ಕದ್ರಿ ಕಂಬಳ

ಕದ್ರಿ ಕಂಬಳ ಅಥವಾ ಕದ್ರಿ ‘ಮಂಜುನಾಥ ದೇವರ ಕಂಬಳ’ ಎಂದರೆ ಇತಿಹಾಸ ಪ್ರಸಿದ್ಧವಾದುದು. ಕದ್ರಿಕಂಬಳವನ್ನು ‘ ಅರಸು ಕಂಬಳ’ ಎಂದರೆ ಮುನ್ನೂರು ವರುಷಗಳ ಹಿಂದೆ ಮಂಗಳೂರಿನ ಕುಲಶೇಖರದ ಆಳುಪ ರಾಜರು ಪೋಷಿಸಿದ ಕಾರಣ ಈ ಹೆಸರು ಬಂದಿತೆಂದೂ ಹೇಳಲಾಗುತ್ತದೆ‌.

‌‌ ಕಂಬಳ

ನಾನು ಇಂದು ನನ್ನ ಹೆಸರಿನ ಜೊತೆಗೆ ಸೇರಿರುವ ಕದ್ರಿಕಂಬಳ ದ ಬಗ್ಗೆ ಅಂದರೆ ಕರಾವಳಿಯ ಜಾನಪದದ ಹೆಮ್ಮೆಯ ಕ್ರೀಡೆಯೆಂದು ಹೇಳಬಹುದಾದ ‘ ಕಂಬಳ’ ದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಲು ಇಚ್ಚಿಸುತ್ತೇನೆ.

ಕಂಬಳ ಅಥವಾ ಕಂಬುಲ ಎನ್ನುವುದು ಸಾಮಾನ್ಯವಾಗಿ ವ್ಯವಸಾಯಕ್ಕೆ ಸಂಬಂಧಿಸಿದ ಕ್ರೀಡೆ. ಭತ್ತದ ಮೊದಲ ಕೊಯಿಲಿನ ನಂತರ ಸುಗ್ಗಿಯ ಬೆಳೆಗೆ ಈ ಕ್ರೀಡೆ ನಡೆಯುತ್ತದೆ. ಸಾಧಾರಣವಾಗಿ ಕಾರ್ತಿಕ ಮಾಸದ ದೀಪಾವಳಿ ಹಬ್ಬದ ನಂತರ ಚಳಿಗಾಲದಲ್ಲಿ ಅಂದರೆ ದಶಂಬರ, ಜನವರಿ ತಿಂಗಳಲ್ಲಿ ನಡೆಯುತ್ತದೆ.

ಕಂಬಳಕ್ಕೆ ಧಾರ್ಮಿಕ ಮಹತ್ವವೂ ಇದೆ. ಚಾವಡಿ ದೈವ, ಗ್ರಾಮದೈವ, ಅಥವಾ ಸೀಮೆ ದೈವದ ಪ್ರವೇಶವೂ ಇಲ್ಲಿ ಇದೆ ಎನ್ನಲಾಗುತ್ತದೆ. ಸೂತಕದವರು ಕಂಬಳದ ಕೋಣಗಳ ಆರೈಕೆ ಮಾಡಬಾರದು, ಗದ್ದೆಗಳ ಬದುವಿನಲ್ಲೂ ನಡೆಯಬಾರದು, ಬಸುರಿಗೆ ಏಳು ತಿಂಗಳು ತುಂಬಿದ ಮೇಲೆ ಗದ್ದೆಗೆ ಇಳಿಯಬಾರದು, ಬದುವಿನ ಮೇಲೆ ನಡೆಯಬಾರದು ಹಾಗೂ ಕಂಬಳ ಗದ್ದೆ ಉಳಿದು ಇತರ ಗದ್ದೆ ಉಳಲು ಈ ಕೋಣಗಳನ್ನು ಉಪಯೋಗಿಸುವಂತಿಲ್ಲ ಎಂದು ಹೇಳಲಾಗುತ್ತದೆ.

ಕಂಬಳ ನಡೆಯುವುದು ವಿಶಾಲವಾದ ಗದ್ದೆಗಳಲ್ಲಿ. ಈ ಗದ್ದೆಗಳು ಭೂಮಾಲಕರಿಗೆ ಸೇರಿರುವುದರಿಂದಾಗಿ ಇಲ್ಲಿ ಕಂಬಳದ ಯಜಮಾನರು ಭೂಮಾಲಿಕರೇ ಆಗಿರುತ್ತಾರೆ. ತುಳುನಾಡಿನಲ್ಲಿ ಸಾಮಾನ್ಯವಾಗಿ ಗುತ್ತಿನ ಮನೆಗಳವರೇ ಕಂಬಳ ನಡೆಸುವವರು, ಕೋಣ ಸಾಕುವವರು ಆಗಿರುತ್ತಾರೆ.

ಕಂಬಳ ಪದದ ನಿಷ್ಪತ್ತಿಯನ್ನು ನೋಡಿದಾಗ ಕಂಪ ಎಂಬುದಕ್ಕೆ ಕೆಸರು ಎಂಬ ಅರ್ಥವಿದೆ. ಕಂಪ + ಪೊಲ = ಕಂಬುಲ ಅಥವಾ ಕಳ ಅಂದರೆ ಸ್ಪರ್ಧೆಯ ವೇದಿಕೆ, ಹಾಗಾಗಿ ಕಂಪದ ಕಳ = ಕಂಬಳ ಆಗಿರಬಹುದು ಎನ್ನುವವರೂ ಇದ್ದಾರೆ. ತುಳುವ ನಾಡಿನಲ್ಲಿ ಗದ್ದೆಗೆ ‘ಕಂಡ’ ಎಂದೂ ಹೇಳುವ ಕಾರಣ ‘ಕಂಪದ ಕಂಡ’ ಎಂದೂ ಹೇಳುತ್ತಾರೆ. ಕಂಬಳ ತುಳು ನಾಡಿನ ಪ್ರಮುಖ ಆಚರಣೆ. ಕರಾವಳಿಯಲ್ಲಿ ಕಂಡು ಬರುವ ಕೃಷಿ ಬದುಕಿನ ಒಂದು ಚಾರಿತ್ರಿಕ ಮಜಲು ಇಲ್ಲಿದೆ.

