ಕಂಡಿಲ್ಲಾ ಗುಲಾಬಿ ತಲೆಯ ಬಾತು
ನಿಮ್ಮೂರ ಕೆರೆಗಳಲ್ಲಿ ತೊರೆಗಳಲ್ಲಿ ಬಿಳಿಯ ಬಣ್ಣದ ಬಾತುಕೋಳಿಗಳು ವಿಹರಿಸುತ್ತಿರುವುದನ್ನು ನೋಡಿರುತ್ತೀರ! ಆದರೆ ಗುಲಾಬಿ ಬಣ್ಣದ ತಲೆಯ ಬಾತುಕೋಳಿಗಳನ್ನು ಕಂಡಿದ್ದೀರಾ? ನೀವಷ್ಟೇ ಅಲ್ಲಾ 1940 ರಿಂದಾಚೆಗೆ ಯಾರು ಕಂಡಿಲ್ಲ. ನಮ್ಮ ಭಾರತ, ಮ್ಯಾನ್ಮಾರ್ (ಬರ್ಮಾ) ಹಾಗು ಬಾಂಗ್ಲಾದೇಶದ ಜೌಗು ಪ್ರದೇಶಗಳಲ್ಲಿ ಯತ್ತೇಚ್ಛವಾಗಿ ಅಧಿಕ ಸಂಖ್ಯೆಯಲ್ಲಿ ಕಾಣಿಸುತಿದ್ದ ಗುಲಾಬಿ ಬಣ್ಣದ ಬಾತು ಇದ್ದಕಿದ್ದಂತೆ ನಿಗೂಢವಾಗಿ ಕಣ್ಮರೆಯಾದದ್ದು ಹೇಗೆ?
“ಪಿಂಕ್ ಹೆಡೆಡ್ ಡಕ್” – “ರೋಡೋನೆಸ್ಸಾ ಕ್ಯಾರಿಯೋಫಿಲೇಸಿಯಾ” (Rhodonessa caryophyllacea) ಎಂದು ಹೆಸರಿಸಿರುವ ಈ ಬಾತುಕೋಳಿಗಳನ್ನು ಜಾನ್ ಲ್ಯಾಥಮ್ ಎನ್ನುವವರು 1790 ರಲ್ಲಿ ಗುರುತಿಸಿದ್ದರು. ತಮ್ಮ ಕುಂಚದಲ್ಲಿ ಅದನ್ನು ಸುಂದರವಾಗಿ ಚಿತ್ರಿಸಿ ಕಲ್ಕತ್ತಾ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸರ್ ಎಲಿಜಾ ಇಂಪಿ ಎಂಬುವವರ ಶ್ರೀಮತಿಗೆ ಕೊಟ್ಟಿದ್ದರು. ಗುಲಾಬಿ ಬಣ್ಣದಿಂದ ಕೂಡಿದ ತಲೆ, ಹಳದಿ ಕೊಕ್ಕು, ಮಿಕ್ಕೆಲ್ಲ ದೇಹ ಕಂದು ಬಣ್ಣದಿಂದ ಕೂಡಿದ್ದು ನೋಡಲು ಬಹಳ ಆಕರ್ಷಕ ಹಕ್ಕಿ ಎಂದೇ ಇದರ ವರ್ಣನೆ.
