ಕಪ್ಪು ಚುಕ್ಕೆ
ಪುಟ್ಟೇನಹಳ್ಳಿ ಎಂಬ ಸಣ್ಣ ಊರಿನಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದು ಇತ್ತು. ಒಂದು ದಿನ, ಐದನೇ ತರಗತಿಯ ಕ್ಲಾಸ್ ಟೀಚರ್ ಸಂಗಪ್ಪ ಮೇಸ್ಟ್ರು ತನ್ನ ತರಗತಿಗೆ ಪ್ರವೇಶಿಸಿ ತನ್ನ ವಿದ್ಯಾರ್ಥಿಗಳನ್ನು ಅಚ್ಚರಿಯ ಪರೀಕ್ಷೆಗೆ ಸಿದ್ಧರಾಗುವಂತೆ ಹೇಳಿದರು. ಪರೀಕ್ಷೆ ಇನ್ನೇನು ಪ್ರಾರಂಭವಾಗಲಿದೆ, ಪರೀಕ್ಷೆಯಲ್ಲಿ ಏನೆಲ್ಲಾ ಪ್ರಶ್ನೆಗಳಿರುತ್ತೋ ಎಂಬ ಚಿಂತೆಯಲ್ಲಿ ಮಕ್ಕಳೆಲ್ಲರೂ ತಮ್ಮ ಮೇಜುಗಳ ಮೇಲೆ ಆತಂಕದಿಂದ ಕಾಯುತ್ತಿದ್ದರು. ಪ್ರಾಧ್ಯಾಪಕರು ಎಂದಿನಂತೆ ಪರೀಕ್ಷೆಯ ಪತ್ರಿಕೆಗಳನ್ನು ಮಕ್ಕಳೆಲ್ಲರಿಗೂ ಹಸ್ತಾಂತರಿಸಿದರು. ವಿದ್ಯಾರ್ಥಿಗಳು ತಮಗೆ ಸಿಕ್ಕ ಪತ್ರಿಕೆಗಳನ್ನು ನೋಡಿ ಆಶ್ಚರ್ಯಕ್ಕೆ ಒಳಗಾದರು, ಏಕೆಂದರೆ ಪ್ರಶ್ನೆಪತ್ರಿಕೆಯಲ್ಲಿ ಯಾವುದೇ ಪ್ರಶ್ನೆಗಳಿರದೇ ಕಾಗದದ ಮಧ್ಯದಲ್ಲಿ ಕೇವಲ ಕಪ್ಪು ಚುಕ್ಕೆ ಅಷ್ಟೇ ಇತ್ತು. ಎಲ್ಲರ ಮುಖಗಳಲ್ಲಿನ ಪ್ರಶ್ನಾರ್ಥಕ ಭಾವವನ್ನು ಗಮನಿಸಿದ ಮೇಷ್ಟ್ರ ಪ್ರಶ್ನೆ ಪತ್ರಿಕೆಯಲ್ಲಿ ನೀವೇನನ್ನು ಕಾಣುತ್ತೀರೋ ಅದರ ಬಗ್ಗೆ ನೀವು ಬರೆಯಬೇಕು ಎಂದು
ಹೇಳಿದರು. ವಿದ್ಯಾರ್ಥಿಗಳು, ಗೊಂದಲದಿಂದಲೇ ಈ ವಿವರಿಸಲಾಗದ ಕೆಲಸವನ್ನು ಮಾಡಲು ಪ್ರಾರಂಭಿಸಿದರು.
