ಕನ್ನಡದ ಮುತ್ತು- ಡಾ. ರಾಜ್
ಕನ್ನಡ ಭಾಷೆಯ ಅಸ್ಮಿತೆಗಾಗಿ, ಉಳಿವಿಗಾಗಿ ಬೆಳವಣಿಗೆಗಾಗಿ ಸದಾ ಮುಂಚೂಣಿಯಲ್ಲಿ ಕಾಣಿಸಿಕೊಂಡವರ ಪೈಕಿ ಡಾ. ರಾಜ್ ಪ್ರಮುಖರಲ್ಲಿ ಒಬ್ಬರು. ನಮ್ಮೆಲ್ಲಾ ಕನ್ನಡದ ಹೋರಾಟಗಾರರು ಅವರವರ ಕ್ಷೇತ್ರದಲ್ಲಿ ಕನ್ನಡ ಭಾಷೆ, ಕನ್ನಡದ ಜನಗಳಿಗಾಗಿ ಹೋರಾಟ ಮಾಡುತ್ತಿದ್ದಾಗ ಇಡೀ ಚಿತ್ರರಂಗವನ್ನು ತಮ್ಮ ಜೊತೆ ಹೋರಾಟಕ್ಕೆ ಸೆಳೆದುಕೊಂಡವರು ಡಾ. ರಾಜಕುಮಾರ್.
೧೯೬೦ ನೇ ಇಸವಿ, ಆಗ ಡಾ. ರಾಜ್ ಕೇವಲ ೧೪ ಚಲನಚಿತ್ರಗಳಲ್ಲಿ ನಟಿಸಿದ್ದರು. ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ಸಾಕಷ್ಟು ಕಷ್ಟಗಳನ್ನು ಕಂಡಿದ್ದ ಡಾ. ರಾಜ್ ಕನ್ನಡ ಚಿತ್ರರಂಗವೇ ಒಂದು ತುಂಬು ಕುಟುಂಬ ಆ ಕುಟುಂಬದ ಸದಸ್ಯರಿಗಾಗಿ ಏನಾದರೂ ಮಾಡಲೇಬೇಕು ಎಂಬ ಹಂಬಲದಿಂದ ಹಾಸ್ಯನಟರಾದ ನರಸಿಂಹರಾಜು, ಬಾಲಕೃಷ್ಣ ಹಾಗು ನಿರ್ದೇಶಕರಾದ ಜಿ.ವಿ. ಅಯ್ಯರ್ ರವರೊಡಗೂಡಿ “ಕನ್ನಡ ಚಲನಚಿತ್ರ ಕಲಾವಿದರ ಸಂಘ” ವನ್ನು ಸ್ಥಾಪಿಸಿದರು.
ಕನ್ನಡ ಚಿತ್ರರಂಗ ತಮಿಳು ಮತ್ತು ಹಿಂದಿ ಭಾಷೆಯ ಚಲನಚಿತ್ರಗಳೊಂದಿಗೆ ಪೈಪೋಟಿ ಎದುರಿಸಲಾರದೆ ಸೊರಗಿಹೋಗಿತ್ತು. ಕನ್ನಡ ಸಿನೆಮಾಗಳ ಪ್ರದರ್ಶನಕ್ಕಾಗಿ ಸಿನಿಮಾ ಥೀಯೇಟರ್ ಗಳನ್ನು ಕಾಡಿಬೇಡಿ ಗಿಟ್ಟಿಸಬೇಕಾದ ಸಮಯಾವದಾಗಿತ್ತು ಮತ್ತು ಹೊಸ ಹಿಂದಿ ಮತ್ತು ತಮಿಳು ಚಿತ್ರಗಳು ಬಂದವೆಂದರೆ ಚೆನ್ನಾಗಿ ಓಡುತಿದ್ದ ಕನ್ನಡ ಚಿತ್ರಗಳನ್ನು ಮುಲಾಜಿಲ್ಲದೆ ಬದಲಾಯಿಸಿಬಿಡುತ್ತಿದ್ದರು ಆಗಿನ ಚಿತ್ರಮಂದಿರದ ಮಾಲೀಕರು. ಡಾ. ರಾಜ್ ಹೊಸದಾಗಿ ಸ್ಥಾಪನೆಯಾದ “ಕನ್ನಡ ಚಲನಚಿತ್ರ ಕಲಾವಿದರ ಸಂಘ” ಬ್ಯಾನರ್ ಅಡಿಯಲ್ಲೇ ನಿರ್ಮಿಸಿದ ಚಿತ್ರ “ರಣಧೀರ ಕಂಠೀರವ”. ಈ ಚಿತ್ರವು ಕನ್ನಡದ ೧೦೦ ನೇ ವಾಕ್ಚಿತ್ರ ಹಾಗು ಡಾ. ರಾಜ್ ರವರ ೧೫ ನೇ ಚಿತ್ರ ಮತ್ತು ಕನ್ನಡದಲ್ಲಿ ನಿರ್ಮಿಸಿದ ಮೊದಲ ಐತಿಹಾಸಿಕ ಚಿತ್ರ.
ಚಿತ್ರ ಬಿಡುಗಡೆಗೆ ಕೆಂಪೇಗೌಡ ರಸ್ತೆಯ ಚಿತ್ರಮಂದಿರಗಳು ಎಂದಿನಂತೆ ಸಿಗಲಿಲ್ಲ. ಆಗ ವಿಕ್ರಂ ಪಿಕ್ಚರ್ಸ್ ಮಾಲೀಕರು ಹಿಮಾಲಯ ಚಿತ್ರಮಂದಿರದಲ್ಲಿ ತೆರೆಕಂಡ ಹಿಂದಿ ಚಿತ್ರವೊಂದನ್ನು ತಾವೇ ಖರೀದಿಸಿ ಅದರ ಬದಲಾಗಿ “ರಣಧೀರ ಕಂಠೀರವ” ಚಿತ್ರವನ್ನು ಪ್ರದರ್ಶಿಸಿದರು. ಕನ್ನಡದ ಹೋರಾಟಗಾರ ವಾಟಾಳ್ ನಾಗರಾಜ್ ರವರು ಕೆಂಪೇಗೌಡ ರಸ್ತೆಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಇತರೆ ಭಾಷೆಯ ಚಿತ್ರಗಳ ಮುಂದೆ ನಿಂತು ಹಿಮಾಲಯ ಚಿತ್ರಮಂದಿರದಲ್ಲಿ ರಣಧೀರ ಕಂಠೀರವ ಕನ್ನಡ ಚಿತ್ರ ಪ್ರದರ್ಶನಗೊಳ್ಳುತ್ತಿದೆ ಹೋಗಿ ವೀಕ್ಷಿಸಿ ಎಂದು ವಿನಂತಿಸಲು ಶುರು ಮಾಡಿದರು. ಪರಿಣಾಮ ಚಿತ್ರ ಅಮೋಘ ಯಶಸ್ಸನ್ನು ಪಡೆಯಿತು ಮುಂದಿನ ದಿನಗಳಲ್ಲಿ ಚಿತ್ರಮಂದಿರದ ಮಾಲೀಕರು ಕನ್ನಡ ಚಿತ್ರಗಳಿಗೆ ಮೊದಲ ಆದ್ಯತೆ ನೀಡಲು ಶುರು ಮಾಡಿದರು. ಕನ್ನಡ ಚಿತ್ರರಂಗದ ಮೇಲಿನ ಅನ್ಯಭಾಷೆಯ ಸಿನೆಮಾಗಳ ದಬ್ಬಾಳಿಕೆಗೆ ಮೊದಲು ಧ್ವನಿ ಎತ್ತಿದವರೇ ಡಾ. ರಾಜ್. ಅಷ್ಟೇ ಅಲ್ಲ ಕನ್ನಡ ಭಾಷೆಯ ಆದ್ಯತೆಗಾಗಿ ಶುರು ಮಾಡಿದ ಗೋಕಾಕ್ ಚಳುವಳಿಯು ಕೂಡ ಡಾ. ರಾಜ್ ರವರ ಆಗಮನದ ನಂತರವೇ ಯಶಸ್ವಿಯಾಗಿ ಚಳುವಳಿಗೆ ಆಗಿನ ಸರಕಾರ ಬಾಗಿ ಗೋಕಾಕ್ ವರದಿಯನ್ನು ಜಾರಿಗೆ ತಂದಿತು.
೧೯೯೦ ರಲ್ಲಿ ಸಂಜಯ್ ಖಾನ್ ರವರ ಸ್ವಾರ್ಡ್ ಆಫ್ ಟಿಪ್ಪು ಸುಲ್ತಾನ್ ಎಂಬ ಹಿಂದಿ ಧಾರಾವಾಹಿಯನ್ನು ದೂರದರ್ಶನ ವಾಹಿನಿಯು ಕನ್ನಡದಲ್ಲಿ ಭಾಷಾಂತರಿಸಲು ಪ್ರಯತ್ನಪಟ್ಟಾಗ ಸಹ ಡಾ. ರಾಜ್ ಚಿತ್ರರಂಗ ಹಾಗು ಕಿರು ಚಿತ್ರರಂಗದ ಮಂದಿಯೊಡನೆ ಬಲವಾಗಿ ಪ್ರತಿಭಟಿಸಲು ದೂರದರ್ಶನವು ಆ ಯೋಜನೆಯನ್ನು ಹಿಂಪಡೆಯಿತು. ಇದರಿಂದಾಗಿ ತೀರಾ ಇತ್ತೀಚಿಗೆ ಕೋವಿಡ್ ಲಾಕ್ ಡೌನ್ ರವರೆಗೂ ಅಧಿಕೃತವಾಗಿ ಇತರೆ ಭಾಷೆಯ ಚಿತ್ರಗಳು ಕನ್ನಡದಲ್ಲಿ ಭಾಷಾಂತರಗೊಂಡಿರಲಿಲ್ಲ.