ತುಳುನಾಡು ಎಂದಾಕ್ಷಣ ನೆನಪಾಗುವುದು ಕೃಷಿ ಬೇಸಾಯ, ಭೂತಾರಾಧನೆ, ದೈವಾರಾಧನೆ, ಭೂತಕೋಲ, ಕೋಳಿ ಅಂಕ, ಕಂಬಳ ಇತ್ಯಾದಿ. ಅತ್ಯಂತ ಪುರಾತನ ಜಾನಪದ ಕ್ರೀಡೆಯೇ ಕಂಬಳ. ಕೃಷಿ ರೈತಾಪಿ ಬಂಧುಗಳಿಗೆ, ಬೇಸಾಯದಲ್ಲಿ ತೊಡಗುತ್ತಿದ್ದ ಕೋಣಗಳಿಗೆ ಮನರಂಜನೆಯ ಉದ್ದೇಶದಿಂದ ಹುಟ್ಟಿಕೊಂಡುದಾದರೂ ಮುಂದೆ ಕಂಬಳದ ಕೋಣಗಳನ್ನು ಪ್ರತ್ಯೇಕವಾಗಿ ಸಾಕುವ ಪರಿಪಾಠ ಹುಟ್ಟಿಕೊಂಡಿತು.

ನಮ್ಮ ಮನೆ ಎತ್ತರದ ಜಾಗದಲ್ಲಿದ್ದು ಕದ್ರಿ ಕಂಬಳ ನಡೆಯುವ ಸ್ಥಳ ಕೆಳಗಡೆ ಇರುವುದರಿಂದ ಮನೆಯಲ್ಲಿ ಕುಳಿತುಕೊಂಡೇ ವರುಷ ವರುಷ ಕಂಬಳ ನೋಡಿಕೊಂಡೇ ಬೆಳೆದವರು ನಾವು. ಆ ದಿನ ನಮ್ಮ ತೋಟದಲ್ಲಿ ಕಂಬಳ ನೋಡಲು ಜನರು ಸೇರುತ್ತಿದ್ದರು. ಆ ಗೌಜಿ, ಗಮ್ಮತ್ತು, ಡೋಲು, ಕಹಳೆ ವಾದ್ಯಗಳು, ಕೊರಗರು ಊದುವ ಕೊಳಲ ದನಿ, ಪೂಕಾರೆ, ಮೈ ಮೇಲೆ ರಂಗಿನ ಬಟ್ಟೆ, ಕೊಂಬುಗಳಿಗೆ ಚೆಂಡು ಹೂವು, ಪಿಂಗಾರದಿಂದ ಅಲಂಕರಿಸಿ, ಹಾರವನ್ನು ಹಾಕಿಸಿಕೊಂಡು ರಾಜ ಠೀವಿಯಲ್ಲಿ ಒಂದೊಂದು ಜತೆ ಕೋಣಗಳು ಲಾರಿಯಿಂದ ಇಳಿದು ಬರುವಾಗಲೂ ಕರತಾಡನದೊಂದಿಗೆ , ಹುಯಿಲೆಬ್ಬಿಸಿ ಅವುಗಳನ್ನು ಬರಮಾಡಿಕೊಳ್ಳುವ ಸಂಭ್ರಮ, ಮೈಕಿನಲ್ಲಿ ಯಾವ ಯಾವ ಗುತ್ತುವಿನ ಕೋಣಗಳು ಎಂಬ ವಿವರಣೆಯೂ ಇರುತ್ತಿತ್ತು.

ಕದ್ರಿ ಕಂಬಳಕ್ಕೆ ಅತ್ತಾವರ, ಇನೊಳಿ, ಕುತ್ತಾರು, ಬಡಿಲಗುತ್ತು, ಮುನ್ನೂರುಗುತ್ತು, ಉಳ್ಳಾಲಗುತ್ತು, ಆಮುಂಜೆಗುತ್ತು, ಪುತ್ತಿಗೆ ಗುತ್ತು, ತೋಕೂರು ಗುತ್ತು, ಹರೇಕಳ ಗುತ್ತು, ಅಡ್ಯಾರು ಗುತ್ತುಗಳಿಂದ ಪ್ರತಿನಿಧಿಗಳು ಬಂದು ವಿಶೇಷ ಸ್ಥಾನವನ್ನು ಅಲಂಕರಿಸುತ್ತಿದ್ದರು.

ಕದ್ರಿ ಕಂಬಳದಲ್ಲಿ ಈ ಗುತ್ತುಗಳು ಒಂದು ಸೀಮೆಯ ಅರಸರ ಕೈ ಕೆಳಗಿನ ಅಧಿಕಾರಿಗಳಂತೆ ಸ್ಥಾನ – ಮಾನ ಪಡೆಯುವುದು ವಿಜಯನಗರ ಕಾಲಕ್ಕಿಂತಲೂ ಪೂರ್ವದಲ್ಲಿ ಇದ್ದಿರಬಹುದಾದ ಸಂಪ್ರದಾಯವನ್ನು ಸಂಕೇತಿಸುತ್ತದೆ , ಹಾಗಾಗಿ ಅದೇ ರೂಪುರೇಷೆ, ಮರ್ಯಾದೆಯಂತೆ ನಡೆದು ಬಂದಿದೆ ಎನ್ನುತ್ತಾರೆ.

