ಕನ್ನಡದ ಕುವರ ರಾಜಕುಮಾರ
“ಡಾ.ರಾಜ್” ಹೆಸರು ಕೇಳಿದರೆ ಸಾಕು ಒಂದು ಅದ್ಭುತವಾದ ಚೈತನ್ಯ ಸಮಸ್ತಕೋಟಿ ಕನ್ನಡಿಗರಲ್ಲಿ ಥಟ್ಟನೆ ಆವರಿಸಿಕೊಳ್ಳುತ್ತದೆ.
ಮೇರು ಪರ್ವತದಂತ ಗುಣ, ಅದ್ಬುತ ನಟ, ಅದ್ಬುತ ಗಾಯಕ, ಸ್ಪುರದ್ರೂಪಿ ಸುಂದರಾಂಗ, ಕನ್ನಡ ಭಾಷೆಯನ್ನೂ ಇನ್ನಿಲ್ಲದಂತೆ ಪ್ರೀತಿಸಿ ಅದ್ಭುತವಾಗಿ, ಸ್ಪಷ್ಟವಾಗಿ (ಮೂರನೇ ಕ್ಲಾಸ್ ಓದಿದ್ದರು ಸಹ) ಉಚ್ಚರಿಸಿದ, ಕನ್ನಡ ಚಿತ್ರರಂಗವ ಬಿಟ್ಟು ಬೇರೆಲ್ಲೂ ಹೋಗದೆ ಕನ್ನಡವನ್ನೇ ಉಸಿರಾಗಿಸಿಕೊಂಡು, ಕನ್ನಡ ಚಳುವಳಿಯಲ್ಲಿ (ಗೋಕಾಕ್ ಚಳುವಳಿ) ಭಾಗವಹಿಸಿ, ಕನ್ನಡ ಪ್ರೇಕ್ಷಕರಿಗೆ ಕಡೆತನಕ ಸದಭಿರುಚಿಯ ಚಿತ್ರಗಳನ್ನೇ ಕೊಟ್ಟು ಭೌತಿಕವಾಗಿ ಕಣ್ಮರೆಯಾದರು ಜನಮಾನಸದಲ್ಲಿ ಎಂದೆಂದೂ ಮುಳುಗದ ಸೂರ್ಯನಾಗಿರುವ ಡಾ. ರಾಜ್ ಹುಟ್ಟಿದ ದಿನ ಏಪ್ರಿಲ್ 24. ಅಭಿಮಾನಿ ದೇವರುಗಳಿಂದ “ಡಾ.ರಾಜ್ ಉತ್ಸವ” ಎಂದೇ ಆಚರಿಸಲ್ಪಡುವ ಅವರ ಹುಟ್ಟಿದ ದಿನದಂದು ಡಾ. ರಾಜ್ ರ ಕುರಿತು ಒಂದಷ್ಟು ಆಸಕ್ತಿಕರ ಸಂಗತಿಗಳನ್ನು (ಹಿಂದೆ ತಿಳಿದಿದ್ದರೂ) ಮತ್ತೊಮ್ಮೆ ನೆನಪಿಸಿಕೊಳ್ಳೋಣ.