ಪರೀಕ್ಷೆಯ ನಿರ್ದಿಷ್ಟ ಅವಧಿಯು ಮುಗಿದಾಗ ಮೇಸ್ಟ್ರು ಎಲ್ಲಾ ಮಕ್ಕಳ ಉತ್ತರ ಪತ್ರಿಕೆಯನ್ನು ಹಿಂದಕ್ಕೆ ಪಡೆದುಕೊಂಡು ಪ್ರತಿಯೊಬ್ಬರ ಉತ್ತರ ಪತ್ರಿಕೆಯನ್ನು ಎಲ್ಲಾ ವಿದ್ಯಾರ್ಥಿಗಳ ಮುಂದೆ ಜೋರಾಗಿ ಓದಲು ಪ್ರಾರಂಭಿಸಿದರು. ಎಲ್ಲಾ ಮಕ್ಕಳೂ ಇದೊಂದು ಕಪ್ಪು ಚುಕ್ಕೆ ಎಂದು ವ್ಯಾಖ್ಯಾನಿಸಿ, ಅತ್ಯಂತ ಶುಭ್ರವಾದ ಬಿಳಿಯ ಹಾಳೆಯನ್ನು ಒಂದು ಸಣ್ಣ ಕಪ್ಪು ಬಣ್ಣದ ಚುಕ್ಕೆಯು ಗಲೀಜು ಮಾಡಿತು, ಬಿಳಿಯ ಹಾಳೆಯಲ್ಲಿ ಕಪ್ಪು ಚುಕ್ಕೆಯು ಎದ್ದು ಕಾಣುತ್ತಿದೆ ಎಂದೆಲ್ಲಾ ಒಬ್ಬೊಬ್ಬರು ಒಂದೊಂದು ರೀತಿ ವಿವರಿಸಿದ್ದರು. ಪೂರ್ತಿ ತರಗತಿಯು ಮೌನಕ್ಕೆ ಶರಣಾಗಿತ್ತು. ಇದನ್ನು ನೋಡಿದ ಸಂಗಪ್ಪ ಮೇಷ್ಟ್ರು ಮಕ್ಕಳನ್ನು ಉದ್ದೇಶಿಸಿ ‘ಮಕ್ಕಳೇ ನಾನು ಈ ವಿಷಯದ ಕುರಿತು ಯಾರದು ಸರಿ ಅಥವಾ ತಪ್ಪು ಎಂದು ನಿರ್ಧರಿಸಲು ಇಚ್ಛಿಸುವುದಿಲ್ಲ. ನಾನು ನೀಡಿದ ಪ್ರಶ್ನೆ ಪತ್ರಿಕೆಯ 99% ಭಾಗವು ಶುಭ್ರ ಬಿಳಿ ಬಣ್ಣದಿಂದ ಕೂಡಿದ್ದರೂ ಅದರ ಬಗ್ಗೆ ಯಾರೂ ಬರೆದಿಲ್ಲ. ನೀವೆಲ್ಲರೂ ಕೇವಲ 1%
ಭಾಗದಲ್ಲಿದ್ದ ಕಪ್ಪು ಚುಕ್ಕೆಯ ಮೇಲೆಯೇ ನಿಮ್ಮ ಗಮನವನ್ನು ಕೇಂದ್ರೀಕರಿಸಿದ್ದೀರಿ. ಸದಾ ನಾವು ಏನನ್ನು ಯೋಚಿಸುತ್ತಾ ಇರುತ್ತೇವೆಯೋ ಅದೇ ನಮ್ಮ ಜೀವನದಲ್ಲಿ ಸಂಭವಿಸುತ್ತದೆ. ಚೆನ್ನಾಗಿರುವ ಶುಭ್ರ ಬಿಳಿ ಬಣ್ಣದ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವ ಬದಲಿಗೆ ಸದಾ ನಾವು ಕಪ್ಪು ಚುಕ್ಕೆ ಮೇಲೆ ಮಾತ್ರ ಕೇಂದ್ರೀಕರಿಸುತ್ತೇವೆ’.
