ ನಾಂದಿ ಹಾಡುತ್ತದೆ ಎಂದು ಅಧ್ಯಯನಗಳು ದೃಡಪಡಿಸಿದೆ. ಸ್ಟ್ರಾಟೋಸ್ಪಿಯರ್‌ನಲ್ಲಿ ಶೇ1ರಷ್ಟು ಓಜೋನ್ ಕಣಗಳು ಕಡಿಮೆಯಾದರೆ ಭೂಮಿಯ ಮೇಲೆ ಮನುಷ್ಯರಲ್ಲಿ ಶೇಕಡಾ ಎರಡರಷ್ಟು ಚರ್ಮದ ಕ್ಯಾನ್ಸರ್ ಪ್ರಕರಣಗಳು ಜಾಸ್ತಿಯಾಗುತ್ತದೆ ಎಂದು ವಿಜ್ನಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಓಜೋನ್ ಪದರ ಹರಿಯುತ್ತಿರುವುದರಿಂದ ಶೇ 65 ರಷ್ಟು ನೇರಳೆ ಕಿರಣಗಳು ನೇರವಾಗಿ ಭೂಮಿಯನ್ನು ತಲುಪುವುದರಿಂದ ಮರ, ಗಿಡ ಸಸ್ಯಗಳ ಮೇಲೂ ಅದರ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಭತ್ತದ ಬೆಳೆಗೆ ಹೊಡೆತ ಬೀಳುತ್ತದೆ. ಇತ್ತೀಚಿನ ಹಸಿರು ಮನೆ ಪರಿಣಾಮ ಹಾಗೂ ಗ್ಲೋಬಲ್ ವಾರ್ಮಿಂಗ್ ಅಥವಾ ಭೂಮಿಯ ವಾತಾವರಣ ಬಿಸಿಯಾಗುತ್ತಿರುವುದಕ್ಕೆ ಈ ಓಜೋನ್ ಪದರ ಹರಿಯುತ್ತಿರುವುದು ಕಾರಣ ಎಂಬುದು ವಿಜ್ನಾನಿಗಳ ಅಭಿಪ್ರಾಯ. ಇತ್ತೀಚಿನ ಹವಾಮಾನ ವೈಪರಿತ್ಯಕ್ಕೂ ಇದೇ ಮೂಲ ಕಾರಣ. ವರ್ಷದಿಂದ ವರ್ಷಕ್ಕೆ ಬೇಸಿಗೆ ಕಾಲದಲ್ಲಿ ತಾಪಮಾನ ಹೆಚ್ಚಾಗುತ್ತಿರುವುದು ಜೊತೆಗೆ ಮಳೆಯ ಪ್ರಮಾಣವೂ ಕಡಿಮೆಯಾಗುತ್ತಿರುವುದು ಎಲ್ಲರ ಗಮನಕ್ಕೆ ಬಂದಿರಬಹುದು. ಇದಕ್ಕೆ ಓಜೋನ್ ಪದರ ಹಾಳಾಗುತ್ತಿರುವುದೇ ಕಾರಣ.

ಓಜೋನ್ ಪದರದ ರಕ್ಷಣೆ ಮಾಡುವ ಸಲುವಾಗಿಯೇ 1985ರಲ್ಲಿ ವಿಯನ್ನಾದಲ್ಲಿ ದೊಡ್ಡ ಸಮಾವೇಶವನ್ನು ಮಾಡಿ ಓಜೋನ್ ಪದರ ರಕ್ಷಿಸಲು ಕೆಲವೊಂದು ನಿಯಮಾವಳಿಗಳನ್ನು ರಚಿಸಲಾಗಿದ್ದು ಅದು 1989 ರಿಂದ ಜಾರಿಗೆ ಬಂದಿದೆ. ಕೋರಿನ್, ಬ್ರೋಮಿನ್, ಹಾಲೊನ್ ಹಾಗೂ ಕ್ಲೋರೋ ಕಾರ್ಬನ್‌ಗಳ ಬಳಕೆಯನ್ನು ನಾವು ಕಡಿಮೆ ಮಾಡದಿದ್ದರೆ ಮುಂದೆ ಅದಕ್ಕೆ ನಾವು ದೊಡ್ದ ಬೆಲೆ ತೆರಬೇಕಾಗುತ್ತದೆ.

ಪ್ರಕಾಶ್.ಕೆ.ನಾಡಿಗ್

Related post