ಕನ್ನಡ ಚಿತ್ರಗಳಲ್ಲಿ ಮಾತ್ರ ನಟಿಸಿದ ಕರ್ನಾಟಕ ರತ್ನ
ಡಾ. ರಾಜ್ ಎಲ್ಲರಿಗೂ ತಿಳಿದಂತೆ ಕೊನೆವರೆಗೂ ಬೇರೆ ಭಾಷೆಯ ಚಿತ್ರದಲ್ಲಿ ನಟಿಸಲಿಲ್ಲ. ತಮ್ಮ ಭಾಷೆಯ ಚಿತ್ರದಲ್ಲಿ ನಟಿಸಲು ಕೇಳಿಕೊಂಡ ಕನ್ನಡೇತರ ನಿರ್ಮಾಪಕರು ಒಬ್ಬಿಬ್ಬರಲ್ಲ. ಅಮಿತಾಭ್ 80 ರ ದಶಕದಲ್ಲಿ ತನ್ನ ನಟನಾವೃತ್ತಿಯಲ್ಲೇ ಉತ್ತುಂಗ ಶಿಖರದಲ್ಲಿದ್ದ ಸಮಯ. ಅವರ ಹಿಂದಿ ಚಿತ್ರ “ಕೂಲಿ” ಬಹುಭಾಗ ಕರ್ನಾಟಕದಲ್ಲೇ ಚಿತ್ರಿತಗೊಂಡಂತಹ ಸಮಯದಲ್ಲಿ ಅದರ ನಿರ್ಮಾಪಕರಿಗೆ ಆ ಚಿತ್ರವನ್ನು ದಕ್ಷಿಣ ಭಾರತದಲ್ಲಿ ಹೆಚ್ಚು ಯಶಸ್ವಿಯಾಗಬೇಕೆಂದು ಚಿತ್ರದಲ್ಲಿ ಡಾ. ರಾಜ್ ಒಂದು ಪುಟ್ಟ ಪಾತ್ರದಲ್ಲಿ ಅಭಿನಯಿಸಬೇಕೆಂದು ಕೋರಿಕೆಯಿಟ್ಟರು. ಸ್ವತಃ ಅಮಿತಾಭ್ ಭಕ್ತ ಪ್ರಹ್ಲಾದ ಚಿತ್ರೀಕರಣದ ವೇಳೆ ಸ್ಟುಡಿಯೋ ಗೆ ಭೇಟಿ ಕೊಟ್ಟು ವಿನಂತಿಸಿದರು ಸಹ ಡಾ. ರಾಜ್ ಒಪ್ಪಲಿಲ್ಲ. ಆಗ ಅಮಿತಾಭ್ ಹಾಗು ನಿರ್ಮಾಪಕರು “ಸರ್ ಚಿತ್ರದಲ್ಲಿ ನೀವು ಏನೂ ಮಾತನಾಡಬೇಕಿಲ್ಲ, ರೈಲಿನಿಂದ ನೀವು ಇಳಿದಾಗ ಕೂಲಿ ಪಾತ್ರದಾರಿ ಅಮಿತಾಭ್ ನಿಮ್ಮ ಲಗೇಜ್ ಅನ್ನು ಹೊತ್ತು ಒಯ್ಯುತ್ತಾನೆ ಅಷ್ಟೇ” ಎಂದು ಪರಿಪರಿಯಾಗಿ ಕೇಳಿಕೊಂಡರು ಸಹ ರಾಜ್ ವಿನಯವಾಗೇ ತಮ್ಮ ಕನ್ನಡ ಭಾಷೆಯ ಬಗೆಗಿನ ಪ್ರೀತಿ ಹಾಗು ತಮ್ಮ ಧೋರಣೆಯನ್ನು ತಿಳಿಸಿದರು.
ಇದಕ್ಕೂ ಮೊದಲು ಪೃಥ್ವಿರಾಜ್ ಕಪೂರ್ (ರಾಜಕಪೂರ್ ರವರ ತಂದೆ) ತಮ್ಮ ಜೊತೆ ನಟಿಸಲು ವಿನಂತಿಸಿಕೊಂಡಿದ್ದರೂ ಅದು ವಿಫಲವಾಗಿ ಅವರೇ ಡಾ. ರಾಜ್ ಜೊತೆ ಅವರ ತಂದೆಯ ಪಾತ್ರಧಾರಿಯಾಗಿ “ಸಾಕ್ಷಾತ್ಕಾರ” ಚಿತ್ರದಲ್ಲಿ ಅಭಿನಯಿಸಿದ್ದರು ಅಷ್ಟೇ ಅಲ್ಲದೆ ಕನ್ನಡದಲ್ಲೇ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿ ಅಣ್ಣಾವ್ರ ಸಂತೋಷಕ್ಕೆ ಕಾರಣರಾಗಿದ್ದರು. ಕನ್ನಡ ಚಿತ್ರವಲ್ಲದೆ ರಾಜ್ ರ ಚಿತ್ರಗಳು ಆಪರೇಷನ್ ಡೈಮಂಡ್ ರಾಕೆಟ್ (ನೇಪಾಳ್) ಹೊರತುಪಡಿಸಿ ಇನ್ನೆಲ್ಲವೂ ಸ್ವದೇಶದಲ್ಲೇ ಚಿತ್ರಿಸಿದಂತಹವು.