ಕದ್ರಿ ಕಂಬಳಕ್ಕೆ ಕದ್ರಿ ದೇವಸ್ಥಾನದೊಳಗೆ ಇರುವ ಜೋಗಿ ಮಠದ ಜೋಗಿ ಅರಸರು( ನಾಥ ಪಂಥದ) ಮೆರವಣಿಗೆಯಲ್ಲಿ ಬಂದು ಕಂಬಳದ ಗದ್ದೆಗೆ ಪ್ರಸಾದ ಹಾಕಿದ ಮೇಲೆ ಕಂಬಳ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ಡೋಲು, ಗರ್ನಾಲು, ಸಿಡಿಮದ್ದು, ಕೊಂಬು, ವಾದ್ಯ ಘೋಷಗಳು ಇರುತ್ತವೆ.

ಕದ್ರಿ ಕಂಬಳ ಕುಡ್ಲದ ಗುತ್ತಿನಿಂದ ಭೂ ಮಸೂದೆಯಿಂದಾಗಿ ಬೇರೆ ಮನೆತನದ ಬಂಟರಿಗೆ ಬಂದಿತ್ತು ಎನ್ನುತ್ತಾರೆ. ಅವರು ಅಷ್ಟೇ ಶ್ರದ್ಧಾ ಭಕ್ತಿಗಳಿಂದ ಕಂಬಳವನ್ನು ನಡೆಸಿಕೊಂಡು ಹೋಗಿದ್ದರು. ಕದ್ರಿ ಗುತ್ತಿನ ಬಾಲಕೃಷ್ಣ ಶೆಟ್ಟರು ಕಂಬಳವನ್ನು ಬಹಳ ಅದ್ದೂರಿಯಿಂದ ನಡೆಸಿಕೊಂಡು ಬಂದಿದ್ದರು. ಅವರ ಬಳಿಕ ಅವರ ಮಗ ಕದ್ರಿ ನವನೀತ ಶೆಟ್ಟಿಯವರೂ ಬಹಳ ಅದ್ದೂರಿಯಿಂದಲೇ ಕದ್ರಿ ಕಂಬಳವನ್ನು ಮುನ್ನಡೆಸಿದರೂ ಅನಿವಾರ್ಯ ಕಾರಣಗಳಿಂದ ಈಗ ಕೆಲವು ವರ್ಷಗಳ ಹಿಂದೆ ಕದ್ರಿ ಕಂಬಳ ನಿಲ್ಲಲ್ಪಟ್ಟಿತು. ಈಗ ಆ ಸಂಭ್ರಮವೆಲ್ಲಾ ಒಂದು ನೆನಪು ಮಾತ್ರ. ಕಂಬಳ ನಡೆಯುತ್ತಿದ್ದ ಜಾಗದಲ್ಲಿ ಹೀಗೊಂದು ಇತಿಹಾಸವಿತ್ತು ಎಂಬ ಗುರುತೇ ಸಿಗದಂತೆ ಬಹುಮಹಡಿಗಳ ಕಟ್ಟಡ ತಲೆಯೆತ್ತಿದೆ.

ಕಂಬಳದ ಗದ್ದೆಯ ಒಡೆತನ ಗುತ್ತಿನವರಿಗೆ ಸೇರಿದರೂ ಕಂಬಳದ ದಿನ ಗದ್ದೆಯ ಬದುವಿಗೆ ಜೇಡಿ ಮಣ್ಣಿನಿಂದ ಮೆತ್ತುವ ಸಂಪ್ರದಾಯವಿರುತ್ತದೆ. ಕಂಬಳಕ್ಕೆ ದಿನ ಇಡುವಾಗ ಸೀಮೆಗುತ್ತು, ಒತ್ತು ಗುತ್ತಿನವರು, ಅಜಲಿನವರು, ಪರಾಡಿಯವರು ಒಟ್ಟು ಸೇರಿ ತಾಂಬೂಲ ಗೌರವವನ್ನು ನೀಡಲಾಗುತ್ತದೆ. ನಿಗದಿ ಪಡಿಸಿದ ದಿನವನ್ನು ಡೋಲು ಬಡಿದು ಜನರಿಗೆ ತಿಳಿಸುವ ಕೆಲಸ ಅಜಲಿನ ಕೊರಗರದು. ಅದಕ್ಕೆ ಪ್ರತಿಫಲವಾಗಿ ಎಲ್ಲಾ ಮನೆಗಳವರು ನಿಗದಿತ ಪಡಿದಾನ ನೀಡಬೇಕು.

ನನ್ನ ನೆನಪಿನಂಗಳದಲ್ಲಿ ಹಿಂತಿರುಗಿ ನೋಡಿದಾಗ ಕಂಬಳದ ಮುನ್ನಾದಿನ ರಾತ್ರಿ ಹನ್ನೆರಡು ಗಂಟೆ ಮತ್ತು ಬೆಳಗಿನ ಜಾವ ನಾಲ್ಕು ಗಂಟೆಗೆ ಕೊರಗ ಸಮುದಾಯದವರು ಡೋಲು ಬಡಿದು, ಕೊಳಲು ಬಾರಿಸಿ ದೀವಟಿಗೆಯೊಂದಿಗೆ ಕಂಬಳದ ಗದ್ದೆಗೆ ಮೂರು ಸುತ್ತು ಬರುತ್ತಿದ್ದರು. ಸುತ್ತಲೂ ಕವಿದ ದಟ್ಟ ಕತ್ತಲಿನಲ್ಲಿ ಡೋಲಿನ ಶಬ್ದದೊಂದಿಗೆ ದೀವಟಿಗೆ ಹಿಡಿದು ಬಾಯಿಯಲ್ಲಿ ಪಾಡ್ದನದ ರೀತಿಯಲ್ಲಿ ಕಂಬಳದ ಹಾಡುಗಳನ್ನು ಹಾಡಿಕೊಂಡು ಸುತ್ತು ಬರುವುದನ್ನು ನಾವು ಕಿಟಕಿಯ ಮೂಲಕ ನೋಡುತ್ತಿದ್ದೆವು. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಇತರ ದಿನಗಳಲ್ಲಿ ಕಂಬಳದ ಗದ್ದೆಯ ಮೂಲಕ ಯಾವುದೇ ವಾದ್ಯ ಘೋಷ ಹೋಗಬಾರದು. ಮೇನೆ ಅಥವಾ ಪಲ್ಲಕ್ಕಿಯಲ್ಲಿ ಕೂರಿಸಿ ಕಂಬಳ ಗದ್ದೆಯ ಮೂಲಕ ಹಾದು ಹೋಗಬಾರದು. ಕಂಬಳದ ಕಟ್ಟಪುಣಿಯಲ್ಲಿಯೂ ವಾದ್ಯ ಘೋಷಕ್ಕೆ ನಿಷೇಧವಿದೆ.