೧೯೮೩ ರಲ್ಲಿ ಹಿಂದಿ ಚಿತ್ರರಂಗದ ಅಮಿತಾಬ್ ಬಚ್ಚನ್ ಮೇರು ದಿನಗಳನ್ನು ಕಂಡಿದ್ದ ದಿನಗಳು. ತಮ್ಮ “ಕೂಲಿ” ಚಿತ್ರಕ್ಕಾಗಿ ಡಾ. ರಾಜ್ ರವರನ್ನು ಒಂದು ದೃಶ್ಯದಲ್ಲಿ ತೋರಿಸಲು ಅಪೇಕ್ಷಿಸಿದರು. ಆ ಚಿತ್ರದ ನಿರ್ಮಾಪಕರಾದಿಯಾಗಿ ಕನ್ನಡದ ಅನೇಕ ನಟರೊಂದಿಗೆ ಡಾ. ರಾಜ್ ರವರನ್ನು ಒಂದು ಚಿತ್ರದಲ್ಲಿ ನಟಿಸಲು ಕೇಳಿಕೊಳ್ಳಲಾಯಿತು. ಆಗ ಡಾ. ರಾಜ್ ಅದನ್ನು ನಯವಾಗಿ ನಿರಾಕರಿಸಿ ತಾವು ಕನ್ನಡ ಚಿತ್ರಗಳಲ್ಲಿ ಮಾತ್ರ ನಟಿಸುವುದು ಎಂದು ಹೇಳಿದರು ಆಗು ಸಹ ಮತ್ತೆ ಅದೇ ಗುಂಪು ಬಂದು ಡಾ. ರಾಜ್ ರವರನ್ನು ಚಿತ್ರದಲ್ಲಿ ತಾವು ಮಾತನಾಡಬೇಕಿಲ್ಲವೆಂದು ಒಂದೇ ಒಂದು ದೃಶ್ಯದಲ್ಲಿ ಕೇವಲ ರೈಲಿನಿಂದ ಇಳಿದರೆ ಸಾಕು ಆಗ ಅಮಿತಾಬ್ ಬಚ್ಚನ್ ಕೂಲಿಯ ಪಾತ್ರಧಾರಿಯಾಗಿ ಬಂದು ಲಗೇಜ್ ಹೊರುತ್ತಾರೆಂದು ಕೇಳಿಕೊಳ್ಳಲಾಯಿತು ಆಗಲು ಸಹ ಡಾ. ರಾಜ್ ನಟಿಸಲು ಒಪ್ಪಿಕೊಳ್ಳಲಿಲ್ಲ. ಅಮಿತಾಭ್ ಬಚ್ಚನ್ ಡಾ. ರಾಜ್ ರವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಅವರೊಡನೆ ಸ್ವಲ್ಪ ಸಮಯ ಕಳೆದು ಗೌರವಿಸಿ ಹೋದರು.
ಡಾ. ರಾಜ್ ತಾವು ಚಲನಚಿತ್ರಗಳ ಶೂಟಿಂಗ್ ಹಾಗು ಡಬ್ಬಿಂಗ್ ನಿಮ್ಮಿತ್ತ ಮದರಾಸಿನಲ್ಲಿ ಕೆಲವರುಷ ವಾಸವಿದ್ದರು ಸಹ ಇಂದಿಗೂ ಕನ್ನಡ ಭಾಷೆಯ ಮೇಲಿನ ಪ್ರೀತಿ ಬಿಡಲಿಲ್ಲ ಮತ್ತು ಎಂದಿಗೂ ಅನ್ಯ ಭಾಷಾ ಚಿತ್ರಗಳಲ್ಲಿ ನಟಿಸಲಿಲ್ಲ. ತಾವು ಮೂರನೇ
ಇಯತ್ತಿನವರೆಗೆ ಓದಿದ್ದರು ಸಹ ಕನ್ನಡ ಭಾಷೆಯನ್ನು ವಾಕ್ಯದೋಷವಿಲ್ಲದೆ ಅತ್ಯಂತ ಸ್ಪುಟವಾಗಿ ಮಾತನಾಡುತಿದ್ದ ಡಾ. ರಾಜ್ ಸದಾ ಕನ್ನಡ ಭಾಷೆ ಹಾಗು ಕನ್ನಡದ ಜನರ ಮೇಲೆ ಪ್ರೀತಿಯನ್ನು ಇಟ್ಟುಕೊಂಡಿದ್ದರು.
ನಮ್ಮ ಈ ಕನ್ನಡ ಭಾಷೆಯ ಮೇರು ನಟರಾದ ಅಣ್ಣಾವ್ರನ್ನು ಕನ್ನಡ ಮಾಸದಲ್ಲಿ ನೆನೆಯೋಣ.
ಚಂದ್ರಶೇಖರ್ ಕುಲಗಾಣ
ಮಾಹಿತಿಗಳು : ಅಂತರ್ಜಾಲ
ಸಾಹಿತ್ಯಮೈತ್ರಿ ತಂಡ