ನಟನಾ ಪ್ರಭಾವಿತ
ಡಾ. ರಾಜ್ ತಮ್ಮ ಚಿತ್ರಗಳಿಂದ ತಮ್ಮ ನಟನೆಯಿಂದ ಆಯ್ಕೆ ಮಾಡಿಕೊಳ್ಳುತ್ತಿದ್ದ ಪಾತ್ರಗಳಿಂದ ಸಹ ಎಲ್ಲರಿಗೂ ಆದರ್ಶಪ್ರಾಯವಾಗಿದ್ದರು. ಪುರಾಣ ಚಿತ್ರಗಳಲ್ಲಿ ದೇವರಾಗಿ, ಐತಿಹಾಸಿಕ ಸಿನೆಮಾಗಳಲ್ಲಿ ರಾಜನಾಗಿ, ಸೈನಿಕನಾಗಿ, ಸಾಮಾಜಿಕ ಚಿತ್ರಗಳಲ್ಲಿ ಎಲ್ಲರೂ ಮೆಚ್ಚುವ ವಿವಿಧ ತರಹದ ನಾಯಕನಾಗಿ ಅವರ ಅಭಿನಯ ಪಾತ್ರಗಳು ಅದೆಷ್ಟೋ ಜನರಿಗೆ ಮಾದರಿಯಾಗಿವೆ . ಜೀವನಚೈತ್ರ ದಲ್ಲಿನ ಅವರ ಅಭಿನಯದಿಂದ ಅದೆಷ್ಟೋ ಜನರು ಸ್ವಯಂಪ್ರೇರಿತರಾಗಿ ಕುಡಿತ ಬಿಟ್ಟಿದ್ದರು!. 1972 ರಲ್ಲಿ ಅವರು ನಟಿಸಿದ ಅಮೋಘ ಯಶಸ್ವಿ ಚಿತ್ರ “ಬಂಗಾರದ ಮನುಷ್ಯ” ನಲ್ಲಿ ಅವರ ರೈತನ ಪಾತ್ರ ಈಗಲೂ ಚಿರಸ್ಮರಣೀಯ. ಅವರ ಮಾದರಿ ರೈತನ ಪಾತ್ರದಲ್ಲಿನ ಅವರ ನಟನೆ ಅದೆಷ್ಟು ಪ್ರಭಾವಶಾಲಿಯೆಂದರೆ ಲೆಕ್ಕವಿಲ್ಲದಷ್ಟು ಸಾಮಾನ್ಯ ಜನರು, ಕಾರ್ಮಿಕರು, ಕರಣಿಕರು ಮತ್ತು ಇನ್ನೂ ಅನೇಕ ವೃತ್ತಿರಂಗದಲ್ಲಿದ್ದವರು ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರುಗಳಲ್ಲಿದ್ದ ತಮ್ಮ ಹೊಲ ಗದ್ದೆಗೆ ರೈತರಾಗಲು ಮರಳಿದರು. ಅದರಲ್ಲಿ ನೆನಪಿಸಿಕೊಳ್ಳಬೇಕಾದ ಮುಖ್ಯ ಹೆಸರು ಡೆಕ್ಕನ್ ಏರ್ವೇಸ್ ಕಟ್ಟಿದ ಲೆಫ್ಟಿನೆಂಟ್ ಕ್ಯಾಪ್ಟನ್ ಗೋಪಿನಾಥ್ ರವರದು.