ಅನಸ್ ಎಂಬ ಕುಲಕ್ಕೆ ಸೇರಿದ ಈ ಪಕ್ಷಿಯನ್ನು ಡಬ್ಲಿಂಗ್ ಡಕ್ಸ್ ಎಂದು ಸಹ ಕರೆಯುತ್ತಾರೆ. ಫ್ಲೆಮಿಂಗೋ ಪಕ್ಷಿಗಳಂತೆ ಶರೀರ ರಚನೆಯಲ್ಲಿ (carotenoid pigment) ವರ್ಣದ್ರವ್ಯದ ವ್ಯತ್ಯಾಸದಿಂದಾಗಿ ಇದರ ತಲೆಯ ಭಾಗ ಮಾತ್ರ ಗುಲಾಬಿ ಬಣ್ಣದಿಂದ ಆದದ್ದು. ನಮ್ಮಲ್ಲಿ ಹುಡುಗರು ಹುಡುಗಿಯರಿಗೆ ಶಿಳ್ಳೆ ಒಡೆದಂತೆ ಗಂಡು ಬಾತುಗಳು ಕೂಡ ಶಿಳ್ಳೆಯ ಮೂಲಕ ತಮ್ಮ ಸಂಗಾತಿಯನ್ನು ಮಿಲನಕ್ಕೆ ಕರೆಯುತ್ತವೆ. ಗುಂಪುಗಳಲ್ಲಿ ವಿಹರಿಸುತ್ತಿದ್ದರು ಸಹ ಇವು ಬಹುತೇಕ ಒಂಟಿಯಾಗಿ ಅಥವಾ ತನ್ನ ಸಂಗಾತಿಗಳನ್ನೇ ನೆಚ್ಚಿಕೊಂಡಿರುತ್ತವೆ. ತೊರೆಗಳಲ್ಲಿನ ಎತ್ತರದ ಹುಲ್ಲುಗಾವಲಿನಲ್ಲಿ ಒಣ ಹುಲ್ಲು, ಜೊಂಡು, ಉದುರಿದ ಪುಕ್ಕಗಳು, ಇತರೆ ಮೆದು ಪದಾರ್ಥಗಳಿಂದ ವೃತ್ತಾಕಾರವಾಗಿ ತಮ್ಮ ಗೂಡುಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದವು. ಹೆಣ್ಣು ಬಾತುಗಳು ವಸಂತಕಾಲದಲ್ಲಿ ತನ್ನ ಸಂಗಾತಿಯೊಡನೆ ಕೂಡಿ ಗರಿಷ್ಠ ಒಂಬತ್ತು ಮೊಟ್ಟೆಗಳನ್ನು ಇಡುತಿದ್ದವು.
ಎಷ್ಟೋ ಹಕ್ಕಿಗಳಂತೆ ಇವು ಕೂಡ ಅತಿ ಸಂಕೋಚ ಸ್ವಭಾವದ ಬಾತು ಕೋಳಿಗಳು. ಕೊಳದಲ್ಲಿನ ಕಳೆಗಳು, ನೀರಿನಲ್ಲಿನ ಸಸ್ಯಗಳು, ಸಣ್ಣ ಗಾತ್ರದ ಮೀನು ಹಾಗು ಅದರ ಮೊಟ್ಟೆಗಳು ಇವುಗಳ ಆಹಾರ. ಇದರ ಅಸ್ತಿತ್ವ ಇದ್ದದ್ದು ಬಹುತೇಕ ನಮ್ಮ ಉತ್ತರ ಭಾರತದಲ್ಲಿ ಮತ್ತು ಭಾಗಶಃ ಬಾಂಗ್ಲಾದೇಶ ಹಾಗು ಮ್ಯಾನ್ಮಾರ್ (ಬರ್ಮಾ) ಸ್ವಲ್ಪ ಮಟ್ಟಿಗೆ ಪಾಕಿಸ್ತಾನದಲ್ಲೂ ಸಹ ಕಾಣಿಸಿಕೊಂಡ ದಾಖಲಾತಿ ಇದೆ.