ಕಂಬಳ ಗದ್ದೆಗೆ ಕೋಣಗಳನ್ನು ಇಳಿಸುವಾಗಲೂ ಆಯಾ ಮನೆಗಳ ಪರಂಪರೆಯ ಅಧಿಕಾರದ ಕ್ರಮದಲ್ಲಿ ಇಳಿಯುತ್ತದೆ. ಕೋಣಗಳನ್ನು ಓಡಿಸುವಾತ ಮತ್ತು ಆತನ ಸಹಾಯಕರಿಗೆ ಬೇರೆ ಬೇರೆ ಗುತ್ತುವಿನವರ ಬಣ್ಣ ಬಣ್ಣದ ಮುಂಡಾಸುಗಳು ಕೆಂಪು, ಹಳದಿ, ಹಸಿರು, ಗುಲಾಬಿ, ಹಳದಿ ಹೀಗೆ ಮುಂಡಾಸಿನ ಬಣ್ಣಗಳಿಂದಲೇ ಯಾವ ಗುತ್ತಿನವರ ಕೋಣಗಳೆಂದು ಗುರುತಿಸುವುದೂ ಇತ್ತು. ಗದ್ದೆಯಿಂದ ಕೋಣಗಳು ಮೇಲೆ ಬರುವ ಗದ್ದೆಗೆ ‘ ಮಂಜೊಟ್ಟಿ ಗದ್ದೆ ‘ ಎಂದು ಹೇಳುತ್ತಾರೆ.

ಕಂಬಳದ ಕೋಣಗಳನ್ನು ಸಾಕುವುದು ಸಾಮಾನ್ಯ ವಿಷಯವಲ್ಲ. ಕಂಬಳದ ಕೋಣಗಳ ಆರೈಕೆ, ಕೋಣಗಳನ್ನು ಓಡಿಸುವ ಜನರ ತಯಾರಿ ಇದು ಖರ್ಚಿನ ಬಾಬ್ತು. ಆದರೆ ಇದು ಪ್ರತಿಷ್ಠೆಯ ಸಂಕೇತವೂ ಹೌದು. ಕೋಣಗಳನ್ನು ಮೀಯಿಸಲೆಂದೇ ನಮ್ಮ ಕದ್ರಿಕಂಬಳದ ಗುತ್ತಿನ‌ ಮನೆಯ ಹತ್ತಿರ ‘ಕೆದು’ ಇತ್ತು. ಅಲ್ಲಿ ಕೋಣಗಳಿಗೆ ಎಣ್ಣೆ ಹಚ್ಚಿ ಮಾಲೀಷು ಮಾಡಿ ಸ್ನಾನ ಮಾಡಿಸುತ್ತಿದ್ದರು. ಈಗ ಆ ಜಾಗದ ಸಮೀಪ ಸ್ಮಾರ್ಟ್ ಸಿಟಿ ಯೋಜನೆಯಡಿ ಕೆರೆಯನ್ನು ಕಟ್ಟಿ ಸುತ್ತಲೂ ಪಾರ್ಕ್ ಮಾಡಲಾಗಿದೆ. ಈಗ ಆ ಕೆರೆಗೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಕದ್ರಿ ಸಾರ್ವಜನಿಕ ಮತ್ತು ಬಿಜೈ ಸಾರ್ವಜನಿಕ ಗಣಪತಿಗಳನ್ನು ವಿಸರ್ಜನೆ ಮಾಡಲಾಗುತ್ತದೆ.

ಕೋಣಗಳನ್ನು ಗದ್ದೆಗಿಳಿಸಿ ಓಟದ ತಯಾರಿಗೆ ನಿಲ್ಲಿಸುವುದೇ ಒಂದು ಸಾಹಸದ ಕೆಲಸ. ಕೋಣಗಳನ್ನು ಓಡಿಸುವವ, ಆತನ ಸಹಾಯಕ್ಕೆ ಸುಮಾರು ಏಳೆಂಟು ಮಂದಿ ಸೇರಿ ಅವುಗಳನ್ನು ಗದ್ದೆಗೆ ಇಳಿಸಿದಾಗ, ಅವುಗಳಿಗೆ ಡೋಲಿನ ಸದ್ದು, ಸುತ್ತಲೂ ನೆರೆದಿರುವ ಜನರು, ಸಿಡಿಮದ್ದಿನ ಶಬ್ದಗಳಿಂದ ಬೆದರಿ ರೊಚ್ಚಿಗೆದ್ದು ಹಠ ಮಾಡುವುದೂ ಇದೆ. ಅವುಗಳನ್ನು ಮಣಿಸಿ, ಗದ್ದೆಯ ಕೆಸರಿನಲ್ಲಿ ಸುತ್ತು ತಿರುಗಿಸಿ ಓಟಕ್ಕೆ ತಯಾರಾಗುವಂತೆ ಮಾಡುವಲ್ಲಿ ಶ್ರಮವಿದೆ. ನಮ್ಮ ಕದ್ರಿ ಕಂಬಳ ‘ಮತ್ಸ್ಯೇಂದ್ರನಾಥ’ ಮತ್ತು ‘ಗೋರಕನಾಥ’ ಜೋಡುಕೆರೆಯಾದದ್ದರಿಂದ ಒಂದು ಜತೆಯನ್ನು ಕಷ್ಟಪಟ್ಟು ನಿಲ್ಲಿಸುವಾಗ ಇನ್ನೊಂದು ಜತೆ ತಿರುಗಿ ನಿಲ್ಲುತ್ತದೆ. ಹೀಗಾಗಿ ಎರಡೂ ಜತೆಯನ್ನು ಸಮವಾಗಿ ನಿಲ್ಲಿಸಿ ಕೆಂಪು ಬಾವುಟ ಎತ್ತಿದ ಕೂಡಲೆ ಕೋಣಗಳ ಬೆನ್ನಿಗೆ ನಾಗರಬೆತ್ತದಿಂದ ಛಟೀರ್ ಎಂದು ಹೊಡೆದು ಓಡಿಸಲಾಗುತ್ತದೆ. ಡೋಲಿನ ಸದ್ದು ಜೋರಾದಂತೆ ಕೋಣಗಳು ಓಡಲಾರಂಭಿಸುತ್ತವೆ. ಮಂಜೊಟ್ಟಿ ಗದ್ದೆ ಏರಿದ ಮೊದಲ ಜತೆ ಕೋಣಗಳನ್ನು ವಿಜೇತವೆಂದು ಪರಿಗಣಿಸಲಾಗುತ್ತದೆ.