ಬದಲಾವಣೆಗೊಂಡ ಡಾ. ರಾಜ್ ಚಿತ್ರಗಳ ಕ್ಲೈಮಾಕ್ಸ್
ರಾಜ್ ರವರ “ಬಿಡುಗಡೆ” ಚಲನಚಿತ್ರ 1973 ರಲ್ಲಿ ತೆರೆಕಂಡಿತು. ಯಾರೋ ಮಾಡಿದ ಕೊಲೆಯ ಅಪರಾಧಕ್ಕೆ ಅಶ್ವಥ್ (ರಾಜ್ ರವರ ತಂದೆ ಪಾತ್ರದಾರಿ) ರವರಿಗೆ ನ್ಯಾಯಾಲಯ ಮರಣದಂಡನೆಯನ್ನು ವಿಧಿಸುತ್ತದೆ ಮತ್ತು ರಾಜ್ ಚಿತ್ರದ ಕೊನೆಯಲ್ಲಿ ಅಶ್ವಥ್ ರವರ ಬಿಡುಗಡೆಗೆ ಬೇಕಾದ ದಾಖಲೆ ತರುವಷ್ಟರಲ್ಲಿ ನೇಣು ಹಾಕಿಬಿಡಲಾಗಿ ರಾಜ್ ಕ್ಲೈಮಾಕ್ಸ್ ನಲ್ಲಿ ಅಸಹಾಯಕತೆಯಿಂದ ವ್ಯಥೆಪಡುತ್ತಾರೆ, ಇದು ಚಿತ್ರದ ಕೊನೆಯಾಗಿತ್ತು. ಆದರೆ ಬಿಡುಗಡೆಗೊಂಡ ಕೆಲವೇ ದಿನಗಳ ನಂತರ ಪ್ರೇಕ್ಷಕರ ಒತ್ತಾಯಕ್ಕೆ ಮಣಿದು ರಾಜ್ ಚಿತ್ರದ ಕೊನೆಯಲ್ಲಿ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಕೊಟ್ಟು ಅಶ್ವಥ್ ರನ್ನು ನೇಣುಗಂಬದಿಂದ ಉಳಿಸುವ ದೃಶ್ಯವನ್ನು ತೆಗೆದು ಹೊಸ ಕ್ಲೈಮಾಕ್ಸ್ ಅಳವಡಿಸಲಾಯಿತು. ಲೇಖಕಿ ವಾಣಿ ಯವರ “ಎರಡು ಕನಸು” ಕಾದಂಬರಿಯ ಕೊನೆಯಲ್ಲಿ ಎರಡು ನಾಯಕಿಯರೂ ನಾಯಕನಿಗೆ ಸಿಗದೇ ಎರಡೂ ಕನಸೇ ಎಂಬ ಅರ್ಥ ಬರುವ ರೀತಿಯಲ್ಲಿ ಬರೆದಿದ್ದರು. ರಾಜ್ ನಟಿಸಿದ “ಎರಡು ಕನಸು” ಚಿತ್ರಕ್ಕಾಗಿ ಲೇಖಕಿ ವಾಣಿಯವರ ಒಪ್ಪಿಗೆ ಪಡೆದು ಚಿತ್ರದ ಕೊನೆಯಲ್ಲಿ ಕಲ್ಪನಾ ರಾಜ್ ರಿಗೆ ದಕ್ಕುವಂತೆ ಚಿತ್ರಿಸಲಾಯಿತು.