ನಮ್ಮನ್ನು ಕಾಡುವ ಆರೋಗ್ಯ ಸಮಸ್ಯೆಗಳು, ಹಣದ ಕೊರತೆ, ಕುಟುಂಬದ ಸದಸ್ಯರ ಜೊತೆಗಿನ ಸಂಕೀರ್ಣ ಸಂಬಂಧ, ಸ್ನೇಹಿತನೊಂದಿಗಿನ ಕಲಹ ಇಂತಹ ಘಟನೆಗಳನ್ನು ಜಿವನದ ಕಪ್ಪು ಚುಕ್ಕೆಗಳೆಂದು ನಾವು ಭಾವಿಸಬಹುದು. ನಮ್ಮ ಜೀವನದಲ್ಲಿ ನಾವು ಹೊಂದಿರುವ ಸಂತಸದ ವಿಚಾರಗಳಿಗೆ ಮೇಲಿನ ಕಪ್ಪು ಕಲೆಯೆಂದು ಭಾವಿಸುವ ಅಂಶಗಳನ್ನು ಹೋಲಿಸಿದಾಗ ಕಪ್ಪು ಕಲೆಗಳು ಬಹಳ ಕಡಿಮೆಯೇ ಇರುತ್ತದೆ. ಆದರೆ ಕಪ್ಪು ಕಲೆಯ ಕುರಿತೇ ಮಾಡುವ ಯೋಚನೆಗಳು ನಮ್ಮ ಮನಸ್ಸನ್ನು ನಿತ್ಯ ಕಲುಷಿತ ಮಾಡುತ್ತವೆ. ಜೀವನದಲ್ಲಿ ಕಪ್ಪು ಚುಕ್ಕೆಗಳಿಂದ ನಮ್ಮ ಕಣ್ಣುಗಳನ್ನು ದೂರವಿಟ್ಟು, ಪ್ರತಿಯೊಂದು ಖುಷಿಯ ಕ್ಷಣಗಳನ್ನು ಆನಂದಿಸಬೇಕು ಮತ್ತು ಪ್ರೀತಿಯಿಂದ ಬದುಕಬೇಕು ಎಂದರು.
ಈ ಪ್ರಪಂಚ ಹಾಗೂ ಸಮಾಜ ಹೀಗೇ ಇರುತ್ತದೆ. ಪೂರ್ತಿ ಹಾಳೆಯು ಶುಭ್ರವಾಗಿದ್ದರೂ ಎಲ್ಲರೂ ಕಪ್ಪಗಿನ ಸಣ್ಣ ಚುಕ್ಕೆಯನ್ನೇ ಆಯ್ಕೆ ಮಾಡಿಕೊಂಡಂತೆ ಮನುಷ್ಯನಲ್ಲಿ ಎಷ್ಟೇ ಒಳ್ಳೆಯತನ ಇದ್ದರೂ ಅದನ್ನು ಗುರುತಿಸದೇ ವ್ಯಕ್ತಿಯ ಒಂದು ಸಣ್ಣ ತಪ್ಪು ಅಥವಾ ಕೊರತೆಯನ್ನೇ ಗುರುತಿಸಿ ಅದಕ್ಕೆ ವೈವಿಧ್ಯಮಯ ಬಣ್ಣವನ್ನು ಹಚ್ಚಿ ಮಾತನಾಡುತ್ತದೆ. ಅದೇ ರೀತಿ ನಾವೂ ವ್ಯಕ್ತಿ ಅಥವಾ ವ್ಯವಸ್ಥೆಯ ಒಂದು ಸಣ್ಣ ದೋಷವನ್ನು ಮಾತ್ರ ಗುರುತಿಸಿ ಅದರ ಬಗ್ಗೆ ಬಣ್ಣ ಬಣ್ಣದ ಮಾತುಗಳನ್ನು ಆಡುವುದರ ಬದಲು ಅದರಲ್ಲಿರುವ ಹಲವು ಒಳ್ಳೆಯ ವಿಚಾರಗಳ ಕುರಿತು ಮಾತ್ರ ಮಾತನಾಡಬೇಕು ಎಂದು ಹೇಳಿದರು.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160