ಎರಡೂ ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸುವಾಗ ಓಡಿಸುವಾತನ ಪಾತ್ರವೂ ಮುಖ್ಯವಾಗಿರುತ್ತದೆ. ನಾವು ನೋಡಿದಂತೆ ಕೆಲವೊಮ್ಮೆ ಕೋಣ ಓಡಿಸುವಾತ ಕೆಸರಲ್ಲಿ ಜಾರಿ ಬಿದ್ದು ಬರೀ ಕೋಣಗಳಷ್ಟೇ ಮಂಜೊಟ್ಟಿ ಸೇರುವುದೂ ಉಂಟು. ಅದೊಂದು ಬಾರಿ ನಮ್ಮ ಕದ್ರಿ ಕಂಬಳದ ಗದ್ದೆಯ ಪಕ್ಕದಲ್ಲಿಯೇ ಇರುವ ತೋಡಿಗೆ ಕೋಣಗಳು ಸಿಟ್ಟಿಗೆದ್ದು ಓಡಿಸುವಾತನ ಹಿಡಿತಕ್ಕೆ ಸಿಗದೆ ಬಿದ್ದಿದ್ದೂ ಇದೆ. ಈ ಸಂದರ್ಭದಲ್ಲಿ ಪಶು ವೈದ್ಯರ ತಂಡ, ವೈದ್ಯಕೀಯ ಚಿಕಿತ್ಸೆಯ ಏರ್ಪಾಡೂ ಇರುತ್ತದೆ.

ಕಂಬಳದ ಕೋಣಗಳಿಗೆ ನಾಗರಬೆತ್ತದಲ್ಲಿ ಅಥವಾ ಚಾವಟಿಯಲ್ಲಿ ಹೊಡೆದು ಮರುಕ್ಷಣದಲ್ಲಿಯೇ ಕೆಸರು ನೀರೆರಚುತ್ತಾರೆ ಆ ಉರಿಗೆ, ನೋವಿಗೆ ಅವುಗಳು ರೊಚ್ಚಿಗೆದ್ದು ಓಡುತ್ತವೆ. ಇದು ಪ್ರಾಣಿ ಹಿಂಸೆಯೆಂದು ಜನರಿಂದ ಪ್ರತಿರೋಧವಿದ್ದರೂ, ಕೋಣಗಳ ಮಾಲೀಕರು ಮುಂದೆ ತಾವು ಅವುಗಳನ್ನು ಮಕ್ಕಳಂತೆ ಆರೈಕೆ ಮಾಡುತ್ತೇವೆ ಎಂದು ಭರವಸೆಯನ್ನು ಕೊಡುತ್ತಾರೆ. ಮಂಜೊಟ್ಟಿ ಏರಿದ ಮೇಲೆ ಕೋಣಗಳಿಗೆ ಹೊಡೆಯಬಾರದು ಎಂಬ ನಿಯಮವೂ ಇದೆ.

ಕಂಬಳದಲ್ಲಿ ಕೋಣಗಳ ಹಗ್ಗದ ಓಟ, ಅಡ್ಡ ಹಲಗೆ, ನೇಗಿಲು ಓಟ, ಕಣೆ ಪಲಾಯಿ ಎಂಬ ವೈವಿಧ್ಯಮಯ ಜಾನಪದ ಕ್ರೀಡೆಗಳನ್ನು ಕಾಣಬಹುದು.

1. ಹಗ್ಗದ ಓಟ : ಇಲ್ಲಿ ನೊಗಕ್ಕೆ ಹಗ್ಗ ಕಟ್ಟುತ್ತಾರೆ. ಎರಡೂ ಕೋಣಗಳ ನಡುವೆ ನಿಂತು ಹಗ್ಗ ಹಿಡಿದಾತನೇ ಕೋಣಗಳನ್ನು ಓಡಿಸುವಾತ ಆಗಿರುತ್ತಾನೆ. ಎರಡು ಜತೆ ಕೋಣೆಗಳಲ್ಲಿ ಯಾರ ಕೋಣ ಮೊದಲು ಮಂಜೊಟ್ಟಿ ಹತ್ತುತ್ತದೋ ಅದನ್ನು ವಿಜೇತ ಜತೆಯೆಂದು ಘೋಷಿಸಲಾಗುತ್ತದೆ. ಇದೇ ತರಹ ಬೇರೆ ಬೇರೆ ಜತೆ ವಿಜೇತ ಕೋಣಗಳನ್ನು ಮತ್ತೆ ಮತ್ತೆ ಓಡಿಸಿ ಪ್ರಥಮ, ದ್ವಿತೀಯ, ತೃತೀಯ, ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ.