ಡಾ. ರಾಜ್ ರ ದುರಂತ ಪಾತ್ರದಲ್ಲಿನ ಅಮೋಘ ನಟನೆ
“ಕಸ್ತೂರಿನಿವಾಸ” ಚಿತ್ರದಲ್ಲಿನ ರಾಜ್ ರವರ ಅಮೋಘ ಅಭಿನಯ ಎಲ್ಲರೂ ನೋಡಿರುವಂತದ್ದೇ. ಅದರಲ್ಲಿ ಕೊನೆಗೆ ಡಾ. ರಾಜ್ ಎಲ್ಲವನ್ನು ಕಳೆದುಕೊಂಡು ಮರಣಹೊಂದುವಂತ ದುರಂತ ಪಾತ್ರ. ಈ ಚಿತ್ರದ ಕಥೆಯನ್ನು ಮೊದಲಿಗೆ ತಮಿಳಿನಲ್ಲಿ ಶಿವಾಜಿ ಗಣೇಶನ್ ರವರನ್ನು ಒಪ್ಪಿಸಲು; ದುರಂತ ಪಾತ್ರವಾದ್ದರಿಂದ ನಾನು ಮಾಡಲಾರೆ ಎಂದು ಶಿವಾಜಿ ಗಣೇಶನ್ ನಿರಾಕರಿಸುತ್ತಾರೆ, ಆದರೆ ಅದೇ ಪಾತ್ರವನ್ನು ಕನ್ನಡದಲ್ಲಿ ರಾಜ್ ರವರು ಅದ್ಭುತವಾಗಿ ನಟಿಸಿ ಚಿತ್ರ ಅತ್ಯಂತ ಯಶಸ್ವಿಯಾಗಿ ನಂತರ ಅದೇ ಶಿವಾಜಿ ಗಣೇಶನ್ ಚಿತ್ರದ ಹಕ್ಕುಗಳನ್ನು ದುಪ್ಪಟ್ಟು ಹಣ ನೀಡಿ ಖರೀದಿಸಿ “ಅವಂಧನ್ ಮನಿತನ್” ಎಂಬ ಹೆಸರಿನಲ್ಲಿ ತಮಿಳು ಚಿತ್ರ ತೆಗೆದರೂ ಸಹ ಆ ಚಿತ್ರ ಸೋತುಹೋಯಿತು. ಅದೇ ಪಾತ್ರವನ್ನು ಹಿಂದಿಯಲ್ಲಿ ಸಂಜೀವ್ ಕುಮಾರ್ “ಶಾಂದಾರ್” ಎಂಬ ಚಿತ್ರದಲ್ಲಿ ನಟಿಸಿದರು ಅದೂ ಕೂಡ ಯಶಸ್ವಿಯಾಗಲಿಲ್ಲ.
ರಾಜ್ ಈಸ್ ಬಾಂಡ್ – ಜೇಮ್ಸ್ ಬಾಂಡ್
ಯಶಸ್ವಿ ಬಾಂಡ್ ಚಿತ್ರಗಳ ಕಾಲದಲ್ಲಿ ಅನೇಕ ಬಾಂಡ್ ಪಾತ್ರದಾರಿಗಳು ಬದಲಾದರು ಮತ್ತು ಈಗಲೂ ಆ ಪಾತ್ರಕ್ಕೆ ಹೊಸ ಹೊಸ ಮುಖಗಳನ್ನು ತರುತ್ತಿದ್ದಾರೆ ಆದರೆ ಕನ್ನಡದಲ್ಲಿ ನಾಲ್ಕು ಬಾಂಡ್ ಚಿತ್ರಗಳಲ್ಲಿ ಯಶಸ್ವಿಯಾಗಿ ನಟಿಸಿದ ಒಬ್ಬರೇ ಅದು ಡಾ. ರಾಜ್. ಮೊದಲ ಬಾಂಡ್ ಚಿತ್ರ ಜೇಡರ ಬಲೆ, ಅನಂತರ ಕ್ರಮೇಣವಾಗಿ ಆಪರೇಷನ್ ಜಾಕ್ ಪಾಟ್ (ಹಿಂದಿ ಚಿತ್ರನಟಿ ರೇಖಾ ರ ಮೊದಲ ಚಿತ್ರ), ಗೋವಾದಲ್ಲಿ ಸಿ ಐ ಡಿ 999, ಕೊನೆಯ ಚಿತ್ರ ಆಪರೇಷನ್ ಡೈಮಂಡ್ ರಾಕೆಟ್. ಈ ನಾಲ್ಕು ಚಿತ್ರಗಳ ಕಾಲಾವಧಿ 10 ವರ್ಷವಾದರೂ ಇವೆಲ್ಲ ಚಿತ್ರಗಳಲ್ಲೂ ರಾಜ್ ರವರ ದೈಹಿಕ ಫಿಟ್ನೆಸ್ ಅದ್ಬುತ. ಒಮ್ಮೆ ಡಾ. ರಾಜ್ ರವರ ಮನೆಗೆ ಅಂದಿನ ಕಾಲೇಜು ಯುವತಿಯರ ಒಂದು ದಂಡೇ ಬಂದು ನಾವು ರಾಜ್ ರನ್ನು ಬೆತ್ತಲೆ ಎದೆಯಲ್ಲಿ ನೋಡಬೇಕು ಎಂದು ಕೋರಿಕೊಂಡರಂತೆ. ಎಂದಿನಂತೆ ಡಾ. ರಾಜ್ ಸಂಕೋಚಗೊಂಡರು ಮಡದಿ ಪಾರ್ವತಮ್ಮನವರು ಒಪ್ಪಿಕೊಂಡರಂತೆ. ಆಗ ಡಾ. ರಾಜ್ ತಮ್ಮ ಶರ್ಟ್ ಅನ್ನು ತೆಗೆಯಲು ಯುವತಿಯರು ಕಣ್ತುಂಬಿಸಿಕೊಂಡು ಸಂತೋಷದಿಂದ ಹೊರಹೋದರಂತೆ ಆಗಿತ್ತು ಡಾ. ರಾಜ್ ರವರ ಫಿಟ್ನೆಸ್ ಅಷ್ಟೇ ಯಾಕೆ ಅವರು ತೀರಿಕೊಂಡಾಗ ಅವರ ಸೊಂಟದ ಸುತ್ತಳತೆ 28 ಎಂದು ಅವರ ಸಮೀಪವರ್ತಿಗಳು ಹೇಳುತ್ತಾರೆ. (ಜೆ. ಬಿ. ಆರ್ ಫೇಸ್ಬುಕ್ ಮುಖಪುಟದಿಂದ)
ಡಾಕ್ಟರೇಟ್ ಪಡೆದ ಮೊದಲ ನಟ
ಮೊದಲೆಲ್ಲ ಡಾಕ್ಟರೇಟ್ ಪದವಿಯನ್ನು ನಿರ್ಧಿಷ್ಟ ವಿಷಯದಲ್ಲಿ ಸಂಶೋದನೆಯಲ್ಲಿ ನಿರತರಾದವರಿಗೆ ಮಾತ್ರ ಕೊಡುತ್ತಿದ್ದರು.
ಡಾ. ರಾಜ್ ರ ನಟನಾ ಸಮರ್ಪಣೆಗಾಗಿ ಮೈಸೂರು ವಿಶ್ವವಿದ್ಯಾನಿಲಯ 1976 ರಲ್ಲಿ ಡಾಕ್ಟರೇಟ್ ಪದವಿಯನ್ನು ಕೊಟ್ಟು ಗೌರವಿಸಿತು. ಇಡೀ ಭಾರತ ಚಿತ್ರರಂಗದಲ್ಲೇ ಮೊದಲ ಗೌರವ ಡಾಕ್ಟರೇಟ್ ಪದವಿ ನೀಡಲ್ಪಟ್ಟ ನಟ ಡಾ. ರಾಜ್ ಕುಮಾರ್.
ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್
1965 ರಲ್ಲೇ ರಾಜ್ ನಟಿಸಿದ ನಾಂದಿ ಚಲನಚಿತ್ರವು ಫ್ರಾನ್ಸ್ ನಲ್ಲಿ ನೆಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೆಂಟುಕಿ ಎಂಬ ರಾಜ್ಯದಲ್ಲಿ “ಕೆಂಟುಕಿ ಕರ್ನಲ್” ಎಂಬ ವಿಶಿಷ್ಟವಾದ ಪ್ರಶಸ್ತಿಯನ್ನು ಅಲ್ಲಿನ ಗವರ್ನರ್ ಕೊಡಮಾಡುತ್ತಾರೆ. ಪ್ರಪಂಚದಲ್ಲೇ ಎಲ್ಲಾ ತರಹದ ಪಾತ್ರಗಳಿಗೆ ಸೂಕ್ತ ಹೊಂದುವ ವ್ಯಕ್ತಿ ಯಾರೆಂದು ಹುಡುಕಲಾಗಿ ಅದೆಷ್ಟೋ ನಟರುಗಳ ಚಿತ್ರಗಳನ್ನು ಅವರ ನಟನೆಯನ್ನು ವಿಮರ್ಶಿಸಿ ಎಲ್ಲಕ್ಕೂ ಒಪ್ಪುವಂತಹ ಏಕೈಕ ನಟ ಎಂದು ಡಾ. ರಾಜ್ ರವರಿಗೆ 1985 ರಲ್ಲಿ “ಕೆಂಟುಕಿ ಕರ್ನಲ್” ಎಂಬ ಪ್ರಶಸ್ತಿಯನ್ನು ಅತ್ಯಂತ ಗೌರವ ಪೂರ್ಣವಾಗಿ ನೀಡಲಾಯಿತು.
ಗಾನ ಗಂಧರ್ವ
ಡಾ. ರಾಜ್ ನಾಯಕನಷ್ಟೇ ಅಲ್ಲದೆ ಗಾಯಕರಾಗಿಯೂ ಸುಪ್ರಸಿದ್ದರು. ಸಂಪತ್ತಿಗೆ ಸವಾಲ್ ಚಿತ್ರದಿಂದ (ಅಲ್ಲಿಯವರೆಗೂ ಪಿ. ಬಿ. ಶ್ರೀನಿವಾಸ್ ರಾಜ್ ರವರ ಖಾಯಂ ಗಾಯಕರಾಗಿದ್ದರು) ತಮ್ಮ ಎಲ್ಲಾ ಚಿತ್ರಗಳಲ್ಲೂ ರಾಜ್ ರವರೇ ಹಾಡಿ ಮುಂದೆ 1988 ರಿಂದ ಹಂಸಲೇಖಾರವರ ಕೋರಿಕೆಯ ಮೇರೆಗೆ ಇತರೆ ಚಿತ್ರನಾಯಕರ ಚಿತ್ರಗಳಲ್ಲೂ ಸಹ ಹಾಡಲು ಶುರುಮಾಡಿದರು. ಮುದ್ದಿನ ಮಾವ ಚಿತ್ರದಲ್ಲಿ ಗಾಯಕರಾದ ಎಸ್. ಪಿ. ಬಾಲಸುಬ್ರಮಣ್ಯಂ ರವರಿಗೆ ಒಂದು ಹಾಡನ್ನು ಹಾಡಿರುವುದು ವೈಶಿಷ್ಟ್ಯ. ಜೀವನಚೈತ್ರ ಚಿತ್ರದಲ್ಲಿನ “ನಾದಮಯ” ಹಾಡಿಗೆ ಉತ್ತಮ ಗಾಯಕ ಎಂದು ರಾಷ್ಟ್ರಪ್ರಶಸ್ತಿ ಸಹ ರಾಜ್ ರಿಗೆ ದೊರಕಿತು.
ಕು ಶಿ ಚಂದ್ರಶೇಖರ್
4 Comments
ಸರ್, ಕನ್ನಡ ಚಿತ್ರ ರಸಿಕರ ಆರಾಧ್ಯ ದೈವ ಡಾಕ್ಟರ್ ರಾಜಕುಮಾರ್ ಅವರ ಕುರಿತಾದ ತಮ್ಮ ಅದ್ಭುತ ಬರಹಕ್ಕೆ ಶರಣು. ಕನ್ನಡಕ್ಕೊಬ್ಬರೇ ರಾಜಕುಮಾರ್.
ಚೆನ್ನಾಗಿದೆ 👌
Thank you Sir
Thank you Sir