ಇವುಗಳ ಅವನತಿಗೆ ಈಗಲೂ ಸರಿಯಾದ ಕಾರಣಗಳಿಲ್ಲ. ಮೋಜಿನ ಬೇಟೆಗಾರರಿಗೆ ಇವುಗಳ ಗುಲಾಬಿ ಬಣ್ಣದ ತಲೆಯ ಮೇಲೆ ಇನ್ನಿಲ್ಲದ ಆಸೆ, ಮಿಕ್ಕೆಲ್ಲಾ ವಲಸೆ ಹೋಗದ ಹಕ್ಕಿಗಳಿಗೆ ಬಂದಂತಹ ದುಸ್ಥಿತಿ ಇವಕ್ಕೂ ಬಂತು. ಸುಲಭವಾಗಿ ಬೇಟೆಗಾರರಿಗೆ ಕಾಣಸಿಗುತಿದ್ದ ಇವು ಇನ್ನೇನಾಗಿರಬಹುದು ಊಹಿಸಿ! ಆದರೆ ಇದರ ಮಾಂಸವು ಮನುಷ್ಯನ ದೇಹಕ್ಕೆ ಅಸಹಜವಾದದ್ದು ಆದ್ದರಿಂದ ಇವುಗಳನ್ನು ಹಿಡಿದು ಕಲ್ಕತ್ತ ಮಾರುಕಟ್ಟೆಗಳಲ್ಲಿ ಮಾರುತ್ತಿದ್ದರು. ಕೊಳ್ಳುತಿದ್ದ ಜನರಿಗೆ ಇವು ಅಲಂಕಾರಿಕ ವಸ್ತುವಾಗಿತ್ತು. ಮಿಕ್ಕಂತೆ ಕೃಷಿಗಾಗಿ ಅಥವಾ ಕಟ್ಟಡಗಳ ಹಾಗು ರಸ್ತೆ ಸೇತುವೆ ನಿರ್ಮಾಣಕ್ಕೆ ಕೊಳಗಳ ಒತ್ತುವರಿಯಿಂದಾಗಿ ಇವುಗಳು ಆವಾಸನಷ್ಟ ಅನುಭವಿಸಿ ಇಟ್ಟ ಮೊಟ್ಟೆಗಳು ಮರಿಯಾಗದೆ ಕಬಳಿಸಲ್ಪಟ್ಟು ಕ್ರಮೇಣ ಇಡೀ ಸಂತತಿಯೇ ನಾಶವಾಯಿತು ಎಂಬುದು ತಜ್ಞರ ಅಭಿಪ್ರಾಯ.
ಇದರ ಅವನತಿಯ ನಂತರ ಇದರ ಪಳೆಯುಳಿಕೆಗಳನ್ನು ಯುನೈಟೆಡ್ ಕಿಂಗ್ಡಮ್ ನಲ್ಲಿನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಹಾಗು ನೆದರ್ಲೆಂಡಿನ ಮ್ಯೂಸಿಯಂ ನಲ್ಲಿ ಸಂಗ್ರಹಿಸಿಡಲಾಗಿದೆ. 1994 ನಲ್ಲಿ ನಮ್ಮ ಘನ ಸರ್ಕಾರವು ಇದರ ನೆನಪಿನಲ್ಲಿ ಅಂಚೆ ಚೀಟಿಯನ್ನು ಹೊರತಂದಿದೆ. ಆಗಸದಲ್ಲಿ ಹಾರಾಡಬೇಕಾದ ಗುಲಾಬಿ ತಲೆಯ ಬಾತು ಅಂಚೆ ಚೀಟಿ ಮೂಲಕ ಹಾರಾಡುತ್ತಿರುವುದು ದುರದೃಷ್ಟದ ಸಂಗತಿ.
1949 ರಲ್ಲಿ ಕೊನೆಯಾಗಿ ಕಾಣಿಸಿಕೊಂಡ ಇವು ಆನಂತರ ಪತ್ತೆಯಾದ ಅಧಿಕೃತ ವರದಿಯಿಲ್ಲ. ಅದೆಷ್ಟೋ ಸಮೀಕ್ಷೆಗಳು ಪಕ್ಷಿತಜ್ಞರ ಹಾಗು ಉತ್ಸಾಹಿಗಳ ಮೂಲಕ ನೆಡೆದು ಹೋಗಿವೆ ಇದರ ಪತ್ತೆಗೆ ಬಹುಮಾನಗಳು ಕೂಡ ಘೋಷಣೆಯಾಗಿವೆ ಆದರೂ ಇವುಗಳ ಪತ್ತೆಯಾಗುತ್ತಿಲ್ಲ.
ನಿಮಗ್ಯಾರಿಗಾದರು ಕಂಡರೆ ನಮಗೆ ತಿಳಿಸಿ.
ವನ ಹಾಗು ವನ್ಯಜೀವಿಗಳ ರಕ್ಷಣೆ ಮಾನವನ ಆದ್ಯ ಕರ್ತವ್ಯ….
ಕು ಶಿ ಚಂದ್ರಶೇಖರ್