  1. ಅಡ್ಡ ಹಲಗೆ : ಗದ್ದೆ ಉಳುವಾಗ ಹದ ಮಾಡಲು ಉಪಯೋಗಿಸುವ ಎಂಟು ಅಡಿ ಉದ್ದ ಹದಿನೆಂಟು ಇಂಚು ಅಗಲದ ಹಲಗೆಯನ್ನು ನೊಗಕ್ಕೆ ಮೇಲೆ ನಿಂತು ಓಡಿಸುವುದು. ಕೋಣಗಳನ್ನು ಓಡಿಸುವಾತ ಹಲಗೆಯ ಮೇಲೆ ನಿಂತುಕೊಳ್ಳುತ್ತಾನೆ.
  1. ನೇಗಿಲು ಓಟ : ನೇಗಿಲು ಓಟದಲ್ಲಿ ನೊಗದ ಜಾಗದಲ್ಲಿ ನೇಗಿಲು ಇರುತ್ತದೆ. ಸೂತ್ರಧಾರನು ನೇಗಿಲನ್ನು ಹಿಡಿದಿರುತ್ತಾನೆ. ನೇಗಿಲಿಗೆ ಕೋಣಗಳನ್ನು ಕಟ್ಟಿರುತ್ತಾರೆ.
  2. ಕಣೆ ಪಲಾಯಿ : ಇಲ್ಲಿಯ ವಿಶೇಷವೆಂದರೆ ಕಣೆ ಹಲಗೆಯ ಒಳಗೆ ನೀರು ಚಿಮ್ಮಿಸಲು ತೂತುಗಳಿವೆ. ಕಣ ಹಲಗೆಯ ಮೇಲೆ ನಿಂತಾತ ಕೋಣಗಳನ್ನು ಓಡಿಸುವವನು. ಕಂಬಳ ಗದ್ದೆಯಲ್ಲಿ ನಿಶಾನೆ ಕಂಬ, ಅದರ ಬಳಿ ಪತಾಕೆ ಕಟ್ಟಿರುತ್ತಾರೆ. ಯಾರ ಓಟದ ನೀರು ಅತಿ ಎತ್ತರಕ್ಕೆ ಚಿಮ್ಮುವುದೋ ಅವರ ಕೋಣಗಳನ್ನು ವಿಜಯಿಯೆಂದು ಘೋಷಿಸಲಾಗುವುದು.

ಈ ಮೇಲಿನ ವಿಭಾಗಗಳಲ್ಲಿ ಹಗ್ಗ, ನೇಗಿಲು ಮತ್ತು ಹಲಗೆ ಓಟಗಳಲ್ಲಿ ವೇಗವು ಮುಖ್ಯವಾಗುತ್ತದೆ..

ಉಳಿದ ಕ್ರೀಡೆಗಳಲ್ಲಿ ಇರುವಂತೆ ಲೀಗ್, ಸೆಮಿ ಫೈನಲ್, ಫೈನಲ್ ಓಟಗಳನ್ನು ಇಲ್ಲೂ ಕಾಣಬಹುದು. ಹಿರಿಯ, ಕಿರಿಯ ವಿಭಾಗಗಳೂ ಇರುತ್ತವೆ.

ಕಂಬಳದ ಗದ್ದೆಯಿಂದ ಕೋಣಗಳು ಮಂಜೊಟ್ಟಿ ಗದ್ದೆಗೆ ಹತ್ತಿದ ಮೇಲೆ ಕಂಬಳದ ಗದ್ದೆಯಲ್ಲಿ ‘ಪೂಕಾರೆ ಕಂಬ’ ಹಾಕುತ್ತಾರೆ. ಪೂಕಾರೆ ಕಂಬ ಹಾಕುವ ಮೊದಲು ಅದರ ಹೊಂಡಕ್ಕೆ ಹೂವು, ಅರಿಶಿನ, ಕುಂಕುಮ, ಹಾಲನ್ನು ಎರೆಯುವ ಕ್ರಮವಿದೆ. ಪೂಕಾರೆಯನ್ನು ಸಾಗುವಾನಿ ಮರದಿಂದ ಸಿದ್ಧಪಡಿಸಲಾಗುತ್ತಿದ್ದು ಅದಕ್ಕೆ ಅಂಕಣಗಳಿರುತ್ತವೆ. ಡೋಲು, ವಾದ್ಯ ಘೋಷದೊಂದಿಗೆ ಕಂಬವನ್ನು ನಿಲ್ಲಿಸಲಾಗುವುದು. ಅದು ಗ್ರಾಮದ ಗುತ್ತಿನ ಒಡೆಯನ ಗ್ರಾಮಾಧಿಕಾರವನ್ನು ಸೂಚಿಸುತ್ತದೆ. ಪೂಕಾರೆ ಕಂಬದ ತುದಿಯಲ್ಲಿ ಮರದಿಂದ ಕೋಳಿಯ ಆಕೃತಿಯನ್ನು ರಚಿಸಲಾಗುತ್ತದೆ. ಅರಿಶಿನ, ಕೆಂಪು ಬಣ್ಣದ ಹೂಗಳಿಂದ ಪೂಕಾರೆಯನ್ನು ಸಿಂಗರಿಸಲಾಗುತ್ತದೆ.

ಕಂಬಳ ಆದ ಮೇಲೆ ಕಂಬಳ ಗದ್ದೆಯ ಕಟ್ಟಪುಣಿಯಲ್ಲಿ ಅರಸರು ಅಥವಾ ಗುತ್ತಿನವರು ಕೊಂಬು, ವಾದ್ಯಗಳೊಂದಿಗೆ ಬಿಳಿ ಸತ್ತಿಗೆಯಲ್ಲಿ ಪಲ್ಲಕ್ಕಿ ಪ್ರದಕ್ಷಿಣೆ ಹಾಕುವುದು ಸಂಪ್ರದಾಯವಾಗಿದೆ.

ಪೂಕಾರೆ ಕಂಬ ನೆಟ್ಟ ಮೇಲೆ ಕೋಣಗಳು ಗದ್ದೆಗೆ ಇಳಿಯಬಾರದು. ಒಂದೇ ದಿನದಲ್ಲಿ ನಟ್ಟಿ ಆಗಬೇಕು. ಕದ್ರಿ ಕಂಬಳದಲ್ಲಿ ನಟ್ಟಿ ನೆಡುವಾಗ ಪಾಡ್ದನ ಹೇಳಿಕೊಂಡು ಸಾಲಾಗಿ ನೆಡುವಾಗಿನ ಚೆಂದವೇ ಬೇರೆ. ಬೆಳಗ್ಗೆ ನಾವು ಶಾಲೆಗೆ ಹೋಗಿ ಸಂಜೆ ವಾಪಾಸು ಬರುವಲ್ಲಿ ಗದ್ದೆ ಪೂರ್ತಿ ನೆಟ್ಟಾಗುತ್ತಿತ್ತು. ಆ ದಿನ ಹರಕೆಯಾಗಿ ನಟ್ಟಿಗೆ ಬಂದು ದೇವರ ಕಂಬಳದಲ್ಲಿ ಪಾಲ್ಗೊಳ್ಳುವ ಮಹಿಳೆಯರೇ ಅಧಿಕ.

ಪಣಂಬೂರು ಕಾವರ ಕಂಬಳದ ಕೋಣಗಳು ಕಾಟಿಪಲ್ಲದಿಂದ ತಾವಾಗಿಯೇ ಪಣಂಬೂರು ಕಂಬಳ ಗದ್ದೆಗೆ ಬಂದು ಇಳಿಯುತ್ತಿದ್ದವು ಎಂಬ ಬಗ್ಗೆ ಐತಿಹ್ಯಗಳಿವೆ. ಕಾಟಿಪಲ್ಲ ಹೆಸರು ಬಂದುದೇ ಕಾಟುಗಳಿಂದಾಗಿ. ಕೋಣಕ್ಕೆ ಕಾಟು ಎಂದೂ ಹೇಳುವರು. ಕಾಟಿಪಲ್ಲದ ಕೋಣಗಳನ್ನು ಕಟ್ಟಿ ಹಾಕುವ ಅವಶ್ಯಕತೆಯೇ ಇರಲಿಲ್ಲವೆಂದು ಹೇಳಲಾಗುತ್ತದೆ.

ವಂಡಾರು ಕಂಬಳವು ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಕಂಬಳದ ಕುರಿತಾಗಿ ಜಾನಪದ ಗೀತೆಯೊಂದು ಹೀಗಿದೆ :

  1. ಕಂಬಳ ಕಂಬಳಕಾಗಿ,
    ವಂಡಾರ್ ಕಂಬಳ ಚೆಂದ
    ಅಂಬಾಗಿಲು ಚೆಂದ ಯೆಡ್ತಾಡಿ
    ಅಂಬಾಗಿಲು ಚೆಂದ ಯೆಡ್ತಾಡಿ
    ಸೀತಮ್ಮನ ಮುಂದಲೆ ಚೆಂದಾ ನಕ್ಕೀರು
  2. ಕಾಳ್ಹೋರಿ ಬೆಳ್ಹೋರಿ ಕಂಬಳಕೋಗಿ ಬರುವಾಗ
    ತಾರೋ ಗಿಂಡಿಗಿಯ ಉದಕವು,
    ಈ ಮನೆಯ ಕೋಣನ ಸಿರಿ ಪಾದ ತೊಳೆವಲ್ಲಿ.

ಹಿಂದಿನ ಕಾಲದಲ್ಲಿ ಕಂಬಳದ ಕೋಣಗಳೆಂದರೆ ಆಯಾ ಗ್ರಾಮದ ಚಾವಡಿ ದೈವದ ಅಥವಾ ಕುಟುಂಬ ದೈವದ ‘ಪಟ್ಟದ ಕೋಣಗಳು’. ಈ ಕೋಣಗಳು ರೊಚ್ಚಿಗೆದ್ದರೆ ಚಾವಡಿ ದೈವ ಮುನಿಯಿತು ಎಂಬ ನಂಬಿಕೆಯೂ ಇತ್ತು. ಕೆಲವು ಕಡೆ ಊರಿನ ಕಲಹಗಳ ನ್ಯಾಯ ತೀರ್ಮಾನ ಕಂಬಳದ ಕೂಟಗಳಲ್ಲಿ ಆಗುತ್ತಿದ್ದುದೂ ಇತ್ತು.

ಜೋಡುಕರೆ ಕಂಬಳಗಳ ಹೆಸರು ಹೀಗಿವೆ :
ಮತ್ಸ್ಯೇಂದ್ರನಾಥ – ಗೋರಕನಾಥ ( ಕದ್ರಿ ಕಂಬಳ)
ಸೂರ್ಯ – ಚಂದ್ರ ( ವೇಣೂರು, ಶಿರ್ವ, ಬಾರಾಡಿ, ಬಂಗಾಡಿ, ತಲಪಾಡಿ)
ಕಾಂತಾಬಾರೆ ,- ಬೂದ ಬಾರೆ ( ಐಕಳ )
ಕೋಟಿ – ಚೆನ್ನಯ ( ಮೂಡಬಿದರೆ, ಪುತ್ತೂರು)
ವಿಜಯ – ವಿಕ್ರಮ ( ಉಪ್ಪಿನಂಗಡಿ)
ಲವ – ಕುಶ ( ಮಿಯಾರು)
ಜಯ – ವಿಜಯ ( ಈದು, ಜಪ್ಪಿನಮೊಗರು)
ಮೂಡು – ಪಡು ( ಮುಲ್ಕಿ, ಕಟಪಾಡಿ)
ವೀರ – ವಿಕ್ರಮ ( ಹೊಕ್ಕಾಡಿ, ಗೋಳಿ)
ಕ್ಷೇತ್ರಪಾಲ – ನಾಗರಾಜ ( ಆಲ್ತಾರು)
ನೇತ್ರಾವತಿ – ಫಲ್ಗುಣಿ ( ಪಿಲಿಕುಳ)

ಕಂಬಳವನ್ನು ನೋಡಲು ದೂರದೂರಿನಿಂದ ಜನರು ಬರುತ್ತಾರೆ. ಹೆಣ್ಣು ಮಕ್ಕಳು ಕಂಬಳ ನೋಡಬಾರದು, ನೋಡಿದರೆ ನೂರು ಲಕ್ಷ ದೀಪಗಳನ್ನು ನೋಡಬೇಕು ಎಂದೂ ಹೇಳುವವರಿದ್ದಾರೆ.

ಕಾಂತಾರ ಸಿನಿಮಾದಲ್ಲಿ ತುಳುನಾಡಿನ ದೈವಾರಾಧನೆ ಮತ್ತು ಕಂಬಳವು ವಿಶ್ವ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದುದನ್ನು ಕಾಣಬಹುದು.

ಕಂಬಳ ಗದ್ದೆಗೆ ಒಂದು ಪಾವಿತ್ರ್ಯತೆ ಇದೆ. ಕಂಬಳ ಗದ್ದೆಯ ಕೆಸರು ನೀರನ್ನು ಮನೆಗೆ, ಹಟ್ಟಿಗೆ , ತಲೆಗೆ ಪ್ರೋಕ್ಷಣೆ ಮಾಡಿ, ತೀರ್ಥದಂತೆ ಸೇವಿಸುತ್ತಿದ್ದ ಗುತ್ತಿನ ಗುರಿಕಾರರನ್ನು, ಕೋಣಗಳನ್ನು ಓಡಿಸುವವರನ್ನು ಕಾಣಬಹುದು.

ಕಂಬಳದಲ್ಲಿ ಈಗ ಬಹುಮಾನವಾಗಿ ಚಿನ್ನದ, ಬೆಳ್ಳಿಯ ಪದಕಗಳನ್ನು ಪ್ರಶಸ್ತಿ ಬಹುಮಾನವಾಗಿ ಕೊಡಲು ಪ್ರಾಯೋಜಕರೂ ಮುಂದೆ ಬರುತ್ತಿದ್ದಾರೆ. ಕೃತಕ ಕರೆಗಳನ್ನು ನಿರ್ಮಿಸಿ ಕಂಬಳವನ್ನು ಏರ್ಪಡಿಸಲಾಗುತ್ತದೆ. ಮಂಗಳೂರು ಅಡ್ಯಾರ್ ಗಾರ್ಡನ್ ನಲ್ಲಿ ಮಂಗಳೂರು ಕಂಬಳ ಮಾತ್ರವಲ್ಲದೆ ಕಳೆದ ವರ್ಷದಿಂದ ರಾಜಧಾನಿ ಬೆಂಗಳೂರಿನಲ್ಲೂ ಕಂಬಳದ ಸಂಭ್ರಮ ಏರ್ಪಟ್ಟಿದೆ. ಕಂಬಳ ಕ್ಷೇತ್ರದ ಫಲಾನುಭವಿಗಳಿಗೆ ಪಟ್ಲ ಫೌಂಡೇಶನ್ ವತಿಯಿಂದ ಅಪಘಾತ ವಿಮೆಯನ್ನೂ ಕೊಡಮಾಡಲಾಗುತ್ತದೆ.

2014 ರಲ್ಲಿ ಪ್ರಾಣಿ ದಯಾ ಸಂಘದವರ ಮೊಕದ್ದಮೆಯ ಆಧಾರದ ಮೇಲೆ ಕಂಬಳದ ಮೇಲೆ ಭಾರತದ ಸುಪ್ರೀಂ ಕೋರ್ಟ್ ನಿಷೇಧವನ್ನು ಹೇರಿದ್ದರೂ ಈಗ ಕೆಲವು ನಿಯಮಗಳನ್ನು ರೂಪಿಸಿ ಅನುಮತಿ ನೀಡಲಾಗಿದೆ.

ಓಟದ ಕೋಣಗಳಿಗೆ ಖರ್ಚು ಅಧಿಕವಾದರೂ, ಆರೈಕೆ ಮಾಡಿ ಪ್ರೀತಿಸಿ , ಅವುಗಳಿಗೆಂದೇ ಪ್ರತ್ಯೇಕ ಈಜುಕೊಳಗಳನ್ನೂ ನಿರ್ಮಿಸಿದವರಿದ್ದಾರೆ.

900 ವರ್ಷಗಳ ಇತಿಹಾಸವಿರುವ ನಮ್ಮ ತುಳುನಾಡಿನ ಜಾನಪದ ಕ್ರೀಡೆ ಕಂಬಳವು ಪಾರಂಪರಿಕ ಸೊಗಡನ್ನು, ಕೃಷಿ ಸಂಬಂಧಿತ ಗದ್ದೆ ಸಂಸ್ಕೃತಿಯನ್ನೂ ಉಳಿಸಿಕೊಂಡು ಬಂದಿರುತ್ತದೆ. ಅದೇನಿದ್ದರೂ ನಮ್ಮ ಕಂಬಳ ನಮ್ಮ ಹೆಮ್ಮೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪರಾಮರ್ಶನ :

  1. ಬಂಟರು ಒಂದು ಸಮಾಜೋ – ಸಾಂಸ್ಕೃತಿಕ ಅಧ್ಯಯನ. ಇಂದಿರಾ ಹೆಗಡೆ.
  2. ಜಾನಪದ ಜಗತ್ತು. ಪ್ರವೀಣ್ ಜೆ.ಕೆ.

ಕದ್ರಿ ಕಂಬಳ ರೇಖಾದೇವಿ

Related post